ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿಯಲ್ಲಿ ಮೋದಿ ಮುಖವಾಡ ಧರಿಸಿ‌ ಕುಳಿತ ಬಿಜೆಪಿ ಸದಸ್ಯರು

Last Updated 30 ಮೇ 2019, 8:57 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಬಿಜೆಪಿ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಅವರ ಮುಖವಾಡ ಧರಿಸಿ ಕುಳಿತು ‘ಮೋದಿ, ಮೋದಿ’ಎಂಬ ಘೋಷಣೆ ಕೂಗಿದರು.

ಸಭೆ ಆರಂಭವಾಗಿ ರಾಷ್ಟ್ರಗೀತೆ ಮುಗಿದ ಕೂಡಲೆ ಮೋದಿ ಮುಖವಾಡ ಧರಿಸಿ‌‌ ಕುಳಿತರು. ಇದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

‘ಭಾರತೀಯ ಜನತಾ ಪಕ್ಷವನ್ನು ಮೋದಿ ಜನತಾ ಪಕ್ಷ ಎಂದು ಬದಲಿಸಿಕೊಳ್ಳಿ’ಎಂದು ಕಾಂಗ್ರೆಸ್ ಸದಸ್ಯ ವಾಜಿದ್ ವ್ಯಂಗ್ಯವಾಡಿದರು. ಬಿಜೆಪಿಯನ್ನು ಇವಿಎಂ ಪಕ್ಷ ಎಂದು ಬದಲಿಸಿಕೊಳ್ಳಿ' ಎಂದು ಸಲಹೆ ನೀಡಿದರು.

‘ಮೋದಿ ಎಂದರೆ‌ ಕಾಂಗ್ರೆಸ್ ನವರು ಗಢಗಢ ನಡುಗುತ್ತಿದ್ದೀರಿ’ಎಂದು ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ತಿರುಗೇಟು ನೀಡಿದರು.

ಕೆಲ‌ ನಿಮಿಷಗಳ ಬಳಿಕ ಬಿಜೆಪಿ ಸದಸ್ಯರು ಮುಖವಾಡ ತೆಗೆದು ಮಾಮೂಲಿನಂತೆ ಕುಳಿತರು.

ಸಭೆ ಮುಂದೂಡಿಕೆ
ಬೆಂಗಳೂರು:
ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಕಾಂಗ್ರೆಸ್ ಸದಸ್ಯರೊಬ್ಬರು ವ್ಯಂಗ್ಯವಾಡಿದ ಹಿನ್ನೆಲೆಯಲ್ಲಿ ಎರಡೂ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಸಭೆಯನ್ನು ಮಧ್ಯಾಹ್ನ 2.30ರವರೆಗೆ ಮೇಯರ್ ಮುಂದೂಡಿದರು.

ಬಿಜೆಪಿ ಸದಸ್ಯ‌ ಬಾಲಕೃಷ್ಣ ತಮ್ಮ ವಾರ್ಡಿನ ಕಸದ ಸಮಸ್ಯೆ ಪರಿಹಾರವಾಗುತ್ತಿಲ್ಲ ಎಂದು ಫೋಟೋಗಳನ್ನು ಮೇಯರ್ ಅವರಿಗೆ ನೀಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯ ವೆಂಕಟೇಶ್ ಅವರು ‘ಮೋದಿ ಫಂಡ್ ಬಂದ ಮೇಲೆ ನೋಡೋಣ ಬಿಡಿ, ಮೋದಿಗೆ ಪತ್ರ ಬರಿಯೋಣ ಬಿಡಿ’ಎಂದರು.

ಇದರಿಂದ ಅಕ್ರೋಶಗೊಂಡ ಬಿಜೆಪಿ ಸದಸ್ಯರು ವೆಂಕಟೇಶ್ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದರು. ವೆಂಕಟೇಶ್ ಬೆಂಬಲಕ್ಕೆ ನಿಂತ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ನಿಂತು ಸಮರ್ಥನೆ ನೀಡಲು‌ ಮುಂದಾದರು. ವಿರೋಧ ಪಕ್ಷದ ನಾಯಕ‌ ಪದ್ಮನಾಭರೆಡ್ಡಿ ಅವರು ವಾಜಿದ್ ಅವರ ‌ಹತ್ತಿರಕ್ಕೆ ಹೋಗಿ ಪ್ರಶ್ನೆ ಮಾಡಲು ಮುಂದಾದರು. ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ಹೋಯಿತು. ಉಳಿದ ಸದಸ್ಯರು ಇಬ್ಬರನ್ನೂ ಸಮಾಧಾನಪಡಿಸಿದರು.

ಇದರ‌ ನಡುವೆ ಬಿಜೆಪಿಯ‌ ಮಮತಾ ವಾಸುದೇವ್ ಅವರು ವೆಂಕಟೇಶ್ ಅವರನ್ನು ಅವಾಚ್ಯ ಶಬ್ದಗಳಿಂದ‌ ನಿಂದಿಸಿದರು. ಈ ಸಂದರ್ಭದಲ್ಲಿ ಸಭೆ ಗೊಂದಲದ ಗೂಡಾಯಿತು. ಮೇಯರ್ ಸಭೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT