ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ್ಡ್‌ ಲೋಪ: ವರದಿಗೆ ಸೂಚನೆ

ಬಿಬಿಎಂಪಿ ವಾರ್ಡ್‌ಗಳ ಮರು ವಿಂಗಡಣೆ
Last Updated 3 ಜುಲೈ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಬಿಎಂಪಿಯ ವಾರ್ಡ್‌ಗಳನ್ನು ಜನಸಂಖ್ಯೆಯ ಆಧಾರದಲ್ಲಿ ಪುನರ್ ವಿಂಗಡಿಸಲು ನೀಲನಕ್ಷೆ ಸಿದ್ಧಪಡಿಸಿ ಅದನ್ನು ಕಂದಾಯ ಅಧಿಕಾರಿಗಳಿಗೆ ವಿತರಿಸಲಾಗಿದೆ. ನೀಲನಕ್ಷೆಯನ್ನಾಧರಿಸಿ ಹೊಸ ವಾರ್ಡ್‌ಗಳಲ್ಲಿ ಕಂಡುಬರುವ ಲೋಪಗಳನ್ನು ವಾರದೊಳಗೆ ವರದಿ ಸಲ್ಲಿಸಬೇಕು’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸೂಚನೆ ನೀಡಿದರು.

ಬಿಬಿಎಂಪಿಯ ವಾರ್ಡ್‌ಗಳನ್ನು 2011ರ ಜನಸಂಖ್ಯೆ ಆಧರಿಸಿ ಮರುವಿಂಗಡಣೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಈ ಸಂಬಂಧ ಎಲ್ಲ ಕಂದಾಯ ಅಧಿಕಾರಿಗಳು, ಸಹಾಯಕ ಕಂದಾಯ ಅಧಿಕಾರಿಗಳ ಜತೆಗೆ ಆಯುಕ್ತರು ಬುಧವಾರ ಸಭೆ ನಡೆಸಿದರು.

ಬೆಂಗಳೂರು ಮಹಾನಗರ ಪಾಲಿಕೆ (ಬಿಎಂಪಿ) ಅಸ್ತಿತ್ವದಲ್ಲಿದ್ದಾಗ ಒಟ್ಟು 100 ವಾರ್ಡ್‌ಗಳಿದ್ದವು. 7 ನಗರಸಭೆಗಳು, 1 ಪಟ್ಟಣ ಪಂಚಾಯಿತಿಗಳು ಹಾಗೂ 110 ಹಳ್ಳಿಗಳನ್ನು ಸೇರ್ಪಡೆಗೊಳಿಸಿ 2007ರಲ್ಲಿ ಬೃಹತ್‌ಬೆಂಗಳೂರು ಮಹಾನಗರ ಪಾಲಿಕೆಯನ್ನು ( ಬಿಬಿಎಂಪಿ) ರಚಿಸಿದಾಗ ವಾರ್ಡ್‌ಗಳ ಸಂಖ್ಯೆಯನ್ನು 198ಕ್ಕೆ ಹೆಚ್ಚಿಸಲಾಯಿತು. ಇದೀಗ, 2011ರ ಜನಸಂಖ್ಯೆ (84.43 ಲಕ್ಷ) ಆಧಾರದಲ್ಲಿ ವಾರ್ಡ್‌ಗಳ ಮರುವಿಂಗಡಣೆ ಮಾಡಲಾಗುತ್ತಿದೆ. ಅದಕ್ಕಾಗಿ ಈಗಾಗಲೇ ನೀಲನಕ್ಷೆ ಸಿದ್ಧಪಡಿಸಲಾಗಿದ್ದು, ಯಾವ ವಿಧಾನಸಭಾ ಕ್ಷೇತ್ರದಲ್ಲಿ ಹೊಸ ವಾರ್ಡ್‌ಗಳನ್ನು ರಚಿಸಬೇಕು, ವಾರ್ಡ್‌ಗಳ ವ್ಯಾಪ್ತಿ ಎಷ್ಟಿರಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಪ್ರಾತ್ಯಕ್ಷಿಕೆ ನೀಡಲಾಯಿತು.

‘ಎಲ್ಲ 28 ವಿಧಾನಸಭಾ ಕ್ಷೇತ್ರಗಳ ವಾರ್ಡ್‌ಗಳನ್ನು ಮರುವಿಂಗಡಿಸಲಾಗಿದ್ದು, ಅದರ ನೀಲನಕ್ಷೆಯನ್ನು ಕಂದಾಯ ಅಧಿಕಾರಿಗಳಿಗೆ ನೀಡಲಾಗಿದೆ. ಅದನ್ನು ಆಧರಿಸಿ ವಾರ್ಡ್‌ಗಳ ಗಡಿರೇಖೆ ಬಳಿ ಕಂಡುಬರುವ ಲೋಪಗಳನ್ನು ಪಟ್ಟಿ ಮಾಡಬೇಕು’ ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ವಾರ್ಡ್‌ಗಳ ಒಟ್ಟು ಸಂಖ್ಯೆ ಈಗಿನಷ್ಟೇ (198) ಇರಲಿದೆ. ಆದರೆ, ಜನಸಂಖ್ಯೆ (ಸರಾಸರಿ 42,645) ಆಧಾರದಲ್ಲಿ ಮರುವಿಂಗಡಣೆ ನಡೆಯುವುದರಿಂದಅವುಗಳ ವಿಸ್ತೀರ್ಣ ಬದಲಾಗಲಿದೆ.ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ವಾರ್ಡ್‌ಗಳ ಸಂಖ್ಯೆ ಕಡಿಮೆಯಾದರೆ, ಇನ್ನೂ ಕೆಲವು ಕ್ಷೇತ್ರಗಳಲ್ಲಿ ಹೆಚ್ಚಾಗಲಿದೆ. 13 ವಾರ್ಡ್‌ಗಳಲ್ಲಿ ಯಾವುದೇ ಬದಲಾವಣೆ ಮಾಡುತ್ತಿಲ್ಲ ಎಂದರು.

‘ಅಧಿಕಾರಿಗಳು ತಮ್ಮ ವಾರ್ಡ್‌ಗಳಿಗೆ ಭೇಟಿ ಕೊಟ್ಟು ಹೊಸ ವಾರ್ಡ್‌ಗಳ ವಿಸ್ತೀರ್ಣದ ಮಾಹಿತಿ, ಹಳೆಯ ವಾರ್ಡ್‌
ಗಳಲ್ಲಿರುವ ಮತಗಟ್ಟೆಗಳು ಹೊಸವಾರ್ಡ್‌ ಗಡಿ ರೇಖೆಯಲ್ಲಿ ಬೇರ್ಪಟ್ಟಿವೆಯೇ, ಬಡಾವಣೆ/ಕಾಲೊನಿಗಳು ಎರಡು ವಾರ್ಡ್‌ಗಳಿಗೆ ಹಂಚಿ ಹೋಗಿವೆಯೇ, ರಸ್ತೆ ಹೆಸರು ಬದಲಾಗಿದೆಯೇ ಎಂಬುದನ್ನು ಪಟ್ಟಿ ಮಾಡಿ ಪಾಲಿಕೆಗೆ ವರದಿ ಸಲ್ಲಿಸಬೇಕು. ಅದನ್ನು ಪರಿಶೀಲಿಸಿ ಲೋಪಗಳನ್ನು ಸರಿಪಡಿಸಲಾಗುವುದು’ ಎಂದರು.

‘ನಂತರ ಆಯಾ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಪಾಲಿಕೆ ಸದಸ್ಯರಿಗೆ ಪ್ರಾತ್ಯಕ್ಷಿಕೆ ನೀಡಿ ಅವರ ಸಲಹೆಗಳನ್ನು ಪರಿಗಣಿಸಿ ಅಗತ್ಯ ಬದಲಾವಣೆಗಳನ್ನು ಮಾಡಲಾಗುವುದು. ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಒಂದು ತಿಂಗಳ ಅವಕಾಶ ನೀಡಲಾಗುವುದು. ಬಳಿಕ ಅಗತ್ಯಮಾರ್ಪಾಡುಗಳೊಂದಿಗೆ ಅಂತಿಮ ಕರಡು ಸಿದ್ಧಪಡಿಸಲಾಗುವುದು’ಎಂದು ಮಂಜುನಾಥ ಪ್ರಸಾದ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT