ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಪಟ್ಟಿ: ತಿದ್ದುಪಡಿಗೆ, ಹೊಸ ಸೇರ್ಪಡೆಗೆ ಅ. 15ರವರೆಗೆ ಅವಕಾಶ

Last Updated 16 ಸೆಪ್ಟೆಂಬರ್ 2019, 19:35 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಚಾಲನೆ ದೊರೆತಿದ್ದು,ಅಕ್ಟೋಬರ್‌ 15ರವರೆಗೆ ಕಾಲಾವಕಾಶ ನೀಡಲಾಗಿದೆ.

ಹೊಸ ಮತದಾರರು, ನಗರಕ್ಕೆ ವಲಸೆ ಬಂದು ಇಲ್ಲಿನ ಮತದಾರರ ಪಟ್ಟಿಗೆ ಇದುವರೆಗೆ ಸೇರ್ಪಡೆ ಮಾಡಿಸದವರು, ಪಟ್ಟಿಯಿಂದ ಹೆಸರು ಕೈಬಿಟ್ಟು ಹೋದವರು ಹೆಸರು ನೋಂದಣಿಗೆ ಅರ್ಜಿ ಸಲ್ಲಿಸಬಹುದು. ಹೆಸರು, ಭಾವಚಿತ್ರ ಮತ್ತು ವಿಳಾಸದಲ್ಲಿನ ದೋಷ ತಿದ್ದುಪಡಿಗೊಳಿಸುವುದಕ್ಕೂ ಈ ಬಾರಿ ಅವಕಾಶ ಕಲ್ಪಿಸಲಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ (ಜಿಲ್ಲಾ ಚುನಾವಣಾಧಿಕಾರಿ), ‘ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಪಾಲಿಕೆ ವ್ಯಾಪ್ತಿಯಲ್ಲಿ ನಾಲ್ವರುಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸೇರ್ಪಡೆಗೆ ಅರ್ಜಿ ಸಲ್ಲಿಸಿದವರ ಮನೆಗೆ ಬೂತ್ ಮಟ್ಟದ ಅಧಿಕಾರಿಗಳು ಅ.16ರಿಂದ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಆ ಬಳಿಕ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗುವುದು’ ಎಂದರು.

‘ಮತದಾರರ ಪಟ್ಟಿಯಲ್ಲಿ ಹೆಸರು ಇದ್ದು, ಗುರುತಿನ ಚೀಟಿ ಸಿಕ್ಕಿರದೇ ಇದ್ದವರು ಮತ್ತೆ ನೋಂದಣಿಗೆ ಅರ್ಜಿ ಸಲ್ಲಿಸಬೇಕಿಲ್ಲ. ಈ ಹಿಂದೆ ಅರ್ಜಿ ಸಲ್ಲಿಸಿ, ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಆಗಿರದಿದ್ದರೆ, ಹಳೆ ಅರ್ಜಿಯನ್ನೇ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಒಂದು ವೇಳೆ ಅರ್ಜಿ ಕಳೆದು ಹೋಗಿದ್ದರೆ ಹೊಸತಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಮತದಾರರು ವಾಸ್ತವ್ಯ ಇರುವ ಪ್ರದೇಶದಿಂದ 2 ಕಿ.ಮೀ ವ್ಯಾಪ್ತಿಯಲ್ಲಿಮತಗಟ್ಟೆ ಇರಬೇಕು. ಅದಕ್ಕಿಂತ ದೂರ ಇದ್ದರೆ ಅಧಿಕಾರಿಗಳ ಗಮನಕ್ಕೆ ತರಬಹುದು. ಅವರ ಮತಗಟ್ಟೆಯನ್ನು ಬದಲಿಸುವುದಕ್ಕೆ ಅವಕಾಶ ಇದೆ’ ಎಂದು ತಿಳಿಸಿದರು.

‘ಮತದಾರರ ಪಟ್ಟಿಯಲ್ಲಿ ಹೆಸರು ಇರುವವರು ಬೇರೆ ಕಡೆಗೆ ವಾಸ್ತವ್ಯ ಬದಲಿಸಿದ್ದರೆ ಅಥವಾ ಮರಣ ಹೊಂದಿದ್ದರೆ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತರಬಹುದು. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಬಿದ್ದರೆ ಅವರ ಹೆಸರನ್ನು ಪಟ್ಟಿಯಿಂದ ತೆಗೆಸಲು ಕ್ರಮಕೈಗೊಳ್ಳಲಿದ್ದಾರೆ’ ಎಂದರು.

ಮತದಾರರ ಪ್ರಮಾಣ ಶೇ 3ರಷ್ಟು ಹೆಚ್ಚಳ ನಿರೀಕ್ಷೆ
18 ವರ್ಷ ತುಂಬಿದ ಹೊಸ ಯುವ ಮತದಾರರು ಸ್ವತಃ ಆಸಕ್ತಿ ವಹಿಸಿ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಬೇಕು. ಯುವ ಮತದಾರರ ಸೇರ್ಪಡೆಯಿಂದ ಬಿಬಿಎಂಪಿ ವ್ಯಾಪ್ತಿಯ ಮತದಾರರ ಒಟ್ಟು ಪ್ರಮಾಣದಲ್ಲಿ ಶೇ 3 ಹೆಚ್ಚು ಆಗಬಹುದು ಎಂದು ಅಂದಾಜಿಸಲಾಗಿದೆ ಎಂದು ಅನಿಲ್‌ ಕುಮಾರ್‌ ಅಭಿಪ್ರಾಯಪಟ್ಟರು.

ಸಹಾಯವಾಣಿ : 1950
‘ವೋಟರ್‌ ಹೆಲ್ಪ್‌ಲೈನ್‌’ ಮೊಬೈಲ್‌ ಆ್ಯಪ್‌, ‘ಎನ್‌ವಿಎಸ್‌ಪಿ ಪೋರ್ಟಲ್‌’ (www.nvsp.in) ಮೂಲಕವೂ ಮತದಾರರ ಪಟ್ಟಿಯಲ್ಲಿ ಹೆಸರು ಇರುವುದನ್ನು ಖಾತರಿಪಡಿಸಿಕೊಳ್ಳಬಹುದು. ಹೆಸರು ನೋಂದಣಿಗೆ ಕಚೇರಿ ಅವಧಿಯಲ್ಲಿ ಯಾವಾಗ ಬೇಕಾದರೂ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನ: 2019ರ ಅಕ್ಟೋಬರ್‌ 15

ಯಾವ ದಾಖಲೆ ಕೊಡಬಹುದು (ಮತದಾರರು ಸಲ್ಲಿಸಬೇಕಾದ ವಿವರಗಳು)

*ಪಾಸ್ ಪೋರ್ಟ್‌

*ಚಾಲನಾ ಪರವಾನಗಿ

*ಆಧಾರ್

*ಪಡಿತರ ಚೀಟಿ

*ಸರ್ಕಾರಿ ನೌಕರರ ಗುರುತಿನ ಚೀಟಿ

*ಬ್ಯಾಂಕ್ ಪಾಸ್ ಪುಸ್ತಕ

*ರೈತರ ಗುರುತಿನ ಚೀಟಿ

*ಚುನಾವಣಾ ಆಯೋಗ ನಮೂದಿಸಿರುವ ಇತರ ಯಾವುದೇ ದಾಖಲೆಗಳು

ಎಲ್ಲೆಲ್ಲಿ ಅರ್ಜಿ ಸಲ್ಲಿಸಬಹುದು

*ನಾಗರಿಕ ಸೇವಾ ಕೇಂದ್ರ

*ನೋಂದಣಿ ಅಧಿಕಾರಿ ಕಚೇರಿ

*ಬೆಂಗಳೂರು ಒನ್‌

*ಕರ್ನಾಟಕ ಒನ್‌

*ಅಟಲ್‌ ಸೇವಾ ಕೇಂದ್ರ

*ಬಾಪೂಜಿ ಸೇವಾ ಕೇಂದ್ರ

*ಮತಗಟ್ಟೆ ಅಧಿಕಾರಿ ಕಚೇರಿ

*ಆನ್‌ಲೈನ್‌ ಮೂಲಕವೂ ಅರ್ಜಿ ಸಲ್ಲಿಸಬಹುದು

*
ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲ ಎಂದು ಕೊನೆಯ ಕ್ಷಣದಲ್ಲಿ ದೂರು ಹೇಳಬೇಡಿ. ಹೆಸರು ಕೈಬಿಟ್ಟಿದ್ದರೆ ತಕ್ಷಣವೇ ಸೇರ್ಪಡೆಗೆ ಅರ್ಜಿ ಕೊಡಿ.
–ಬಿ.ಎಚ್‌.ಅನಿಲ್‌ ಕುಮಾರ್‌, ಜಿಲ್ಲಾ ಚುನಾವಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT