ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಕಣ್ಣಿಗೆ ಬೀಳದ ರಸ್ತೆ ಗುಂಡಿಗಳು

Last Updated 10 ನವೆಂಬರ್ 2019, 19:40 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಯಾವುದೇ ರಸ್ತೆಗೆ ಕಾಲಿಟ್ಟರೂ ಗುಂಡಿಮಯವಾಗಿವೆ. ಆದರೆ, ಬಿಬಿಎಂಪಿ ಕಣ್ಣಿಗೆ ಬಿದ್ದಿರುವುದು ಮಾತ್ರ ಹತ್ತೇ ಸಾವಿರ ಗುಂಡಿಗಳು!

ನಗರದ ಎಲ್ಲಾ ರಸ್ತೆಗಳ ಗುಂಡಿ ಮುಚ್ಚಲು ಅಧಿಕಾರಿಗಳಿಗೆ ಮೇಯರ್ ಎಂ. ಗೌತಮ್‌ಕುಮಾರ್ ನೀಡಿದ್ದ ನ.10ರ ಗಡುವು ಪೂರ್ಣಗೊಂಡಿದೆ. ಈ ಅವಧಿಯಲ್ಲಿ ಬಿಬಿಎಂಪಿ ಕಣ್ಣಿಗೆ ಬಿದ್ದಿದ್ದು 10,656 ಗುಂಡಿಗಳು. ‘ಇವುಗಳಲ್ಲಿ 9,319 ಗುಂಡಿಗಳನ್ನು ಮುಚ್ಚಲಾಗಿದ್ದು, 1,337 ಗುಂಡಿಗಳು ಬಾಕಿ ಇವೆ’ ಎಂದು ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ಅವರು ಟ್ವಿಟರ್‌ನಲ್ಲಿ ಅಂಕಿ–ಅಂಶ ಪ್ರಕಟಿಸಿದ್ದಾರೆ.

‘ನಗರದ ರಸ್ತೆಗಳಲ್ಲಿ ಓಡಾಡಲಾರದಷ್ಟು ಗುಂಡಿಗಳಿವೆ. ದ್ವಿಚಕ್ರ ವಾಹನಗಳು ಸಂಚರಿಸಲು ಸಾಧ್ಯವೇ ಆಗುತ್ತಿಲ್ಲ. ಆದರೆ, 10 ಸಾವಿರ ಗುಂಡಿಗಳು ನಮ್ಮ ಕಣ್ಣಿಗೆ ಬಿದ್ದಿದ್ದು, ಅವುಗಳಲ್ಲಿ ಬಹುತೇಕ ಗುಂಡಿಗಳನ್ನು ಮುಚ್ಚಲಾಗಿದೆ ಹೇಳುತ್ತಿದ್ದೀರಿ. ಗುಂಡಿಗಳನ್ನು ಗುರುತಿಸಲು ಅನುಸರಿಸಿದ ಮಾನದಂಡ ಏನು’ ಎಂದು ಹಲವರು ಟ್ವಿಟ್‌ ಮಾಡಿ ಪ್ರಶ್ನಿಸಿದ್ದಾರೆ.

‘5 ಸಾವಿರಕ್ಕೂ ಹೆಚ್ಚು ಗುಂಡಿಗಳು ಹರಳೂರು, ಎಚ್‌ಜೆಆರ್ ಲೇಔಟ್‌ನಲ್ಲೇ ಇವೆ. ನೀವು ಕೊಟ್ಟಿರುವ ಅಂಕಿ–ಸಂಖ್ಯೆ ನೈಜತೆಯಿಂದ ಕೂಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಉತ್ತರಹಳ್ಳಿ ರಸ್ತೆಯ ಕದಿರೇನಹಳ್ಳಿಯಿಂದ ಪ್ರಾರ್ಥನಾ ಶಾಲೆ ತನಕದ ರಸ್ತೆಯಲ್ಲಿ ಓಡಾಡಲು ರಸ್ತೆಯೇ ಇಲ್ಲದಂತಹ ಸ್ಥಿತಿ ಇದೆ’ ಎಂದು ಬಿ.ಎಸ್. ಭರತ್ ಎಂಬುವರು ಟ್ವೀಟ್ ಮಾಡಿದ್ದಾರೆ.

‘ಎಚ್‌ಎಸ್‌ಆರ್ ಲೇಔಟ್, ಹರಳೂರು, ಬೊಮನಹಳ್ಳಿ, ಸೋಮಸುಂದರಪಾಳ್ಯಕ್ಕೆ ಬನ್ನಿ. ಎಷ್ಟು ಗುಂಡಿಗಳಿವೆ ಎಂಬುದನ್ನು ನಾನು ತೋರಿಸುತ್ತೇನೆ’ ಎಂದು ರಾಹುಲ್ ಸಿಂಗ್ ಎಂಬುವರು ಸವಾಲು ಹಾಕಿದ್ದಾರೆ.

ಸವಾರರಿಗೆ ಆಶ್ಚರ್ಯ: ದಾಸರಹಳ್ಳಿ (496 ಗುಂಡಿ), ಯಲಹಂಕ (720 ಗುಂಡಿ) ಮತ್ತು ರಾಜರಾಜೇಶ್ವರನಗರ (392 ಗುಂಡಿ) ವಲಯದಲ್ಲಿ ಅಧಿಕಾರಿಗಳು ಗುರುತಿಸಿರುವ ರಸ್ತೆ ಗುಂಡಿಗಳ ಪಟ್ಟಿ ನೋಡಿದರೆ ಎಂತವರಿಗೂ ಆಶ್ಚರ್ಯವಾಗುತ್ತದೆ.

‘ಈ ಮೂರು ವಲಯದಲ್ಲಿ ರಸ್ತೆ ಗುಂಡಿಗಳು ಒಂದು ಸಾವಿರ ಗಡಿಯನ್ನೂ ಮುಟ್ಟಿಲ್ಲ. ಆದರೆ, ವಾಸ್ತವವೇ ಬೇರೆ. ಗುಂಡಿಗಳು ಅಧಿಕಾರಿಗಳ ಕಣ್ಣಿಗೆ ಮಾತ್ರ ಬೀಳುತ್ತಿಲ್ಲ ಎಂದರೆ ಏನು ಹೇಳುವುದು’ ಎಂದು ವಾಹನ ಸವಾರರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT