ಭಾನುವಾರ, ಅಕ್ಟೋಬರ್ 25, 2020
23 °C
ವೈಟ್ ಟಾಪಿಂಗ್, ಟೆಂಡರ್ ಶ್ಯೂರ್ ಕಾಮಗಾರಿಗಳ ಪ್ರಗತಿ ಪರಿಶೀಲನೆ

ಬಿಬಿಎಂಪಿ: ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ: ಆಡಳಿತಾಧಿಕಾರಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದಲ್ಲಿ ಅನುಷ್ಠಾನಗೊಳಿಸುತ್ತಿರುವ ಟೆಂಡರ್‌ಶ್ಯೂರ್‌ ಹಾಗೂ ವೈಟ್‌ಟಾಪಿಂಗ್‌ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ ಗುಪ್ತ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಕಾಮಗಾರಿಗಳು ಆಮೆಗತಿಯಲ್ಲಿ ನಡೆಯುತ್ತಿರುವ ಬಗ್ಗೆ ಹಾಗೂ ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದರಿಂದ ಬುಧವಾರ ಅವುಗಳ ಪ್ರಗತಿ ಪರಿಶೀಲನೆ ನಡೆಸಿದರು.

‘ಕಾಮಗಾರಿ ವೇಳೆ ಅಗತ್ಯ ಮೂಲಸೌಕರ್ಯ ಕೊಳವೆಗಳ ಸ್ಥಳಾಂತರಕ್ಕೆ ಸಂಬಂಧಿಸಿದ ತೊಡಕುಗಳಿದ್ದರೆ, ಈ ಬಗ್ಗೆ ವಿಸ್ತೃತವಾದ ವರದಿ ಸಿದ್ಧಪಡಿಸಿ, ಇತರ ಇಲಾಖೆಗಳ ಜೊತೆ ಸಮನ್ವಯ ನಡೆಸಬೇಕು. ಪಾದಚಾರಿಗಳಿಗೆ ಅನನುಕೂಲವಾಗದಂತೆ ನೋಡಿಕೊಳ್ಳಬೇಕು. ಕಾಮಗಾರಿಯಿಂದ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.  

ವೈಟ್ ಟಾಪಿಂಗ್ ಕಾಮಗಾರಿ ಎಲ್ಲೆಲ್ಲ ಪೂರ್ಣಗೊಂಡಿದೆ. ಯಾವ ರಸ್ತೆಗಳಲ್ಲಿ ಎಷ್ಟು ಬಾಕಿಯಿದೆ, ಆ ರಸ್ತೆಗಳು ವಾಹನಗಳ ಸಂಚಾರಕ್ಕೆ ಯೋಗ್ಯವಾಗಿವೆಯೇ, ಸ್ಥಳೀಯವಾಗಿ ಏನು ಸಮಸ್ಯೆಗಳಿವೆ ಎಂದು ರಸ್ತೆವಾರು ಮಾಹಿತಿ ಪಡೆದ ಆಡಳಿತಾಧಿಕಾರಿ, ‘ಸ್ಥಳಿಯ ಸಮಸ್ಯೆಗಳನ್ನು ಇತ್ಯರ್ಥಪಡಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು’ ಎಂದು ಹೇಳಿದರು.

ಹೊರವರ್ತುಲ ರಸ್ತೆಗಳಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ನಡೆಯುತ್ತಿರುವ ಕಡೆ ಸರ್ವೀಸ್ ರಸ್ತೆ, ಪಾದಚಾರಿ ಮಾರ್ಗ ಹಾಗೂ ರಸ್ತೆ ವಿಭಜಕಗಳನ್ನು ಅಭಿವೃದ್ಧಿಪಡಿಸುವ ಕೆಲಸ ವಿಳಂಬವಾಗಿರುವ ಬಗ್ಗೆ  ಅಸಮಾಧಾನ ವ್ಯಕ್ತಪಡಿಸಿದರು. 

ವೈಟ್‌ಟಾಪಿಂಗ್ ಯೋಜನೆಯಡಿ ಅಭಿವೃದ್ಧಿಪಡಿಸಬೇಕಾದ ರಸ್ತೆಗಳಲ್ಲಿ ಇನ್ನೂ ಕಾಮಗಾರಿ  ಪ್ರಾರಂಭವಾಗಿರದೇ ಇದ್ದಲ್ಲಿ, ಅವುಗಳ ಗುಂಡಿ ಮುಚ್ಚಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್‌, ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಬಿ.ಎಸ್.ಪ್ರಹ್ಲಾದ್, ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಲೋಕೇಶ್ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು.

ಅಂಕಿ ಅಂಶ

41

ಟೆಂಡರ್ ಶ್ಯೂರ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಆಯ್ಕೆಯಾದ ರಸ್ತೆಗಳು

33

ರಸ್ತೆಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ

8

ರಸ್ತೆಗಳಲ್ಲಿ ಕಾಮಗಾರಿಗಳು ಅನುಷ್ಠಾನ ಹಂತದಲ್ಲಿವೆ 

68

ರಸ್ತೆಗಳನ್ನು ವೈಟ್‌ಟಾಪಿಂಗ್‌ ಕಾಮಗಾರಿಗೆ ಆಯ್ಕೆ ಮಾಡಲಾಗಿದೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು