ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್, ಗೂಗಲ್‌ ಸಿಇಒಗೆ ಸಮನ್ಸ್

Last Updated 27 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್: ಬಳಕೆದಾರರ ಮಾಹಿತಿ ದುರ್ಬಳಕೆ ಆರೋಪದಲ್ಲಿ ಅಮೆರಿಕ ಸಂಸತ್ತಿನ ನ್ಯಾಯಾಂಗ ಸಮಿತಿಯು ಫೇಸ್‌ಬುಕ್, ಗೂಗಲ್ ಹಾಗೂ ಟ್ವಿಟರ್‌ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಮನ್ಸ್ ಜಾರಿಗೊಳಿಸಿದೆ.

ಏಪ್ರಿಲ್ 10ರಂದು ವಿಚಾರಣೆ ನಡೆಯಲಿದ್ದು, ಅಂದು ಹಾಜರಾಗುವಂತೆ ಮೂರೂ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಗ್ರಾಹಕರ ದತ್ತಾಂಶ ನಿಗಾ ಹಾಗೂ ಸಂರಕ್ಷಣೆ ಕುರಿತು ಫೇಸ್‌ಬುಕ್  ಕಂಪನಿಯ ಯೋಜನೆಗಳನ್ನು ಚರ್ಚಿಸುವ ಸಲುವಾಗಿ ಮಾರ್ಕ್ ಜುಕರ್‌ಬರ್ಗ್ ಅವರಿಗೆ ಆಹ್ವಾನ ನೀಡಲಾಗಿದೆ ಎಂದು ಸಮಿತಿ ಅಧ್ಯಕ್ಷ ಚುಕ್ ಗ್ರಾಸ್ಲೆ ತಿಳಿಸಿದ್ದಾರೆ.

ಗ್ರಾಹಕರ ದತ್ತಾಂಶಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವಾಗ ಅನುಸರಿಸಬೇಕಾದ ನಿಯಮಗಳು ಹಾಗೂ ಗೋಪ್ಯತಾ ಮಾನದಂಡಗಳ ಬಗ್ಗೆ ವಿಚಾರಣೆ ವೇಳೆ ಚರ್ಚೆಯಾಗಲಿದೆ.

‘ಗ್ರಾಹಕರ ಮಾಹಿತಿಯು ಹೇಗೆ ದುರ್ಬಳಕೆ ಅಥವಾ ವರ್ಗಾವಣೆಯಾಗಬಹುದು ಹಾಗೂ ಫೇಸ್‌ಬುಕ್‌ನಂತಹ ಕಂಪನಿಗಳು ಗ್ರಾಹಕರ ಖಾಸಗಿ ಮಾಹಿತಿ ರಕ್ಷಣೆಗೆ ತೆಗೆದುಕೊಂಡಿರುವ ಕ್ರಮಗಳು ಹಾಗೂ ಅವು ಅಳವಡಿಸಿಕೊಂಡಿರುವ ಪಾರದರ್ಶಕ ವ್ಯವಸ್ಥೆಯನ್ನು ವಿಚಾರಣೆ ವೇಳೆ ಪರಿಶೀಲಿಸಲಾಗುವುದು’ ಎಂದು ಗ್ರಾಸ್ಲೆ ಹೇಳಿದ್ದಾರೆ.

ಗೂಗಲ್‌ ಸಂಸ್ಥೆಯ ಸುಂದರ್ ಪಿಚ್ಚೈ ಹಾಗೂ ಟ್ವಿಟರ್‌ನ ಜಾಕ್ ಡೊರ್ಸೆ ಅವರೂ ವಿಚಾರಣೆಗೆ ಹಾಜರಾಗಲಿದ್ದಾರೆ. ಸಾಮಾಜಿಕ ಮಾಧ್ಯಮ ಉದ್ಯಮದಲ್ಲಿ ಖಾಸಗಿ ಮಾಹಿತಿ ಸಂರಕ್ಷಣೆಯ ಸಾಧ್ಯತೆಗಳು, ಇದಕ್ಕಾಗಿ ಮಾರ್ಗಸೂಚಿಗಳನ್ನು ರಚಿಸುವ ಸಂಬಂಧ ಚರ್ಚೆ ನಡೆಸಲಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.ಸಂಸದ ಮಾರ್ಕ್ ವಾರ್ನರ್ ಕೂಡಾ ದತ್ತಾಂಶ ಸಂರಕ್ಷಣೆ ಕುರಿತು ಸಾಮಾಜಿಕ ಮಾಧ್ಯಮ ಕಂಪನಿಗಳಿಂದ ಉತ್ತರ ಬಯಸಿದ್ದಾರೆ.

ಫೇಸ್‌ಬುಕ್ ವಿರುದ್ಧ ತನಿಖೆ: ಗ್ರಾಹಕರ ಖಾಸಗಿ ಮಾಹಿತಿ ದುರ್ಬಳಕೆ ಮಾಡಿಕೊಂಡಿರುವ ಬ್ರಿಟನ್‌ನ ಕೇಂಬ್ರಿಡ್ಜ್ ಅನಲಿಟಿಕಾ ಕಂಪನಿ ಜೊತೆ ನಂಟು ಹೊಂದಿರುವ ಆರೋಪದ ಮೇಲೆ ಫೇಸ್‌ಬುಕ್ ವಿರುದ್ಧ ತನಿಖೆ ನಡೆಯುತ್ತಿದೆ ಎಂದು ಅಮೆರಿಕದ ಕೇಂದ್ರೀಯ ವಾಣಿಜ್ಯ ಆಯೋಗ ತಿಳಿಸಿದೆ.

ದತ್ತಾಂಶದಿಂದ ವಲಸಿಗರ ಪತ್ತೆ?
ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ ನಿರ್ದೇಶನಾಲಯವು ಫೇಸ್‌ಬುಕ್‌ನ ದತ್ತಾಂಶಗಳನ್ನು ಬಳಸಿಕೊಂಡು ವಲಸಿಗರ ನೆಲೆ ಹಾಗೂ ಅವರ ಜಾಡು ಪತ್ತೆಹಚ್ಚುತ್ತಿದೆ ಎಂದು ಆನ್‌ಲೈನ್ ಸುದ್ದಿಸಂಸ್ಥೆ ‘ಇಂಟರ್‌ಸೆಪ್ಟ್’ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT