ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವನಗುಡಿ ಮೈದಾನ: 11 ದಿನ ಗಣೇಶೋತ್ಸವಕ್ಕೆ ಅವಕಾಶ

ಶಂಕರಪುರ ನಿವಾಸಿಗಳಿಂದ ತೀವ್ರ ವಿರೋಧ
Last Updated 17 ಜುಲೈ 2019, 19:50 IST
ಅಕ್ಷರ ಗಾತ್ರ

ಬೆಂಗಳೂರು: ಹೈಕೋರ್ಟ್‌ ಆದೇಶವನ್ನು ಉಲ್ಲಂಘಿಸಿ ಬಸವನ ಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಸತತ 11 ದಿನ ಗಣೇಶೋತ್ಸವ ಆಚರಿಸಲು ಅವಕಾಶ ನೀಡುವ ಕುರಿತು ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಕೈಗೊಂಡಿರುವ ನಿರ್ಣಯಕ್ಕೆ ಶಂಕರಪುರ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಮೈದಾನವನ್ನು ಕ್ರೀಡೇತರ ಚಟುವಟಿಕೆಗೆ ಬಳಸಲು ಅವಕಾಶ ನೀಡಬಾರದು ಎಂದು ಕೋರಿ ಶಂಕರಪುರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವು 2017ರಲ್ಲಿ ಹೈಕೋರ್ಟ್‌ ಮೆಟ್ಟಿಲೇರಿತ್ತು. ಮೈದಾನದಲ್ಲಿ ತಿಂಗಳಲ್ಲಿ ಗರಿಷ್ಠ ಐದು ದಿನಗಳವರೆಗೆ ಮಾತ್ರ ಕ್ರೀಡೇತರ ಚಟುವಟಿಕೆಗೆ ಅವಕಾಶ ನೀಡುತ್ತೇವೆ ಎಂದು ಪಾಲಿಕೆ ಹೈಕೋರ್ಟ್‌ಗೆ ತಿಳಿಸಿತ್ತು. ಇದಕ್ಕೆ ಹೈಕೋರ್ಟ್‌ ಒಪ್ಪಿಗೆ ಸೂಚಿಸಿತ್ತು. ಆ ಆದೇಶವನ್ನು ರದ್ದುಪಡಿಸುವಂತೆ ಕೋರಿ ಸಂಘವು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿತ್ತು.

ಈ ನಿರ್ಣಯ ಮಂಡಿಸುವಂತೆ ಪ್ರಸ್ತಾವ ಸಲ್ಲಿಸಿದ್ದ ಬಸವನಗುಡಿ ವಾರ್ಡ್‌ನ ಪಾಲಿಕೆ ಸದಸ್ಯ ಬಿ.ಎಸ್‌.ಸತ್ಯನಾರಾಯಣ, ‘ತಿಂಗಳಲ್ಲಿ ಐದು ದಿನ ಮೈದಾನವನ್ನು ಕ್ರೀಡೇತರ ಚಟುವಟಿಕೆಗೆ ಬಳಸಲು ಹೈಕೋರ್ಟ್‌ ಅನುಮತಿ ನೀಡಿದೆ. ಅದರ ಪ್ರಕಾರ ವರ್ಷದಲ್ಲಿ 60 ದಿನ ಕ್ರೀಡೇತರ ಚಟುವಟಿಕೆಗೆ ಬಳಸಬಹುದು. ಮಳೆಗಾಲದಲ್ಲಿ ಕ್ರೀಡಾ ಚಟುವಟಿಕೆ ಕಡಿಮೆ ಇರುವುದರಿಂದ ಈ ಮೈದಾನದಲ್ಲಿ 11 ದಿನ ಗಣೇಶೋತ್ಸವ ಆಚರಣೆಗೆ ಅವಕಾಶ ಕಲ್ಪಿಸುವ ಬಗ್ಗೆ ಪಾಲಿಕೆಯಲ್ಲಿ ನಿರ್ಣಯ ಕೈಗೊಂಡಿದ್ದೇವೆ’ ಎಂದರು.

‘ಈ ಹಿಂದೆ ಡಿವಿಜಿ ರಸ್ತೆಯಲ್ಲಿ ಗಣೇಶೋತ್ಸವ ಆಚರಿಸುತ್ತಿದ್ದೆವು. ಆ ಬಳಿಕ ಎರಡು ಬಾರಿ ಸ್ಥಳ ಬದಲಾವಣೆ ಮಾಡಲಾಯಿತು. ಭಕ್ತರು ಭಾರಿ ಸಂಖ್ಯೆಯಲ್ಲಿ ಸೇರುವುದರಿಂದ ಈ ನಿರ್ಣಯ ಕೈಗೊಂಡಿದ್ದೇವೆ. ಸ್ಥಳೀಯ ನಿವಾಸಿಗಳು ಏಕೆ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆಂದು ತಿಳಿಯದು. ಅವರ ಜೊತೆ ಮಾತುಕತೆ ನಡೆಸುತ್ತೇವೆ. ಈ ಮೈದಾನದಲ್ಲಿ ಐದು ದಿನಗಳ ಬದಲು 11 ದಿನಗಳ ಕಾಲ ಗಣೇಶೋತ್ಸವ ಆಚರಿಸಲು ಅನುಮತಿ ನೀಡುವಂತೆ ಕೋರಿ ಹೈಕೋರ್ಟ್‌ಗೂ ಅರ್ಜಿ ಸಲ್ಲಿಸುತ್ತೇವೆ’ ಎಂದರು.

ಶಂಕರಪುರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಾ.ರಾಜಕುಮಾರ್‌, ‘ಈ ಮೈದಾನದಲ್ಲಿ ತಿಂಗಳಲ್ಲಿ ಐದಕ್ಕಿಂತ ಹೆಚ್ಚು ದಿನ ಕ್ರೀಡೇತರ ಚಟುವಟಿಕೆಗೆ ಅವಕಾಶ ಕಲ್ಪಿಸುವುದಿಲ್ಲ ಎಂದು ಪಾಲಿಕೆಯೇ ಹೈಕೋರ್ಟ್‌ನಲ್ಲಿ ಒಪ್ಪಿಕೊಂಡಿದೆ. ಹಾಗಿದ್ದೂ ಇಂತಹ ನಿರ್ಣಯವನ್ನು ಪಾಲಿಕೆ ಕೈಗೊಳ್ಳಲು ಹೇಗೆ ಸಾಧ್ಯ. ಇದು ನ್ಯಾಯಾಂಗ ನಿಂದನೆ. ಪಾಲಿಕೆ ನಿರ್ಣಯದ ವಿರುದ್ಧ ಕಾನೂನು ಹೋರಾಟ ನಡೆಸುತ್ತೇವೆ’ ಎಂದರು.

‘ದಕ್ಷಿಣ ಬೆಂಗಳೂರಿನಲ್ಲಿ ಮಕ್ಕಳು ಹಾಗೂ ಯುವಜನರ ಬಳಕೆಗೆ ಲಭ್ಯವಿರುವ ಏಕೈಕ ಮೈದಾನವಿದು. ಸಾವಿರಕ್ಕೂ ಹೆಚ್ಚು ಮಂದಿ ನಿತ್ಯ ಇದನ್ನು ಬಳಸುತ್ತಾರೆ. ಇಂತಹ ನಿರ್ಣಯ ಕೈಗೊಳ್ಳುವ ಮುನ್ನ ಕಾರ್ಪೊರೇಟರ್‌ ನಮ್ಮನ್ನು ಸಂಪರ್ಕಿಸಬೇಕಿತ್ತು. ಇಲ್ಲಿ ಗಣೇಶೋತ್ಸವದ ವೇಳೆ ತಿಂಗಳ ಕಾಲ ಸ್ಥಳೀಯರು ಸಮಸ್ಯೆ ಎದುರಿಸಬೇಕಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT