ಸೋಮವಾರ, ಸೆಪ್ಟೆಂಬರ್ 16, 2019
29 °C
ನೀತಿ ಸಂಹಿತೆ ಜಾರಿಯಿದ್ದಾಗಲೇ 35 ಬದಲಿ ನಿವೇಶನ ನೋಂದಣಿ ಆರೋಪ

ಅಧಿಕಾರಿಗಳ ರಕ್ಷಣೆಗೆ ಯತ್ನ?

Published:
Updated:

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಚದರ ಅಡಿಗೆ ₹59 ಕಟ್ಟಿಸಿಕೊಂಡು 35 ಬದಲಿ ನಿವೇಶನಗಳನ್ನು ನೋಂದಣಿ ಮಾಡಿಕೊಟ್ಟ ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳ ರಕ್ಷಣೆಗೆ ಯತ್ನ ನಡೆದಿದೆ ಎಂಬ ಬಲವಾದ ಶಂಕೆ ಮೂಡಿದೆ.

ಈ ‍ಪ್ರಕರಣದಲ್ಲಿ ಕರ್ತವ್ಯಲೋಪವೆಸಗಿದ ಆರೋಪದ ಮೇಲೆ ಪ್ರಾಧಿಕಾರದ ಉಪ ಕಾರ್ಯದರ್ಶಿ–4 ಸತೀಶ್‌ ಬಾಬು ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಅವರು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಶಿಫಾರಸು ಮಾಡಿದ್ದಾರೆ. ಆದರೆ, ಅಕ್ರಮಕ್ಕೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಇಲಾಖೆಗೆ ಸಲ್ಲಿಸಿಲ್ಲ. ಜತೆಗೆ, ಒಂದೂವರೆ ಪುಟದ ಶಿಫಾರಸು ಪತ್ರವನ್ನಷ್ಟೇ ಸಲ್ಲಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

ಶಿಸ್ತುಕ್ರಮ ಕೈಗೊಳ್ಳುವ ಮುನ್ನ ಇಲಾಖೆ ದಾಖಲೆಗಳನ್ನು ಪರಿಶೀಲನೆ ಮಾಡುತ್ತದೆ. ದಾಖಲೆಗಳಿಗಾಗಿ ಪ್ರಾಧಿಕಾರಕ್ಕೆ ಪತ್ರ ಬರೆಯುತ್ತದೆ. ಪ್ರಾಧಿಕಾರ ದಾಖಲೆ ಸಲ್ಲಿಸಲು 2–3 ತಿಂಗಳು ಸಮಯಾವಕಾಶ ತೆಗೆದುಕೊಳ್ಳುತ್ತದೆ. ಆಗ ಈ ಹಗರಣದ ಬಿಸಿ ಕಡಿಮೆಯಾಗಿರುತ್ತದೆ. ಈ ಮೂಲಕ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕುವ ಯತ್ನ ನಡೆಸಲಾಗಿದೆ 
ಎನ್ನಲಾಗಿದೆ.

‘ಕೆ.ನಾರಾಯಣಪುರದಲ್ಲಿ ಟ್ರಿನಿಟಿ ವಿಲೇಜ್‌ ಪ್ಲಾಟ್‌ ಓನರ್ಸ್‌ ಅಸೋಸಿಯೇಷನ್‌ ಸದಸ್ಯರಿಗೆ 35 ಬದಲಿ ನಿವೇಶನಗಳನ್ನು ಹಂಚುವ ಕಡತ ಈ ಹಿಂದಿನ ಉಪ ಕಾರ್ಯದರ್ಶಿ ಇದ್ದಾಗಲೇ ಬಂದಿತ್ತು. ಆದರೆ, ಅವರು ನಿರ್ಧಾರ ಕೈಗೊಂಡಿರಲಿಲ್ಲ. ಆದರೆ, ಸತೀಶ್‌ಬಾಬು ಅವರು ಲೋಕಸಭಾ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿದ್ದಾಗಲೇ ನಿವೇಶನಗಳ ನೋಂದಣಿ ಮಾಡಿಕೊಟ್ಟಿದ್ದಾರೆ.

ರಾಜಕೀಯ ಒತ್ತಡಕ್ಕೆ ಮಣಿದು ತರಾತುರಿಯಲ್ಲಿ ಪ್ರಕ್ರಿಯೆ ನಡೆಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಆಯುಕ್ತರಿಗೆ ಗೊತ್ತಿಲ್ಲದೆ ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ: ಬಿಡಿಎ ಅಧ್ಯಕ್ಷ

‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಆಯುಕ್ತರಿಗೆ ಗೊತ್ತಿಲ್ಲದೆ ಒಂದು ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ. ಬದಲಿ ನಿವೇಶನಗಳ ಹಂಚಿಕೆ ಪ್ರಕರಣದಲ್ಲಿ ಕೋಟಿ ಕೋಟಿ ಸಂಗ್ರಹಿಸಲಾಗಿದೆ. ಅದರಲ್ಲಿ ಯಾರಿಗೆ ಎಷ್ಟು ಪಾಲು ಹೋಗಿದೆ ಎಂಬುದು ಬಹಿರಂಗವಾಗಬೇಕು’ ಎಂದು ಬಿಡಿಎ ಅಧ್ಯಕ್ಷ ಎಸ್‌.ಟಿ.ಸೋಮಶೇಖರ್‌ ಒತ್ತಾಯಿಸಿದರು.

ಅರ್ಕಾವತಿ ಬಡಾವಣೆಯಲ್ಲಿ ಬದಲಿ ನಿವೇಶನಕ್ಕಾಗಿ 15–20 ವರ್ಷಗಳಿಂದ 3,500 ಜನರು ಕಾಯುತ್ತಿದ್ದಾರೆ. ಅಲ್ಲಿ ಒಂದೇ ಒಂದು ನಿವೇಶನ ಹಂಚಿಲ್ಲ. ಕೆಲವರಿಗೆ ಕೆಂ‍ಪೇಗೌಡ ಬಡಾವಣೆಯಲ್ಲಿ ನಿವೇಶನ ನೀಡಲಾಗಿದೆ. ಆದರೆ, ಕೆಲವೇ ದಿನಗಳಲ್ಲಿ ಒಂದೇ ಸಂಘಟನೆಗೆ 35 ಬದಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಈ ಪ್ರಕ್ರಿಯೆ ಆಯುಕ್ತರ ಗಮನಕ್ಕೆ ಬಂದೇ ನಡೆದಿದೆ. ಶಿಸ್ತುಕ್ರಮ ಕೈಗೊಳ್ಳುವಂತೆ ಕಾಟಾಚಾರಕ್ಕೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಶಿಫಾರಸು ಮಾಡಿದ್ದಾರೆ. ಜತೆಗೆ, ನೆಪ ಮಾತ್ರಕ್ಕೆ ‍ಪ್ರಥಮದರ್ಜೆ ಸಹಾಯಕನನ್ನು ಅಮಾನತು ಮಾಡಿದ್ದಾರೆ’ ಎಂದರು.

‘ಪ್ರಾಧಿಕಾರದಲ್ಲಿ ಇಂತಹ 20 ಪ್ರಕರಣಗಳು ನಡೆದಿವೆ. ಈಗ ಒಂದೊಂದೇ ಬೆಳಕಿಗೆ ಬರುತ್ತಿವೆ. ಈ ಎಲ್ಲ ಪ್ರಕರಣಗಳ ದಾಖಲೆ ಸಂಗ್ರಹಿಸಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸುತ್ತೇನೆ’ ಎಂದು ಅವರು 
ಹೇಳಿದರು.

‘ಅರ್ಕಾವತಿ ಬಡಾವಣೆಯಲ್ಲಿ ನಿವೇಶನ ಹಂಚಿಕೆಗೆ ದಲ್ಲಾಳಿಯೊಬ್ಬರು ವ್ಯಕ್ತಿಯೊಬ್ಬರ ಬಳಿಯಲ್ಲಿ ₹ 35 ಲಕ್ಷ ಲಂಚ ಕೇಳಿದ ಬಗ್ಗೆ ನನಗೆ ದೂರು ಬಂದಿದೆ. ಅರ್ಹರಿಗೆ ನಿವೇಶನ ಹಂಚಿಕೆ ಮಾಡಲು ಅಧಿಕಾರಿಗಳು ಹತ್ತಾರು ನೆಪಗಳನ್ನು ಹೇಳುತ್ತಾರೆ. ಅನರ್ಹರಿಗೆ ಕೂಡಲೇ ಸೈಟ್‌ ಹಂಚುತ್ತಾರೆ’ ಎಂದು ಕಿಡಿಕಾರಿದರು.

Post Comments (+)