ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತಾ ಸೇನಾನಿಗಳಿಗೆ 5 ತಿಂಗಳಿಂದ ಸಂಬಳವಿಲ್ಲ!

ಸಂಕಷ್ಟದಲ್ಲಿ ಮನೆಮನೆ ಕಸ ಸಂಗ್ರಹಿಸುವ ಕಾರ್ಮಿಕರು l ಸಂಸಾರ ನಿರ್ವಹಣೆಗೆ ಸಾಲದ ಮೊರೆ l ಏರುತ್ತಿದೆ ಬಡ್ಡಿಯ ಹೊರೆ
Last Updated 12 ಜೂನ್ 2021, 21:36 IST
ಅಕ್ಷರ ಗಾತ್ರ

ಬೆಂಗಳೂರು: ನಗರದಾದ್ಯಂತ ಕೋವಿಡ್ ಹರಡಿದ್ದ ಕಾಲದಲ್ಲೂ ಧೃತಿಗೆಡದೆ ಮನೆ ಮನೆಯಿಂದ ಕಸ ಸಂಗ್ರಹಿಸುತ್ತಿದ್ದ ಸ್ವಚ್ಛತಾ ಸೇನಾನಿಗಳ ಕುಟುಂಬಗಳು ಅಕ್ಷರಶಃ ಸಂಕಷ್ಟದಲ್ಲಿ ಸಿಲುಕಿವೆ. ಈ ಕಾರ್ಮಿಕರಿಗೆ 2021ರ ಜನವರಿಯಿಂದ ಸಂಬಳ ಪಾವತಿ ಆಗಿಲ್ಲ.

‘ಸಂಬಳದ ಮುಖ ನೋಡದೇ ನಾವೀಗ ಸಂಸಾರದ ನಿರ್ವಹಣೆಗೂ ಬವಣೆ ಪಡುವಂತಾಗಿದೆ. ಸಾಲದ ಸುಳಿಯಲ್ಲಿ ಸಿಲುಕಿದ್ದೇವೆ’ ಎಂದು ಮನೆ ಮನೆಯಿಂದ ಕಸ ಸಂಗ್ರಹಿಸುವ ಆಟೊಟಿಪ್ಪರ್‌ಗಳ ಸಿಬ್ಬಂದಿ ‘ಪ್ರಜಾವಾಣಿ’ ಜೊತೆ ಅಳಲು ತೋಡಿ ಕೊಂಡರು.

‘ನಮ್ಮ ಮನೆಯಲ್ಲಿ ಮೂವರು ಮಕ್ಕಳು ಸೇರಿ ಎಂಟು ಜನರಿದ್ದೇವೆ. ನನಗೆ ತಿಂಗಳಿಗೆ ಕೈಸೇರುತ್ತಿದ್ದ ಅಲ್ಪ ಸಂಬಳದಲ್ಲೇ ಹೇಗೋ ಕುಟುಂಬ ನಿರ್ವಹಣೆ ಮಾಡುತ್ತಿದ್ದೆ. 2021ರ ಜನವರಿ ಬಳಿಕ ಸಂಬಳ ಪಾವತಿ ಆಗಿಲ್ಲ. ಇನ್ನೊಂದೆಡೆ, ಎಲ್ಲ ಅಗತ್ಯ ವಸ್ತುಗಳ ದರಗಳು ಗಗನಕ್ಕೇರಿವೆ. ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಕುಟುಂಬ ನಿರ್ವಹಣೆ ಮಾಡುವುದು ಹೇಗೆ’ ಎಂದು ಪುಲಿಕೇಶಿನಗರ ಕ್ಷೇತ್ರದ ವ್ಯಾಪ್ತಿಯ ಸಿಬ್ಬಂದಿಯೊಬ್ಬರು ಅಳಲು ತೋಡಿಕೊಂಡರು.

‘ತಿಂಗಳಿಗೆ ₹ 4 ಸಾವಿರ ಮನೆ ಬಾಡಿಗೆ ಕಟ್ಟಬೇಕು. ಮೂವರು ಮಕ್ಕಳ ಶಿಕ್ಷಣಕ್ಕೆ ತಿಂಗಳಿಗೆ ₹ 3 ಸಾವಿರ ತೆಗೆದಿಡಬೇಕು. ಸಂಬಳ ಪಾವತಿಯಾಗದ ಕಾರಣ ಚೀಟಿ ಸಾಲ ಪಡೆದು ಅದಕ್ಕೆ ದುಬಾರಿ ಬಡ್ಡಿ ಕಟ್ಟುತ್ತಿದ್ದೇವೆ. ಈ ತಿಂಗಳೂ ಸಂಬಳ ಸಿಗದಿದ್ದರೆ ಏನು ಮಾಡಬೇಕೆಂದೇ ತೋಚುತ್ತಿಲ್ಲ’ ಎಂದರು.

‘ರಸ್ತೆಗಳನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರ ಸೇವೆಯನ್ನು ಬಿಬಿಎಂಪಿಯು ಮೂರು ವರ್ಷಗಳ ಹಿಂದೆಯೇ ಕಾಯಂಗೊಳಿಸಿದೆ. ನಗರದ ಸ್ವಚ್ಛತೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವ ನಮ್ಮನ್ನೂ ಕಾಯಂಗೊಳಿಸಬೇಕು ಎಂಬ ಬೇಡಿಕೆ ಇನ್ನೂ ಈಡೇರಿಲ್ಲ. 15 ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದೇನೆ. ಈಗಲೂ ನಮಗೆ ಯಾವ ಆರ್ಥಿಕ ಭದ್ರತೆಯೂ ಇಲ್ಲ’ ಎಂದು ಇದೇ ಕ್ಷೇತ್ರದ ವಾರ್ಡೊಂದರ ಆಟೊಟಿಪ್ಪರ್‌ ಡ್ರೈವರ್‌ ಬೇಸರ ವ್ಯಕ್ತಪಡಿಸಿದರು.

ಪ್ರತಿ ಆಟೊಟಿಪ್ಪರ್‌ನಲ್ಲಿ ಚಾಲಕ ಹಾಗೂ ಕಸ ಸಂಗ್ರಹಿಸುವ ಸಿಬ್ಬಂದಿ ಇರುತ್ತಾರೆ. ಚಾಲಕನಿಗೆ ತಿಂಗಳಿಗೆ ₹ 12 ಸಾವಿರ ಹಾಗೂ ಕಸ ಸಂಗ್ರಹಿಸುವ ಸಿಬ್ಬಂದಿಗೆ ₹ 12,700 ಸಂಬಳವಿದೆ. ಕಾಂಪ್ಯಾಕ್ಟರ್‌ ವಾಹನದಲ್ಲಿ ಚಾಲಕ ಸೇರಿ ಐವರು ಸಿಬ್ಬಂದಿ ಇರುತ್ತಾರೆ.

‘ಜಿಪಿಎಸ್‌ ಅಳವಡಿಸದ ಕಾರಣ ಸಮಸ್ಯೆ’

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಮನೆ ಮನೆಯಿಂದ ಕಸ ಸಂಗ್ರಹಿಸಲು 4,500 ಆಟೊಟಿಪ್ಪರ್‌ಗಳು ಹಾಗೂ ಆ ಕಸವನ್ನು ವಿಲೇವಾರಿ ಕೇಂದ್ರಗಳಿಗೆ ಸಾಗಿಸಲು 500 ಕಾಂಪ್ಯಾಕ್ಟರ್‌ ವಾಹನಗಳು ಬಳಕೆಯಾಗುತ್ತಿವೆ. ಈ ಎಲ್ಲ ವಾಹನಗಳಿಗೆ ಜಿಪಿಎಸ್‌ ಅಳವಡಿಸುವುದನ್ನು ಈ ಹಿಂದೆಯೇ ಕಡ್ಡಾಯ ಮಾಡಲಾಗಿದೆ. ಆದರೆ, ಅರ್ಧದಷ್ಟು ವಾಹನಗಳು ಈಗಲೂ ಜಿಪಿಎಸ್‌ ಅಳವಡಿಸಿಲ್ಲ. ಅಂತಹ ವಾಹನಗಳ ಗುತ್ತಿಗೆದಾರರಿಗೆ ಪಾವತಿಯನ್ನು 2021ರ ಜನವರಿಯಿಂದ ಸ್ಥಗಿತಗೊಳಿಸಿದ್ದೇವೆ’ ಎಂದು ಬಿಬಿಎಂಪಿ ಕಸ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಲವು ಗುತ್ತಿಗೆದಾರರು ತಮ್ಮ ವಾಹನಗಳಿಗೆ ಜಿಪಿಎಸ್‌ ಅಳವಡಿಸಿದ್ದರೂ ಅದನ್ನು ಚಾಲನೆಯಲ್ಲಿ ಇಟ್ಟಿಲ್ಲ. ಸುಮಾರು 2,000 ಆಟೋಟಿಪ್ಪರ್‌ಗಳು ಹಾಗೂ 300ರಷ್ಟು ಕಾಂಪ್ಯಾಕ್ಟರ್‌ ವಾಹನಗಳಲ್ಲಿ ಮಾತ್ರ ಜಿಪಿಎಸ್‌ ಸಕ್ರಿಯವಾಗಿದೆ. ಜಿಪಿಎಸ್‌ ಅಳವಡಿಸಿರುವ ವಾಹನಗಳ ಗುತ್ತಿಗೆದಾರರಿಗೆ ಹಣ ಪಾವತಿಗೆ ಅಡ್ಡಿ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಸಂಬಳವೂ ಇಲ್ಲ–ಸುರಕ್ಷತೆಯೂ ಇಲ್ಲ’

‘ಕೋವಿಡ್‌ ಹರಡುತ್ತಿರುವ ಸಂದರ್ಭದಲ್ಲೂ ಜೀವವನ್ನೇ ಪಣಕ್ಕಿಟ್ಟು ಮನೆ ಮನೆಯಿಂದ ಕಸ ಸಂಗ್ರಹಿಸುತ್ತಿದ್ದೇವೆ. ಕಸ ನೀಡುವವರಲ್ಲಿ ಕೋವಿಡ್‌ ರೋಗಿ ಗಳಿದ್ದ ಮನೆಯವರು ಯಾರು ಎಂಬುದು ನಮಗೆ ಗೊತ್ತಾಗುವುದಿಲ್ಲ. ಅವರ ಮನೆಯ ಕಸ ಪಡೆಯುವ ನಮಗೂ ಸೋಂಕು ತಗಲುವ ಅಪಾಯ ಹೆಚ್ಚು. ಆದರೂ ನಮ್ಮ ಸುರಕ್ಷತೆಗೆ ಬಿಬಿಎಂಪಿ ಯಾವುದೇ ಕ್ರಮಕೈಗೊಂಡಿಲ್ಲ. ನಮಗೆ ಸ್ಯಾನಿಟೈಸರ್‌, ಕೈಗವಸು ನೀಡುತ್ತಿಲ್ಲ’ ಎಂದು ಆಟೋಟಿಪ್ಪರ್‌ ಸಿಬ್ಬಂದಿಯೊಬ್ಬರು ದೂರಿದರು.

‘ಮನೆಯವರು ಕಸವನ್ನು ಹಸಿ ಕಸ ಹಾಗೂ ಒಣ ಕಸವನ್ನಾಗಿ ವಿಂಗಡಿಸದಿದ್ದರೆ, ಆ ಕೆಲಸವನ್ನೂ ನಾವೇ ಮಾಡಬೇಕು ಎಂದು ಹೇಳುತ್ತಾರೆ. ಕೋವಿಡ್‌ ಕಾಲದಲ್ಲಿ ಕಸ ವಿಂಗಡಣೆ ಎಷ್ಟು ಅಪಾಯಕಾರಿ ಎಂಬುದು ಎಲ್ಲ ರಿಗೂ ಗೊತ್ತು. ರಸ್ತೆಗಳ ಕಸ ಗುಡಿಸುವ ಪೌರಕಾರ್ಮಿ ಕರಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆಯನ್ನೂ ನಡೆಸಲಾ ಗುತ್ತಿದೆ. ಅವರಿಗೆ ಎಲ್ಲ ರೀತಿಯ ಸುರಕ್ಷತಾ ಸಾಮಗ್ರಿ ನೀಡು ತ್ತಾರೆ. ನಾವು ಕಾಯಂ ಸಿಬ್ಬಂದಿ ಅಲ್ಲ ಎಂಬ ಕಾರಣಕ್ಕೆ ತಾರತಮ್ಯ ಮಾಡಲಾಗುತ್ತಿದೆ’ ಎಂದು ಬೇಸರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT