ಗುರುವಾರ , ಆಗಸ್ಟ್ 18, 2022
25 °C

BBMP: ಹದಗೆಟ್ಟ ರಸ್ತೆಗಳ ಗುರುತಿಸಿದ ಪೊಲೀಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಾದ್ಯಂತ ಸಂಚಾರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿರುವುದರಿಂದ ವಿವಿಧ ಇಲಾಖೆಗಳ ಪ್ರತಿನಿಧಿಗಳು ಸೋಮವಾರ ಸಮನ್ವಯ ಸಭೆ ನಡೆಸಿದರು.

‘ನಗರದ ವಿವಿಧ ಜಂಕ್ಷನ್‌ಗಳಲ್ಲಿ ವಾಹನ ಸಂಚಾರ ದಟ್ಟಣೆ ಆಗುತ್ತಿರುವುದಕ್ಕೆ ಕಾರಣಗಳೇನು ಎಂದು ಅರಿಯುವುದು ಸಭೆಯ ಉದ್ದೇಶವಾಗಿತ್ತು. ಹದಗೆಟ್ಟ ರಸ್ತೆಗಳು, ನೀರು ಸರಾಗವಾಗಿ ಹರಿಯದೇ ನಿಲ್ಲುವುದು.. ಇಂತಹ ಕೆಲವು ಪ್ರಮುಖ ಸಮಸ್ಯೆಗಳನ್ನು
ಸಭೆಯಲ್ಲಿ ಚರ್ಚಿಸಲಾಯಿತು’ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ತಿಳಿಸಿದರು.

‘ಸಂಚಾರ ದಟ್ಟಣೆ ಸಮಸ್ಯೆಗೆ ಅಲ್ಪಾವಧಿ ಹಾಗೂ ದೀರ್ಘಾವಧಿ ಪರಿಹಾರೋಪಾಯಗಳನ್ನು ಚರ್ಚಿಸಲಾಯಿತು’ ಎಂದು ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.

‘ಅಲ್ಪಾವಧಿ ಪರಿಹಾರ ಯೋಜನೆಗಳನ್ನು ಇನ್ನೊಂದೆರಡು ವಾರಗಳಲ್ಲೇ ಜಾರಿಗೆ ತರುತ್ತೇವೆ. ದೀರ್ಘಾವಧಿ ಯೋಜನೆಗಳಿಗೆ ಆದಷ್ಟು ಬೇಗ ಟೆಂಡರ್‌ ಕರೆದು ಕಾಮಗಾರಿ ನಡೆಸಲು ಅನುಮತಿ ನೀಡಲಾಗುವುದು. ಸಣ್ಣಪುಟ್ಟ ಪರಿಹಾರೋಪಾಯಗಳಿಂದ ಸಂಚಾರ ದಟ್ಟಣೆ ಸಮಸ್ಯೆಯ ಶೇ 20ರಷ್ಟನ್ನು ಬಗೆಹರಿಸಬಹುದು’ ಎಂದರು.

‘ಬೆಂಗಳೂರು ಸಂಚಾರ ಪೊಲೀಸರು ಹದಗೆಟ್ಟ ರಸ್ತೆಗಳಿರುವ 54 ಜಾಗಗಳನ್ನು ಗುರುತಿಸಿದ್ದಾರೆ. ಈ ರಸ್ತೆಗಳನ್ನು ದುರಸ್ತಿಗೊಳಿಸಲಾಗುವುದು. ಎಷ್ಟು ರಸ್ತೆಗುಂಡಿಗಳಿವೆ ಎಂದು ಪಟ್ಟಿ ಕೊಡುವಂತೆ ಸಂಚಾರ ಪೊಲೀಸರನ್ನು ಕೇಳಿದ್ದೇವೆ. ಅದು ಲಭ್ಯವಾಗುತ್ತಿದ್ದಂತೆ ಗುಂಡಿ ಮುಚ್ಚುವ ಕಾಮಗಾರಿ ಪ್ರಾರಂಭಿಸಲಾಗುವುದು’ ಎಂದೂ ಅವರು ತಿಳಿಸಿದರು.

ವಿವಿಧ ಇಲಾಖೆಗಳವರು ಟ್ರಾಫಿಕ್ ಸಮಸ್ಯೆ ಬಗೆಹರಿಸುವಲ್ಲಿ ಯಾವ ಯಾವ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂಬುದನ್ನೂ ಸಭೆಯಲ್ಲಿ ಚರ್ಚಿಸಲಾಯಿತು. ಬಿಬಿಎಂಪಿ ಹಾಗೂ ಬಿಡಿಎ ಟ್ರಾಫಿಕ್ ಸಮಸ್ಯೆ ಬಗೆಹರಿಸುವ ಮಾರ್ಗೋಪಾಯಗಳನ್ನು ಜಾರಿಗೆ ತರಲು ಗಡುವು ಹಾಕಿಕೊಳ್ಳಬೇಕು. ಜನಸಂಚಾರ ವ್ಯಾಪಕವಾಗಿರುವ ಹೊತ್ತಿನಲ್ಲಿ ವಾಹನ ಸಂಚಾರ ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳಲು ಸಂಚಾರ ಪೊಲೀಸ್‌ ಇಲಾಖೆ ಹೆಚ್ಚುವರಿ ಟ್ರಾಫಿಕ್ ಪೊಲೀಸರನ್ನು ನಿಯೋಜಿಸಬೇಕು ಎಂದು ರಾಕೇಶ್ ಸಿಂಗ್ ಹೇಳಿದರು.

ಸಿಲ್ಕ್‌ ಬೋರ್ಡ್‌, ಕೆ.ಆರ್‌. ಪುರ, ಹೆಬ್ಬಾಳ ಜಂಕ್ಷನ್‌ಗಳನ್ನು ಮಂಗಳವಾರ ಅಧಿಕಾರಿಗಳು ಪರಿಶೀಲಿಸಲಿದ್ದಾರೆ ಎಂದು ತುಷಾರ್ ಗಿರಿನಾಥ್ ಹೇಳಿದರು.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಬಿಡಬ್ಲ್ಯುಎಸ್‌ಎಸ್‌ಬಿ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಬಿಎಂಆರ್‌ಸಿಎಲ್‌ ಹಾಗೂ ಬೆಂಗಳೂರು ಪೊಲೀಸ್‌ ಇಲಾಖೆಯ ಪ್ರನಿತಿಧಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು