ಶುಕ್ರವಾರ, ಅಕ್ಟೋಬರ್ 30, 2020
28 °C
ಸೇವಾ ಶುಲ್ಕ, ಆಸ್ತಿ ತೆರಿಗೆ ಪಾವತಿ ಸಲುವಾಗಿ ಜಾರಿಗೊಳಿಸಿದ ನೋಟಿಸ್‌ಗೂ ಉತ್ತರವಿಲ್ಲ

ಬಿಬಿಎಂಪಿಗೆ ₹ 4 ಕೋಟಿ ಬಾಕಿ ಉಳಿಸಿಕೊಂಡ ಬೆಂಗಳೂರು ವಿವಿ

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

BBMP

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯವು ಸೇವಾ ಶುಲ್ಕ ಹಾಗೂ ಆಸ್ತಿ ತೆರಿಗೆ ಸೇರಿ ಬಿಬಿಎಂಪಿಗೆ ಒಟ್ಟು ₹ 4.10 ಕೋಟಿ ಬಾಕಿ ಉಳಿಸಿಕೊಂಡಿದೆ.

ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಪ್ರತಿವರ್ಷವೂ ಈ ಹಳೆ ಬಾಕಿ ವಸೂಲಿಗೆ ನೋಟಿಸ್‌ ಜಾರಿಗೊಳಿಸುತ್ತಲೇ ಇದ್ದಾರೆ. ವಿಶ್ವವಿದ್ಯಾಲಯದ ಕಡೆಯಿಂದ ಯಾವುದೇ ಪ್ರತಿಕ್ರಿಯೆಯೂ ಬರುತ್ತಿಲ್ಲ ಎಂಬುದು ಪಾಲಿಕೆ ಅಧಿಕಾರಿಗಳ ಅಳಲು.

ಈ ಬಾಕಿ ಮೊತ್ತದಲ್ಲಿ ದಂಡನಾ ಬಡ್ಡಿ ಹಾಗೂ ಉಪಕರಗಳು ಒಳಗೊಂಡಿಲ್ಲ. ತೆರಿಗೆ ಪಾವತಿ ವಿಳಂಬವಾದರೆ ಬಿಬಿಎಂಪಿಯು ತಿಂಗಳಿಗೆ ಶೇ 2ರಂತೆ ವರ್ಷಕ್ಕೆ ಶೇ 24ರಷ್ಟು ದಂಡನಾ ಬಡ್ಡಿಯನ್ನೂ ವಿಧಿಸುತ್ತದೆ. ದಂಡನಾ ಬಡ್ಡಿಯ ಮೊತ್ತವನ್ನೂ ಪರಿಗಣಿಸಿದರೆ ವಿಶ್ವವಿದ್ಯಾಲಯವು ಬಿಬಿಎಂಪಿಗೆ ಬಾಕಿ ಉಳಿಸಿಕೊಂಡಿರುವ ಮೊತ್ತವು ₹ 9 ಕೋಟಿಗೂ ಅಧಿಕ ಆಗುತ್ತದೆ ಎಂದು ಕಂದಾಯ ವಿಭಾಗದ ಅಧಿಕಾರಿಗಳು ತಿಳಿಸಿದರು. 

ಬಿಬಿಎಂಪಿಯು ಕೆಎಂಸಿ ಕಾಯ್ದೆಯನ್ವಯ ಶಿಕ್ಷಣ ಸಂಸ್ಥೆಗಳಿಂದ ಹಾಗೂ ಸರ್ಕಾರಿ ಕಚೇರಿಗಳಿಂದ ಆಸ್ತಿ ತೆರಿಗೆ ವಸೂಲಿ ಮಾಡುವುದಿಲ್ಲ. ಅದರ ಬದಲು ಅವುಗಳ ಒಟ್ಟು ಆಸ್ತಿ ತೆರಿಗೆ ಪ್ರಮಾಣದ ಶೇ 25ರಷ್ಟು ಸೇವಾ ಶುಲ್ಕ ವಿಧಿಸುತ್ತದೆ. 2008ರಲ್ಲಿ ನಗರದ ಹೊರವಲಯದ 110 ಗ್ರಾಮಗಳನ್ನು ಹಾಗೂ ನಗರಸಭೆಗಳನ್ನು ಸೇರಿಸಿ ಪಾಲಿಕೆಯ ವ್ಯಾಪ್ತಿಯನ್ನು ವಿಸ್ತರಿಸಲಾಗಿತ್ತು. ಅಂದಿನಿಂದಲೂ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಪ್ರಾಂಗಣವು ಬಿಬಿಎಂಪಿ ವ್ಯಾಪ್ತಿಗೆ ಸೇರಿದೆ. ಆ ಬಳಿಕ ವಿಶ್ವವಿದ್ಯಾಲಯವು ಒಮ್ಮೆಯೂ ಆಸ್ತಿ ತೆರಿಗೆಯನ್ನಾಗಲೀ ಸೇವಾ ಶುಲ್ಕವನ್ನಾಗಲೀ ಪಾವತಿಸಿಲ್ಲ. 

‘ಜ್ಞಾನಭಾರತಿ ಪ್ರಾಂಗಣದಲ್ಲಿ ಶೈಕ್ಷಣಿಕ ಉದ್ದೇಶಕ್ಕೆ ಬಳಸುವ ಕಟ್ಟಡಗಳಿಗೆ ನಾವು ಆಸ್ತಿ ತೆರಿಗೆ ವಿಧಿಸುತ್ತಿಲ್ಲ, ಸೇವಾ ಶುಲ್ಕವನ್ನು ಮಾತ್ರ ವಿಧಿಸುತ್ತಿದ್ದೇವೆ. ವಸತಿಗೃಹಗಳು ಹಾಗೂ ಇತರ ಕಟ್ಟಡಗಳಿಗೆ ಆಸ್ತಿ ತೆರಿಗೆ ವಿಧಿಸುತ್ತಿದ್ದೇವೆ. ಆದರೆ, ವಿಶ್ವವಿದ್ಯಾಲಯವು ಆಸ್ತಿ ತೆರಿಗೆಯನ್ನಾಗಲೀ, ಸೇವಾ ಶುಲ್ಕವನ್ನಾಗಲೀ ಪಾವತಿಸಿಲ್ಲ’ ಎಂದು ಬಿಬಿಎಂಪಿಯ ಆರ್‌ಆರ್‌ನಗರ ವಲಯದ ಕಂದಾಯ ವಿಭಾಗದ ಉಪ ಆಯುಕ್ತ ಶಿವೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಈ ಸಲ ಸೆ.1ರಂದು ಬಾಕಿ ಸೇವಾ ಶುಲ್ಕವನ್ನು ಪಾವತಿಸುವಂತೆ ನೋಟಿಸ್‌ ಜಾರಿಗೊಳಿಸಿದ್ದೇವೆ. ನೋಟಿಸ್‌ ಜಾರಿಯಾದ 15 ದಿನಗಳ ಒಳಗೆ ಬಾಕಿಯನ್ನು ಪಾವತಿಸುವಂತೆ ತಿಳಿಸಿದ್ದೇವೆ. ಈ ಗಡುವು ಮುಗಿದರೂ ವಿಶ್ವವಿದ್ಯಾಲಯದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ಅವರು ತಿಳಿಸಿದರು.

‘ಆಸ್ತಿ ತೆರಿಗೆ ಪಾವತಿಸದಿದ್ದರೆ ಚರಾಸ್ತಿ ಜಪ್ತಿಗೂ ಅವಕಾಶವಿದೆ. ಆದರೆ, ಇದು ಜ್ಞಾನದೇಗುಲ, ಇಂತಹ ಕಠಿಣ ಕ್ರಮಗಳನ್ನು ಅನುಸರಿಸಿದರೆ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತದೆ ಎಂಬ ಕಾರಣಕ್ಕೆ ಜಪ್ತಿಗೆ ಮುಂದಾಗಿಲ್ಲ. ಇನ್ನಾದರೂ ಪರಿಸ್ಥಿತಿ ಅರ್ಥೈಸಿಕೊಂಡು ವಿಶ್ವವಿದ್ಯಾಲಯವು ಹಳೆ ಬಾಕಿ ಪಾವತಿಸಬೇಕು’ ಎಂದು ಅವರು ಒತ್ತಾಯಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಿಶ್ವವಿದ್ಯಾಲಯದ ಕುಲಪತಿ ವೇಣುಗೋಪಾಲ್‌, ‘ಈ ವಿಚಾರ ನನ್ನ ಗಮನಕ್ಕೆ ಬಂದಿರಲಿಲ್ಲ. ನಮ್ಮದೂ ಸರ್ಕಾರಿ ಸಂಸ್ಥೆ. ಸರ್ಕಾರ ಅನುದಾನ ನೀಡಿದರೆ, ನಾವು ಬಿಬಿಎಂಪಿಯ ಬಾಕಿ ಪಾವತಿಸಬಹುದು. ಇದುವರೆಗೆ ಏನು ಕ್ರಮಗಳನ್ನು ಅನುಸರಿಸಲಾಗುತ್ತಿತ್ತು, ನಿಯಮಗಳು ಏನು ಹೇಳುತ್ತವೆ ಎಂಬುದನ್ನು ನೋಡಿಕೊಂಡು ಈ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ’ ಎಂದರು.

*************

ಬೆಂಗಳೂರು ವಿಶ್ವವಿದ್ಯಾಲಯವು ಸರ್ಕಾರಿ ಸಂಸ್ಥೆಯಾದರೂ ಪಾಲಿಕೆಗೆ ಸೇವಾ ಶುಲ್ಕ ಹಾಗೂ ಆಸ್ತಿ ತೆರಿಗೆಗಳನ್ನು ಕಾಲ ಕಾಲಕ್ಕೆ ಪಾವತಿಸಲೇಬೇಕಾಗುತ್ತದೆ. ಬಾಕಿ ಮೊತ್ತ ವಸೂಲಿಗೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ
ಬಸವರಾಜು, ವಿಶೇಷ ಆಯುಕ್ತ, ಬಿಬಿಎಂಪಿ (ಕಂದಾಯ )

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು