ಗುರುವಾರ , ಆಗಸ್ಟ್ 11, 2022
21 °C
ಬಿಬಿಎಂಪಿ ಮಸೂದೆ 2020ಕ್ಕೆ ಆಯ್ಕೆ ಸಮಿತಿ ಅನುಮೋದನೆ * ಬಿಬಿಎಂಪಿ ಚುನಾವಣೆ ಮತ್ತಷ್ಟು ಮುಂದೂಡಲು ಸರ್ಕಾರ ಸಿದ್ಧತೆ

ನ್ಯಾಯಾಂಗ– ಶಾಸಕಾಂಗ ಸಂಘರ್ಷಕ್ಕೆ ದಾರಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಆರು ವಾರಗಳ ಒಳಗೆ ಅಧಿಸೂಚನೆ ಹೊರಡಿಸಬೇಕು ಎಂದು ಹೈಕೋರ್ಟ್‌ ಇತ್ತೀಚೆಗೆ ಆದೇಶ ಮಾಡಿರುವ ಬೆನ್ನಲ್ಲೇ ವಿಧಾನ ಮಂಡಲಗಳ ಜಂಟಿ ಸಲಹಾ ಸಮಿತಿಯು ‘ಬಿಬಿಎಂಪಿ ಮಸೂದೆ 2020’ಗೆ ಅನುಮೋದನೆ ನೀಡಿದೆ.

ಬಿಬಿಎಂಪಿಯ ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸುವುದು, ಮೇಯರ್‌ ಅಧಿಕಾರಾವಧಿಯನ್ನು ಎರಡೂವರೆ ವರ್ಷಗಳಿಗೆ ಹೆಚ್ಚಿಸುವುದೂ ಸೇರಿದಂತೆ ಅನೇಕ ಪ್ರಮುಖ ಅಂಶಗಳನ್ನು ಒಳಗೊಂಡಿರುವ ಈ ಮಸೂದೆಯನ್ನು ಈಗ ನಡೆಯುತ್ತಿರುವ ವಿಧಾನಮಂಡಲದ ಅಧಿವೇಶನದಲ್ಲೇ ಅಂಗೀಕರಿಸಲು ಸರ್ಕಾರ ತರಾತುರಿಯಲ್ಲಿ ತಯಾರಿ ನಡೆಸಿದೆ. 

ಶಾಸಕ ಎಸ್‌.ರಘು ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಜಂಟಿ ಸಲಹಾ ಸಮಿತಿಯ ಸಭೆಯಲ್ಲಿ ಬಿಬಿಎಂಪಿ ಮಸೂದೆಗೆ ಅನುಮೋದನೆ ನೀಡಲಾಗಿದೆ. ಅದನ್ನು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ. ಮಾಧುಸ್ವಾಮಿ ಅಧ್ಯಕ್ಷತೆಯ ಪರಿಶೀಲನಾ ಸಮಿತಿ ಇನ್ನೊಮ್ಮೆ ಪರಿಶೀಲಿಸಿ ಒಪ್ಪಿಗೆ ಸೂಚಿಸಿದ ಬಳಿಕ ಈ ಮಸೂದೆ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ಮಂಡನೆ ಆಗಲಿದೆ. 

ಸರ್ಕಾರ ಹೈಕೋರ್ಟ್‌ ಆದೇಶವನ್ನು ಪಾಲಿಸುವ ಬದಲು ಚುನಾವಣೆ ಮುಂದೂಡಲು ಇಂತಹ ತಂತ್ರ ನಡೆಸುವುದು ಶಾಸಕಾಂಗ ಮತ್ತು ನ್ಯಾಯಾಂಗದ ನಡುವೆ ತಿಕ್ಕಾಟಕ್ಕೆ ಕಾರಣವಾಗಲಿದೆ ಎನ್ನುತ್ತಾರೆ ತಜ್ಞರು.

‘ಈ ಮಸೂದೆಗೆ ಅಂಗೀಕಾರ ಪಡೆದು ಅದನ್ನೇ ಮುಂದಿಟ್ಟುಕೊಂಡು ಬಿಬಿಎಂಪಿ ಚುನಾವಣೆಯನ್ನು ಇನ್ನಷ್ಟು ಮುಂದೂಡುವ ಹುನ್ನಾರ ಸರ್ಕಾರದ್ದು. ಆದರೆ, ಸಂವಿಧಾನದ 74ನೇ ತಿದ್ದುಪಡಿ ಬಳಿಕ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಅವಧಿ ಮುಗಿಯುವುದರೊಳಗೆ ಚುನಾವಣೆ ನಡೆಸುವುದು ಕಡ್ಡಾಯ. ಅನಿವಾರ್ಯ ಕಾರಣಗಳಿಗಾಗಿ ಚುನಾವಣೆ ಮುಂದೂಡಿ ಆಡಳಿತಾಧಿಕಾರಿಯನ್ನು ನೇಮಿಸಿದರೂ ಆರು ತಿಂಗಳ ಒಳಗೆ ಚುನಾವಣೆ ನಡೆಸಲೇಬೇಕು. ಈ ಹಿಂದೆ ಬಿಬಿಎಂಪಿ ಚುನಾವಣೆಗಳನ್ನು ಮುಂದೂಡುವ ಪ್ರಯತ್ನಗಳು ನಡೆದಾಗಲೆಲ್ಲ ನ್ಯಾಯಾಲಯ ಇದೇ ಅಂಶ ಮುಂದಿಟ್ಟುಕೊಂಡು ಅದಕ್ಕೆ ಕಡಿವಾಣ ಹಾಕಿತ್ತು. 2015ರಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರವಿದ್ದಾಗಲೂ ಚುನಾವಣೆ ಮುಂದೂಡಲು ಬಿಬಿಎಂಪಿಯನ್ನು ಮೂರು ವಿಭಜನೆ ಮಾಡಲು ಮಸೂದೆ ಮಂಡಿಸಿ ಅಂಗೀಕರಿಸುವ ಪ್ರಯತ್ನ ನಡೆದಿತ್ತು. ಆದರೆ, ಅದಕ್ಕೆ ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ಗಳು ಸೊಪ್ಪು ಹಾಕಿರಲಿಲ್ಲ’ ಎಂದು ಪಾಲಿಕೆ ಸದಸ್ಯರಾಗಿದ್ದ ಬಿಜೆಪಿ ಮುಖಂಡರೊಬ್ಬರು ನೆನಪಿಸಿದರು.

‘1976ರ ಕೆಎಂಸಿ ಕಾಯ್ದೆಯಲ್ಲಿರುವ ಅಂಶಗಳಿಗೆ ಸಣ್ಣಪುಟ್ಟ ಮಾರ್ಪಾಡು ಮಾಡಿ ಬಿಬಿಎಂಪಿ ಮಸೂದೆ ರೂಪಿಸಿದ್ದಾರೆ. ಈ ಬಗ್ಗೆ ಆಳವಾದ ಅಧ್ಯಯನ ನಡೆದಿಲ್ಲ. ಮಸೂದೆಯ ಕರಡನ್ನು ಸಾರ್ವಜನಿಕವಾಗಿ ಪ್ರಕಟಿಸಿ ಜನಾಭಿಪ್ರಾಯವನ್ನೂ ಪಡೆದಿಲ್ಲ. ಈಗಿರುವಂತೆಯೇ ಮಸೂದೆ ಅಂಗೀಕಾರಗೊಂಡಿದ್ದೇ ಆದರೆ, ಅದರಿಂದ ಅನೇಕ ಸಮಸ್ಯೆಗಳು ಉದ್ಭವಿಸಲಿವೆ’ ಎಂದು ಬಿಬಿಎಂಪಿ ಸದಸ್ಯರಾಗಿದ್ದ ಇನ್ನೊಬ್ಬರು ಆತಂಕ ವ್ಯಕ್ತಪಡಿಸಿದರು.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿಗಳು, ತೆರಿಗೆ, ಕಟ್ಟಡ ನಿರ್ಮಾಣ ಉಪವಿಧಿಗಳಿಗೆ ಸಂಬಂಧಿಸಿದ ನಿಯಮ ಉಲ್ಲಂಘನೆಗೆ ಸಂಬಂಧಿಸಿ ಸಾವಿರಾರು ಪ್ರಕರಣಗಳು ನ್ಯಾಯಾಲಯದಲ್ಲಿವೆ. ಅವುಗಳನ್ನು ಇತ್ಯರ್ಥಪಡಿಸುವುದಕ್ಕೆ ಸಂಬಂಧಿಸಿ ಕೆಲವು ಗೊಂದಲಗಳು ಎದುರಾಗಬಹುದು. ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಸಾರ್ವಜನಿಕವಾಗಿಯೂ ಆಳವಾದ ಚರ್ಚೆ ನಡೆಸುವ ಅಗತ್ಯವಿತ್ತು’ ಎಂದು ಅವರು ಅಭಿಪ್ರಾಯಪಟ್ಟರು.

‘ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ನಿಗದಿಪಡಿಸುವುದೂ ಸೇರಿದಂತೆ ಅನೇಕ ಬದಲಾವಣೆಗಳಿಗೆ ವೈಜ್ಞಾನಿಕ ಅಧ್ಯಯನ ಆಧಾರಗಳಿಲ್ಲ. ಈ ಮಸೂದೆ ಬಗ್ಗೆ ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲೂ ಚರ್ಚೆಗೆ ಅವಕಾಶ ಮಾಡಿಕೊಟ್ಟು ಇದನ್ನು ಪ್ರಜಾಸತ್ತಾತ್ಮಕವಾಗಿ ರೂಪಿಸಿದ್ದರೆ ಅರ್ಥವಿರುತ್ತಿತ್ತು’ ಎಂದರು.

ಬಿಬಿಎಂಪಿ ಚುನಾಯಿತ ಕೌನ್ಸಿಲ್‌ ಅವಧಿ 2020ರ ಸೆ.10ಕ್ಕೆ ಮುಕ್ತಾಯವಾಗಿತ್ತು. ಬಳಿಕ ಐಎಎಸ್‌ ಅಧಿಕಾರಿ ಗೌರವ್‌ ಗುಪ್ತ ಅವರನ್ನು ಬಿಬಿಎಂಪಿ ಆಡಳಿತಾಧಿಕಾರಿಯಾಗಿ ಸರ್ಕಾರ ನೇಮಿಸಿತ್ತು. ಬಿಬಿಎಂಪಿಯಲ್ಲಿ ಕಾಂಗ್ರೆಸ್– ಜೆಡಿಎಸ್‌ ಮೈತ್ರಿ ಆಡಳಿತವಿದ್ದಾಗ ಆಡಳಿತ ಪಕ್ಷದ ನಾಯಕರಾಗಿದ್ದ  ಶಿವರಾಜು ಹಾಗೂ ಅಬ್ದುಲ್ ವಾಜಿದ್‌ ಅವರು ಬಿಬಿಎಂಪಿ ಚುನಾವಣೆ ಮುಂದೂಡುವುದನ್ನು ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋಗಿದ್ದರು.

‘ಚುನಾವಣೆ ಮುಂದೂಡುವ ಪ್ರಯತ್ನ ಫಲಿಸದು’

‘ಬಿಬಿಎಂಪಿ ಚುನಾವಣೆ ಮುಂದೂಡುವ ಪ್ರಯತ್ನಕ್ಕೆ ಹೈಕೋರ್ಟ್‌ ಈಗಾಗಲೇ ತಡೆ ನೀಡಿದೆ. ಆರು ವಾರಗಳ ಒಳಗೆ ಚುನಾವಣೆಗೆ ಅಧಿಸೂಚನೆ ಹೊರಡಿಸುವುದು ಕಡ್ಡಾಯ ಎಂದು ಸ್ಪಷ್ಟವಾಗಿ ಹೇಳಿದೆ. ಮಸೂದೆ ಮಂಡಿಸಿ ಚುನಾವಣೆ ಮುಂದೂಡುವ ಹುನ್ನಾರ ನಡೆಸಿದರೆ ಅದನ್ನು ನ್ಯಾಯಾಲಯ ಮಾನ್ಯ ಮಾಡದು ಎಂಬ ವಿಶ್ವಾಸವಿದೆ‘ ಎಂದು ಕಾಂಗ್ರೆಸ್‌ ಮುಖಂಡ ಎಂ.ಶಿವರಾಜು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು