ಮಂಗಳವಾರ, ಮೇ 18, 2021
28 °C
ಅನರ್ಹ ಶಾಸಕರ ನಿರ್ಣಾಯಕ ಪಾತ್ರ

ಗರಿಗೆದರಿದ ರಾಜಕೀಯ ಚಟುವಟಿಕೆ: ಮೇಯರ್‌ ಸ್ಥಾನಕ್ಕೆ ಬಿಜೆಪಿಯಲ್ಲಿ ಗುದ್ದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೇಯರ್ ಮತ್ತು ಉಪಮೇಯರ್ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಬಿಜೆಪಿಯಲ್ಲಿ ಚಟುವಟಿಕೆಗಳು ಗರಿಗೆದರಿವೆ. ತಮ್ಮ ಬೆಂಬಲಿಗರನ್ನು ಈ ಹುದ್ದೆಗೇರಿಸಲು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಮತ್ತು ಕಂದಾಯ ಸಚಿವ ಆರ್. ಅಶೋಕ ನಡುವೆ ಮುಸುಕಿನ ಗುದ್ದಾಟ ನಡೆಯುವ ಸಾಧ್ಯತೆ ದಟ್ಟವಾಗಿದೆ.

ನಗರದ ನಾಲ್ವರು ಕಾಂಗ್ರೆಸ್, ಒಬ್ಬ ಜೆಡಿಎಸ್‌ ಶಾಸಕರು ಅನರ್ಹಗೊಂಡಿರುವುದು ಮತ್ತು ಕಾಂಗ್ರೆಸ್‌ ವಶದಲ್ಲಿದ್ದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಬಿಜೆಪಿ ಪಾಲಾಗಿರುವುದರಿಂದ ಬಿಜೆಪಿ ವಲಯದಲ್ಲಿ ಮೇಯರ್ ಹುದ್ದೆಯ ಆಸೆಯನ್ನು ಹುಟ್ಟುಹಾಕಿದೆ.

ಅನರ್ಹ ಶಾಸಕರ ಬೆಂಬಲಿಗ ಪಾಲಿಕೆ ಸದಸ್ಯರು ಈ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಸದ್ಯ ಅವರು ಅಡಕತ್ತರಿಯಲ್ಲಿ ಸಿಲುಕಿಕೊಂಡಿದ್ದಾರೆ. ಪಕ್ಷದ ಸೂಚನೆ ಪಾಲಿಸಬೇಕೇ, ನಾಯಕರ ಮಾತು ಕೇಳಬೇಕೇ? ಎಂಬ ಗೊಂದಲದಲ್ಲಿ ಮುಳುಗಿದ್ದಾರೆ.

ಈ ನಡುವೆ, ಮೇಯರ್ ಹುದ್ದೆ ಬಿಜೆಪಿ ಪಾಲಾಗುವುದು ಬಹುತೇಕ ಖಚಿತವಾಗಿರುವುದರಿಂದ ಆಕಾಂಕ್ಷಿಗಳು ತಮ್ಮ ನಾಯಕರಿಗೆ ದುಂಬಾಲು ಬಿದ್ದಿದ್ದಾರೆ. ಸಂಘಟನೆಯಲ್ಲಿ ತೊಡಗಿರುವವರನ್ನು ಮೇಯರ್‌ ಮಾಡಬೇಕು ಎಂದು ಆರ್‌ಎಸ್‌ಎಸ್‌ ನಾಯಕರು ಬಿಜೆಪಿ ಮುಖಂಡರಿಗೆ ಸೂಚನೆ ನೀಡಿದ್ದಾರೆ ಎಂದು ಗೊತ್ತಾಗಿದೆ. ಕುಮಾರಸ್ವಾಮಿ ಬಡಾವಣೆ ವಾರ್ಡ್‌ನ ಎಲ್. ಶ್ರೀನಿವಾಸ್‌, ಕಾಡು ಮಲ್ಲೇಶ್ವರ ವಾರ್ಡ್‌ನ ಜಿ. ಮಂಜುನಾಥರಾಜು, ಜಕ್ಕೂರು ವಾರ್ಡ್‌ನ ಮುನೀಂದ್ರಕುಮಾರ್‌, ಗೋವಿಂದರಾಜನಗರ ವಾರ್ಡ್‌ನ ಕೆ. ಉಮೇಶ್‌ ಶೆಟ್ಟಿ ಹೆಸರುಗಳು ಮುಂಚೂಣಿಯಲ್ಲಿವೆ. ಪಾಲಿಕೆಯ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಹೆಸರೂ ಕೇಳಿ ಬರುತ್ತಿದೆ.

ಬೆಂಗಳೂರು ನಗರಕ್ಕೆ ಸಂಬಂಧಿಸಿದ ವಿಷಯದಲ್ಲಿ ಅಶ್ವತ್ಥನಾರಾಯಣ ಅವರ ಅಭಿಪ್ರಾಯಗಳಿಗೆ ಸದ್ಯದ ಸರ್ಕಾರದಲ್ಲಿ ಮನ್ನಣೆ ಇದೆ. ಹೀಗಾಗಿ, ಅವರಬೆಂಬಲಿಗ ಮಂಜುನಾಥರಾಜು ಅವರಿಗೆ ಅದೃಷ್ಟ ಖುಲಾಯಿಸಬಹುದು.  ಈ ಹಿಂದೆ ಬಿಜೆಪಿ ಆಡಳಿತದ ವೇಳೆ ದಕ್ಷಿಣ ಭಾಗದ ನಾಲ್ವರು ಸದಸ್ಯರು ಮೇಯರ್ ಆಗಿದ್ದಾರೆ. ಉತ್ತರದಿಂದ ಶಾರದಮ್ಮ ಅವರಿಗೆ ಮಾತ್ರ ಅವಕಾಶ ಸಿಕ್ಕಿದೆ. ಈ ಸಲ ಬೆಂಗಳೂರು ಉತ್ತರದವರಿಗೆ ಅವಕಾಶ ನೀಡಬೇಕು ಎಂಬ ಚರ್ಚೆ ಆರಂಭವಾಗಿದೆ.

‘ಮಲ್ಲೇಶ್ವರ ಕ್ಷೇತ್ರವನ್ನು ಪ್ರತಿನಿಧಿಸುವ ಅಶ್ವತ್ಥನಾರಾಯಣ ಅವರು ಉಪಮುಖ್ಯಮಂತ್ರಿಯಾಗಿದ್ದಾರೆ. ಅದೇ ಕ್ಷೇತ್ರಕ್ಕೆ ಮೇಯರ್ ಸ್ಥಾನವನ್ನು ಬಿಟ್ಟುಕೊಡಲು ರಾಜ್ಯ ನಾಯಕರು ಒಪ್ಪುವುದು ಅನುಮಾನ. ಅಲ್ಲದೆ, ತಮಗಿಂತ ಕಿರಿಯರಾದ ಅಶ್ವತ್ಥನಾರಾಯಣ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿದ ಕಾರಣಕ್ಕೆ ಆರ್‌. ಅಶೋಕ ಅಸಮಾಧಾನಗೊಂಡಿದ್ದಾರೆ. ಅವರನ್ನು ಸಮಾಧಾನಪಡಿಸಲು ಮೇಯರ್‌ ಚುನಾವಣೆಯಲ್ಲಿ ಅವರ ಮಾತಿಗೆ ಮನ್ನಣೆ ನೀಡುವ ಸಾಧ್ಯತೆಯೂ ಇದೆ. ಜತೆಗೆ, ಶಾಸಕ ಡಿ.ಕೆ.ಶಿವಕುಮಾರ್‌ ಬಂಧನದ ಬಗ್ಗೆ ಒಕ್ಕಲಿಗ ಸಮುದಾಯವರು ಮುನಿಸಿಕೊಂಡಿದ್ದಾರೆ. ಈ ಕಾರಣಕ್ಕೆ, ಒಕ್ಕಲಿಗ ಸಮುದಾಯದವರನ್ನು ಪರಿಗಣಿಸಬಹುದು’ ಎಂದು ಮುಖಂಡರೊಬ್ಬರು ಹೇಳಿದರು. ಅನರ್ಹ ಶಾಸಕರು ಸಹ ಮೇಯರ್‌ ತಮ್ಮ ದಾಳ ಉರುಳಿಸಬಹುದು ಪತ್ನಿ ಹೇಮಲತಾ ಅವರನ್ನು ಮೇಯರ್ ಹುದ್ದೆಗೆ ಪರಿಗಣಿಸಬೇಕು ಎಂದು ಅನರ್ಹ ಶಾಸಕ ಕೆ.ಗೋಪಾಲಯ್ಯ ನಾಯಕರಿಗೆ ಮನವಿ ಮಾಡಿಕೊಂಡಿದ್ದಾರೆ ಎಂದೂ ಮೂಲಗಳು ಹೇಳಿವೆ.

ಕಾಂಗ್ರೆಸ್‌ನಿಂದ ಇಬ್ಬರು ಆಕಾಂಕ್ಷಿಗಳು:

‘ಒಟ್ಟು ಮತದಾರರ ಪೈಕಿ ನಮಗೇ ಹೆಚ್ಚು ಸ್ಥಾನಗಳಿವೆ. ನಮ್ಮ ಪಕ್ಷದ ಚಿಹ್ನೆಯಿಂದ ಗೆದ್ದವರು ನಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕುತ್ತಾರೆ ಎಂಬ ವಿಶ್ವಾಸವಿದೆ. ಹಾಗಾಗಿ, ನಮ್ಮ ಪಕ್ಷದವರೇ ಮುಂದಿನ ಅವಧಿಗೂ ಮೇಯರ್‌ ಆಗಲಿದ್ದಾರೆ’ ಎಂದು ಪಾಲಿಕೆಯ ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ತಿಳಿಸಿದರು. ಕಾಂಗ್ರೆಸ್‌ನಲ್ಲಿ ಎಂ.ಶಿವರಾಜ್‌ ಹಾಗೂ ಮಹಮ್ಮದ್‌ ರಿಜ್ವಾನ್‌ ನವಾಬ್‌ ಮೇಯರ್‌ ಹುದ್ದೆಯ ಆಕಾಂಕ್ಷಿಗಳು. 

* ಮೇಯರ್ ಚುನಾವಣೆ ಬಗ್ಗೆ ಇನ್ನೂ ಚರ್ಚೆ ನಡೆದಿಲ್ಲ. ಬೆಂಗಳೂರಿನ ಮುಖಂಡರು ಕುಳಿತು ತೀರ್ಮಾನ ಕೈಗೊಳ್ಳುತ್ತೇವೆ

ಕೆ.ಗೋಪಾಲಯ್ಯ, ಅನರ್ಹ ಶಾಸಕ

27ಕ್ಕೆ ಚುನಾವಣೆ

ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಇದೇ 27ರಂದು ಚುನಾವಣೆ ನಡೆಸಲು ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ ಅಧಿಸೂಚನೆ ಹೊರಡಿಸಿದ್ದಾರೆ.

ಬಿಬಿಎಂಪಿ ಕೇಂದ್ರ ಕಚೇರಿಯ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಅಂದು ಬೆಳಿಗ್ಗೆ 11.30ಕ್ಕೆ ಚುನಾವಣೆ ನಡೆಯಲಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು