ಬುಧವಾರ, ಏಪ್ರಿಲ್ 14, 2021
25 °C
ಬಜೆಟ್‌ ರೂಪಿಸಲು ನಡೆದಿದೆ ಭರದ ಸಿದ್ಧತೆ: ಅಗತ್ಯ ಕಾಮಗಾರಿಗಳಿಗೆ ಅನುದಾನ ಒದಗಿಸಲು ನಿರ್ಧಾರ

ಬಿಬಿಎಂಪಿ ಬಜೆಟ್‌ ₹ 7,500 ಕೋಟಿಗೆ ಸೀಮಿತ?

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿಯ ಆದಾಯದ ನೈಜ ಲೆಕ್ಕಾಚಾರಗಳನ್ನು ಮರೆಮಾಚಿ, ವಾಸ್ತವವಲ್ಲದ ಬಜೆಟ್‌ ಮಂಡಿಸುವ ಪರಿಪಾಠ ಈ ಬಾರಿಯಾದರೂ ಕೊನೆಯಾಗಲಿದೆಯೇ. ಹೌದು ಎನ್ನುತ್ತವೆ ಬಿಬಿಎಂಪಿ ಮೂಲಗಳು.

‘ಬಿಬಿಎಂಪಿ ಆಸ್ತಿ ತೆರಿಗೆ ಮತ್ತು ಇತರ ವರಮಾನ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಸಿಗಲಿರುವ ಅನುದಾನವನ್ನು ನೋಡಿಕೊಂಡು ಬಜೆಟ್‌ ಮಂಡಿಸಲು ಸಿದ್ಧತೆ ನಡೆದಿದೆ. 2021–22ನೇ ಸಾಲಿನ ಬಜೆಟ್‌ ಗಾತ್ರವು ₹ 7,500 ಕೋಟಿಗೆ ಸೀಮಿತವಾಗಲಿದೆ’ ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಬಿಬಿಎಂಪಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಆಸ್ತಿ ತೆರಿಗೆ, ಜಾಹೀರಾತು, ಸ್ವಂತ ಆಸ್ತಿಗಳಿಂದ ಬರುವ ವರಮಾನ ಹಾಗೂ ಇತರ ಮೂಲಗಳಿಂದ ಬಿಬಿಎಂಪಿಯು ಪ್ರತಿ ವರ್ಷ ಹೆಚ್ಚೆಂದರೆ ₹ 4,000 ಕೋಟಿಗಳಷ್ಟು ಆದಾಯವನ್ನು ಗಳಿಸುತ್ತಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿವಿಧ ಮೂಲಗಳಿಂದ ವರ್ಷಕ್ಕೆ ಸುಮಾರು ₹3,500 ಸಾವಿರ ಕೋಟಿಗಳಷ್ಟು ಅನುದಾನ ನಿರೀಕ್ಷಿಸಲಾಗಿದೆ. ಹಾಗಾಗಿ, ಈ ಬಾರಿ ₹7,500 ಕೋಟಿ ಗಾತ್ರದ ಬಜೆಟ್‌ ಮಂಡನೆಗೆ ಸಿದ್ಧತೆ ನಡೆದಿದೆ’ ಎಂದರು.

‘ಹೊಸ ಕಾಮಗಾರಿಗಳನ್ನು ಹಮ್ಮಿಕೊಳ್ಳುವ ಬದಲು ನಿರ್ವಹಣೆ ವ್ಯವಸ್ಥೆ ಸುಧಾರಣೆಗೆ ಆದ್ಯತೆ ನೀಡಲು ಚಿಂತನೆ ನಡೆದಿದೆ. ತೀರಾ ಅಗತ್ಯ ಇರುವ ಕಾಮಗಾರಿಗಳಿಗೆ ಮಾತ್ರ ಬಜೆಟ್‌ನಲ್ಲಿ ಅನುದಾನ ಒದಗಿಸಲು ನಿರ್ಧರಿಸಿದ್ದೇವೆ’ ಎಂದು ಅವರು ತಿಳಿಸಿದರು.

‘ಕೋವಿಡ್‌ನಿಂದಾಗಿ ಆರ್ಥಿಕ ಪರಿಸ್ಥಿತಿ ಮೇಲೆ ಹೊಡೆತ ಬಿದ್ದಿದೆ. ಹಾಗಾಗಿ ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ನಿರೀಕ್ಷೆ ಮಾಡುವಂತಿಲ್ಲ. ರಾಜ್ಯ ಸರ್ಕಾರದ ಬಜೆಟ್‌ ಮಂಡನೆ ಬಳಿಕವೇ ಪಾಲಿಕೆ ಬಜೆಟ್‌ಗೆ ಅಂತಿಮ ರೂಪ ನೀಡಲಾಗುತ್ತದೆ’ ಎಂದರು.

ಶಾಸಕರಿಂದ ಒತ್ತಡ?: ‘ಪ್ರತಿ ಸಲ ಮೇಯರ್‌, ಉಪಮೇಯರ್‌ ಹಾಗೂ ಆಡಳಿತ ಪಕ್ಷದ ಪ್ರಮುಖರ ಒತ್ತಡಕ್ಕೆ ಮಣಿದು ಕೊನೆಯ ಕ್ಷಣದಲ್ಲಿ ಬಜೆಟ್‌ಗೆ ಕಾಮಗಾರಿಗಳನ್ನು ಸೇರ್ಪಡೆ ಮಾಡಲಾಗುತ್ತಿತ್ತು. ಇದರಿಂದಾಗಿ ಬಜೆಟ್‌ ಗಾತ್ರ ವಾಸ್ತವದ ವರಮಾನಕ್ಕಿಂತಲೂ ಹೆಚ್ಚು ಇರುತ್ತಿತ್ತು. ಈ ಬಾರಿ ಚುನಾಯಿತ ಕೌನ್ಸಿಲ್‌ ಅಸ್ತಿತ್ವಲ್ಲಿ ಇಲ್ಲ. ಆಡಳಿತಾಧಿಕಾರಿಯೇ ಬಜೆಟ್‌ ರೂಪಿಸುತ್ತಾರೆ. ಆದರೂ ಈ ಸಲವೂ ಶಾಸಕರು ಕೆಲ ಕಾಮಗಾರಿಗಳಿಗೆ ಅನುದಾನ ಒದಗಿಸುವಂತೆ ಪಟ್ಟು ಹಿಡಿದರೆ, ಅವುಗಳನ್ನು ಬಜೆಟ್‌ನಲ್ಲಿ ಸೇರ್ಪಡೆ ಮಾಡಬೇಕಾಗಬಹುದು’ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

‘2020–21ನೇ ಆರ್ಥಿಕ ವರ್ಷದಲ್ಲಿ ಇನ್ನು ಒಂದು ತಿಂಗಳು ಮಾತ್ರ ಬಾಕಿ ಇದೆ. ಪಾಲಿಕೆ ಈವರೆಗೆ ಸಂಗ್ರಹಿಸಿರುವುದು ₹2,700 ಕೋಟಿಗಳಷ್ಟು ಆಸ್ತಿ ತೆರಿಗೆ ಮಾತ್ರ. ಆರ್ಥಿಕ ವರ್ಷದ ಕೊನೇಯ ತಿಂಗಳು ಆಸ್ತಿ ತೆರಿಗೆ ಸಂಗ್ರಹ ಪ್ರಮಾಣ ಸ್ವಲ್ಪ ಹೆಚ್ಚಳವಾಗುತ್ತದೆ. ಇದು ಹೆಚ್ಚು ಕಡಿಮೆ ಈ ವರ್ಷ ₹ 3,000 ಕೋಟಿಯಿಂದ ₹ 3500 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

ಬಿಬಿಎಂಪಿಯನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದ್ದ ಬಜೆಟ್‌
2010–11ರಿಂದಲೂ ಪಾಲಿಕೆ ಬಜೆಟ್‌ನಲ್ಲಿ ನಿರೀಕ್ಷಿಸಿದಷ್ಟು ವರಮಾನ ಬರುತ್ತಿಲ್ಲ. ಆದರೆ, ಬಜೆಟ್‌ನಲ್ಲಿ ವೆಚ್ಚಕ್ಕೆ ನಿಗದಿಪಡಿಸಿದ ಅಷ್ಟೂ ಯೋಜನೆಗಳಿಗೆ ಕಾಮಗಾರಿ ಸಂಖ್ಯೆ ನೀಡಲಾಗುತ್ತಿದೆ. ಇದರಿಂದಾಗಿ ಪ್ರತಿವರ್ಷ ಗುತ್ತಿಗೆದಾರರಿಗೆ ಪಾವತಿಸಬೇಕಾದ ಬಾಕಿ ಬಿಲ್‌ಗಳ ಮೊತ್ತ ಹೆಚ್ಚುತ್ತಲೇ ಹೋಗುತ್ತಿದೆ.

2020–21ನೇ ಸಾಲಿನ ಬಿಬಿಎಂಪಿ ಬಜೆಟ್‌ಗೆ ಸರ್ಕಾರ ಅನುಮೋದನೆ ನೀಡಿದಾಗ ಪಾಲಿಕೆಯು ಗುತ್ತಿಗೆದಾರರಿಗೆ ₹2,575.25 ಕೋಟಿ ಬಿಲ್‌ ಪಾವತಿ ಬಾಕಿ ಇಟ್ಟುಕೊಂಡಿತ್ತು. ಆಗ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಅವರು ಪಾಲಿಕೆಯ ಆರ್ಥಿಕ ಪರಿಸ್ಥಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದರು.

‘ಬಿಬಿಎಂಪಿಯಲ್ಲಿ 2020–21ನೇ ಸಾಲಿನಲ್ಲಿ ಅನುಮೋದನೆಗೊಂಡ ಬಜೆಟ್‌ ಗಾತ್ರ ₹ 10,717 ಕೋಟಿ. ಆದರೆ, ಈ ಸಾಲಿನಲ್ಲಿ ಪಾಲಿಕೆ ಎದುರಿಸುತ್ತಿರುವ ಒಟ್ಟು ಆರ್ಥಿಕ ಹೊರೆ  ₹22,657 ಕೋಟಿ. ಆದಾಯ ಸಂಗ್ರಹ ಕುಸಿಯುತ್ತಿರುವುದರಿಂದ ಆರ್ಥಿಕ ಸ್ಥಿತಿ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ’ ಎಂದು ವಿವರಿಸಿದ್ದರು. ಬಳಿಕ ₹ 5 ಸಾವಿರ ಕೋಟಿ ಮೊತ್ತದ ಕಾಮಗಾರಿಗಳನ್ನು ಕೈಬಿಡಲು ಬಿಬಿಎಂಪಿ ನಿರ್ಧರಿಸಿತ್ತು.

ಬಜೆಟ್‌ ಬೇಡಿಕೆ: ವಾರ್ಡ್‌ ಸಮಿತಿಗಳಲ್ಲಿ ಚರ್ಚೆ
ಈ ಬಾರಿಯ ಬಜೆಟ್‌ ರೂಪಿಸುವುದಕ್ಕೆ ಪೂರ್ವಬಾವಿಯಾಗಿ ಪ್ರತಿ ವಾರ್ಡ್‌ನಿಂದಲೂ ಬೇಡಿಕೆಗಳ ಪಟ್ಟಿ ತರಿಸಿಕೊಳ್ಳಲಾಗುತ್ತದೆ. ವಾರ್ಡ್‌ ಸಮಿತಿ ಸಭೆಯಲ್ಲಿ ವಾರ್ಡ್‌ನ ಬಜೆಟ್‌ ಬೇಡಿಕೆಗಳ ಚರ್ಚಿಸಲು ಅವಕಾಶ ಕಲ್ಪಿಸಲಾಗಿದೆ.

‘ಬೇಡಿಕೆಗಳ ಪಟ್ಟಿ ನೀಡುವಂತೆ ವಾರ್ಡ್‌ ಸಮಿತಿಗಳಿಗೆ ಸೂಚಿಸಲಾಗಿತ್ತು. ಅನೇಕ ಕಡೆ ಶನಿವಾರ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಕೆಲವು ವಾರ್ಡ್‌ ಸಮಿತಿಗಳು ಬೇಡಿಕೆ ಪಟ್ಟಿ ಅಂತಿಮಗೊಳಿಸಲು ಕಾಲಾವಕಾಶ ಕೋರಿವೆ. ಇನ್ನು ಎರಡು– ಮೂರು ದಿನಗಳಲ್ಲಿ ಬೇಡಿಕೆ ಪಟ್ಟಿ ಸಲ್ಲಿಸುವುದಾಗಿ ತಿಳಿಸಿವೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾನು ನೋಡಲ್‌ ಅಧಿಕಾರಿಯಾಗಿರುವ ವಸಂತ ನಗರ ವಾರ್ಡ್‌ನಲ್ಲಿ ನಾಗರಿಕರ ಹಾಗೂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಪ್ರತಿನಿಧಿಗಳನ್ನು ಒಳಗೊಂಡ ವಾಟ್ಸ್‌ಆ್ಯಪ್‌ ಬಳಗಗಳನ್ನು ರಚಿಸಿಕೊಂಡಿದ್ದೇವೆ. ಇವುಗಳ ಮೂಲಕವೂ ಪ್ರಮುಖ ಬೇಡಿಕೆಗಳ ಬಗ್ಗೆ ನಾಗರಿಕರು ಮಾಹಿತಿ ನೀಡಲಿದ್ದಾರೆ. ಅವುಗಳಲ್ಲಿ ಬರುವ ಬೇಡಿಕೆ ಆಧರಿಸಿ ಬಜೆಟ್‌ನಲ್ಲಿ ಸೇರಿಸಬೇಕಾದ ಕಾಮಗಾರಿಗಳ ಪಟ್ಟಿ ತಯಾರಿಸುತ್ತೇವೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು