ಬಿಬಿಎಂಪಿ ಬಜೆಟ್: ಅಂಗೀಕರಿಸಿದ ಮೊತ್ತಕ್ಕಿಂತ ₹ 665 ಕೋಟಿ ಹೆಚ್ಚುವರಿ ಸೇರ್ಪಡೆ

ಬೆಂಗಳೂರು: ಬಿಬಿಎಂಪಿಯ 2021–22ನೇ ಸಾಲಿನ ಬಜೆಟ್ಗೆ ನಗರಾಭಿವೃದ್ಧಿ ಇಲಾಖೆ ಮಂಗಳವಾರ ಅನುಮೋದನೆ ನೀಡಿದೆ. ಬಿಬಿಎಂಪಿಯು ಅಂಗೀಕರಿಸಿ ಕಳುಹಿಸಿದ ಬಜೆಟ್ನಲ್ಲಿ ಅನಗತ್ಯ ಕಾರ್ಯಕ್ರಮಗಳಿಗೆ ಕತ್ತರಿ ಹಾಕಿ ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡುವುದು ವಾಡಿಕೆ. ಹಾಗಾಗಿ ಇಲಾಖೆಯಿಂದ ಅನುಮೋದನೆಗೊಳ್ಳುವಾಗ ಬಜೆಟ್ ಗಾತ್ರ ಕುಗ್ಗುತ್ತಿತ್ತು. ಇದೇ ಮೊದಲ ಬಾರಿ ಬಿಬಿಎಂಪಿ ಅಂಗೀಕರಿಸಿದ್ದ ಬಜೆಟ್ ಗಾತ್ರವನ್ನು ಹೆಚ್ಚಿಸಿ ಅನುಮೋದನೆ ನೀಡಲಾಗಿದೆ.
ಬಿಬಿಎಂಪಿಯು 2021–22ನೇ ಸಾಲಿಗೆ ₹ 9,286.80 ಕೋಟಿ ಗಾತ್ರದ ಬಜೆಟ್ ಮಂಡಿಸಿ ಅಂಗೀಕರಿಸಿತ್ತು. ನಗರಾಭಿವೃದ್ಧಿ ಇಲಾಖೆಯು ಈ ಮೊತ್ತವನ್ನು ಪರಿಷ್ಕರಿಸಿ ಒಟ್ಟು ₹ 9,951.8 ಕೋಟಿ ಗಾತ್ರದ ಬಜೆಟ್ಗೆ ಅನುಮೋದನೆ ನೀಡಿದೆ.
ಅನುದಾನ ಹೆಚ್ಚಳ ಏತಕ್ಕೆ:
ಬಜೆಟ್ ವಾಸ್ತವಕ್ಕೆ ಹತ್ತಿರ ಇರಬೇಕು ಎಂಬ ಕಾರಣಕ್ಕೆ ಬಿಬಿಎಂಪಿ ಬಿಗಿ ಕ್ರಮಗಳನ್ನು ಅನುಸರಿಸಿತ್ತು. ಇಷ್ಟು ವರ್ಷ ಬಜೆಟ್ನಲ್ಲಿ ಮೇಯರ್, ಉಪ ಮೇಯರ್, ಆಯುಕ್ತರು, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ, ಜಿಲ್ಲಾ ಉಸ್ತುವಾರಿ ಸಚಿವರ ವಿವೇಚನೆಯಡಿ ಬಳಸುವುದಕ್ಕೆ ವಿಶೇಷ ಅನುದಾನ ಕಾಯ್ದಿರಿಸಲಾಗುತ್ತಿತ್ತು. ಆದರೆ, ಈ ಸಲ ಮುಖ್ಯ ಆಯುಕ್ತರ ವಿವೇಚನೆಯ ಬಳಕೆಗೆ ₹ 20 ಕೋಟಿ ಕಾಯ್ದಿರಿಸಿದ್ದು ಬಿಟ್ಟರೆ, ಉಳಿದವರು ವಿವೇಚನೆಯಡಿ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಕ್ಕೆ ಅನುದಾನ ಮೀಸಲಿಟ್ಟಿರಲಿಲ್ಲ. ಈ ಕೋಟಾದಡಿ ಪ್ರಗತಿಯಲ್ಲಿರುವ ಕಾಮಗಾರಿಗಳಿಗಾಗಿ ₹ 65 ಕೋಟಿಯನ್ನು ಮಾತ್ರ ಕಾಯ್ದಿರಿಸಲಾಗಿತ್ತು.
ನಗರಾಭಿವೃದ್ಧಿ ಇಲಾಖೆಯು ₹ 385 ಕೋಟಿ ಮೊತ್ತವನ್ನು ವಿವೇಚನಾ ಬಳಕೆಗೆ ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಿದೆ. ಈ ಮೊತ್ತದಲ್ಲಿ ಸಿಂಹಪಾಲು (₹ 250 ಕೋಟಿ) ಜಿಲ್ಲಾ ಉಸ್ತುವಾರಿ ಸಚಿವರಿಗೆ ಲಭಿಸಲಿದೆ. ಬೆಂಗಳೂರು ನಗರ ಜಿಲ್ಲೆಯ ಉಸ್ತುವಾರಿ ಹೊಣೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಳಿಯೇ ಇದೆ. ಇನ್ನುಳಿದಂತೆ ಮೇಯರ್ಗೆ ₹50 ಕೋಟಿ, ಉಪಮೇಯರ್ಗೆ ₹ 35 ಕೋಟಿ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ ₹ 15 ಕೋಟಿ ಅನುದಾನ ಹೆಚ್ಚುವರಿಯಾಗಿ ಹಂಚಿಕೆ ಮಾಡಲಾಗಿದೆ. ಸದ್ಯ ಮೇಯರ್, ಉಪಮೇಯರ್ ಹಾಗೂ ಸ್ಥಾಯಿ ಸಮಿತಿಗಳ ಅಧಿಕಾರ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಕೈಯಲ್ಲಿದೆ. ನಗರಾಭಿವೃದ್ಧಿ ಇಲಾಖೆಗೂ ಅವರೇ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ. ಸುಮಾರು ₹ 100 ಕೋಟಿ ಅನುದಾನ ಅವರ ವಿವೇಚನಾ ಬಳಕೆಗೆ ಲಭಿಸಲಿದೆ. ಮುಖ್ಯ ಆಯುಕ್ತರ (ಗೌರವ್ ಗುಪ್ತ) ವಿವೇಚನಾ ಬಳಕೆಗೆ ಕಾಯ್ದಿರಿಸಿದ್ದ ಮೊತ್ತವನ್ನು ₹ 35 ಕೋಟಿಗೆ ಪರಿಷ್ಕರಿಸಲಾಗಿದೆ.
‘ವಿವೇಚನೆಯಡಿ ಬಳಸುವುದಕ್ಕೆ ಅನುದಾನವನ್ನು ಕಾಯ್ದಿರಿಸದಿದ್ದರೆ ಅನಿವಾರ್ಯ ಇರುವ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಕ್ಕೆ ಅವಕಾಶವಿಲ್ಲ. ಹಾಗಾಗಿ ₹ 385 ಕೋಟಿಯನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಲಾಗಿದೆ’ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಜ್ಯ ಸರ್ಕಾರದ ಅನುದಾನದಲ್ಲಿ ಕೈಗೊಳ್ಳುವ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಟೆಂಡರ್ ಪ್ರೀಮಿಯಂ ಮೊತ್ತವನ್ನು (ಕಾಮಗಾರಿಯ ಟೆಂಡರ್ ನೀಡುವಾಗ ಆಡಳಿತಾತ್ಮಕ ಅನುಮೋದನೆ ಪಡೆದ ಮೊತ್ತಕ್ಕೆ ಹೆಚ್ಚುವರಿಯಾಗಿ ಭರಿಸಬೇಕಾಗುವ ಮೊತ್ತ) ಪಾಲಿಕೆಯೇ ಭರಿಸಬೇಕಾಗುತ್ತದೆ. ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಟೆಂಡರ್ಗಳಿಗೆ ಅನುಮೋದನೆ ನೀಡುವಾಗಲೇ ಸರ್ಕಾರ ಈ ಷರತ್ತು ವಿಧಿಸಿವೆ. ಟೆಂಡರ್ ಪ್ರೀಮಿಯಂ ಮೊತ್ತ ಭರಿಸುವುದಕ್ಕೆ 2021–22ನೇ ಸಾಲಿನ ಬಜೆಟ್ನಲ್ಲಿ ಬಿಬಿಎಂಪಿ ಯಾವುದೇ ಅನುದಾನವನ್ನು ಕಾಯ್ದಿರಿಸಿರಲಿಲ್ಲ. ಹಾಗಾಗಿ ರಾಜ್ಯ ಸರ್ಕಾರದ ಅನುದಾನಕ್ಕೆ ಪೂರಕ ಅನುದಾನ (ಮ್ಯಾಚಿಂಗ್ ಕಾಂಟ್ರಿಬ್ಯೂಷನ್) ಬಳಕೆಗೆ ಹಣವಿರಲಿಲ್ಲ. ನಗರಾಭಿವೃದ್ಧಿ ಇಲಾಖೆಯು ಟೆಂಡರ್ ಪ್ರೀಮಿಯಂ ಭರಿಸಲು ₹ 300 ಕೋಟಿ ಅನುದಾನವನ್ನು ಬಜೆಟ್ನಲ್ಲಿ ಹೆಚ್ಚುವರಿಯಾಗಿ ಸೇರ್ಪಡೆ ಮಾಡಿದೆ.
ಕಳೆದ ಸಾಲಿನ (2020–21) ಸಾಲಿನ ಬಜೆಟ್ನಲ್ಲಿ ಪಾಲಿಕೆಯು ರಾಜ್ಯ ಸರ್ಕಾರದ ಅನುದಾನಕ್ಕೆ ಪೂರಕ ಅನುದಾನವನ್ನು ಮೀಸಲಿಟ್ಟಿತ್ತು. ಆದರೆ, ಬಜೆಟ್ಗೆ ಅನುಮೋದನೆ ಪಡೆದ ಬಳಿಕ ಆ ಮೊತ್ತವನ್ನು ಮರುಹಂಚಿಕೆ ಮಾಡಿತ್ತು. ಈ ರೀತಿ ಅನುದಾನ ಮರುಹಂಚಿಕೆ ತಡೆಯುವ ಉದ್ದೇಶದಿಂದ ಈ ಸಲ ರಾಜ್ಯ ಸರ್ಕಾರದ ಅನುದಾನಕ್ಕೆ ಪೂರಕವಾಗಿ ಮೀಸಲಿಡುವ ಅನುದಾನವನ್ನು ಪ್ರತ್ಯೇಕ ಖಾತೆಯ (ಎಸ್ಕ್ರೊ ಖಾತೆ) ಮೂಲಕ ಬಳಸಬೇಕು. ಯಾವುದೇ ಕಾರಣಕ್ಕೂ ಮರುಹಂಚಿಕೆ ಮಾಡಬಾರದು ಎಂದು ನಗರಾಭಿವೃದ್ಧಿ ಇಲಾಖೆ ಷರತ್ತು ವಿಧಿಸಿದೆ.
ಬಜೆಟ್ ಗಾತ್ರವನ್ನು ಹೆಚ್ಚಿಸಿದರೂ, ಬಿಬಿಎಂಪಿ ಸ್ವೀಕೃತಿ ₹ 9,291.33 ಕೋಟಿ ಮಾತ್ರ ಇದೆ. ಹಾಗಾಗಿ ಹೆಚ್ಚುವರಿ ಸೇರ್ಪಡೆಯ ₹ 665 ಕೋಟಿ ಹೊಂದಿಸುವುದು ಎಲ್ಲಿಂದ ಎಂಬ ಪ್ರಶ್ನೆ ಉದ್ಭವವಾಗಿದೆ. ಹಾಗಾಗಿ ಎಂದಿನಂತೆ ಈ ಬಾರಿಯೂ ಬಿಬಿಎಂಪಿಯದು ಕೊರತೆ ಬಜೆಟ್ ಆಗಿಯೇ ಮುಂದುವರಿದಿದೆ.
2020–21ರ ಬಜೆಟ್: ₹ 4919.5 ಕೋಟಿ ಕಡಿತ
ಮೇಯರ್ ಗೌತಮ್ ಕುಮಾರ್ ಅವಧಿಯಲ್ಲಿ ಬಿಬಿಎಂಪಿ 2020–21ನೇ ಸಾಲಿಗೆ ₹ 11,972.89 ಕೋಟಿ ಗಾತ್ರದ ಬಜೆಟ್ ಅಂಗೀಕರಿಸಿತ್ತು. ನಗರಾಭಿವೃದ್ಧಿ ಇಲಾಖೆಯು ಬಜೆಟ್ ಗಾತ್ರವನ್ನು ₹ 11,718.54 ಕೋಟಿಗೆ ಕಡಿತಗೊಳಿಸಿ ಅನುಮೋದನೆ ನೀಡಿತ್ತು. ಈ ಸಾಲಿನ ಪರಿಷ್ಕೃತ ಬಜೆಟ್ಗೆ ಇಲಾಖೆ ಮಂಗಳವಾರ ಅನುಮೋದನೆ ನೀಡಿದೆ. ಬಜೆಟ್ ಗಾತ್ರವನ್ನು₹ 6,799.04 ಕೋಟಿಗೆ ಕಡಿತಗೊಳಿಸಲಾಗಿದೆ. ಬಜೆಟ್ ಗಾತ್ರವು ₹ 4,919.5 ಕೋಟಿಗಳಷ್ಟು ಕಡಿತಗೊಂಡಿದೆ.
ವಿವೇಚನಾ ಬಳಕೆ ಅನುದಾನ ಪರಿಷ್ಕರಣೆ ವಿವರ (₹ ಕೋಟಿಗಳಲ್ಲಿ)
ಯಾರಿಗೆ; ಬಾಕಿ ಮೊತ್ತ; ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ; ಹೊಸ ಕಾಮಗಾರಿಗಳಿಗೆ; ಒಟ್ಟು
ಮೇಯರ್; 32.28; 10; 50; 92.28
ಉಪಮೇಯರ್; 27.95; 15; 35; 77.95
ಮುಖ್ಯ ಆಯುಕ್ತರು; 6.48; 10; 35; 51.48
ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ; 21.72; 15; 15; 51.72
ಜಿಲ್ಲಾ ಉಸ್ತುವಾರಿ ಸಚಿವರು; 32.20; 15; 250; 297.20
ಅಂಕಿ ಅಂಶ
₹ 9,286.80 ಕೋಟಿ
ಬಿಬಿಎಂಪಿಯು ನಗರಾಭಿವೃದ್ಧಿ ಇಲಾಖೆಗೆ ಅನೊಮೋದನೆಗಾಗಿ ಕಳುಹಿಸಿದ್ದ 2021–22ನೇ ಸಾಲಿನ ಬಜೆಟ್ ಗಾತ್ರ
₹ 9,951.80 ಕೋಟಿ
ಇಲಾಖೆಯು ಅನುಮೋದನೆ ನೀಡಿರುವ ಬಜೆಟ್ ಗಾತ್ರ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.