ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಶಿಸ್ತಿಗೆ ಮನ್ನಣೆ– ಜನಪ್ರಿಯ ಘೋಷಣೆಗೆ ಮಣೆ?

ಯುಗಾದಿ ಬಳಿಕ ಪಾಲಿಕೆ ಬಜೆಟ್‌ ಮಂಡನೆ: * ಗಾತ್ರ ₹ 9 ಸಾವಿರ ಕೋಟಿ ಮೀರದಿರಲಿ– ಹಣಕಾಸು ವಿಭಾಗ ಸಲಹೆ
Last Updated 24 ಮಾರ್ಚ್ 2020, 10:29 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ 2020–21ನೇ ಸಾಲಿನ ಬಜೆಟ್‌ ಮಂಡನೆಗೆ ಬಿರುಸಿನ ಸಿದ್ಧತೆ ನಡೆದಿದೆ. ಬಜೆಟ್‌ ಗಾತ್ರ ₹ 9 ಸಾವಿರ ಕೋಟಿ ಮೀರದಿರಲಿ ಎಂದು ಹಣಕಾಸು ವಿಭಾಗವು ಸಲಹೆ ನೀಡಿದೆ. ತೆರಿಗೆ ಮತ್ತು ಆರ್ಥಿಕ ಸ್ಥಾಯಿಸಮಿತಿ ಅಧ್ಯಕ್ಷರು ಈ ಬಾರಿ ಆರ್ಥಿಕ ಶಿಸ್ತಿಗೆ ಮನ್ನಣೆ ನೀಡುತ್ತಾರೋ ಅಥವಾ ಚುನಾವಣಾ ವರ್ಷವಾಗಿರುವ ಕಾರಣ ಜನಪ್ರಿಯ ಘೋಷಣೆಗಳಿಗೆ ಮಣೆ ಹಾಕುತ್ತಾರೋ ಎಂಬುದು ಕುತೂಹಲ ಮೂಡಿಸಿದೆ.

2019–20ನೇ ಸಾಲಿನಲ್ಲಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿದ್ದ ಎಸ್‌.ಪಿ.ಹೇಮಲತಾ ಮಂಡಿಸಿದ ಬಜೆಟ್‌ ಅನೇಕ ಗೊಂದಲಗಳ ಸೃಷ್ಟಿಗೆ ಕಾರಣವಾಗಿತ್ತು. ವಾಸ್ತವ ವರಮಾನ ₹9 ಸಾವಿರ ಕೋಟಿಗಳಷ್ಟಿದ್ದರೂ ಅದನ್ನು ಮೀರಿ ₹ 12,958 ಕೋಟಿ ಗಾತ್ರದ ಬಜೆಟ್‌ ಅನ್ನು ಅಂಗೀಕರಿಸಲಾಗಿತ್ತು.

ಪಾಲಿಕೆಯ ಬಜೆಟ್‌ನ ಲೆಕ್ಕಾಚಾರ ವಾಸ್ತವಕ್ಕೆ ದೂರವಾಗಿರುವುದರಿಂದ ಗಾತ್ರವನ್ನು ₹ 9 ಸಾವಿರ ಕೋಟಿಗೆ ತಗ್ಗಿಸಬೇಕು ಎಂದು ಒತ್ತಾಯಿಸಿಎಂದು ಪಾಲಿಕೆಯ ಆಗಿನ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರು. ಪ್ರತಿವರ್ಷವೂ ವಾಸ್ತವಕ್ಕಿಂತ ಹೆಚ್ಚು ಆದಾಯ ನಿರೀಕ್ಷೆ ಮಾಡಿ ಬಜೆಟ್‌ ಮಂಡಿಸುತ್ತಿರುವುದರಿಂದ ಏನೆಲ್ಲ ಪ್ರತಿಕೂಲ ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ ಎಂಬುದನ್ನು ಎಳೆ ಎಳೆಯಾಗಿ ವಿವರಿಸಿದ್ದ ಅವರು ಪಾಲಿಕೆ ಬಜೆಟ್‌ಗೂ ವಿತ್ತೀಯ ಹೊಣೆಗಾರಿಕೆ ಕಾಯ್ದೆ ಅನ್ವಯವಾಗುವಂತೆ ಮಾಡಬೇಕು ಎಂದೂ ಒತ್ತಾಯಿಸಿದ್ದರು. ನಂತರ ನಗರಾಭಿವೃದ್ಧಿ ಇಲಾಖೆಯು ಬಜೆಟ್ ಗಾತ್ರವನ್ನು ₹11,648.90 ಕೋಟಿಗೆ ಮಿತಿಗೊಳಿಸಿತ್ತು.

‘ಕಳೆದ ಬಾರಿ ಉಂಟಾದ ಗೊಂದಲಗಳು ಈ ಬಾರಿ ಮರುಕಳಿಸದಂತೆ ಸಾಕಷ್ಟು ಎಚ್ಚರ ವಹಿಸಿದ್ದೇವೆ. ನಮ್ಮ ಆದಾಯ ಹಾಗೂ ವೆಚ್ಚ ನೋಡಿಕೊಂಡು ಅದಕ್ಕೆ ಅನುಗುಣವಾಗಿಯೇ ಬಜೆಟ್‌ ರೂಪಿಸುತ್ತಿದ್ದೇವೆ. ಬಜೆಟ್‌ ಗಾತ್ರವನ್ನು ಈಗಲೇ ಬಹಿರಂಗಪಡಿಸಲು ಸಾಧ್ಯವಿಲ್ಲ. ಆದರೆ, ಆರ್ಥಿಕ ಶಿಸ್ತು ಕಾಪಾಡುವುದಕ್ಕೆ ಆದ್ಯತೆ ನೀಡುತ್ತೇನೆ’ ಎಂದು ಪಾಲಿಕೆಯ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್‌.ಶ್ರೀನಿವಾಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಯುಗಾದಿ ಬಳಿಕ ಮಂಡನೆ: ‘ಬಜೆಟ್‌ ಮಂಡನೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಈ ತಿಂಗಳಲ್ಲೇ ಯುಗಾದಿ ಹಬ್ಬದ (ಮಾರ್ಚ್‌ 25) ಬಳಿಕ ಬಜೆಟ್‌ ಮಂಡಿಸುವ ಉದ್ದೇಶ ಇಟ್ಟುಕೊಂಡಿದ್ದೇನೆ’ ಎಂದು ಅವರು ತಿಳಿಸಿದರು.

‘2019–20ನೇ ಸಾಲಿನಲ್ಲಿ ಹಳೆ ಬಾಕಿಯೂ ಸೇರಿದಂತೆ ಒಟ್ಟು ₹ 4,930 ಕೋಟಿ ತೆರಿಗೆ ಸಂಗ್ರಹಿಸುವ ಗುರಿಯನ್ನು ಪಾಲಿಕೆ ನಿಗದಿಪಡಿಸಿತ್ತು. ಆದರೆ, ಈ ಮಾರ್ಚ್‌ ಅಂತ್ಯದ ವೇಳೆಗೆ ತೆರಿಗೆ ಸಂಗ್ರಹ ₹3,200 ಕೋಟಿ ತಲುಪಿದರೆ ಹೆಚ್ಚು. ಮುಂದಿನ ವರ್ಷವೂ ಹಳೆ ಬಾಕಿ ಸಂಗ್ರಹ ಸವಾಲಾಗಿಯೇ ಉಳಿಯಲಿದೆ. ತೆರಿಗೆ ದರಗಳನ್ನು ಪರಿಷ್ಕರಿಸದ ಕಾರಣ ಮುಂದಿನವ ವರ್ಷವೂ ಹೆಚ್ಚು ಗುರಿ ನಿಗದಿಪಡಿಸಲು ಸಾಧ್ಯವಿಲ್ಲ. ಹಾಗಾಗಿ ಬಜೆಟ್‌ ಗಾತ್ರ ₹ 9ಸಾವಿರ ಕೋಟಿ ಮೀರದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಬಜೆಟ್‌ ಕಾರ್ಯಕ್ರಮಗಳಿಗೆ ಹಣ ಹೊಂದಿಸುವುದು ಕಷ್ಟ’ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಬಜೆಟ್‌ ಸವಾಲುಗಳೇನು?

* ಇಂದಿರಾ ಕ್ಯಾಂಟೀನ್‌ ನಿರ್ವಹಣೆಗೆ ಸರ್ಕಾರ ಅನುದಾನ ಒದಗಿಸಿಲ್ಲ. ಪಾಲಿಕೆಯೇ ಈ ವೆಚ್ಚಕ್ಕೆ ಹಣ ಕಾಯ್ದಿರಿಸಬೇಕಾಗುತ್ತದೆ. ಕ್ಯಾಂಟಿನ್‌ಗಳ ನಿರ್ವಹಣೆಗೆ ವರ್ಷಕ್ಕೆ ₹ 130 ಕೋಟಿಯಿಂದ ₹140 ಕೋಟಿ ಬೇಕು.

* ಇಂದೋರ್‌ ಮಾದರಿಯಲ್ಲಿ ಕಸ ವಿಲೇವಾರಿಗೆ ಪಾಲಿಕೆ ಮುತುವರ್ಜಿ ತೋರಿದೆ. ಇದಕ್ಕೆ ಅನುದಾನ ಹೊಂದಿಸಬೇಕು

*ಸರ್ಕಾರವು ಪಾಲಿಕೆಗೆ ₹ 10ಸಾವಿರ ಕೋಟಿಗೂ ಹೆಚ್ಚು ಅನುದಾನ ನೀಡಿದ್ದು, ಈ ಪೈಕಿ ಕೆಲವು ಕಾಮಗಾರಿಗಳಲ್ಲಿ ಅಂದಾಜು ಮೊತ್ತಕ್ಕಿಂತ ಶೇ 30ಕ್ಕಿಂತಲೂ ಹೆಚ್ಚು ಮೊತ್ತವನ್ನು ಟೆಂಡರ್‌ ಪ್ರೀಮಿಯಂ ರೂಪದಲ್ಲಿ ಪಾವತಿಸಬೇಕಾಗಿದೆ. ಈ ಮೊತ್ತವನ್ನು ಪಾಲಿಕೆಯೇ ಭರಿಸಬೇಕು ಎಂದು ಸರ್ಕಾರ ಹೇಳಿರುವುದರಿಂದ ಅದಕ್ಕೂ ಹಣ ಹೊಂದಿಸಬೇಕಿದೆ.

ತೆರಿಗೆ ಹೊರೆ ಹೆಚ್ಚಿಸುವುದಿಲ್ಲ

‘ಬಜೆಟ್‌ನಲ್ಲಿ ಆಸ್ತಿ ತೆರಿಗೆ ಪರಿಷ್ಕರಿಸುವ ಪ್ರಸ್ತಾವ ನಮ್ಮ ಮುಂದೆ ಇಲ್ಲ’ ಎಂದು ಎಲ್‌.ಶ್ರೀನಿವಾಸ್‌ ಸ್ಪಷ್ಟಪಡಿಸಿದರು.

‘ತೆರಿಗೆ ಸಂಗ್ರಹದ ವಿಚಾರದಲ್ಲಿ ಸಾಕಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೇವೆ. ಹಿಂದಿನ ವರ್ಷಗಳ ಬಾಕಿ ತೆರಿಗೆ ವಸೂಲಿಗೂ ಸಾಕಷ್ಟು ಶ್ರಮ ಹಾಕಿದ್ದೇವೆ. ಗುರಿ ಸಾಧನೆ ಆಗುವ ಭರವಸೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಅಕ್ರಮ ಸಕ್ರಮ ಯೋಜನೆಗೆ ಸುಪ್ರೀಂಕೋರ್ಟ್‌ ತಡೆಯಾಜ್ಞೆ ನೀಡಿದೆ. ಅದರಿಂದ ಹೆಚ್ಚಿನ ಆದಾಯ ನಿರೀಕ್ಷೆ ಮಾಡಲಾಗದು. ಇರುವ ಆದಾಯದ ಮೂಲಗಳನ್ನೇ ಬಳಸಿ, ಸಂಪನ್ಮೂಲ ಸಂಗ್ರಹಿಸಬೇಕಿದೆ. ಸೋರಿಕೆ ತಡೆಗೆ ಇನ್ನಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT