ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯ ಲೆಕ್ಕಾಧಿಕಾರಿ ಕಚೇರಿಗೆ ಬೀಗಮುದ್ರೆ

ನಿಯಮ ಉಲ್ಲಂಘಿಸಿ ಬಿಲ್‌ ಪಾವತಿ ಆರೋಪ
Last Updated 3 ಅಕ್ಟೋಬರ್ 2020, 18:52 IST
ಅಕ್ಷರ ಗಾತ್ರ

ಬೆಂಗಳೂರು: ಕಾಮಗಾರಿಗಳ ಬಿಲ್‌ ಪಾವತಿ ವೇಳೆ ಜ್ಯೇಷ್ಠತೆ ಪಾಲಿಸದೆ ನಿಯಮ ಉಲ್ಲಂಘಿಸಿದ ಆರೋಪದ ಮೇರೆಗೆ ಬಿಬಿಎಂಪಿಯ ಮುಖ್ಯ ಲೆಕ್ಕಾಧಿಕಾರಿ ಆರ್‌.ಗೋವಿಂದರಾಜು ಅವರ ಕಚೇರಿಗೆ ಆಯುಕ್ತರ ಆದೇಶದ ಮೇರೆಗೆ ಬೀಗಮುದ್ರೆ ಹಾಕಲಾಗಿದೆ.

ಗುತ್ತಿಗೆದಾರರಿಗೆ ಕಾಮಗಾರಿಗಳ ಬಾಕಿ ಬಿಲ್ಗಳನ್ನು ಐಎಫ್‌ಎಂಎಸ್‌ ತಂತ್ರಾಂಶದ ಮೂಲಕ ಪಾವತಿ ಮಾಡುವಾಗ ವಿಶೇಷ ಆಯುಕ್ತರು (ಹಣಕಾಸು) ಅವರ ಮೂಲಕ ಆಯುಕ್ತರ ಅನುಮೋದನೆ ಪಡೆಯಬೇಕು. ಎಲ್ಲ ವರ್ಗಗಳ ಬಿಲ್‌ಗಳನ್ನು ಅನುಮೋದಿತ ಮೊತ್ತಕ್ಕೆ ಸೀಮಿತಗೊಳಿಸಿ ಜೇಷ್ಠತೆಯನ್ನು ಆಧಾರದಲ್ಲೇ ಪಾವತಿ ಮಾಡಬೇಕು. ಮೊದಲು ಕಾಮಗಾರಿ ಪೂರ್ಣಗೊಳಿಸಿವರಿಗೆ ಆದ್ಯತೆ ಮೇರೆಗೆ ಬಿಲ್ ಪಾವತಿ ಮಾಡಬೇಕು.ಸರ್ಕಾರ ಯಾವ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿದೆಯೋ ಅದೇ ಉದ್ದೇಶಕ್ಕೆ ಆ ಹಣವನ್ನು ಬಳಸಬೇಕು ಎಂದು ಬಿಬಿಎಂಪಿ ಆಯುಕ್ತರು 2020ರ ಜುಲೈ 17ರಂದು ಆದೇಶ ಮಾಡಿದ್ದರು.

ಆದರೆ, ಬಿಬಿಎಂಪಿಯಲ್ಲಿ ಮುಖ್ಯ ಲೆಕ್ಕಾಧಿಕಾರಿ ಆರ್‌.ಗೋವಿಂದರಾಜು ಅವರು ಬಿಬಿಎಂಪಿ ಆಯುಕ್ತರ ಆದೇಶವನ್ನು ಉಲ್ಲಂಘಿಸಿದ್ದರು. ಅವರು ಹಿರಿಯ ಅಧಿಕಾರಿಗಳ ಗಮನಕ್ಕೂ ತಾರದೆಯೇ ಅಕ್ರಮವಾಗಿ ಭಾರಿ ಮೊತ್ತದ ಬಿಲ್‌ಗಳನ್ನು ಪಾವತಿ ಮಾಡಿದ್ದರು. ಇದರೆ ಹಿಂದೆ ಭಾರಿ ಭ್ರಷ್ಟಾಚಾರ ನಡೆದಿರುವ ಶಂಕೆಯೂ ವ್ಯಕ್ತವಾಗಿತ್ತು. ಈ ಬಗ್ಗೆ ಅನೇಖ ಗುತ್ತಿಗೆದಾರರು ಆಯುಕ್ತರಿಗೆ ದೂರು ನೀಡಿದ್ದರು.

ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆಯೇ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಮುಖ್ಯ ಲೆಕ್ಕಾಧಿಕಾರಿ ಅವರ ಕಚೇರಿಗೆ ಬೀಗಮುದ್ರೆ ಹಾಕುವಂತೆ ಸೂಚಿಸಿದ್ದರು.

‘ಬಿಲ್‌ ಪಾವತಿ ವೇಳೆ ನಡೆದಿರುವ ಅಕ್ರಮಗಳ ತನಿಖೆಗೆ ಉನ್ನತಮಟ್ಟದ ತಂಡ ರಚನೆ ಮಾಡಲಾಗುತ್ತದೆ. ಈ ವಿಚಾರವನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಲಾಗುವುದು. ಭಾರಿ ಪ್ರಮಾಣದಲ್ಲಿ ಹಣ ದುರುಪಯೋಗ ಆಗಿರುವುದು ಕಂಡುಬಂದರೆ, ಅಧಿಕಾರಿ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನೂ ದಾಖಲಿಸಲಾಗುವುದು’ ಎಂದು ಆಯುಕ್ತರು ತಿಳಿಸಿದರು.

‘ನಗರೋತ್ಥಾನ ಯೋಜನೆ ಅನುದಾನವನ್ನು ಅದೇ ಕಾಮಗಾರಿಗಳಿಗೆ, ಕೇಂದ್ರ 14ನೇ ಹಣಕಾಸು ಆಯೋಗದ ಹಣವನ್ನು ಅದೇ ಯೋಜನೆಯ ಕಾಮಗಾರಿಗಳಿಗೆ ಬಳಕೆ ಮಾಡಬೇಕು. ಇದನ್ನು ರಾಜ್ಯ ಸರ್ಕಾರವೂ ಸ್ಪಷ್ಟಪಡಿಸಿದೆ. ಆದರೆ ಗೋವಿಂದರಾಜು ಅವರು ಆಯುಕ್ತರ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಿದ್ದಾರೆ. ಈ ಬಗ್ಗೆ ಗುತ್ತಿಗೆದಾರರೂ ದೂರು ನೀಡಿದ್ದಾರೆ. ಸೆ.11ರಂದು ಸಾಮಾನ್ಯ ವರ್ಗದ ಅಡಿಯಲ್ಲಿ ₹ 7.86 ಕೋಟಿಯನ್ನು ಹಣಕಾಸು ವಿಶೇಷ ಆಯುಕ್ತರ ಗಮನಕ್ಕೂ ತಾರದೆ ಪಾವತಿ ಮಾಡಿದ್ದಾರೆ. ಸೆ. 14ರಂದು ಆಯುಕ್ತರ ಆದೇಶದ ವರ್ಗದಲ್ಲಿ ಗುತ್ತಿಗೆದಾರರಿಗೆ (ಮದುವೆ, ವೈದ್ಯಕೀಯ ವೆಚ್ಚಕ್ಕೆ) ₹ 25 ಲಕ್ಷ ಬಿಡುಗಡೆ ಮಾಡಬಹುದು. ಇದನ್ನೂ ಆಯುಕ್ತರ ಗಮನಕ್ಕೆ ತಾರದೆಯೇ ಪಾವತಿ ಮಾಡಿದ್ದಾರೆ’ ಎಂದರು.

‘ರಾಜ್ಯ ಹಣಕಾಸು ಆಯೋಗದ (ಎಸ್‌ಎಫ್‌ಸಿ) ಅನುದಾನದಲ್ಲಿ ₹ 5.83 ಕೋಟಿಯನ್ನು ಈ ಅನುದಾನದ ಕಾಮಗಾರಿ ಬದಲು ಬಿಬಿಎಂಪಿಯ ಇತರ ಕಾಮಗಾರಿಗಳಿಗೆ ಪಾವತಿ ಮಾಡಿದ್ದಾರೆ. ಪಾಲಿಕೆಯಲ್ಲಿ ಯಾವುದೇ ಬಿಲ್ ಪಾವತಿ ಮಾಡಬೇಕಾದರೂ ಐಎಫ್ಎಮ್ಎಸ್ ತಂತ್ರಾಂಶದ ಮೂಲಕವೇ ಮಾಡಬೇಕು. ಆದರೆ ಈ ನಿಯಮವನ್ನು ಬದಿಗೊತ್ತಿ , ಗಾಂಧಿನಗರದ ಕಾರ್ಯಪಾಲಕ ಎಂಜಿನಿಯರ್‌ ವ್ಯಾಪ್ತಿಯ ಕಾಮಗಾರಿಗಳ ಪಾವತಿ ಸಲುವಾಗಿ ಆಫ್ ಲೈನ್‌ನಲ್ಲಿ ₹ 6.96 ಕೋಟಿ ಪಾವತಿ ಮಾಡಿದ್ದಾರೆ. ಈ ಮೊತ್ತವನ್ನು ಪಾವತಿಸಿರುವುದು ಗಮನಕ್ಕೆ ಬಂದಿದ್ದು, ಅದನ್ನು ತಡೆಹಿಡಿಯಲಾಗಿದೆ’ ಎಂದು ಆಯುಕ್ತರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT