ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋನ್‌ ಇನ್‌ನಲ್ಲಿ ಬಿಬಿಎಂಪಿ ಆಯುಕ್ತ: ನಾಲ್ಕು ತಾಸಿನೊಳಗೆ ಬಗೆಹರಿಯಿತು ಸಮಸ್ಯೆ

ನಾಗರಿಕರ ಅಹವಾಲು ಆಲಿಸಿದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ ಪ್ರಸಾದ್
Last Updated 13 ಸೆಪ್ಟೆಂಬರ್ 2020, 1:02 IST
ಅಕ್ಷರ ಗಾತ್ರ

ಬೆಂಗಳೂರು: ‘ಸಾರ್‌ ನಾನು ಹಿರಿಯ ನಾಗರಿಕ. ಕೋವಿಡ್ ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಜಾರಿಯಾದ ಬಳಿಕ ಮನೆಯಿಂದ ಆಚೆಯೇ ಹೋಗಿಲ್ಲ. ಆದರೂ ಮನೆಗೆಕೆಲವರು ಬಂದು ಹೋಗುತ್ತಿರುವುದರಿಂದ ಆತಂಕವಾಗಿದೆ. ಕೋವಿಡ್‌ ಪರೀಕ್ಷೆ ಮಾಡಿಸಲು ದಯವಿಟ್ಟು ನೆರವಾಗಿ’

ನ್ಯೂ ಟಿಂಬರ್‌ ಲೇಔಟ್‌ನ ಪುಟ್ಟಣ್ಣಯ್ಯ ಅವರು ‘ಪ್ರಜಾವಾಣಿ’ ಕಚೇರಿಗೆ ಶನಿವಾರ ಕರೆ ಮಾಡಿ ಇನ್ನೂ ಮೂರು ಗಂಟೆ ಕಳೆದಿರಲಿಲ್ಲ. ಅಷ್ಟರಲ್ಲಿ ಬಿಬಿಎಂಪಿ ಆರೋಗ್ಯ ಸಿಬ್ಬಂದಿ ಅವರ ಮನೆಯಲ್ಲಿ ಹಾಜರಿದ್ದರು. ಕೋವಿಡ್‌ ಪರೀಕ್ಷೆಗೆ ಸಂಜೆಯೊಳಗೆ ಅವರ ಗಂಟಲದ್ರವದ ಮಾದರಿ ಸಂಗ್ರಹಿಸಿದ್ದರು. ಈ ಬಗ್ಗೆ ಪುಟ್ಟಣ್ಣಯ್ಯ ‘ಪ್ರಜಾವಾಣಿ’ಗೆ ಧನ್ಯವಾದ ಹೇಳಿದರು.

‘ಪ್ರಜಾವಾಣಿ’ವತಿಯಿಂದ ಏರ್ಪಡಿಸಿದ್ದ ಫೋನ್‌–ಇನ್‌ ಕಾರ್ಯಕ್ರಮ ಇಂತಹ ಅನೇಕರು ತಮ್ಮ ಅಹವಾಲನ್ನು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಜೊತೆಗೆ ನೇರವಾಗಿ ಹಂಚಿಕೊಳ್ಳುವುದಕ್ಕೆ ವೇದಿಕೆ ಕಲ್ಪಿಸಿತು.

ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ, ರಸ್ತೆ ಅಗೆದು ತಿಂಗಳುಗಳೇ ಕಳೆದರೂ ದುರಸ್ತಿ ಮಾಡಿಸಿಲ್ಲ, ಸ್ವಲ್ಪ ಮಳೆಯಾದರೂ ಮನೆಗಳಿಗೆ ನೀರು ನುಗ್ಗುವುದು ತಪ್ಪಿಲ್ಲ, ಕೋವಿಡ್‌ಗೆ ಮುನ್ನ ಸ್ಥಗಿತಗೊಂಡ ಕಾಮಗಾರಿ ಇನ್ನೂ ಆರಂಭವಾಗಿಲ್ಲ.. ಹೀಗೆ ತರಹೇವಾರಿ ಸಮಸ್ಯೆಗಳನ್ನು ಜನ ಹೇಳಿಕೊಂಡರು. ಬಿಬಿಎಂಪಿ ಆಡಳಿತದ ಲೋಪಗಳನ್ನು, ಸೇವೆಯಲ್ಲಿ ಕುಂದು ಕೊರತೆಗಳನ್ನು ಜನ ಆಯುಕ್ತರ ಗಮನಕ್ಕೆ ತಂದರು.

ನಾಗರಿಕರ ನೋವುಗಳನ್ನು ತಾಳ್ಮೆಯಿಂದ ಆಲಿಸಿದ ಆಯುಕ್ತರು ತ್ವರಿತ ಪರಿಹಾರ ಒದಗಿಸುವ ಭರವಸೆ ನೀಡಿದರು. ಸಮಸ್ಯೆಗಳನ್ನು ಬಗೆಹರಿಸಲು ಕಾರ್ಯಕ್ರಮ ಮುಗಿದ ತಕ್ಷಣವೇ ಅಧಿಕಾರಿಗಳಿಗೆ ಆದೇಶ ಮಾಡಿದರು. ಜನರು ಹೇಳಿಕೊಂಡ ಸಮಸ್ಯೆಗಳು ಹಾಗೂ ಅವುಗಳಿಗೆ ಆಯುಕ್ತರು ನೀಡಿದ ಉತ್ತರಗಳಲ್ಲಿ ಆಯ್ದವು ಇಲ್ಲಿವೆ.

* ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ವಾರಕ್ಕೆ ಒಂದು ಅಥವಾ ಎರಡು ಬಾರಿ ಸಿಬ್ಬಂದಿ ಬರುತ್ತಾರೆ. ಎಲ್ಲೆಂದರಲ್ಲಿ ನಿರ್ಮಾಣವಾಗುತ್ತಿರುವ ಕಸದ ರಾಶಿಯಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ.
-
ನಾಗರಾಜ ಬಾಣಸವಾಡಿ, ಪ್ರಶಾಂತ್‌ ಇಂದಿರಾನಗರ, ಗಂಗಯ್ಯ ಕತ್ರಿಗುಪ್ಪೆ, ಮುತ್ತಪ್ಪ ನವೋದಯ ನಗರ

ಆಯುಕ್ತರು: ಕಸ ವಿಲೇವಾರಿಯ ಹೊಣೆಯನ್ನು ಹೊಸ ಗುತ್ತಿಗೆದಾರರಿಗೆ ವಹಿಸಲಾಗಿದೆ. ಕಸ ಸಂಗ್ರಹ ಮತ್ತು ವಿಲೇವಾರಿಯನ್ನು ಸಮರ್ಪಕವಾಘಿ ನಡೆಸುವ ಕುರಿತು ಅವರಿಗೆ ತರಬೇತಿ ನೀಡಲಾಗುತ್ತಿದೆ. ಶೀಘ್ರವೇ ಸಮಸ್ಯೆ ಬಗೆಹರಿಯಲಿದೆ.

* ಬಿಬಿಎಂಪಿಗೆ ಸೇರ್ಪಡೆಯಾದ 110 ಹಳ್ಳಿಗಳ ಪ್ರದೇಶ ನಿವಾಸಿ ನಾನು. ಹೆಸರಿಗೆ ಮಾತ್ರ ನಾವು ಬಿಬಿಎಂಪಿ ವ್ಯಾಪ್ತಿಯಲ್ಲಿದ್ದೇವೆ. ಆದರೆ, ಈ ಪ್ರದೇಶದಲ್ಲಿ ಯಾವುದೇ ಮೂಲಸೌಲಭ್ಯಗಳಿಲ್ಲ. ರಸ್ತೆಗಳನ್ನು ಅಗೆದು ಬಿಟ್ಟಿದ್ದಾರೆ. ಮಳೆ ಬಂದರೆ ಕೊಳಚೆ ನೀರು ಮನೆಯೊಳಗೆ ನುಗ್ಗುತ್ತದೆ.
-ನಾಗೇಂದ್ರ ನಾಗನಾಥಪುರ, ಮುನಿಯಪ್ಪ, ಪರಪ್ಪನ ಅಗ್ರಹಾರ ವಾರ್ಡ್‌, ಧರಣಿ ಬೆಳ್ಳಂದೂರು

ಆಯುಕ್ತರು: ಈ 110 ಹಳ್ಳಿಗಳಲ್ಲಿ ಜಲಮಂಡಳಿಯು ಕುಡಿಯುವ ನೀರು ಪೂರೈಕೆ ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕಾಮಗಾರಿ ಕೈಗೆತ್ತಿಕೊಂಡಿದ್ದು, ಈ ಸಲುವಾಗಿ ರಸ್ತೆಗಳನ್ನು ಅಗೆಯಲಾಗಿದೆ. ಕಾಮಗಾರಿ ಪೂರ್ಣಗೊಳ್ಳುವವರೆಗೆ ರಸ್ತೆ ದುರಸ್ತಿ ಕಷ್ಟಸಾಧ್ಯ. ಈ ಯೋಜನೆಯಡಿ ರಸ್ತೆಯ ದುರಸ್ತಿ ಅಥವಾ ಮರುನಿರ್ಮಾಣಕ್ಕೆ ಹೆಚ್ಚು ಅನುದಾನ ತೆಗೆದಿರಿಸಿಲ್ಲ. ಲಭ್ಯ ಅನುದಾನದಲ್ಲಿಯೇ ರಸ್ತೆಯನ್ನು ದುರಸ್ತಿಮಾಡಬೇಕಿದೆ. ಜಲಮಂಡಳಿಯ ಕಾಮಗಾರಿಗಳು ಪೂರ್ಣಗೊಂಡ ನಂತರ, ರಸ್ತೆಗಳನ್ನು ಸಂಪೂರ್ಣವಾಗಿ ದುರಸ್ತಿ ಮಾಡಲಾಗುವುದು.

* ವಿಜಯನಗರದಲ್ಲಿ ಪಾಲಿಕೆ ಬಜಾರ್‌ ನಿರ್ಮಾಣಕ್ಕಾಗಿ 2017ರಲ್ಲಿ ನಾವು ಜಾಗ ಬಿಟ್ಟುಕೊಟ್ಟೆವು. ಇನ್ನೂ ಪಾಲಿಕೆ ಬಜಾರ್‌ ಆರಂಭವಾಗಿಲ್ಲ. ಇಲ್ಲಿ ಈ ಹಿಂದೆ ಇದ್ದ ಬೀದಿ ಬದಿ ವ್ಯಾಪಾರಿಗಳಿಗೆ ಈ ಬಜಾರ್‌ನಲ್ಲಿ ಆದ್ಯತೆ ಮೇರೆಗೆ ಮಳಿಗೆ ಹಂಚಿಕೆ ಮಾಡಬೇಕು .
-
ಬಾಬು, ವಿಜಯನಗರ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ

ಆಯುಕ್ತರು: ಪಾಲಿಕೆ ಬಜಾರ್‌ ಕಾಮಗಾರಿ ಅಂತಿಮ ಹಂತದಲ್ಲಿದೆ. ಇಲ್ಲಿ ಮಳಿಗೆ ಹಂಚಿಕೆ ಮಾಡುವಾಗ ಈ ಹಿಂದೆ ವ್ಯಾಪಾರ ಮಾಡುತ್ತಿದ್ದವರಿಗೆ ಆದ್ಯತೆ ನೀಡಲಾಗುವುದು. ಎಲ್ಲ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಿಸಲಾಗುವುದು.

* ಎಷ್ಟೇ ಕರೆ ಮಾಡಿದರೂ ಬಿಬಿಎಂಪಿಯಿಂದ ಚಿರಶಾಂತಿ ವಾಹನಗಳು ಸಿಗುವುದಿಲ್ಲ. ಸಂಬಂಧಪಟ್ಟವರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ.
-ತಿಮ್ಮಯ್ಯ, ಹೆಗ್ಗನಹಳ್ಳಿ ವಾರ್ಡ್‌

ಆಯುಕ್ತರು: ಬಿಬಿಎಂಪಿ ವ್ಯಾಪ್ತಿಯಲ್ಲಿ 54 ಚಿರಶಾಂತಿ ವಾಹನಗಳು ಹಾಗೂ 650 ಆಂಬುಲೆನ್ಸ್‌ಗಳಿವೆ. ತುರ್ತು ಸಂದರ್ಭದಲ್ಲಿ ಇವುಗಳ ಸೇವೆ ಸಿಗದಿದ್ದರೆ, ಇವುಗಳಿದ್ದೂ ವ್ಯರ್ಥವಾದಂತೆ. ಸಮಸ್ಯೆ ಸರಿ ಪಡಿಸಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಇನ್ನೂ 10 ಚಿರಶಾಂತಿ ವಾಹನಗಳನ್ನು ಖರೀದಿಸಲಾಗುವುದು

* ಕೋರಮಂಗಲದ 8ನೇ ಬ್ಲಾಕ್‌ನ 2ನೇ ‘ಡಿ’ ಮುಖ್ಯರಸ್ತೆಯಲ್ಲಿಕಂಟೈನ್‌ಮೆಂಟ್‌ ವಲಯದ ಗುರುತಿಸಲು ತಗಡು (ಬ್ಯಾರಿಕೇಡ್) ಅಡ್ಡ ಇಟ್ಟು ತಿಂಗಳ ಮೇಲಾಯಿತು. ಇಲ್ಲೀಗ ಯಾವುದೇ ಕೋವಿಡ್‌ ಪ್ರಕರಣ ಇಲ್ಲದಿದ್ದರೂ ವುಗಳನ್ನು ತೆರವುಗೊಳಿಸಿಲ್ಲ. ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ .
-
ಭಾಸ್ಕರ್‌ ರಾವ್, ಕೋರಮಂಗಲ

ಆಯುಕ್ತರು: ಹೀಗೆ ಬ್ಯಾರಿಕೇಡ್‌ಗಳನ್ನು ಹಾಕಿದ್ದರೆ, ಪರೋಕ್ಷವಾಗಿ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗುತ್ತದೆ. ಆದರೆ, ಜನ ಭಯಭೀತರಾಗುವ ಅವಶ್ಯಕತೆ ಇಲ್ಲ. ಬ್ಯಾರಿಕೇಡ್‌ ಹಾಕುವುದನ್ನು, ಕೋವಿಡ್‌ ಸೋಂಕಿತರ ಮನೆಯ ಬಾಗಿಲಿಗೆ ಪೋಸ್ಟರ್‌ ಅಂಟಿಸುವುದನ್ನು ನಿಲ್ಲಿಸಿದ್ದೇವೆ. ಅಡ್ಡ ಇಟ್ಟಿರುವ ಬ್ಯಾರಿಕೇಡ್ ಅಥವಾ ತಗಡನ್ನು ತೆಗೆಸಲು ಕ್ರಮ ಕೈಗೊಳ್ಳುತ್ತೇನೆ.

* ಲಾಕ್‌ಡೌನ್‌ ನಂತರ ಹಲವು ವಿನಾಯಿತಿ ನೀಡ ಲಾಗಿದೆ. ಉದ್ಯಾನಗಳಿಗೆ ಸಾರ್ವಜನಿಕ ಪ್ರವೇಶಕ್ಕೂ ಅನುಮತಿ ನೀಡಲಾಗಿದೆ. ಆದರೆ, ಇಂತಹ ಉದ್ಯಾನಗಳಲ್ಲಿ ಅಳವಡಿಸಲಾಗಿರುವ ವ್ಯಾಯಾಮ ಸಲಕರಣೆ ಗಳ ಬಳಕೆಗೆ ಅಧಿಕೃತವಾಗಿ ಅನುಮತಿ ನೀಡಿಲ್ಲ. ಇವುಗಳನ್ನು ಬಳಸಲು ಅವಕಾಶ ನೀಡಬೇಕು
-ಬಿ.ಎಸ್. ಮನೋಹರ್‌, ಬಸವನಗುಡಿ

ಆಯುಕ್ತರು: ಈ ಸಲಕರಣೆಗಳ ಬಳಕೆಗೆ ಅನುಮತಿ ನೀಡಬಹುದು. ಆದರೆ, ಕೋವಿಡ್ ಮಾರ್ಗಸೂಚಿಗಳ ಪಾಲನೆ ಕಷ್ಟವಾಗಬಹುದು. ಉಪಕರಣಗಳನ್ನು ಒಬ್ಬರು ಬಳಸಿದ ತಕ್ಷಣ ಅದಕ್ಕೆ ಸೋಂಕು ನಿವಾರಕ ಸಿಂಪಡಿಸಬೇಕಾಗುತ್ತದೆ. ಇದಕ್ಕೆಂದೇ ಒಬ್ಬರನ್ನು ನೇಮಿಸಬೇಕಾಗುತ್ತದೆ. ಆದರೂ, ಈ ಕುರಿತು ಕೈಗೊಳ್ಳಬೇಕಾದ ಕ್ರಮಗಳನ್ನು ಒಳಗೊಂಡ ಮಾರ್ಗಸೂಚಿಯನ್ನು ಸೋಮವಾರ ಹೊರಡಿಸುತ್ತೇವೆ.

* ನಮಗೆ 60 ಅಡಿ, 80 ಅಡಿ ಅಗಲದ ರಸ್ತೆಗಳು ಬೇಡ. 6 ಅಡಿ ಅಗಲದ ಪಾದಚಾರಿ ಮಾರ್ಗ ಒದಗಿಸಿ ಸಾಕು. ಹದಗೆಟ್ಟ ಫುಟ್‌ಪಾತ್‌ಗಳಿಂದ ಅಂಗವಿಕಲರು, ಮಕ್ಕಳು, ವೃದ್ಧರಿಗೆ ತುಂಬಾ ತೊಂದರೆಯಾಗಿದೆ.
-
ವಿಜಯಕುಮಾರ್, ಕಾಟನ್‌ಪೇಟೆ

ಆಯುಕ್ತರು: ಕಾಟನ್‌ಪೇಟೆಯಲ್ಲಿ ಟೆಂಡರ್‌ಶ್ಯೂರ್‌ ರಸ್ತೆ ನಿರ್ಮಾಣವಾಗುತ್ತಿದೆ. ಆದರೆ, ಪಾದಚಾರಿ ಮಾರ್ಗ ಹದಗೆಟ್ಟಿದ್ದರೆ ಅಥವಾ ಸರಿಯಾಗಿ ನಿರ್ಮಾಣ ಮಾಡದಿದ್ದರೆ ಪರಿಶೀಲಿಸುತ್ತೇನೆ. ಅಧಿಕಾರಿಗಳು ತಪ್ಪೆಸಗಿದ್ದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇನೆ.

‘ಬಿಬಿಎಂಪಿ ವ್ಯಾಪ್ತಿ ವಿಸ್ತರಣೆ ಸದ್ಯಕ್ಕಿಲ್ಲ’
‘ಬಿಬಿಎಂಪಿಯ ವ್ಯಾಪ್ತಿಯನ್ನು ವಿಸ್ತರಿಸುವ ಯಾವುದೇ ಪ್ರಸ್ತಾವ ಸದ್ಯಕ್ಕಿಲ್ಲ’ ಎಂದು ಮಂಜುನಾಥ ಪ್ರಸಾದ್‌ ಹೇಳಿದರು.

ಈ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಬಿಬಿಎಂಪಿಯಲ್ಲಿ ಸದ್ಯ ಇರುವ 198 ವಾರ್ಡ್‌ಗಳನ್ನೇ ಪುನರ್‌ರಚಿಸಿ 225ಕ್ಕೆ ಹೆಚ್ಚಿಸುವ ಪ್ರಸ್ತಾವ ಇದೆ. ಆದರೆ, ಗಡಿ ವಿಸ್ತರಣೆ ಮಾಡುವುದಿಲ್ಲ. ಬೆಂಗಳೂರಿಗಾಗಿಯೇ ಹೊಸ ಕಾಯ್ದೆ ರೂಪಿಸುವ ಕುರಿತು ಚರ್ಚೆ ನಡೆಯುತ್ತಿದೆ. ಈ ಕಾಯ್ದೆ ನಂತರ ಕೆಲವು ಬದಲಾವಣೆ ಆಗಬಹುದು’ ಎಂದರು.

‘ದಲಿತರಿಗೆ ನಂದಿನಿ ಬೂತ್ ಕೊಡಿಸಿ’
‘ರಸ್ತೆಯ ಬದಿಯಲ್ಲಿ ನಂದಿನಿ ಬೂತ್‌ ಹಾಕಲು ಬೇರೆಯವರಿಗೆ ಹೆಚ್ಚು ಅವಕಾಶಗಳು ಸಿಗುತ್ತಿವೆ. ಈ ಮಳಿಗೆಗಳನ್ನು ಹಾಕಲು ದಲಿತರಿಗೆ ಬಿಬಿಎಂಪಿ ಜಾಗ ನೀಡಬೇಕು’ ಎಂದು ದಲಿತ ಮುಖಂಡ ಸಿದ್ದರಾಜು ಮನವಿ ಮಾಡಿದರು.

‘ಬೂತ್‌ ನಿರ್ಮಾಣಕ್ಕೆ ಪಾಲಿಕೆಯು ಕೆಎಂಎಫ್‌ ಅಥವಾ ಹಾಲು ಉತ್ಪಾದಕ ಒಕ್ಕೂಟಗಳಿಗೆ ಜಾಗ ನೀಡುತ್ತದೆ. ಮಳಿಗೆ ಆರಂಭಿಸಲು ದಲಿತರಿಗೆ ಆದ್ಯತೆ ನೀಡುವ ಬಗ್ಗೆ ಹಾಲು ಒಕ್ಕೂಟವೇ ನಿರ್ಧಾರ ತಳೆಯುತ್ತದೆ. ನಮ್ಮಿಂದಾದ ಸಹಕಾರ ನೀಡುತ್ತೇವೆ‘ ಎಂದು ಆಯುಕ್ತರು ಉತ್ತರಿಸಿದರು.

ರಾಜಕಾಲುವೆ ಒತ್ತುವರಿಯೇ ಸಮಸ್ಯೆ
ರಾಜಕಾಲುವೆಗಳಲ್ಲಿ ಮಳೆ ನೀರು ಉಕ್ಕಿ ಹರಿದು ಅಕ್ಕಪಕ್ಕದ ನಿವಾಸಿಗಳ ಮನೆಗೆ ನುಗ್ಗಿ ಸಮಸ್ಯೆಯಾಗುತ್ತಿದೆ. ರಾಜಕಾಲುವೆಯಲ್ಲಿ ಗಿಡ–ಗಂಟಿ ಬೆಳೆದಿವೆ. ಹೂಳನ್ನೂ ಎತ್ತದೆಯೂ ಸಮಸ್ಯೆಯಾಗಿದೆ ಎಂದು ರಾಜರಾಜೇಶ್ವರಿ ನಗರದ ಮಂಗಳಮೂರ್ತಿ, ಭಾಸ್ಕರ್‌, ಯಲಹಂಕದ ಮಂಜುನಾಥ್ ಸೇರಿದಂತೆ ಹಲವರು ದೂರಿದರು.

‘ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಟ್ಟಿರುವ ಕಟ್ಟಡಗಳನ್ನು ನಿರ್ದಾಕ್ಷಿಣ್ಯವಾಗಿ ಧ್ವಂಸಗೊಳಿಸಲಾಗುತ್ತದೆ. ಕೆಲವು ರಾಜಕಾಲುವೆಗಳಿಗೆ ಕಾಂಕ್ರೀಟ್‌ ತಡೆಗೋಡೆ ಅಳವಡಿಸಲಾಗುತ್ತಿದೆ. ಹೂಳೆತ್ತಲು ಕ್ರಮ ಕೈಗೊಳ್ಳಲಾಗುವುದು’ ಎಂದು ಆಯುಕ್ತರು ತಿಳಿಸಿದರು.

‘ಪಾಲಿಕೆ ಸದಸ್ಯರಿಲ್ಲದಿದ್ದರೂ ಕೊರತೆ ಎದುರಾಗದಂತೆ ಕ್ರಮ’
‘ಬಿಬಿಎಂಪಿಯಲ್ಲಿ ಚುನಾಯಿತ ಸದಸ್ಯರು ಇಲ್ಲ ಎಂಬ ಕೊರತೆ ಎದುರಾಗದಂತೆ ಆಡಳಿತ ಯಂತ್ರ ಕಾರ್ಯನಿರ್ವಹಿಸಲಿದೆ. ಜನರ ಅಹವಾಲುಗಳನ್ನು ಆಲಿಸಿ, ಸಮಸ್ಯೆಗಳನ್ನು ತಳಮಟ್ಟದಲ್ಲೇ ಬಗೆಹರಿಸುವಂತೆ ವಿಶೇಷ ಆಯುಕ್ತರಿಗೆ ಸೂಚನೆ ನೀಡಲಾಗಿದೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

’ಸೆ 10ರಂದು ಪಾಲಿಕೆ ಚುನಾಯಿತ ಕೌನ್ಸಿಲ್‌ನ ಅವಧಿ ಪೂರ್ಣಗೊಂಡ ಬಳಿಕ ಅಧಿಕಾರಿಗಳ ಮೇಲಿನ ಜವಾಬ್ದಾರಿ ಹೆಚ್ಚಿದೆ. ನಾವು ಇನ್ನಷ್ಟು ಜನರ ಬಳಿಗೆ ಹೋಗಿ ಕೆಲಸ ಮಾಡಬೇಕಿದೆ. ಈ ಸಲುವಾಗಿ ನಾನು ಹಾಗೂ ಆಡಳಿತಾಧಿಕಾರಿ ಗೌರವ್‌ ಗುಪ್ತ ಅವರು ಸಭೆ ನಡೆಸಿ ಕೆಲವು ಕ್ರಮಗಳನ್ನು ಕೈಗೊಂಡಿದ್ದೇವೆ’ ಎಂದರು.

‘ಎಲ್ಲ ವಲಯ ಆಯುಕ್ತರು ಕೇಂದ್ರ ಕಚೇರಿ ಬದಲು ಆಯಾ ವಲಯದಲ್ಲೇ ಕಾರ್ಯ ನಿರ್ವಹಿಸಬೇಕು. ಕ್ಷೇತ್ರ ಭೇಟಿಗೆ ಆದ್ಯತೆ ನೀಡಬೇಕು. ಯಾವುದೇ ಸಮಯದಲ್ಲೂ ಜನರ ಕೈಗೆ ಸಿಗುವಂತಿರಬೇಕು. ತಮ್ಮ ಸಮಸ್ಯೆ ಆಲಿಸಲು ಪಾಲಿಕೆ ಸದಸ್ಯರು ಇಲ್ಲ ಎಂಬ ಕೊರಗು ಜನರನ್ನು ಕಾಡುವುದಕ್ಕೆ ಅವಕಾಶ ನೀಡಬಾರದು. ಜನಪ್ರತಿನಿಧಿಗಳು ಇಲ್ಲದಿದ್ದರೂ ಪಾಲಿಕೆಯ ಸೇವೆಯಲ್ಲಿ ಯಾವುದೇ ವ್ಯತ್ಯ ಆಗಿಲ್ಲ ಎಂಬುದು ಜನರಿಗೆ ಮನದಟ್ಟಾಗಬೇಕು. ಆಡಳಿತ ಯಂತ್ರದಲ್ಲಿ ಈ ಬದಲಾವಣೆ ಎದ್ದುಕಾಣಿಸುವಂತಿರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ’ ಎಂದರು.

‘ಒಂಟಿಮನೆ– ಬಾಕಿ ಹಣ ಶೀಘ್ರ ಬಿಡುಗಡೆ’
‘ಕಲ್ಯಾಣ ಕಾರ್ಯಕ್ರಮದ ಅಡಿ ಒಂಟಿ ಮನೆ ನಿರ್ಮಿಸಿದ ಫಲಾನುಭವಿಗಳಿಗೆ ಬಾಕಿ ಬಿಲ್ ಪಾವತಿಗೆ ₹ 25 ಕೋಟಿ ಅವಶ್ಯಕತೆ ಇತ್ತು. ಈ ಮೊತ್ತವನ್ನು ಮುಂದಿನವಾರ ಅನುದಾನ ಬಿಡುಗಡೆ ಮಾಡಲಾಗುವುದು’ ಎಂದು ಆಯುಕ್ತರು ಯಲಹಂಕದ ದೇವರಾಜ್‌ ಅವರ ಪ್ರಶ್ನೆಗೆ ಉತ್ತರಿಸಿದರು.

ಕ್ಷಿಪ್ರ ಸ್ಪಂದನೆ
‘ನಮ್ಮ ಮನೆಯ ಸಮೀಪ ವ್ಯಕ್ತಿಯೊಬ್ಬರು ನ್ಯಾಯಾಲಯದ ತಡೆಯಾಜ್ಞೆ ಹೊರತಾಗಿಯೂ ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿದ್ದಾರೆ. ಇದಕ್ಕೆ ಅವರ ಸಂಬಂಧಿಯಾಗಿರುವ ಬಿಬಿಎಂಪಿ ಅಧಿಕಾರಿಯೇ ರಕ್ಷಣೆ ಒದಗಿಸಿದ್ದಾರೆ’ ಎಂದು ಹೊಸಬೈಯಪ್ಪನಹಳ್ಳಿಯ ಪ್ರಿಯಾಂಕಾ ಎಂಬವರು ಕರೆ ಮಾಡಿ ದೂರಿದರು.

ಪ್ರಿಯಾಂಕ ಅವರನ್ನು ಸಂಜೆ ಒಳಗೆ ಸಂಪರ್ಕಿಸಿದ ಬಿಬಿಎಂಪಿ ಅಧಿಕಾರಿಗಳು ಕಟ್ಟಡ ನಿರ್ಮಾಣ ತಡೆಯಲು ಸೋಮವಾರದ ಒಳಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಕಾಮಗಾರಿ ಸಲುವಾಗಿ ತೆರವುಗೊಳಿಸಿದ ಮಾರ್ಗಸೂಚಿ ಫಲಕವನ್ನು ವರ್ಷವಾದರೂ ಮತ್ತೆ ಅಳವಡಿಸದಿರುವ ಬಗ್ಗೆ ಹೆಗ್ಗನಹಳ್ಳಿಯ ಚಿನ್ಮಯ ಅವರು ಆಯುಕ್ತರ ಗಮನಕ್ಕೆತಂದರು. ಅವರನ್ನು ಸಂಪರ್ಕಿಸಿ ಈ ಬಗ್ಗೆ ಸಮಗ್ರ ಮಾಹಿತಿ ಪಡೆದ ಬಿಬಿಎಂಪಿ ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಸೋಮವಾರವೇ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

***

ನಗರದ ಪ್ರತಿಯೊಬ್ಬ ವ್ಯಕ್ತಿಯು ಹುಟ್ಟಿನಿಂದ ಆರಂಭಗೊಂಡು, ಸಾವಿನ ನಂತರವೂ ಬಿಬಿಎಂಪಿ ಜೊತೆ ಅವಿನಾಭಾವ ಸಂಬಂಧ ಹೊಂದಿರುತ್ತಾನೆ. ಹಾಗಾಗಿ ಜನರ ಆಶೋತ್ತರ ಈಡೇರಿಸಲು ಬಿಬಿಎಂಪಿ ಅಧಿಕಾರಿಗಳು ಸದಾ ಸನ್ನದ್ಧವಾಗಿರಬೇಕು.
- ಎನ್‌.ಮಂಜುನಾಥ ಪ್ರಸಾದ್‌, ಆಯುಕ್ತರು, ಬಿಬಿಎಂಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT