ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ಆಯುಕ್ತರಾಗಿ ಅನಿಲ್‌ ಕುಮಾರ್‌

ಕಸ ವಿಲೇವಾರಿ ಟೆಂಡರ್‌ ಮುಗಿಯುತ್ತಿದ್ದಂತೆಯೇ ಮಂಜುನಾಥ ಪ್ರಸಾದ್‌ ವರ್ಗ
Last Updated 22 ಆಗಸ್ಟ್ 2019, 20:22 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ವ್ಯವಸ್ಥೆ ಜಾರಿ, ನಿಷೇಧಿತ ಪ್ಲಾಸ್ಟಿಕ್‌ ಬಳಕೆಗೆ ಕಟ್ಟುನಿಟ್ಟಿನ ನಿರ್ಬಂಧ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡುವವರ ಮೇಲೆ ನಿಗಾ ಇಡಲು ಮಾರ್ಷಲ್‌ಗಳ ನೇಮಕ ಮುಂತಾದ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳ ಜಾರಿ ಅಂತಿಮ ಹಂತ ತಲುಪಿರುವಾಗಲೇ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರನ್ನು ವರ್ಗ ಮಾಡಲಾಗಿದೆ.

ಅವರ ಸ್ಥಾನಕ್ಕೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್‌) ಬಿ.ಎಚ್‌.ಅನಿಲ್‌ ಕುಮಾರ್‌ ಅವರನ್ನು ನೇಮಿಸಲಾಗಿದೆ. ಆಯುಕ್ತರ ಹುದ್ದೆಯನ್ನು ಎಸಿಎಸ್‌ ದರ್ಜೆಯ ಹುದ್ದೆಯನ್ನಾಗಿ ಮಾರ್ಪಾಡು ಮಾಡಲಾಗಿದೆ.

ಮನೆ ಮನೆಯಿಂದ ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ವಿಲೇವಾರಿ ಮಾಡುವ ಟೆಂಡರ್‌ ಪ್ರಕ್ರಿಯೆಗಳು ಕೊನೆ ಹಂತವನ್ನು ತಲುಪಿವೆ. ಪಾಲಿಕೆಯು ಮುಂದಿನ ತಿಂಗಳಿನಿಂದ ಹೊಸ ಟೆಂಡರ್‌ ಅನುಷ್ಠಾನಕ್ಕೆ ಸಿದ್ಧತೆ ಮಾಡಿಕೊಂಡಿತ್ತು. ಕಸವನ್ನು ಮೂಲದಲ್ಲೇ ವಿಂಗಡಿಸಿ ವಿಲೇವಾರಿ ಮಾಡುವುದಕ್ಕೆ ಟೆಂಡರ್‌ ಆಹ್ವಾನಿಸಿದಾಗ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ಸದಸ್ಯರೂ ವಿರೋಧ ವ್ಯಕ್ತಪಡಿಸಿದ್ದರು. ಅವರ ಮನವೊಲಿಸಿ, ಕೌನ್ಸಿಲ್‌ ಸಭೆಯಲ್ಲಿ ಇದಕ್ಕೆ ಮಂಜೂರಾತಿ ಪಡೆಯುವಲ್ಲಿ ಆಯುಕ್ತರು ಪ್ರಮುಖ ಪಾತ್ರ ವಹಿಸಿದ್ದರು.

ಹೈಕೋರ್ಟ್‌ ಸೂಚನೆ ಮೇರೆಗೆ, ನಗರವನ್ನು ಹೊರಾಂಗಣ ಜಾಹೀರಾತು, ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳಿಂದ ಮುಕ್ತಗೊಳಿಸುವ ನಿಟ್ಟಿನಲ್ಲೂ ಮಂಜುನಾಥ ಪ್ರಸಾದ್‌ ಪ್ರಮುಖ ಪಾತ್ರ ವಹಿಸಿದ್ದರು. ಪಾಲಿಕೆಯು ಬಜೆಟ್‌ ಮಂಡನೆ ವೇಳೆ ಆರ್ಥಿಕ ಶಿಸ್ತು ಕಾಪಾಡದಿದ್ದಾಗ, ಉತ್ಪೇಕ್ಷಿತ ಬಜೆಟ್‌ಗೆ ಅನುಮೋದನೆ ನೀಡಬಾರದು ಎಂದು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯುವ ಮೂಲಕ ಗಮನ ಸೆಳೆದಿದ್ದರು. ಅವರಿಗೆ ಸರ್ಕಾರ ಸದ್ಯಕ್ಕೆ ಯಾವುದೇ ಹುದ್ದೆ ತೋರಿಸಿಲ್ಲ.

ಕೇಂದ್ರ ಸೇವೆಯಲ್ಲಿದ್ದ ಬಿ.ಎಚ್‌.ಅನಿಲ್‌ಕುಮಾರ್‌ ಅವರು ಕಳೆದ ವರ್ಷ ರಾಜ್ಯ ಸೇವೆಗೆ ಮರಳಿದ್ದರು. ಆ ಬಳಿಕ ಉನ್ನತ ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಎರಡು ತಿಂಗಳ ಹಿಂದಷ್ಟೇ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ಪಾಲಿಕೆಯ ವಿಶೇಷ ಆಯುಕ್ತರಾಗಿದ್ದ (ಚುನಾವಣೆ) ಮನೋಜ್‌ ಕುಮಾರ್‌ ಮೀನಾ ಅವರನ್ನು ವಸತಿ ಇಲಾಖೆ ಕಾರ್ಯದರ್ಶಿಯನ್ನಾಗಿ ವರ್ಗ ಮಾಡಲಾಗಿದೆ. ತೋಟಗಾರಿಕೆ ಇಲಾಖೆಯ ನಿರ್ದೇಶಕರಾಗಿ ಐಎಫ್‌ಎಸ್‌ ಅಧಿಕಾರಿ ಬ್ರಿಜೇಶ್‌ ಕುಮಾರ್ ದೀಕ್ಷಿತ್ ಅವರನ್ನು ನೇಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT