ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಬಜೆಟ್‌: ಬಿಜೆಪಿ–ಕಾಂಗ್ರೆಸ್ ಜಟಾಪಟಿ

ರಾಜ್ಯ ಸರ್ಕಾರದ ವಿರುದ್ಧ ಹೋರಾಟ: ಬಿಬಿಎಂಪಿಯ ಕಾಂಗ್ರೆಸ್ ಸದಸ್ಯರ ಎಚ್ಚರಿಕೆ
Last Updated 19 ಆಗಸ್ಟ್ 2019, 20:02 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಬಜೆಟ್‌ಗೆ ನಗರಾಭಿವೃದ್ಧಿ ಇಲಾಖೆ ನೀಡಿದ್ದ ಅನುಮೋದನೆಯನ್ನು ರಾಜ್ಯ ಸರ್ಕಾರ ತಡೆ ಹಿಡಿದಿರುವುದು ಪಾಲಿಕೆಯ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಸೋಮವಾರ ಜಟಾಪಟಿಗೆ ಕಾರಣವಾಯಿತು.

ಮೇಯರ್ ಗಂಗಾಂಬಿಕೆ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಕೌನ್ಸಿಲ್ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್, ‘ಹಿಂದಿನ ಸರ್ಕಾರ ಅನುಮೋದನೆ ನೀಡಿದ ಬಜೆಟ್‌ ಅನ್ನು ಬಿಜೆಪಿ ಸರ್ಕಾರ ಕಾನೂನುಬಾಹಿರವಾಗಿ ತಡೆ ಹಿಡಿದಿದೆ. ಹೊಸ ಸಂಪ್ರದಾಯವನ್ನು ಬಿಜೆಪಿ ಹುಟ್ಟು ಹಾಕಿದೆ. ಇದರಿಂದ ಬಿಬಿಎಂಪಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿವೆ’ ಎಂದು ಆರೋಪಿಸಿದರು.

ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ, ‘ಬಜೆಟ್‌ ತಡೆ ಹಿಡಿಯಲು ಸರ್ಕಾರಕ್ಕೆ ಅಧಿಕಾರವಿದೆ. ಸಚಿವ ಸಂಪುಟದ ಅನುಮೋದನೆ ಪಡೆಯದೆ ನಗರಾಭಿವೃದ್ಧಿ ಇಲಾಖೆ ಬಜೆಟ್‌ ಅಂಗೀಕರಿಸಿದೆ. ಈ ರೀತಿಯ ತೀರ್ಮಾನ ಕೈಗೊಳ್ಳಲು ಹಿಂದಿನ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅವರಿಗೆ ಅಧಿಕಾರ ಕೊಟ್ಟವರು ಯಾರು? ಆಗಿರುವ ತಪ್ಪು ಸರಿಪಡಿಸಲು ನಮ್ಮ ಸರ್ಕಾರ ಪ್ರಯತ್ನಿಸುತ್ತಿದೆ’ ಎಂದು ಸಮರ್ಥಿಸಿಕೊಂಡರು.

ತಕ್ಷಣ ಎದ್ದು ನಿಂತ ಆಡಳಿತ ಪಕ್ಷದ ಸದಸ್ಯರಾದ ಅಬ್ದುಲ್ ವಾಜೀದ್, ಎಂ. ಶಿವರಾಜ್, ಜಿ. ಪದ್ಮಾವತಿ ಹಾಗೂ ಇತರರು, ಪದ್ಮನಾಭರೆಡ್ಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಬಿಜೆಪಿ ಆಡಳಿತಾವಧಿಯಲ್ಲಿ ಪಾಲಿಕೆ ಆಸ್ತಿಗಳನ್ನು ಅಡಮಾನ ಇಟ್ಟು ಸಾಲ ಪಡೆಯಲಾಗಿತ್ತು. ಈ ಸಾಲ ತೀರಿಸಿ ಆರು ಆಸ್ತಿಗಳನ್ನು ಬಿಬಿಎಂಪಿ ವಶಕ್ಕೆ ಪಡೆದಿದ್ದೇವೆ. ಇನ್ನೂ ನಾಲ್ಕು ಆಸ್ತಿಯನ್ನು ಸದ್ಯದಲ್ಲೇ ಪಡೆದುಕೊಳ್ಳಲಿದ್ದೇವೆ. ಪಾಲಿಕೆಯಲ್ಲಿ ಆರ್ಥಿಕ ಶಿಸ್ತು ತಂದಿದ್ದೇವೆ’ ಎಂದು ಎಂ.ಶಿವರಾಜ್‌ ಹೇಳಿದರು.

‘ಬಜೆಟ್‌ಗೆ ರಾಜ್ಯ ಸರ್ಕಾರ ಅನುಮೋದನೆ ನೀಡದಿದ್ದರೆ ಬಿಜೆಪಿ ವಿರುದ್ಧ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ನಮ್ಮ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿಗೆ ನಗರದಲ್ಲಿರುವ ಅಂಡರ್ ಪಾಸ್ ಮತ್ತು ಫ್ಲೈಓವರ್‌ಗಳೇ ಸಾಕ್ಷಿ. ಬಿಜೆಪಿಯವರು ಕೆಂಪೇಗೌಡ ಮ್ಯೂಸಿಯಂ ಅನ್ನೇ ಅಡವಿಟ್ಟಿದ್ದರು’ ಎಂದು ಪದ್ಮಾವತಿ ಜರಿದರು.

ಈ ಸಂದರ್ಭದಲ್ಲಿ ಎರಡೂ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಶಾಸಕ ಸತೀಶ್‌ರೆಡ್ಡಿ, ‘ಬಿಬಿಎಂಪಿಗೆ ಬರುವ ವರಮಾನ ನೋಡಿಕೊಂಡು ಬಜೆಟ್ ಮಂಡಿಸಬೇಕಿತ್ತು. ಕಳೆದ ವರ್ಷಕ್ಕಿಂತ ಬಜೆಟ್‌ ಗಾತ್ರವನ್ನು ₹4,500 ಕೋಟಿ ಹೆಚ್ಚಳ ಮಾಡಿದ್ದರಿಂದ ಇಷ್ಟೆಲ್ಲಾ ಗೊಂದಲವಾಗಿದೆ. ಆಡಳಿತ ಪಕ್ಷ ತಪ್ಪು ಮಾಡಿದ್ದು, ಅದನ್ನು ಸರಿಪಡಿಸಲಾಗುತ್ತಿದೆ. ಈ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗಿದೆ. ನೆರೆ ಹಾವಳಿ ಇದ್ದ ಕಾರಣ ವಿಳಂಬವಾಗಿದ್ದು, ಒಂದೆರಡು ದಿನಗಳಲ್ಲಿ ಸಚಿವ ಸಂಪುಟದ ಅನುಮೋದನೆ ದೊರೆ ಯಲಿದೆ’ ಎಂದು ಭರವಸೆ ನೀಡಿದರು.

‘ಸಂಪುಟದ ಅನುಮೋದನೆ ಬೇಕು’

‘‌ಹಣಕಾಸು ಇಲಾಖೆ ಸಲಹೆ ತಳ್ಳಿಹಾಕಿಬಜೆಟ್ ಗಾತ್ರವನ್ನು ₹11,648.90 ಕೋಟಿಗೆ ಹಿಗ್ಗಿಸಲಾಗಿದೆ. ಹೀಗಾಗಿ ಸಚಿವ ಸಂಪುಟದ ಅನುಮೋದನೆ ಪಡೆಯಬೇಕಾಗಿದೆ’ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥಪ್ರಸಾದ್ ಹೇಳಿದರು.

‘ಕಳೆದ ವರ್ಷ ₹7,400 ಕೋಟಿ ಇದ್ದ ಬಜೆಟ್‌ ಗಾತ್ರವನ್ನು ₹ 12,958 ಕೋಟಿಗೆ ಹಿಗ್ಗಿಸಲಾಗಿತು. ಬಿಬಿಎಂಪಿ ನಿರೀಕ್ಷಿತ ವರಮಾನಕ್ಕೂ, ವೆಚ್ಚಕ್ಕೂ ಭಾರಿ ವ್ಯತ್ಯಾಸ ಇದ್ದ ಕಾರಣ ₹9,000 ಕೋಟಿಗೆ ಮಿತಿಗೊಳಿಸಬೇಕೆಂದು ನಾನು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದೆ. ಹಣಕಾಸು ಇಲಾಖೆ ಕೂಡ ₹9 ಸಾವಿರ ಕೋಟಿ ಮೀರದಂತೆ ನೋಡಿಕೊಳ್ಳಲು ಸಲಹೆ ನೀಡಿತ್ತು’ ಎಂದರು.

‘ಆದರೆ, ನಗರಾಭಿವೃದ್ಧಿ ಇಲಾಖೆ ₹11,648.90 ಕೋಟಿಗೆ ಮಿತಗೊಳಿಸಿ ಬಜೆಟ್ ಅಂಗೀಕರಿಸಿದೆ. ಹಣಕಾಸು ಇಲಾಖೆ ಸಲಹೆ ತಳ್ಳಿಹಾಕಿ ಬಜೆಟ್ ಗಾತ್ರ ಹಿಗ್ಗಿಸಲು ಸಚಿವ ಸಂಪುಟಕ್ಕೆ ಮಾತ್ರ ಅಧಿಕಾರ ಇದೆ. ಸಂಪುಟದ ಒಪ್ಪಿಗೆ ಪಡೆಯಲು ಹಿಂದಿನ ಸರ್ಕಾರವೂ ಪ್ರಯತ್ನಿಸಿತ್ತು. ಅಷ್ಟರಲ್ಲಿ ಹೊಸ ಸರ್ಕಾರ ಬಂದಿದೆ’ ಎಂದು ವಿವರಿಸಿದರು.

ಮೂರು ದಿನ ಕಾಯೋಣ: ‘ಬಜೆಟ್‌ಗೆ ಎರಡು– ಮೂರು ದಿನಗಳಲ್ಲಿ ಸರ್ಕಾರ ಅನುಮೋದನೆ ನೀಡಲಿದೆ ಎಂದು ಬಿಜೆಪಿ ಶಾಸಕರು ಕೌನ್ಸಿಲ್‌ನಲ್ಲಿ ಭರವಸೆ ನೀಡಿದ್ದಾರೆ. ಹೀಗಾಗಿ ಇನ್ನೂ ಮೂರು ದಿನ ಕಾಯೋಣ’ ಎಂದು ಗಂಗಾಂಬಿಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT