ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಡಿಆರ್ ಗೋಲ್‌ಮಾಲ್‌: ತನಿಖೆಗೆ ಸಮಿತಿ

ಕೌನ್ಸಿಲ್ ಸಭೆಯಲ್ಲಿ ಬಿಬಿಎಂಪಿ ನಿರ್ಧಾರ * ಸಮಿತಿಗೆ ಮೇಯರ್‌ ಅಧ್ಯಕ್ಷತೆ
Last Updated 20 ಜುಲೈ 2019, 19:41 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವಿತರಿಸಿರುವ ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್) ಪತ್ರಗಳಲ್ಲಿ ಭಾರಿ ಅಕ್ರಮ ನಡೆದಿರುವ ಆರೋಪ ವ್ಯಕ್ತವಾದ ಹಿನ್ನೆಲೆಯಲ್ಲಿ ತನಿಖೆಗೆ ಮೇಯರ್ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಗೆ ನಿರ್ಧರಿಸಲಾಗಿದೆ.

ಬಿಬಿಎಂಪಿಯಲ್ಲಿ ಶನಿವಾರ ನಡೆದ ಕೌನ್ಸಿಲ್ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ, ಅಕ್ರಮಗಳ ಬಗ್ಗೆ ಎಳೆ ಎಳೆಯಾಗಿ ವಿವರಿಸಿದರು. ‘ಈ ಸಂಬಂಧ ತನಿಖೆಗೆ ಎಲ್ಲಾ ಪಕ್ಷದ ಸದಸ್ಯರನ್ನು ಒಳಗೊಂಡ ಸಮಿತಿ ರಚಿಸುವುದು ಸೂಕ್ತ’ ಎಂದು ಮೇಯರ್ ಗಂಗಾಂಬಿಕೆ ಪ್ರತಿಪಾದಿಸಿದರು.

‘ಇದರ ತನಿಖೆಯನ್ನು ಎಸಿಬಿಗೆ ವಹಿಸಬಹುದು ಅಥವಾ ಬಿಬಿಎಂಪಿಯೇ ಸಮಿತಿ ರಚಿಸಿಕೊಂಡು ತನಿಖೆ ಮಾಡಬ
ಹುದು’ ಎಂದು ಆಯುಕ್ತ ಎನ್. ಮಂಜುನಾಥ ಪ್ರಸಾದ್ ಸಲಹೆ ನೀಡಿದರು.

ಮೇಯರ್ ಅಧ್ಯಕ್ಷತೆಯಲ್ಲಿ ಮೂರು ಪಕ್ಷದ ನಾಯಕರು ಮತ್ತು ನಗರ ಯೋಜನೆಗಳ ವಿಶೇಷ ಆಯುಕ್ತರನ್ನು ಒಳಗೊಂಡ ಸಮಿತಿ ರಚನೆ ಮಾಡಲು ಸಭೆ ತೀರ್ಮಾನಿಸಿತು. ಪರಿಶೀಲನೆ ನಡೆಸಿದ ಬಳಿಕ ಯಾವ ತನಿಖೆಗೆ ವಹಿಸಬೇಕು ಎಂಬ ನಿರ್ಧಾರಕ್ಕೆ ಸಮಿತಿ ಬರಲಿದೆ.

‘ಟಿಡಿಆರ್ ನೀಡಲು ಅಧಿಕಾರಿಗಳು ತೋರಿದ ಆಸಕ್ತಿಯನ್ನು ಭೂಮಿ ವಶಕ್ಕೆ ಪಡೆಯಲು ತೋರಲಿಲ್ಲ.2005ರಿಂದ 2015ರವರೆಗೆ ಬಿಬಿಎಂಪಿಯಿಂದ 2,220 ಆಸ್ತಿಗಳಿಗೆ 22.08 ಲಕ್ಷ ಚದರ ಮೀಟರ್‌ನಷ್ಟು ಟಿಡಿಆರ್ ವಿತರಿಸಲಾಗಿದೆ. ಈ ಲೆಕ್ಕಾಚಾರ ನೋಡಿದರೆ ಬಿಬಿಎಂಪಿ ಸ್ವಾಧೀನದಲ್ಲಿ 545 ಎಕರೆ ಇರಬೇಕಿತ್ತು.ಇಷ್ಟೊಂದು ಪ್ರಮಾಣದ ಭೂಮಿ ಎಲ್ಲಿದೆ ಎಂಬುದನ್ನು ತೋರಿಸಿದರೆ ಅಧಿಕಾರಿಗಳಿಗೆ ಬಹುಮಾನ ನೀಡಲಾಗುವುದು’ ಎಂದು ಪದ್ಮನಾಭರೆಡ್ಡಿ ಹೇಳಿದರು.

‘ಸರ್ಕಾರ ನೀಡಿದ್ದ ಅನುಮತಿಯಂತೆ ಬಿಬಿಎಂಪಿ ವ್ಯಾಪ್ತಿಯೊಳಗಿನ ಏಳು ರಸ್ತೆಗಳ ವಿಸ್ತರಣೆಗೆ ಮಾತ್ರ ಟಿಡಿಆರ್ ನೀಡಬೇಕಿತ್ತು.ಬಿಬಿಎಂಪಿ ಅಧಿಕಾರಿಗಳು ಸರ್ಕಾರದ ಯಾವುದೇ ನಿಯಮವನ್ನೂ ಪಾಲಿಸಿಲ್ಲ. ನಗರದ ಹೊರ ವಲಯದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೂ ಟಿಡಿಆರ್ ನೀಡಿದ್ದಾರೆ’ ಎಂದು ಆಪಾದಿಸಿದರು.

‘ಟಿಡಿಆರ್ ಪಡೆದುಕೊಂಡಿರುವ ಆಸ್ತಿಗಳ ಮಾಲೀಕರೇ ಸ್ವಾಧೀನದಲ್ಲಿದ್ದಾರೆ. ಪ್ರಮಾಣಪತ್ರಗಳನ್ನು ಮಾತ್ರ ದೊಡ್ಡ ದೊಡ್ಡ ಬಿಲ್ಡರ್‌ಗಳಿಗೆ ಮಾರಾಟ ಮಾಡಿದ್ದಾರೆ. ಆ ಬಿಲ್ಡರ್‌ಗಳು ನಗರದ ಹೃದಯಭಾಗದಲ್ಲಿ ಟಿಡಿಆರ್ ಬಳಸಿಕೊಂಡು ಬಹುಮಹಡಿ ಕಟ್ಟಡಗಳನ್ನು ಕಟ್ಟುತ್ತಿದ್ದಾರೆ’ ಎಂದರು.

‘ಟಿಡಿಆರ್‌ ಇದ್ದರೆ ಬಿಬಿಎಂಪಿಯಿಂದ ಅನುಮತಿಯನ್ನಾಗಲಿ, ತೆರಿಗೆಯನ್ನಾಗಲಿ ಪಾವತಿಸುವಂತಿಲ್ಲ.ನಗರದ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಕಟ್ಟಡಗಳನ್ನು ವಿಸ್ತರಿಸಿಕೊಳ್ಳಲು ಅವರಿಗೆ ಅನುಕೂಲವಾಗಿದೆ. ಬಿಬಿಎಂಪಿಗೆ ಬರುವ ಆದಾಯಕ್ಕೆ ಖೋತಾ ಆಗಿದೆ’ ಎಂದು ದೂರಿದರು.

‘ಅಧಿಕಾರಿಗಳು ಮಾಡಿರುವ ಈ ಅಕ್ರಮಕ್ಕೆ ಇಡೀ ಪಾಲಿಕೆಯೇ ತಲೆತಗ್ಗಿಸುವಂತೆ ಆಗಿದೆ. ಹೀಗಾಗಿ ಸಮಗ್ರ ತನಿಖೆ ನಡೆಸಬೇಕು’ ಎಂದು ಅವರು ಒತ್ತಾಯಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಕೆ.ಎಂ. ಮುನೀಂದ್ರಕುಮಾರ್, ‘ಗುಂಡುತೋಪು ಸೇರಿದಂತೆ ಸರ್ಕಾರಿ ಭೂಮಿಗೂ ಟಿಡಿಆರ್ ನೀಡಲಾಗಿದೆ. ಈ ರೀತಿಯ 126 ಕಡತಗಳು ನನ್ನ ಬಳಿ ಇವೆ. ತನಿಖೆ ನಡೆಸುವುದಾದರೆ ಎಲ್ಲವನ್ನೂ ಬಿಬಿಎಂಪಿಗೆ ನೀಡುವೆ’ ಎಂದು ಹೇಳಿದರು.

ಬಿಜೆಪಿ ಸದಸ್ಯ ಉಮೇಶ್‌ ಶೆಟ್ಟಿ, ‘ರಾಮನಗರ ಜಿಲ್ಲೆಯ ಕೊಡಿಯಾಲ ಕರೇನಹಳ್ಳಿ ಬಳಿ ಕಸ ಘಟಕಕ್ಕೆ 42 ಎಕರೆ ವಶಪಡಿಸಿಕೊಂಡಿದ್ದ ಬಿಬಿಎಂಪಿ, ಇದಕ್ಕೆ ಟಿಡಿಆರ್ ನೀಡಿತ್ತು. ಸ್ಥಳೀಯರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅಲ್ಲಿ ಕಸ ಸುರಿಯಲು ಸಾಧ್ಯವಾಗಲಿಲ್ಲ. ಹೀಗಾಗಿ, ಟಿಡಿಆರ್ ಅನ್ನು ಬಿಬಿಎಂಪಿ ರದ್ದುಪಡಿಸಿತ್ತು. ಆದರೆ, ಖಾಸಗಿ ವ್ಯಕ್ತಿಗಳು ನ್ಯಾಯಾಲಯದ ಮೊರೆ ಹೋಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಟಿಡಿಆರ್ ಅಪ್‌ಲೋಡ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಅವಕಾಶ ನೀಡಬಾರದು’ ಎಂದು ಒತ್ತಾಯಿಸಿದರು.

‘ಷರ್ಲಾಕ್ ಹೋಮ್ಸ್ ಬಂದರೂ ಕಷ್ಟ’
‘ಟಿಡಿಆರ್‌ ವಿತರಣೆಯಲ್ಲಿ ಸಾವಿರಾರು ಕೋಟಿಗಳಷ್ಟು ದೊಡ್ಡ ಮೊತ್ತದ ಅಕ್ರಮ ನಡೆದಿದೆ. ಖ್ಯಾತ ಪತ್ತೆದಾರಿ ಷರ್ಲಾಕ್‌ ಹೋಮ್ಸ್‌ (ಪತ್ತೆದಾರಿ ಕಾದಂಬರಿಯಲ್ಲಿ ಬರುವ ಕಾಲ್ಪನಿಕ ವ್ಯಕ್ತಿ) ಬಂದರೂ ತನಿಖೆ ನಡೆಸುವುದು ಕಷ್ಟವಾಗಲಿದೆ’ ಎಂದು ಪದ್ಮನಾಭರೆಡ್ಡಿ ಹೇಳಿದರು.

‘ಈ ಅಕ್ರಮಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದಿದ್ದೇನೆ. 2 ಜಿ ಹಗರಣವನ್ನೂ ಈ ಹಗರಣ ಮೀರಿಸಲಿದೆ’ ಎಂದರು.

ಆಸ್ತಿ ವಿವರ ಲೋಕಾಯುಕ್ತರಿಗೂ ಸಲ್ಲಿಸಬೇಕೇ?
‘ಆಸ್ತಿ ವಿವರವನ್ನು ಪ್ರತಿವರ್ಷ ಲೋಕಾಯುಕ್ತರಿಗೂ ಸಲ್ಲಿಸಬೇಕೇ’ ಎಂದು ಬಿಬಿಎಂಪಿಯ ಬಹುತೇಕ ಸದಸ್ಯರು ಕೌನ್ಸಿಲ್ ಸಭೆಯಲ್ಲಿ ಪ್ರಶ್ನೆ ಮಾಡಿದರು.

‘ಕೆಎಂಸಿ ಕಾಯ್ದೆಯಡಿ ಮೇಯರ್ ಅವರಿಗೆ ಪ್ರತಿವರ್ಷ ವಿವರ ಸಲ್ಲಿಸುತ್ತಿದ್ದೇವೆ. ಲೋಕಾಯುಕ್ತರಿಗೂ ಸಲ್ಲಿಸುವ ಅಗತ್ಯವಿದೆಯೇ ಎಂಬುದರ ಬಗ್ಗೆ ಕಾನೂನು ಸಲಹೆ ಪಡೆದುಕೊಳ್ಳಿ’ ಎಂದು ಮೇಯರ್ ಗಂಗಾಂಬಿಕೆ ಅವರಲ್ಲಿ ಮನವಿ ಮಾಡಿದರು. ಆಸ್ತಿ ವಿವರ ಸಲ್ಲಿಸದಿರುವ ಬಗ್ಗೆ ವೆಂಕಟೇಶ್ ಎಂಬುವರು ದೂರಿನ ಆಧಾರದಲ್ಲಿ ಆಯುಕ್ತರಿಂದ ಲೋಕಾಯುಕ್ತರು ವಿವರಣೆ ಕೇಳಿದ್ದ ಹಿನ್ನೆಲೆಯಲ್ಲಿ ವಿಷಯ ಚರ್ಚೆಯಾಯಿತು. ‘ಕೆಎಂಸಿ ಕಾಯ್ದೆ ಪ್ರಕಾರ ಮೇಯರ್‌ಗೆ ಮತ್ತು ಲೋಕಾಯುಕ್ತ ಕಾಯ್ದೆ ಪ್ರಕಾರ ಲೋಕಾಯುಕ್ತರಿಗೂ ಆಸ್ತಿ ವಿವರ ಸಲ್ಲಿಸಬೇಕಿದೆ. ಸಲ್ಲಿಸದೆ ಇದ್ದರೆ ₹20 ಸಾವಿರಕ್ಕೂ ಹೆಚ್ಚು ವೇತನ ಪಡೆಯುವವರ ವಿರುದ್ಧ ಕ್ರಮ ಕೈಗೊಳ್ಳಲು ಲೋಕಾಯುಕ್ತ ಕಾಯ್ದೆಯಲ್ಲಿ ಅವಕಾಶ ಇದೆ’ ಎಂದು ಪಾಲಿಕೆ ‌ಕಾನೂನು ಘಟಕದ ಮುಖ್ಯಸ್ಥ ಕೆ.ಡಿ. ದೇಶಪಾಂಡೆ ವಿವರಿಸಿದರು.

‘ನಮ್ಮ ಗೌರವಧನ ₹8,000 ಮಾತ್ರ. ಹೀಗಾಗಿ ನಮ್ಮ ವಿರುದ್ಧ ಕ್ರಮ ಕೈಗೊಳ್ಳಲು ಲೋಕಾಯುಕ್ತ ಕಾನೂನಿನಲ್ಲಿ ಅವಕಾಶ ಇಲ್ಲ. ಆಸ್ತಿ ವಿವರ ಸಲ್ಲಿಸುವುದು ಕಡ್ಡಾಯವೇ ಎಂಬುದರ ಬಗ್ಗೆ ತಜ್ಞರಿಂದ ಕಾನೂನು ಸಲಹೆ ಪಡೆದುಕೊಂಡು ಮುಂದಿನ ಸಭೆಯಲ್ಲಿ ವಿಷಯ ಮಂಡಿಸುವುದು ಸೂಕ್ತ’ ಎಂದು ಹಲವು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

‘ಹಿರಿಯ ಸದಸ್ಯರೊಂದಿಗೆ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT