ಮಂಗಳವಾರ, ಏಪ್ರಿಲ್ 7, 2020
19 °C
ಬಿಬಿಎಂಪಿ ವಿರೋಧ ಪಕ್ಷಗಳ ಸದಸ್ಯರಿಂದ ಸಭಾತ್ಯಾಗ

ಪುರಭವನದ ಎದುರು ಪ್ರತಿಭಟನೆಗೆ ನಿರ್ಬಂಧ: ನಿರ್ಣಯ ಪ್ರತಿ ಹರಿದು ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪುರಭವನದ ಎದುರು ಪ್ರತಿಭಟನೆ ನಡೆಸುವುದನ್ನು ನಿರ್ಬಂಧಿಸಿದ ನಿರ್ಣಯವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ವಿರೋಧ ಪಕ್ಷಗಳ ಸದಸ್ಯರು ಮೇಯರ್ ಪೀಠದ ಮುಂದೆ ಧರಣಿ ನಡೆಸಿದರು. ಈ ಕುರಿತು ಮಂಡಿಸಿದ ನಿಲುವಳಿ ಸೂಚನೆಯನ್ನು ಮೇಯರ್‌ ಎಂ.ಗೌತಮ್‌ ಕುಮಾರ್‌ ತಿರಸ್ಕರಿಸಿದ್ದರಿಂದ ಸಿಟ್ಟಿಗೆದ್ದ ಕಾಂಗ್ರೆಸ್‌ ಸದಸ್ಯರು ನಿರ್ಣಯದ ಪ್ರತಿಯನ್ನು ಹರಿದುಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿದ ಕಾರಣ ಮೇಯರ್‌ ಅವರು ಎರಡು ಬಾರಿ ಸಭೆ ಮುಂದೂಡಿದರು. ಸಭೆ ಆರಂಭವಾಗುತ್ತಿದ್ದಂತೆಯೇ ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ಅವರು, ‘ಪ್ರತಿಭಟನೆ ನಡೆಸು ವುದಕ್ಕೆ ನಿರ್ಬಂಧ ವಿಧಿಸುವುದು ಪ್ರಜಾಪ್ರಭುತ್ವ ವಿರೋಧಿ ನಡೆ. ವಿರೋಧಪಕ್ಷಗಳ ಗಮನಕ್ಕೆ ತಾರದೆಯೇ ಸ್ವಯಂಪ್ರೇರಿತವಾಗಿ ತರಾತುರಿಯಲ್ಲಿ ಈ ನಿರ್ಣಯ ಕೈಗೊಂಡ ಉದ್ದೇಶವನ್ನು ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದರು.

ಕುಡಿಯುವ ನೀರು ಹಾಗೂ ಕಸ ವಿಲೇವಾರಿ ಕುರಿತ ಚರ್ಚೆಯನ್ನು ಆರಂಭಿಸಿದಾಗ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಧರಣಿ ಆರಂಭಿಸಿದರು.

‘ನಿಮಗೆ ಸ್ವಯಂಪ್ರೇರಿತ ನಿರ್ಣಯ ಕೈಗೊಳ್ಳಲು ಅಧಿಕಾರ ಇಲ್ಲ. ಏಳು ದಿನ ಮುಂಚಿತವಾಗಿ ನೋಟಿಸ್ ನೀಡಬೇಕಿತ್ತು. ಈ ನಿರ್ಣಯವೇ ಕಾನೂನುಬಾಹಿರ. ಅದನ್ನು ಹಿಂಪ ಡೆಯಿರಿ' ಎಂದು ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಒತ್ತಾಯಿಸಿ ದರು.

‘ಆಯುಕ್ತರಿಂದ ಉತ್ತರ ಕೊಡಿಸು ತ್ತೇನೆ. ದಯವಿಟ್ಟು ಆಸನಗಳಿಗೆ ಮರಳಿ’ ಎಂದು ಮೇಯರ್ ಮನವಿ ಮಾಡಿದರೂ ವಿರೋಧಪಕ್ಷಗಳ ಸದಸ್ಯರು ಕಿವಿಗೊಡಲಿಲ್ಲ. 'ಆಯುಕ್ತರ ಉತ್ತರ ಬೇಡ.. ನಿರ್ಣಯ ಕೈಬಿಡಿ' ಎಂದು ಎಂದು ಆಗ್ರಹಿಸಿದರು. ಉತ್ತರ ನೀಡಲು ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಎದ್ದು ನಿಂತಾಗ, 'ಸಭೆ ಸಾಂಗವಾಗಿ ನಡೆಯುತ್ತಿಲ್ಲ. ಹಾಗಾಗಿ ಆಯುಕ್ತರು ಉತ್ತರಿಸುವುದು ಸೂಕ್ತ ಅಲ್ಲ’ ಎಂದು ಕಾಂಗ್ರೆಸ್‌ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಗದ್ದಲದ ನಡುವೆಯೇ ಉತ್ತರಿಸಿದ ಆಯುಕ್ತರು, ‘ಪುರಭವನದ ಎದುರು ನಡೆಯುವ ಪ್ರತಿಭಟನೆಗಳಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿದೆ. ಈ ಪ್ರದೇಶದಲ್ಲಿ ಅನೇಕ ಆಸ್ಪತ್ರೆಗಳಿವೆ. ಅಲ್ಲಿಗೆ ಹೋಗುವ ಆಂಬುಲೆನ್ಸ್ ಗಳಿಗೂ ಸಮಸ್ಯೆ ಆಗುತ್ತಿದೆ. ಈ ಬಗ್ಗೆ ಜನರಿಂದ ದೂರುಗಳು ಬಂದಿದ್ದವು. ಪುರಭವನ ದಲ್ಲಿ ಎಂಬ ನಡೆಯುವ ಕಾರ್ಯಕ್ರಮಗಳಿಗೂ ಅಡ್ಡಿ ಉಂಟಾಗುತ್ತೀರುವುದ ರಿಂದ ಪ‍ಾಲಿಕೆ ವರಮಾನಕ್ಕೂ ಧಕ್ಕೆ ಆಗುತ್ತಿದೆ. ಮೇಯರ್ ಗಮನಕ್ಕೆ ತಂದು ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ' ಎಂದರು.

‘ಪ್ರತಿಭಟನೆ ನಡೆಸುವ ಸಲುವಾಗಿ ಸ್ವಾತಂತ್ರ್ಯ ಉದ್ಯಾನ ಹಾಗೂ ಮೌರ್ಯ ವೃತ್ತಗಳ ಬಳಿ ಜಾಗ ಗೊತ್ತುಪಡಿಸಲಾಗಿದೆ’ ಎಂದು ತಿಳಿಸಿದರು. ‘ಸುಮ್ಮನೆ ನೆಪ ಹೇಳಬೇಡಿ. ನಿರ್ಣಯ ಕೈಬಿಡಿ’ ಎಂದು ಪ್ರತಿಪಕ್ಷ ಗಳ ಸದಸ್ಯರು ಮತ್ತೆ ಘೋಷಣೆ ಕೂಗಲು ಆರಂಭಿಸಿದರು. ಆಗ ಮೇಯರ್‌ ಸಭೆಯನ್ನು ಮಧ್ಯಾಹ್ನಕ್ಕೆ ಮುಂದೂಡಿದರು.

ಮಧ್ಯಾಹ್ನದ ಬಳಿಕ ಸಭೆ ಆರಂಭ ವಾದಾಗ ಕಾಂಗ್ರೆಸ್‌ನ ಮಂಜುನಾಥ ರೆಡ್ಡಿ ಕೆಎಂಸಿ ನಿಯಮ 52ರ ಅಡಿ ನಿಲುವಳಿ ಸೂಚನೆ ಮಂಡಿಸಿದರು. ಅದನ್ನು ತಿರಸ್ಕರಿಸಿ ಮೇಯರ್‌ ರೂಲಿಂಗ್‌ ನೀಡಿದರು. ನಿರ್ಬಂಧ ರದ್ದುಪಡಿಸಲು ಮೇಯರ್‌ ಸುತಾರಾಂ ಒಪ್ಪದೇ ಇದ್ದುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸದಸ್ಯರು ಸಭಾತ್ಯಾಗ ನಡೆಸಿದರು.

ಕೌನ್ಸಿಲ್‌ ಸಭೆಗೂ ಮುನ್ನ ಕಾಂಗ್ರೆಸ್‌ ಸದಸ್ಯರು, ‘ಪಾಲಿಕೆ ಪ್ರತಿಭಟನೆ ಹತ್ತಿಕ್ಕುತ್ತಿದೆ’ ಎಂದು ಆರೋಪಿಸಿ ಕೆಂಪೇಗೌಡ ಪೌರ ಸಭಾಂಗಣದ ಎದುರು ಪ್ರತಿಭಟನೆ ನಡೆಸಿದರು.

‘ಪ್ರತಿಭಟನೆಗೆ ಒಂದೇ ಕಡೆ ಜಾಗ ಸಾಕೇ?’
‘ವಿವಿಧ ಸಂಘಟನೆಗಳು ಏಕಕಾಲದಲ್ಲಿ ಒಂದೇ ಕಡೆ ಪ್ರತಿಭಟನೆ ನಡೆಸಲು ಸಾಧ್ಯವೇ. ನಗರದಲ್ಲಿ ಕನಿಷ್ಠ ನಾಲ್ಕೈದು ಕಡೆಗಳಲ್ಲಾದರೂ ಪ್ರತಿಭಟನೆಗೆ ಅವಕಾಶ ಕಲ್ಪಿಸಬೇಕು’ ಎಂದು ಅಬ್ದುಲ್‌ ವಾಜಿದ್‌ ಒತ್ತಾಯಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಪುರಭವನದ ಬಳಿ ಪ್ರತಿಭಟನೆ ನಡೆಸುವ ಸಂಘಟನೆಗಳು ಯಾವತ್ತೂ ಸಾರ್ವಜನಿಕರಿಗೆ ಅಡ್ಡಿಪಡಿಸಿಲ್ಲ. ಬಿಜೆಪಿ ಸಂಸದರ ನೇತೃತ್ವದಲ್ಲೂ ಅಲ್ಲಿ ಪ್ರತಿಭಟನೆ ನಡೆದಿದೆ. ಅಲ್ಲಿ ಪ್ರತಿಭಟನೆ ನಡೆಸುವುದರಿಂದ ಪುರಭವನದ ವರಮಾನಕ್ಕೆ ಅಡ್ಡಿಯಾಗುತ್ತದೆ ಎಂಬ ವಾದದಲ್ಲಿ ಹುರುಳಿಲ್ಲ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು