ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಸಾರಿಗೆ ಸೆಸ್ ಸದ್ಯಕ್ಕಿಲ್ಲ

ಸೆಸ್ ಜಾರಿಗೆ ನಿರ್ಣಯ ಕೈಗೊಂಡೇ ಇಲ್ಲ ಎಂದು ಉಲ್ಟಾ ಹೊಡೆದ ಮೇಯರ್‌
Last Updated 29 ಜನವರಿ 2020, 19:38 IST
ಅಕ್ಷರ ಗಾತ್ರ

ಬೆಂಗಳೂರು: ಆಸ್ತಿ ತೆರಿಗೆ ಜೊತೆಗೆ ಶೇ 2ರಷ್ಟು ನಗರ ಭೂ ಸಾರಿಗೆ ಉಪಕರ (ಸೆಸ್‌) ಸಂಗ್ರಹಿಸುವುದಕ್ಕೆ ಪ್ರತಿಪಕ್ಷ ಕಾಂಗ್ರೆಸ್‌ನಿಂದ ತೀವ್ರ ಪ್ರತಿರೋಧವ್ಯಕ್ತವಾಗಿದ್ದರಿಂದ ಬಿಬಿಎಂಪಿ ನಿಲುವು ಬದಲಾಯಿಸಿದೆ.

ನಗರ ಭೂ ಸಾರಿಗೆ ಉಪಕರ ಸಂಗ್ರಹಿಸುವ ನಿರ್ಣಯಕ್ಕೆ ಪಾಲಿಕೆಯ ಕೌನ್ಸಿಲ್‌ ಸಭೆಯಲ್ಲಿ ಬುಧವಾರ ಪ್ರತಿಪಕ್ಷ ಕಾಂಗ್ರೆಸ್‌ ತೀವ್ರ ವಿರೋಧ ವ್ಯಕ್ತಪಡಿಸಿತು. ಸಭೆಯ ಆರಂಭದಲ್ಲೇ ಈ ವಿಚಾರ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌, ‘ನಿನ್ನೆ ಸಭೆಯಲ್ಲಿ ತರಾತುರಿಯಲ್ಲಿ ನಿರ್ಣಯ ಮಂಡಿಸುವಾಗ ಈ ಪ್ರಸ್ತಾಪ ಮುಂದೂಡುವುದಾಗಿ ಹೇಳಿದ್ದಿರಿ. ಹೊರಗಡೆ ಮಾಧ್ಯಮದವರ ಬಳಿ ಸೆಸ್‌ ಸಂಗ್ರಹಿಸುವುದಾಗಿ ಹೇಳಿಕೆ ನೀಡಿದ್ದೀರಿ. ಈ ಗೊಂದಲವನ್ನು ಏಕೆ ಸೃಷ್ಟಿಸುತ್ತೀರಿ’ ಎಂದು ಮೇಯರ್‌ ಎಂ.ಗೌತಮ್‌ ಕುಮಾರ್‌ ಅವರನ್ನು ಪ್ರಶ್ನಿಸಿದರು.

‘ಸೆಸ್‌ ವಿಧಿಸುವ ಪ್ರಸ್ತಾಪವನ್ನುವಿರೋಧ ಪಕ್ಷದಲ್ಲಿದ್ದಾಗ ನೀವೇ ವಿರೋಧಿಸಿದ್ದಿರಿ. ಈಗ ತೆರಿಗೆದಾರರಿಗೆ ಹೊರೆಯಾಗುವ ಈ ನಿರ್ಣಯ ಜಾರಿಗೊಳಿಸುವ ಉದ್ದೇಶವಾದರೂ ಏನು. ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು. ಸೆಸ್‌ ವಿಧಿಸುವ ನಿರ್ಣಯವನ್ನು ಕೈಬಿಡಬೇಕು’ ಎಂದು ಒತ್ತಾಯಿಸಿದರು.

‘ಜನರಿಗೆ ಹೊರೆ ಹೊರಿಸುವ ಕೆಲಸವನ್ನು ಯಾರೂ ಮಾಡುವುದಿಲ್ಲ. ನಾವು ಈ ಬಗ್ಗೆ ನಿರ್ಣಯವನ್ನು ಕೈಗೊಂಡೇ ಇಲ್ಲ’ ಎಂದು ಮೇಯರ್‌ ತಿಳಿಸಿದರು.

‘ಮತ್ತಷ್ಟು ಗೊಂದಲ ಮೂಡಿಸಬೇಡಿ. ಈ ಸೆಸ್‌ ಸಂಗ್ರಹಿಸಲಾಗುತ್ತದೋ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಿ. ಇಲ್ಲದಿದ್ದರೆ ಸಭೆ ನಡೆಸಲು ಅವಕಾಶ ನೀಡುವುದಿಲ್ಲ’ ಎಂದು ವಿರೋಧ ಪಕ್ಷದ ಸದಸ್ಯರು ಮೇಯರ್‌ ಪೀಠದ ಮುಂದೆ ಧರಣಿ ಕುಳಿತುಕೊಳ್ಳಲು ಮುಂದಾದರು.

‘ಸೆಸ್‌ ಸಂಗ್ರಹಿಸುವ ಪ್ರಸ್ತಾವನೆಯನ್ನು ಮುಂದೂಡಲಾಗಿದೆ’ ಎಂದು ಮೇಯರ್‌ ಸ್ಪಷ್ಟನೆ ನೀಡಿದ ಬಳಿಕ ಪ್ರತಿಪಕ್ಷದ ಸದಸ್ಯರು ಆಸನಗಳಿಗೆ ಮರಳಿದರು.

ಮಂಗಳವಾರದ ಕೌನ್ಸಿಲ್‌ ಸಭೆಯ ನಿರ್ಣಯಗಳ ಕುರಿತು ಪಾಲಿಕೆ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಮಾಹಿತಿಯಲ್ಲೂ ‘ನಗರ ಭೂಸಾರಿಗೆ ಸೆಸ್‌ ಸಂಗ್ರಹಿಸುವ ಕುರಿತು ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಗಿದೆ’ ಎಂದೇ ತಿಳಿಸಲಾಗಿತ್ತು.

‘ರಸ್ತೆ, ಚರಂಡಿಗಳು ಹಾಗೂ ಬೀದಿದೀಪಗಳನ್ನು ಪಾಲಿಕೆ ವತಿಯಿಂದಲೇ ನಿರ್ವಹಿಸಲಾಗುತ್ತಿದೆ. ಹಾಗಾಗಿ ಸೆಸ್‌ನಿಂದ ಸಂಗ್ರಹಿಸುವ ಹಣವನ್ನು ಭೂಸಾರಿಗೆ ಇಲಾಖೆಗೆ ನೀಡುವ ಬದಲು ಪಾಲಿಕೆಯಲ್ಲೇ ಬಳಸಲು ಸರ್ಕಾರವನ್ನು ಕೋರಲು ಆಯುಕ್ತರು ಅಗತ್ಯ ಕ್ರಮವಹಿಸಬೇಕು’ ಎಂದೂ ಉಲ್ಲೇಖಿಸಲಾಗಿತ್ತು. ಮೇಯರ್‌ ಅವರುಸುದ್ದಿಗೋಷ್ಠಿಯಲ್ಲೂ ಈ ಬಗ್ಗೆ ಹೇಳಿಕೆ ನೀಡಿದ್ದರು. ‘ಸೆಸ್‌ ಸಂಗ್ರಹದಿಂದ ಪಾಲಿಕೆಗೆ ₹ 150 ಕೋಟಿ ವರಮಾನ ಬರಲಿದೆ’ ಎಂದೂ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT