ಅನಧಿಕೃತ ಕೇಬಲ್‌ ತೆರವು: ಉಪಮುಖ್ಯಮಂತ್ರಿ ಭರವಸೆ

7

ಅನಧಿಕೃತ ಕೇಬಲ್‌ ತೆರವು: ಉಪಮುಖ್ಯಮಂತ್ರಿ ಭರವಸೆ

Published:
Updated:
ನಗರದ ಕಬ್ಬನ ಉದ್ಯಾನದಲ್ಲಿರುವ (ಮಿನ್ಸ್ಕ್ ಸ್ಕ್ವೇರ್ ಬಳಿ) ಬೃಹತ್ತ ಮರಕ್ಕೆ ಆಪ್ಟಿಕಲ್ ಫೈಬರ್ ಕೇಬಲ್ ಸುತ್ತಿರುವುದು -ಪ್ರಜಾವಾಣಿ ಚಿತ್ರThe cables are tangled by the branches of the tree. The city is surrounded by wire lines problem.

ಬೆಂಗಳೂರು: ಅನುಮತಿ ಪಡೆಯದೆ ಒಎಫ್‌ಸಿ ಕೇಬಲ್‌ ಅಳವಡಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಸ್ಪಷ್ಟಪಡಿಸಿದರು.

ವಿಧಾನ ಪರಿಷತ್‌ನಲ್ಲಿ ಮಂಗಳವಾರ ಕಾಂಗ್ರೆಸ್‌ನ ಪಿ.ಆರ್‌.ರಮೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಾರ್ವಜನಿಕರಿಗೆ ಅಡ್ಡಿಯುಂಟು ಮಾಡುತ್ತಿರುವ ಅನಧಿಕೃತ ಕೇಬಲ್‌ಗಳನ್ನು ತೆರವುಗೊಳಿಸಲಾಗುವುದು’ ಎಂದು ಭರವಸೆ ನೀಡಿದರು.

ದೂರವಾಣಿ, ಇಂಟರ್ನೆಟ್‌ ಸೇವೆ ಹಾಗೂ ದೂರವಾಣಿಯೇತರ ಸಂಸ್ಥೆಗಳು ಕೇಬಲ್‌ ಅಳವಡಿಸುವುದಕ್ಕೆ ಬಿಬಿಎಂಪಿ ವತಿಯಿಂದ ಪರವಾನಗಿ ನೀಡಲಾಗುತ್ತದೆ. ಇದಕ್ಕೆ ಶುಲ್ಕ ನಿಗದಿ ಪಡಿಸಲಾಗಿದೆ. ಇಂತಹ ಸಂಸ್ಥೆಗಳು ಅಕ್ರಮ ನಡೆಸಿದರೆ ಪತ್ತೆ ಹಚ್ಚುವುದು ಸುಲಭ. ಆದರೆ, ಅನೇಕರು ಬಿಬಿಎಂಪಿ ಗಮನಕ್ಕೆ ತರದೆ ತಮಗಿಷ್ಟಬಂದಂತೆ ಕೇಬಲ್‌ ಅಳವಡಿಸುತ್ತಿದ್ದಾರೆ ಎಂದು ಹೇಳಿದರು.

ಟೆಂಡರ್‌ಶ್ಯೂರ್‌ ರಸ್ತೆಗಳಲ್ಲಿ ಕೇಬಲ್‌ಗಳನ್ನು ಅಳವಡಿಸುವುದಕ್ಕೆಂದೇ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೂ ಇಂತಹ ರಸ್ತೆಗಳ ಬಳಿಯೂ ಕೇಬಲ್‌ಗಳು ನೇತಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಕಟ್ಟಡ ಸಕ್ರಮಕ್ಕೆ ಹೊಸ ಕಾನೂನು

ಕೆಎಂಸಿ ಬೈಲಾ ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಗಳನ್ನು ತೆರವುಗೊಳಿಸುವ ಅಥವಾ ದಂಡ ಕಟ್ಟಿಸಿಕೊಂಡು ಸಕ್ರಮಗೊಳಿಸುವುದಕ್ಕೆ ಸಂಬಂಧಿಸಿದಂತೆ ಹೊಸ ಕಾನೂನು ತರಲು ಚಿಂತನೆ ನಡೆಸಲಾಗಿದೆ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ತಿಳಿಸಿದರು.

ವಿಧಾನಪರಿಷತ್ತಿನಲ್ಲಿ ಬಿಜೆಪಿಯ ಅ.ದೇವೇಗೌಡ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡಿದ ಅವರು, ಈ ಸಂಬಂಧ ಕಾನೂನು ಪಂಡಿತರ ಜತೆ ಚರ್ಚೆ ನಡೆಸುವುದಾಗಿಯೂ ತಿಳಿಸಿದರು.

ದಂಡವನ್ನು ವಿಧಿಸುವುದರಿಂದ ₹ 5000 ಕೋಟಿ ಗೂ ಅಧಿಕ ಸಂಪನ್ಮೂಲ ಸಂಗ್ರಹವಾಗುತ್ತದೆ ಎಂದರು.

‘ಯುವತಿ ಬದುಕು ಕಸಿದ ಕೇಬಲ್‌’

ಹೊರಮಾವು ಬಳಿ ಯುವತಿಯೊಬ್ಬರು ದ್ವಿಚಕ್ರ ವಾಹನದಲ್ಲಿ ಸಾಗುವಾಗ ಅವರ ಕುತ್ತಿಗೆಗೆ ಕೇಬಲ್‌ ಸಿಲುಕಿತು. ಕೆಳಗೆ ಬಿದ್ದು ಗಾಯಗೊಂಡ ಯುವತಿ ಈಗ ಜೀವಚ್ಛವವಾಗಿದ್ದಾರೆ. ಆಕೆಯ ತಂದೆ ಕುಟುಂಬವನ್ನು ಬಿಟ್ಟುಹೋಗಿದ್ದಾರೆ. ತಾಯಿ ಮನೆ ಕೆಲಸಕ್ಕೆ ಹೋಗಿ ಹೊಟ್ಟೆ ತುಂಬಿಸಬೇಕಾದ ಪರಿಸ್ಥಿತಿ ಇದೆ ಎಂದು ಕಾಂಗ್ರೆಸ್‌ನ ಪಿ.ಆರ್‌.ರಮೇಶ್‌ ತಿಳಿಸಿದರು.

ಯುವತಿಯ ಹಾಸಿಗೆಯಲ್ಲಿ ಮಲಗಿರುವ ಚಿತ್ರ ಹಾಗೂ ಆಕೆಯ ಅಪಘಾತಕ್ಕೆ ಮುಂಚಿನ ಚಿತ್ರಗಳನ್ನು ಅವರು ಪ್ರದರ್ಶಿಸಿದರು.

ಗಾಯಾಳು ಯುವತಿಯ ಕುಟುಂಬಕ್ಕೆ ಬಿಬಿಎಂಪಿ ₹ 3.45 ಲಕ್ಷ ಪರಿಹಾರ ನೀಡಿ ಕೈತೊಳೆದುಕೊಂಡಿದೆ. ಯುವತಿ ಈಗಲೂ ಬದುಕಿದ್ದರೆ, ಅದಕ್ಕೆ ಸ್ನೇಹಿತರು ಕಾರಣ. ಔಷಧ ವೆಚ್ಚಕ್ಕೂ ಕುಟುಂಬದ ಬಳಿ ದುಡ್ಡಿಲ್ಲ. ಸರ್ಕಾರ ಇನ್ನಾದರೂ ಈ ಕುಟುಂಬಕ್ಕೆ ನೆರವಾಗಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕೇಬಲ್‌ ಅಳವಡಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಅಂಕಿ ಅಂಶ

* 8,860 ಕಿ.ಮೀ ಬಿಬಿಎಂಪಿ ಅನುಮತಿ ಪಡೆದು ನಗರದಲ್ಲಿ ಅಳವಡಿಸಿರುವ ಕೇಬಲ್‌ ಉದ್ದ

* ₹ 620 ಕೋಟಿ ಕೇಬಲ್‌ ಅಳವಡಿಕೆ ಶುಲ್ಕದಿಂದ ಸಂಗ್ರಹವಾದ ಮೊತ್ತ

* ₹ 25 ಲಕ್ಷ ಅನುಮತಿ ಪಡೆಯದೆ ಕೇಬಲ್‌ ಅಳವಡಿಸಿದರೆ ಬಿಬಿಎಂಪಿ ವಿಧಿಸುವ ದಂಡ

* ₹ 10 ಲಕ್ಷ ಅನುಮತಿ ಪಡೆಯದೆ ರಸ್ತೆ ಅಗೆದರೆ ವಿಧಿಸುವ ದಂಡ

* 1,260 ಅನಧಿಕೃತ ಕೇಬಲ್‌ ಅಳವಡಿಕೆ ಸಂಬಂಧ 2013ರಿಂದ ಇದುವರೆಗೆ ದಾಖಲಾದ ಪ್ರಕರಣ

**

ಜನರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಕೇಬಲ್‌ ಬೇಕು ನಿಜ. ಆದರೆ ಅದೇ ಅನನುಕೂಲವಾಗಿ ಪರಿಣಮಿಸಬಾರದು
-ಪಿ.ಆರ್‌.ರಮೇಶ್, ಕಾಂಗ್ರೆಸ್‌ ಸದಸ್ಯ

Tags: 

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !