ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಚಿಕಿತ್ಸೆ– 12 ಸಾವಿರ ಹಾಸಿಗೆ ಸಜ್ಜುಗೊಳಿಸಲು ಬಿಬಿಎಂಪಿ ಸೂಚನೆ

ಹಾಸಿಗೆ ಕೊರತೆ ನೀಗಿಸಲು ಬಿಬಿಎಂಪಿ ಕ್ರಮ * ಆಸ್ಪತ್ರೆಗಳಿಗೆ ಅಲೆಯುವ ಸ್ಥಿತಿ ಬಾರದಿರಲಿ: ಗೌರವ್‌ ಗುಪ್ತ
Last Updated 6 ಜನವರಿ 2022, 20:38 IST
ಅಕ್ಷರ ಗಾತ್ರ

ಬೆಂಗಳೂರು: ’ನಗರದಲ್ಲಿ ಕೋವಿಡ್ ಸೋಂಕಿತರು ಹಾಸಿಗೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ಎದುರಾಗಬಾರದು. ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆ ಆಗಬಾರದು. ತೀವ್ರ ನಿಗಾ ಘಟಕದ (ಐಸಿಯು) ಕೊರತೆಯೂ ಇರಬಾರದು. ಹಾಸಿಗೆ ಹಂಚಿಕೆ ವ್ಯವಸ್ಥೆ ಪಾರದರ್ಶಕವಾಗಿರಬೇಕು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ಪ್ರಕರಣಗಳು ತ್ವರಿತಗತಿಯಲ್ಲಿ ಏರಿಕೆಯಾಗುತ್ತಿವೆ. ಇದನ್ನು ಸಮರ್ಥವಾಗಿ ನಿಭಾಯಿಸಲು ಇದೇ 16ರ ವೇಳೆಗೆ ನಗರದಲ್ಲಿ ಕೋವಿಡ್‌ ಸೋಂಕಿತರ ಚಿಕಿತ್ಸೆಗೆ 12 ಸಾವಿರದಷ್ಟು ಹಾಸಿಗೆಗಳು ಲಭ್ಯವಿರಬೇಕು ಎಂದು ತಾಕೀತು ಮಾಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಆಸ್ಪತ್ರೆ ಹಾಸಿಗೆ ನಿರ್ವಹಣಾ ವ್ಯವಸ್ಥೆ (ಸಿಎಚ್‌ಬಿಎಂಎಸ್) ಕುರಿತು ವರ್ಚುವಲ್ ರೂಪದಲ್ಲಿ ಗುರುವಾರ ಏರ್ಪಡಿಸಿದ್ದಸಭೆಯಲ್ಲಿ ಅವರು ಮಾತನಾಡಿದರು.

‘ನೋಡಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಹಾಸಿಗೆಗಳನ್ನು ಮೀಸಲಿಡಲು ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಎಷ್ಟು ಹಾಸಿಗೆಗಳು ಲಭ್ಯ ಇವೆ, ಎಷ್ಟು ಭರ್ತಿಯಾಗಿವೆ, ಎಷ್ಟು ಖಾಲಿ ಇವೆ ಎಂಬುದರ ನಿಖರ ಮಾಹಿತಿ ಸಂಗ್ರಹಿಸಬೇಕು’ ಎಂದರು.

‘ನಗರದಲ್ಲಿ ಪ್ರತಿನಿತ್ಯ 60 ಸಾವಿರದಷ್ಟು ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಆಸ್ಪತ್ರೆಗಳಿಗೆ ದಾಖಲಾಗುವವರ ಪ್ರಮಾಣ ನಿತ್ಯ
ಸರಾಸರಿ 20 ರಿಂದ 60ಕ್ಕೆ ಏರಿಕೆಯಾಗಿದೆ. ಕೋವಿಡ್ ಚಿಕಿತ್ಸೆಗಾಗಿ ಸಿ.ವಿ.ರಾಮನ್ ನಗರದ ಜನರಲ್ ಆಸ್ಪತ್ರೆ, ಕೆ.ಸಿ.ಜನರಲ್ ಆಸ್ಪತ್ರೆ, ಜಯನಗರ ಆಸ್ಪತ್ರೆ ಹಾಗೂ ಬೌರಿಂಗ್ ಆಸ್ಪತ್ರೆಗಳನ್ನು ಮೀಸಲಿಡಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆ ಸಾಕಷ್ಟಿದೆ. ನಗರದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳವಾದರೂ ಗಾಬರಿಪಡುವ ಅಗತ್ಯವಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ವ್ಯವಸ್ಥೆ ಮಾಡಿಕೊಳ್ಳುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಬಹುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಸೋಂಕಿತರಿಗೆ ಯಾವ ತರಹದ ಚಿಕಿತ್ಸೆಯ ಅವಶ್ಯಕತೆ ಇದೆ ಎಂದು ನಿರ್ಧರಿಸುವ ಸಲುವಾಗಿ ಪಾಲಿಕೆಯ ಟೆಲಿ ಟ್ರಯಾಜಿಂಗ್ ತಂಡ ಹಾಗೂ ಆಯಾ ವಾರ್ಡ್ ವ್ಯಾಪ್ತಿಯ ಸಂಚಾರ ಟ್ರಯಾಜಿಂಗ್ ತಂಡಗಳು ಅವರ ಆರೋಗ್ಯ ಪರಿಸ್ಥಿತಿ ಅವಲೋಕಿಸಲಿವೆ. ಅವಶ್ಯಕತೆ ಇರುವ ಸೋಕಿತರನ್ನು ಮಾತ್ರ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲು ಕ್ರಮ ಕೈಗೊಳ್ಳಬೇಕು. ಕೆಲವು ಸೋಂಕಿತರಲ್ಲಿ ರೋಗ ಲಕ್ಷಣ ಇರುವುದಿಲ್ಲ. ಅಂತಹವರು ಮನೆಯಲ್ಲಿಯೇ ಚಿಕಿತ್ಸೆ ಪಡೆದು ಗುಣಮುಖರಾಗಬಹುದು. ಟ್ರಯಾಜಿಂಗ್ ಸರಿಯಾಗಿ ನಡೆದರೆ ಅರ್ಧ ಸಮಸ್ಯೆ ಬಗೆಹರಿದಂತೆ’ ಎಂದರು.

‘ಟ್ರಯಾಜಿಂಗ್ ನಡೆಸಲು ಹೆಚ್ಚುವರಿ ಸಿಬ್ಬಂದಿಯನ್ನು ವಲಯವಾರು ನಿಯೋಜನೆ ಮಾಡಿಕೊಳ್ಳಬೇಕು. ಜೊತೆಗೆ ವಲಯ ಸಂಯೋಜಕರು ಇದರ ಬಗ್ಗೆ ನಿಗಾ ಇಡಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಿಎಚ್‌ಬಿಎಂಎಸ್ ತಂಡದ ನಾಯಕ ಕುಮಾರ್ ಪುಷ್ಕರ್, ಸದಸ್ಯರಾದ ಬಿಶ್ವಜಿತ್ ಮಿಶ್ರ, ವಿಶೇಷ ಆಯುಕ್ತ (ಆರೋಗ್ಯ) ಡಾ. ಕೆ.ವಿ.ತ್ರಿಲೋಕಚಂದ್ರ, ವಲಯ ಆಯುಕ್ತರು ಉಪಸ್ಥಿತರಿದ್ದರು.

***

ಕೋವಿಡ್‌ ಚಿಕಿತ್ಸೆಗೆ ಹಾಸಿಗೆಗಳ ಕೊರತೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದೇವೆ. ಸೋಂಕಿತರಿಗೆ ಸುಲಭವಾಗಿ ಚಿಕಿತ್ಸೆ ಲಭ್ಯವಾಗುವಂತೆ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಂಡಿದ್ದೇವೆ.

- ಗೌರವ್‌ ಗುಪ್ತ, ಮುಖ್ಯ ಆಯುಕ್ತ, ಬಿಬಿಎಂಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT