ಸೋಮವಾರ, ಜನವರಿ 25, 2021
27 °C
ಬಿಬಿಎಂಪಿ: ಬೆಳ್ಳಹಳ್ಳಿ ಕ್ವಾರಿಯಲ್ಲಿ ವೈಜ್ಞಾನಿಕ ನಿರ್ವಹಣೆ ಕಾಮಗಾರಿ ಕುರಿತ ಮಾಹಿತಿಗಳು

ಐಎಫ್‌ಎಂಎಸ್‌ನಲ್ಲಿ ವಿವರ ಕಣ್ಮರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಳ್ಳಹಳ್ಳಿ ಕ್ವಾರಿಯಲ್ಲಿ 2019ರಲ್ಲಿ ನಡೆಸಿದ್ದ ವೈಜ್ಞಾನಿಕ ನಿರ್ವಹಣೆಗಳಿಗೆ ಕಸ ನಿರ್ವಹಣೆ ಕಾಮಗಾರಿ ಕುರಿತ ವಿವರಗಳು ಬಿಬಿಎಂಪಿಯ ಐಎಫ್‌ಎಂಎಸ್‌ ತಂತ್ರಾಂಶದಲ್ಲಿ ದಿಢೀರ್‌ ಕಣ್ಮರೆಯಾಗಿದ್ದು, ಅನುಮಾನಗಳಿಗೆ ಕಾರಣವಾಗಿದೆ.

ಮಿಶ್ರಕಸದ ಭೂಭರ್ತಿ ಕೇಂದ್ರಗಳ ವೈಜ್ಞಾನಿಕ ನಿರ್ವಹಣೆಯ ತುರ್ತು ಉದ್ದೇಶಕ್ಕಾಗಿ ₹ 100.94 ಕೋಟಿ ವೆಚ್ಚದ ಕಾಮಗಾರಿಯನ್ನು ಟೆಂಡರ್‌ ಕರೆಯದೆ ಕೆಆರ್‌ಐಡಿಎಲ್‌ ಮೂಲಕ ನಡೆಸಲು ನಗರಾಭಿವೃದ್ಧಿ ಇಲಾಖೆ ಅನುಮತಿ ನೀಡಿತ್ತು. ಬಳಿಕ ಹೆಚ್ಚುವರಿಯಾಗಿ ₹ 15 ಕೋಟಿ ವೆಚ್ಚದ ಕಾಮಗಾರಿಗೂ ಕೆಟಿಟಿಪಿ ಕಾಯ್ದೆಯ 4ಜಿ ಕಲಂ ಅಡಿ ವಿನಾಯಿತಿ ಕೊಟ್ಟಿತ್ತು. ಆದರೆ, ಪಾಲಿಕೆಯು ಮೇಯರ್‌ ಅನುದಾನ ಬಳಸಿ ₹ 53 ಕೋಟಿ ಅಂದಾಜು ವೆಚ್ಚದ ಕಾಮಗಾರಿಯನ್ನೂ ಟೆಂಡರ್‌ ಕರೆಯದೆಯೇ ನಡೆಸಿತ್ತು. ಕೆಟಿಪಿಪಿ ಕಾಯ್ದೆಯ 4ಜಿ ಕಲಂ ಅಡಿ ವಿನಾಯಿತಿ ಪಡೆದ ಮೊತ್ತಕ್ಕಿಂತ ಬಿಬಿಎಂಪಿ ₹ 50.53 ಕೋಟಿ ಹೆಚ್ಚು ಮೊತ್ತದ ಕಾಮಗಾರಿ ನಡೆಸಿ, ಹಣವನ್ನೂ ಪಾವತಿಸಿತ್ತು. 

ನಗರಾಭಿವೃದ್ಧಿ ಇಲಾಖೆಯ ಆಡಳಿತಾತ್ಮಕ ಅನುಮೋದನೆ ಇಲ್ಲದೆಯೇ ಕೆಆರ್‌ಐಡಿಎಲ್‌ ಮೂಲಕ ಈ ಕಾಮಗಾರಿ ನಡೆಸಲಾಗಿತ್ತು. ಬೆಳ್ಳಹಳ್ಳಿ ಕ್ವಾರಿಯ 2019ರ ಆಗಸ್ಟ್‌ ಹಾಗೂ ಸೆಪ್ಟೆಂಬರ್ ತಿಂಗಳುಗಳ ವೈಜ್ಞಾನಿಕ ನಿರ್ವಹಣೆಗಳಿಗೆ ಕಸ ನಿರ್ವಹಣೆಯ ಲೆಕ್ಕ ಶೀರ್ಷಿಕೆಯ (ಪಿ–1521) ಬದಲು ಮೇಯರ್‌ ಆದೇಶದಡಿ ನಡೆಸುವ ಕಾಮಗಾರಿಗಳ ಲೆಕ್ಕಶೀರ್ಷಿಕೆಯಡಿ (ಪಿ–0190) ಜಾಬ್‌ ಕೋಡ್‌ ನೀಡಲಾಗಿತ್ತು. ಯಾವುದೇ ಕಾಮಗಾರಿ ಆರಂಭವಾಗುವುದಕ್ಕೆ ಮುನ್ನವೇ ಜಾಬ್‌ಕೋಡ್‌ ನೀಡುವುದು ವಾಡಿಕೆ.

ಆದರೆ, ಈ ಪ್ರಕರಣದಲ್ಲಿ 2019ರ ಆಗಸ್ಟ್‌ ತಿಂಗಳ ಕಾಮಗಾರಿಯ ಜಾಬ್‌ಕೋಡ್‌ ಅನ್ನು ಸೆಪ್ಟೆಂಬರ್‌ 17ರಂದು ನೀಡಲಾಗಿತ್ತು! ಆಗಸ್ಟ್‌ ತಿಂಗಳ ಕಾಮಗಾರಿಗೆ ಕಸ ನಿರ್ವಹಣೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಅಕ್ಟೋಬರ್‌ 3ರಂದು ಆಡಳಿತಾತ್ಮಕ ಅನುಮೋದನೆ ನೀಡಿದ್ದಾರೆ. ಕೆಆರ್‌ಐಡಿಎಲ್‌ಗೆ ವಹಿಸಿದ ಈ ಕಾಮಗಾರಿಗೂ ನಗರಾಭಿವೃದ್ಧಿ ಇಲಾಖೆಯ ಅನುಮೋದನೆ ಹಾಗೂ 4ಜಿ ವಿನಾಯಿತಿ ಪಡೆದಿರಲಿಲ್ಲ.

ಆಗಸ್ಟ್‌ ತಿಂಗಳ ನಿರ್ವಹಣೆ ಕಾಮಗಾರಿಗಳಿಗೆ ಯಲಹಂಕ ವಲಯದ ಮುಖ್ಯ ಎಂಜಿನಿಯರ್‌ ತಾಂತ್ರಿಕ ಅನುಮೋದನೆ ನೀಡಿದ್ದು, 2019ರ ನ.8ರಂದು. ಆದರೆ,  ನ.11ರಂದು ಕೆಆರ್‌ಐಡಿಎಲ್‌ಗೆ ಕಾರ್ಯಾದೇಶ ನೀಡಲಾಗಿತ್ತು. ನ.11ರಿಂದ ಡಿ.10ರ ನಡುವೆ ₹ 1.97 ಕೋಟಿಯ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ದಾಖಲೆಗಳಲ್ಲಿ ನಮೂದಿಸಲಾಗಿತ್ತು. ನ.11ರಿಂದ ಡಿ.10ರವರೆಗೆ ಸೆಪ್ಟೆಂಬರ್‌ ತಿಂಗಳ ನಿರ್ವಹಣೆ ಕಾಮಗಾರಿಯನ್ನೂ ಇದೇ ಕ್ವಾರಿಯಲ್ಲಿ ನಡೆಸಲಾಗಿದೆ ಎಂದು ₹ 1.99 ಕೋಟಿ ಬಿಲ್‌ ಬರೆದಿದ್ದರು.

ಹೆಚ್ಚೂ ಕಡಿಮೆ ತಲಾ ₹ 2 ಕೋಟಿ ವೆಚ್ಚದ ಒಟ್ಟು 14 ಬಿಲ್‌ಗಳೂ ಸೇರಿದಂತೆ ಒಟ್ಟು 17 ಬಿಲ್‌ಗಳನ್ನು ಇದೇ ರೀತಿ ಮಂಜೂರು ಮಾಡಿಸಿಕೊಳ್ಳಲಾಗಿತ್ತು. ಈಗ ಈ ಬಿಲ್‌ಗಳಲ್ಲಿ ಕಾಮಗಾರಿ ಸಂಖ್ಯೆ 310–20–000030 (ಜತಿನ್‌ ಇನ್‌ಫ್ರಾ ಫ್ರೈ ಲಿಮಿಟೆಡ್‌) ಹಾಗೂ 310–19–000004 ಗಳು ಹೊರತಾಗಿ ಉಳಿದೆಲ್ಲ ಕಾಮಗಾರಿಗಳ ವಿವರಗಳು ಐಎಫ್ಎಂಎಸ್‌ನಲ್ಲಿ ಇಲ್ಲ!

ವಿವರ ಕಣ್ಮರೆ ಏನಿದರ ಮರ್ಮ?
ಐಎಫ್‌ಎಂಎಸ್‌ನಲ್ಲಿ ಕಾಮಗಾರಿ ವಿವರ ಕಣ್ಮರೆ ಆಗಿರುವ ಬಗ್ಗೆ ಹಣಕಾಸು ವಿಭಾಗದ ಅಧಿಕಾರಿಗಳಲ್ಲಿ ವಿಚಾರಿಸಿದಾಗ, ‘ಟಿವಿಸಿಸಿ ವರದಿ ಆಧಾರದಲ್ಲಿ ವಿವರಗಳನ್ನು ಮಾರ್ಪಾಡು ಮಾಡಲಾಗುತ್ತದೆ’ ಎಂದು ಸಮಜಾಯಿಷಿ ನೀಡಿದರು. ಈ ಬಗ್ಗೆ ಟಿವಿಸಿಸಿ ಅಧಿಕಾರಿಗಳನ್ನು ವಿಚಾರಿಸಿದಾಗ, ‘ಅಪ್‌ಲೋಡ್‌ ಮಾಡಿದ ದಾಖಲೆಗಳು ಸಮರ್ಪಕವಾಗಿಲ್ಲದಿದ್ದರೆ, ಸರಿಯಾದ ದಾಖಲೆ ಅಪ್‌ಲೋಡ್‌ ಮಾಡುವಂತೆ ನಾವು ಸೂಚಿಸುತ್ತೇವೆಯೇ ಹೊರತು, ಅಪ್‌ಲೋಡ್‌ ಮಾಡಿದ ವಿವರ ಡಿಲೀಟ್‌ ಮಾಡುವಂತೆ ಯಾವತ್ತೂ ಹೇಳುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಒಂದೇ ಕಾಮಗಾರಿಗೆ ಎರಡೆರಡು ಬಾರಿ ಬಿಲ್‌ ಪಾವತಿ ಆಗಬಾರದು ಎಂಬ ಕಾರಣಕ್ಕೆ ಐಎಫ್‌ಎಂಎಸ್‌ ರೂಪಿಸಲಾಗಿದೆ. ಒಮ್ಮೆ ಅಪ್‌ಲೋಡ್‌ ಮಾಡಿದ ವಿವರ ಡಿಲೀಟ್‌  ಮಾಡಿದರೆ ಮತ್ತೆ ಅದೇ ಕಾಮಗಾರಿ ಸಂಖ್ಯೆ ದಾಖಲಿಸಿ ಬಿಲ್‌ ಮಾಡಿಸಿಕೊಳ್ಳುವ ಅಪಾಯವೂ ಇರುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು