ಸೋಮವಾರ, ನವೆಂಬರ್ 30, 2020
20 °C
ಬಿಬಿಎಂಪಿಯ 100 ವಾರ್ಡ್‌ಗಳಲ್ಲಿ ಇ–ಆಸ್ತಿ ತಂತ್ರಾಂಶ ವ್ಯವಸ್ಥೆ ಜಾರಿ

ಮನೆಯಿಂದಲೇ ಖಾತಾ ನೋಂದಣಿ–ವರ್ಗಾವಣೆ ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇ–ಆಸ್ತಿ ತಂತ್ರಾಂಶದ ಬಗ್ಗೆ ಎನ್. ಮಂಜುನಾಥಪ್ರಸಾದ್ ಮಾಹಿತಿ ನೀಡಿದರು. ಗೌರವ್ ಗುಪ್ತ ಇದ್ದಾರೆ

ಬೆಂಗಳೂರು: ಮನೆಯಲ್ಲಿ ಕುಳಿತೇ ತ್ವರಿತವಾಗಿ ಮತ್ತು ಸುಲಭವಾಗಿ ಆಸ್ತಿ ಖಾತಾ ನೋಂದಣಿ, ವರ್ಗಾವಣೆ ಮತ್ತು ವಿಭಜನೆ ಸೇರಿದಂತೆ ಹಲವು ಸೇವೆಗಳನ್ನು ಪಡೆಯಬಹುದಾದ ಇ–ಆಸ್ತಿ ತಂತ್ರಾಂಶಕ್ಕೆ ಬಿಬಿಎಂಪಿಯು ಶುಕ್ರವಾರ ಚಾಲನೆ ನೀಡಿದೆ.

ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ, ‘ಬಿಬಿಎಂಪಿಯ ಶಾಂತಲಾನಗರ, ನೀಲಸಂದ್ರ ಮತ್ತು ಶಾಂತಿನಗರ ವಾರ್ಡ್‌ಗಳ ಮಾಹಿತಿ ಶುಕ್ರವಾರದಿಂದ, ಉಳಿದ 97 ವಾರ್ಡ್‌ಗಳ ಕಂದಾಯ ಸೇವೆಗಳ ಮಾಹಿತಿಯನ್ನು ಇನ್ನೆರಡು ವಾರಗಳಲ್ಲಿ ಇ–ಆಸ್ತಿ ತಂತ್ರಾಂಶದಲ್ಲಿ ಅಳವಡಿಸಲಾಗುವುದು’ ಎಂದು ತಿಳಿಸಿದರು.

‘ಆಸ್ತಿ ನಿರ್ವಹಣೆಗೆ ಸಂಬಂಧಿಸಿದಂತೆ ನಾಗರಿಕರು ಈ ತಂತ್ರಾಂಶ ಬಳಸಿಕೊಳ್ಳಬಹುದು. ಲೋಪ–ದೋಷಗಳು ಕಂಡುಬಂದರೆ, ಪ್ರತಿಕ್ರಿಯೆ ದಾಖಲಿಸಬಹುದು. ಸಲಹೆಗಳನ್ನು ಸರಿಪಡಿಸಿಕೊಂಡು ಉತ್ತಮ ಸೇವೆ ನೀಡಲಾಗುವುದು’ ಎಂದರು.

‘ಖಾತಾ ಪಡೆಯುವ, ಕಟ್ಟಡದ ನಕ್ಷೆ ಮಂಜೂರಾತಿ, ಉದ್ದಿಮೆ ಪರವಾನಗಿ ಸೇರಿದಂತೆ ಇನ್ನಿತರೆ ಸಾರ್ವಜನಿಕರಿಗೆ ಅನುಕೂಲವಾಗುವ ಎಲ್ಲವೂ ಆನ್‌ಲೈನ್‌ ಮೂಲಕ ದೊರೆಯುವಂತಾದರೆ ಸಾರ್ವಜನಿಕರು ಕಚೇರಿಗೆ ಅಲೆದಾಡುವುದು ತಪ್ಪುತ್ತದೆ’ ಎಂದು ಹೇಳಿದರು.

ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್‌ ಪ್ರಸಾದ್, ‘ಬಿಬಿಎಂಪಿಯ ಪೂರ್ವ, ಪಶ್ಚಿಮ ಮತ್ತು ದಕ್ಷಿಣ ವಲಯಗಳಲ್ಲಿನ 100 ವಾರ್ಡ್‌ಗಳಲ್ಲಿ ಪ್ರಾರಂಭಿಕವಾಗಿ ಈ ಇ–ಆಸ್ತಿ ತಂತ್ರಾಂಶ ವ್ಯವಸ್ಥೆ ಜಾರಿಗೆ ತರಲಾಗುವುದು. ಉಳಿದ ವಾರ್ಡ್‌ಗಳಲ್ಲಿ ಮುಂದಿನ ಆರು ತಿಂಗಳಲ್ಲಿ ಈ ವ್ಯವಸ್ಥೆ ಅಳವಡಿಸಲಾಗುವುದು’ ಎಂದರು.

‘2018ರ ಫೆಬ್ರುವರಿಯಲ್ಲಿ ಸಕಾಲ ಯೋಜನೆಯಡಿ ಆನ್‌ಲೈನ್ ಮೂಲಕ ಖಾತಾ ಬದಲಾವಣೆ ಮಾಡುವ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಈವರೆಗೆ 2,87,953 ಖಾತೆಗಳನ್ನು ಆನ್‌ಲೈನ್ ಮೂಲಕ ವರ್ಗಾವಣೆ, ವಿಭಜನೆ, ನೋಂದಣಿ ಮಾಡಲಾಗಿದೆ. ಆದರೆ, ಈ ಖಾತಾಗಳಿಗೆ ಕೈಯಿಂದ ಸಹಿ ಮಾಡಲಾಗುತ್ತಿತ್ತು. ಈಗ ಒಂದೇ ಫಾರ್ಮ್‌ನ (ನಮೂನೆ) 46 ಕಾಲಂಗಳಲ್ಲಿ ಆಸ್ತಿಗೆ ಸಂಬಂಧಿಸಿದ ಮಾಹಿತಿ, ಕಟ್ಟಡ, ಮಾಲೀಕರ ಭಾವಚಿತ್ರ, ಕಟ್ಟಡದ ಭಾವಚಿತ್ರ, ಚಕ್ಕುಬಂದಿ ಸೇರಿದಂತೆ ಆಸ್ತಿಗೆ ಸಂಬಂಧಿಸಿದ ಎಲ್ಲ ಸಂಪೂರ್ಣ ಮಾಹಿತಿಗಳನ್ನು ಹೊಸ ನಮೂನೆ ಪತ್ರದಲ್ಲಿ ನೀಡಲಾಗುತ್ತಿದೆ' ಎಂದರು.

‘ಆ ಪತ್ರಕ್ಕೆ ಸಂಬಂಧಪಟ್ಟ ಅಧಿಕಾರಿ ಡಿಜಿಟಲ್ ಸಹಿ ಮಾಡಲಿದ್ದು, ಪತ್ರಕ್ಕೆ ಸಹಿ ಮಾಡಿರುವ ಅಧಿಕಾರಿಯ ಸಹಿಯು ಅವರ ಆಧಾರ್ ಗುರುತಿನ ಸಂಖ್ಯೆಗೆ ಜೋಡಿಸಲಾಗಿರುತ್ತದೆ. ಅದೆಲ್ಲವೂ ಸಂಬಂಧಪಟ್ಟವರ ಡಿಜಿ ಲಾಕರ್‌ಗೆ ಸ್ವಯಂಚಾಲಿತವಾಗಿ ಹೋಗಲಿದೆ. ನಾನು ಸಹಿ ಮಾಡಿರಲಿಲ್ಲ, ನನಗೆ ಗೊತ್ತಿಲ್ಲ ಎಂಬ ಸಬೂಬು ಹೇಳಲು ಈ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ’ ಎಂದು ಅವರು ವಿವರಿಸಿದರು.

‘ಪ್ರಾರಂಭದ ಈ ಮೂರು ವಾರ್ಡ್‌ಗಳಲ್ಲಿ ಕೈಬರಹದ ದಾಖಲೆಗಳನ್ನು ಶುಕ್ರವಾರದಿಂದಲೇ ನಿಷೇಧಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆಯನ್ನೂ ನೀಡಲಾಗಿದೆ.  ಇ-ಆಸ್ತಿ ತಂತ್ರಾಂಶ ಜಾರಿಗೊಳಿಸುವುದರಿಂದ ನಕಲಿ ದಾಖಲೆಗಳು ಸೃಷ್ಟಿಯಾಗುವುದು ಕಡಿಮೆಯಾಗುತ್ತದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು