ಬೆಂಗಳೂರು: ‘ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೆಸರಿನಲ್ಲಿ ಬೃಹತ್ ಬೆಂಗಳೂರು ಮಹಾ ನಗರಪಾಲಿಕೆಯ (ಬಿಬಿಎಂಪಿ) ಪ್ರಧಾನ ಎಂಜಿನಿಯರ್ ಬಿ.ಎಸ್. ಪ್ರಹ್ಲಾದ್ ಅವರು ಗುತ್ತಿಗೆದಾರರಿಂದ ಹಣ ವಸೂಲಿ ಮಾಡುತ್ತಿದ್ದಾರೆ’ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಆರೋಪಿಸಿದರು.
ತಮ್ಮ ಸ್ವಗ್ರಾಮದ ಕೆಲವರೊಂದಿಗೆ ಡಿ.ಕೆ. ಶಿವಕುಮಾರ್ ಅವರನ್ನು ಶನಿವಾರ ಭೇಟಿಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಹ್ಲಾದ್ ಭ್ರಷ್ಟ ಅಧಿಕಾರಿ. ಅವರು ಇರುವವರೆಗೂ ಬಿಬಿಎಂಪಿ ಉದ್ಧಾರ ಆಗುವುದಿಲ್ಲ’ ಎಂದು ದೂರಿದರು.
‘ಪ್ರಹ್ಲಾದ್ ಬಂದ ನಂತರ ಬಿಬಿಎಂಪಿಯಿಂದ ಯಾವುದೇ ದೊಡ್ಡ ಕೆಲಸ ನಡೆದಿಲ್ಲ. ಸರ್ಕಾರದ ಹೆಸರು ಹೇಳಿಕೊಂಡು ಹಣ ವಸೂಲಿ ಮಾಡುವುದೇ ಅವರ ಕೆಲಸವಾಗಿದೆ. ಬಿಬಿಎಂಪಿಯನ್ನು ಹಾಳು ಮಾಡುತ್ತಿರುವುದೇ ಆ ವ್ಯಕ್ತಿ. ಅವರನ್ನು ಅಲ್ಲಿ ಉಳಿಸಿಕೊಳ್ಳುವುದು, ಬಿಡುವುದು ಸರ್ಕಾರಕ್ಕೆ ಬಿಟ್ಟ ವಿಚಾರ. ಅದನ್ನು ನಿರ್ಧರಿಸಲು ನಾನು ಸೂಕ್ತ ವ್ಯಕ್ತಿಯಲ್ಲ’ ಎಂದರು.
‘ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಇದ್ದೇವೆ. ಸ್ವಲ್ಪ ಮೊತ್ತವನ್ನು ಬಿಡುಗಡೆ ಮಾಡಿದ್ದಾರೆ. ಅದರಿಂದ ನಮಗೆ ಸಂಪೂರ್ಣ ಸಮಾಧಾನ ಇಲ್ಲ. ಡಿಸೆಂಬರ್‌ನಲ್ಲಿ ಮತ್ತೆ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.