ಬಿಬಿಎಂಪಿ ಚುನಾವಣೆ: ಇಂದು ವಿಚಾರಣೆ

ನವದೆಹಲಿ: 198 ವಾರ್ಡ್‌ಗಳಿಗೆ ಅನ್ವಯಿಸಿ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಚುನಾವಣೆ ನಡೆಸಬೇಕು ಎಂಬ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ, ಇತರರು ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರಿಂ ಕೋರ್ಟ್ ಶುಕ್ರವಾರ ವಿಚಾರಣೆಗೆ
ತೆಗೆದುಕೊಳ್ಳಲಿದೆ.
ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ನೇತೃತ್ವದ, ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ.ರಾಮಸುಬ್ರಹ್ಮಣಿಯನ್ ಅವರು ಇರುವ ಪೀಠವು ಈ ಕುರಿತ ಮೂರು ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಲಿದೆ. ಕರ್ನಾಟಕ ಸರ್ಕಾರ, ಡಾ.ಬಿ.ಆರ್.ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ಮತ್ತು ಭಾಸ್ಕರ್ ಅರ್ಜಿಗಳನ್ನು ಸಲ್ಲಿಸಿದ್ದರು.
ಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸುವುದು ಸೇರಿ ನಿಗದಿತ, ಗರಿಷ್ಠ ಆರು ವಾರಗಳ ಅವಧಿಯಲ್ಲಿ ಬಿಬಿಎಂಪಿ ಚುನಾವಣೆಯನ್ನು ಪೂರ್ಣಗೊಳಿಸಬೇಕು ಎಂದೂ ಹೈಕೋರ್ಟ್ ಆದೇಶಿಸಿತ್ತು. ಸೆಪ್ಟೆಂಬರ್ 23, 2020ರ ಅಧಿಸೂಚನೆ ಆಧರಿಸಿ ಚುನಾವಣೆಗೆ ಆದೇಶಿಸಲಾಗಿತ್ತು. ಈ ಆದೇಶದ ಸಿಂಧುತ್ವನ್ನು ಅರ್ಜಿದಾರರು ಪ್ರಶ್ನಿಸಿದ್ದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ವಾರ್ಡ್‌ಗಳ ಸಂಖ್ಯೆಯನ್ನು 198ರಿಂದ 243ಕ್ಕೆ ಏರಿಸುವ ಮಸೂದೆಯನ್ನು ರಾಜ್ಯ ವಿಧಾನಮಂಡಲವು ಅಂಗೀಕರಿಸಿದೆ. ಈ ಕುರಿತು ಅಧಿಸೂಚನೆಯೂ ಜನವರಿ 14, 2020ರಂದು ಪ್ರಕಟವಾಗಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.
ಬೆಂಗಳೂರಿನಂತಹ ನಗರದಲ್ಲಿ ಪರಿಶಿಷ್ಟ ಜಾತಿ ಮತ್ತು ಇತರೆ ನಿರ್ಲಕ್ಷ್ಯಿತ ಸಮುದಾಯಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂಬ ಹಿನ್ನೆಲೆಯಲ್ಲಿ ಈ ಕ್ರಮವಹಿಸಲಾಗಿದೆ ಎಂಬುದನ್ನು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ರಾಜ್ಯ ಚುನಾವಣಾ ಆಯೋಗ ಮತ್ತು ಇತರರು ಸಲ್ಲಿಸಿದ್ದ ಅರ್ಜಿಗಳನ್ನು ಆಧರಿಸಿ ಹೈಕೋರ್ಟ್ ಇಂಥ ಆದೇಶ ಹೊರಡಿಸಿದೆ. ಇಂಥ ಅರ್ಜಿಯನ್ನು ಸಲ್ಲಿಸುವ ಅಧಿಕಾರ ಆಯೋಗಕ್ಕೆ ಇಲ್ಲ. ಕಾಯ್ದೆಯನ್ವಯ ಬದಲಾವಣೆಗಳನ್ನು ಜಾರಿಗೊಳಿಸುವುದನ್ನು ಬಿಟ್ಟು ಆಯೋಗಕ್ಕೆ ಅನ್ಯ ಮಾರ್ಗವಿಲ್ಲ ಎಂದೂ ಅರ್ಜಿದಾರರು ಪ್ರತಿಪಾದಿಸಿದ್ದರು.
ಬಿಬಿಎಂಪಿಯ ಚುನಾಯಿತ ಸದಸ್ಯರ ಅಧಿಕಾರ ಅವಧಿ ಸೆಪ್ಟೆಂಬರ್ 10, 2020ರಂದು ಅಂತ್ಯಗೊಂಡಿದೆ. ಚುನಾವಣೆ ವಿಳಂಬಕ್ಕೆ ಕೋವಿಡ್ ಪರಿಸ್ಥಿತಿಯೂ ಕಾರಣವಾಗಿತ್ತು ಎಂದು ಅರ್ಜಿದಾರರು ವಾದಿಸಿದ್ದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.