ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ವಲಯ: 29 ಒತ್ತುವರಿ ತೆರವು

Last Updated 15 ಸೆಪ್ಟೆಂಬರ್ 2022, 20:16 IST
ಅಕ್ಷರ ಗಾತ್ರ

ಬೆಂಗಳೂರು: ದಾಸರಹಳ್ಳಿ, ಬೊಮ್ಮನ ಹಳ್ಳಿ ವಲಯದಲ್ಲಿ ಗುರುವಾರ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿರುವ ಬಿಬಿಎಂಪಿ ಸಿಬ್ಬಂದಿ, ಯಲಹಂಕ, ಮಹದೇವಪುರ ವಲಯ ಸೇರಿದಂತೆ ಒಟ್ಟಾರೆ 29 ಸ್ಥಳಗಳಲ್ಲಿ ಒತ್ತುವರಿ ತೆರವು ಮಾಡಿದ್ದಾರೆ.

ದಾಸರಹಳ್ಳಿ ವಲಯದ ನೆಲಗದರನಹಳ್ಳಿ ರಸ್ತೆ ರುಕ್ಮಿಣಿ ನಗರದಲ್ಲಿ ಮೂರುಕಾಲು ಗುಂಟೆ ಜಾಗದಲ್ಲಿ ನಾಲ್ಕು ತಡೆಗೋಡೆ, ಒಂದು ಮೆಟ್ಟಿಲು ಜಾಗ, ಒಂದು ಶೌಚಾಲಯ, ಒಂದು ಎಲೆಕ್ಟ್ರಿಕಲ್ ಬಾಕ್ಸ್ ರೂಂ ಹಾಗೂ ಕಾಲುವೆಯ ಮೇಲಿದ್ದ ಮನೆಯ ಮೂಲೆ ಭಾಗಗಳು ಸೇರಿದಂತೆ 11 ಒತ್ತುವರಿಗಳನ್ನು ತೆರವು ಮಾಡಲಾಗಿದೆ. ಶುಕ್ರವಾರವೂ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಯಲಹಂಕ ವಲಯದ ಕುವೆಂಪುನಗರ ಸಿಂಗಾಪುರ ಲೇಔಟ್‌ನಲ್ಲಿ ಸರ್ವೆ ಸಂಖ್ಯೆ 97 ಹಾಗೂ 100ರಲ್ಲಿ ಸಿಂಗಾಪುರ ಕೆರೆ ಹಿಂಭಾಗದಲ್ಲಿರುವ ಲ್ಯಾಂಡ್ ಮಾರ್ಕ್ ಅಪಾರ್ಟ್‌ಮೆಂಟ್‌ನಿಂದ 2.4 ಅಡಿ ಅಗಲ ಹಾಗೂ 75 ಮೀಟರ್ ಉದ್ದದ ತೂಬುಗಾಲುವೆ ಒತ್ತುವರಿಯನ್ನು
ತೆರವು ಮಾಡಲಾಗಿದೆ. ಸಿಂಗಾಪುರ ಕೆರೆಯ ಬಳಿ ಸರ್ವೇ ಸಂಖ್ಯೆ 95 ರಲ್ಲಿ ಮಳೆ ನೀರುಗಾಲುವೆ ತೆರವು ಮಾಡಲಾಗಿದೆ.

ಬೊಮ್ಮನಹಳ್ಳಿ ವಲಯದ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕೋಣನಕುಂಟೆ ವ್ಯಾಪ್ತಿಯ ಸರ್ವೆ ಸಂಖ್ಯೆ 29ರಲ್ಲಿ ವಾಣಿಜ್ಯ ಕಟ್ಟಡ, ಎಂಟು ಶೆಡ್ ಹಾಗೂ ಎರಡು ಜಿಂಕ್ ಶೀಟ್ ಶೆಡ್ ತೆರವು ಮಾಡಿ 15 ಅಡಿ ಅಗಲ ಹಾಗೂ 330 ಅಡಿ ಉದ್ದದಷ್ಟು ರಾಜಕಾಲುವೆಯನ್ನು ಒತ್ತುವರಿ ತೆರವು ಮಾಡಲಾಗಿದೆ. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಹೊಂಗಸಂದ್ರದಲ್ಲಿ 7.5 ಮೀಟರ್ ಜಾಗದಲ್ಲಿ 160 ಚ.ಅಡಿಯಷ್ಟು ಒಂದು ಕಟ್ಟಡ, 10 ಅಡಿ ಗೋಡೆ ಹಾಗೂ ಶೆಡ್ ಅನ್ನು ಬಿಬಿಎಂಪಿ ಸಿಬ್ಬಂದಿ ತೆರವು ಮಾಡಿದ್ದಾರೆ.

ಮಹದೇವಪುರ ವಲಯ ಯಮಲೂರು ಬಳಿಯ ಎಪ್ಸಿಲಾನ್ ಹಿಂಭಾಗ ಬಳಿಯಿರುವ ಮುನೇಶ್ವರ ದೇವಸ್ಥಾನದ ಬಳಿ ಚರಂಡಿಯ ಮೇಲಿನ ಸ್ಲ್ಯಾಬ್‌, ‌ಮುನ್ನೇಕೊಳಾಲು ಶಾಂತಿನಿಕೇತನ ಲೇಔಟ್‌ನಲ್ಲಿ ರಾಜಕಾಲುವೆ ಸ್ಥಳದಲ್ಲಿ ನಿರ್ಮಿಸಿದ್ದ ಎರಡು ಶೆಡ್‌ಗಳನ್ನು ತೆರವುಗೊಳಿಸಲಾಗಿದೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.

ಸರ್ವೆ ಕಾರ್ಯ ಚುರುಕು

ಮಹದೇವಪುರ ವಲಯ ವ್ಯಾಪ್ತಿಯ ವಾಗ್ದೇವಿ ಲೇಔಟ್, ಮುನ್ನೇಕೊಳಾಲು, ಕಸವನಹಳ್ಳಿ, ಎಬಿಕೆ ಗ್ರಾಮ, ಪ್ರೆಸ್ಟೀಜ್ ಟೆಕ್ ಪಾರ್ಕ್, ವಿಪ್ರೊ, ಸನ್ನಿ ಬ್ರೂಕ್ಸ್ ದೊಡ್ಡಕನ್ನಹಳ್ಳಿ, ಬೆಳ್ಳತ್ತೂರು ಗ್ರಾಮ, ಸದ್ರಮಂಗಲ ಗ್ರಾಮ, ಬೊಳ್ಳೆನಿನಿ ಸಾಸಾ ಅಪಾರ್ಟ್‌ಮೆಂಟ್‌ ಒಳಭಾಗ ಹಾಗೂ ಸಾಯಿಗಾರ್ಡನ್ ಲೇಔಟ್‌ನಲ್ಲಿ ಬಿಬಿಎಂಪಿ ಅಧಿಕಾರಿಗಳು, ಭೂಮಾಪಕ ಇಲಾಖೆಯ ಅಧಿಕಾರಿಗಳು ಗುರುವಾರ ಸರ್ವೆ ಕಾರ್ಯ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT