ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಮಸ್ಯೆ ಪರಿಹರಿಸಲು ಬಿಬಿಎಂಪಿ ವಿಫಲ: ಎಎಪಿ ನಗರ ಘಟಕದ ಅಧ್ಯಕ್ಷ ಸತೀಶ್ ಆರೋಪ

Published 14 ಆಗಸ್ಟ್ 2024, 16:15 IST
Last Updated 14 ಆಗಸ್ಟ್ 2024, 16:15 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದಲ್ಲಿ ಪ್ರತಿ ಬಾರಿ ಮಳೆ ಸುರಿದಾಗಲೂ ಜನಜೀವನಕ್ಕೆ ಸಮಸ್ಯೆಯಾಗುತ್ತಿದೆ. ಸಮಸ್ಯೆಗಳ ಪರಿಹಾರದಲ್ಲಿ ವಿಫಲವಾಗಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ಅವರು ಪಾಲಿಕೆಯಿಂದ ವರ್ಗಾವಣೆ ಪಡೆಯಲಿ’ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಸತೀಶ್ ಆಗ್ರಹಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೋಮವಾರ ಮುಂಜಾನೆ ಸುರಿದ ಭಾರಿ ಮಳೆಯಿಂದಾಗಿ ನಗರದ ಹಲವೆಡೆ ಸಮಸ್ಯೆಗಳಾಗಿವೆ. ಪ್ರತಿ ಬಾರಿ ಮಳೆ ಬಂದಾಗಲೂ, ಚರಂಡಿಗಳಲ್ಲಿ ತ್ಯಾಜ್ಯ ಕಟ್ಟಿಕೊಂಡು ನೀರು ನಿಲ್ಲುವುದು, ರಸ್ತೆಯಲ್ಲಿ ಗುಂಡಿಗಳಾಗುವುದು, ಮರಗಳು ಮುರಿದು ಬೀಳುವುದು ಸಾಮಾನ್ಯ ಎನ್ನುವಂತಾಗಿದೆ. ಸರ್ಕಾರಗಳು, ಅಧಿಕಾರಿಗಳು ಬದಲಾದರೂ ಸಮಸ್ಯೆ ಮಾತ್ರ ಹಾಗೆ ಉಳಿದಿದೆ’ ಎಂದು ದೂರಿದರು.

‘ಮಳೆ ಬಂದಾಗ ಸಮಸ್ಯೆಯಾಗುವ 180 ಸ್ಥಳಗಳನ್ನು ಗುರುತಿಸಿ ಸಂಚಾರ ಪೊಲೀಸ್ ವಿಭಾಗವು ಬಿಬಿಎಂಪಿಗೆ ವರದಿ ಕೊಟ್ಟಿದೆ. ಮಳೆ ಹಾನಿಯಾದಾಗ ಉಸ್ತುವಾರಿ ಸಚಿವರು ನಗರ ಪ್ರದಕ್ಷಿಣೆ ಹಾಕಿ ಫೋಟೊ ತೆಗೆಸಿಕೊಂಡು ಹೋಗುವ ಬದಲು, ವರದಿಯನ್ನೊಮ್ಮೆ ನೋಡಿ ಸಮಸ್ಯೆ ಸರಿಪಡಿಸಲಿ’ ಎಂದು ಒತ್ತಾಯಿಸಿದರು.

‘ಮಳೆಯಿಂದ ಹಾನಿಯಾದಾಗ ಮುಖ್ಯಮಂತ್ರಿ, ಸಚಿವರು, ಶಾಸಕರು, ಬಿಬಿಎಂಪಿ ಮುಖ್ಯ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಕಣ್ಣೊರೆಸುವ ಕೆಲಸ ಮಾಡುತ್ತಾರೆ. ಆದರೆ ಸಮಸ್ಯೆ ಮಾತ್ರ ಹಾಗೆ ಉಳಿಯುತ್ತಿದೆ’ ಎಂದು ದೂರಿದರು.

ಆಮ್‌ ಆದ್ಮಿ ಪಕ್ಷದ ಬೆಂಗಳೂರು ನಗರ ಮಾಧ್ಯಮ ವಿಭಾಗದ ಉಸ್ತುವಾರಿ ಅನಿಲ್ ನಾಚಪ್ಪ ಮಾತನಾಡಿ, ‘ಬಿಬಿಎಂಪಿಗೆ ಚುನಾವಣೆ ನಡೆಸದೇ ಇರುವುದರಿಂದ ಜನರ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ. ಬೆಂಗಳೂರು ಉಸ್ತುವಾರಿ ಸಚಿವರಾಗಿರುವ ಡಿ.ಕೆ. ಶಿವಕುಮಾರ್ ದಿನಕ್ಕೊಂದು ಜಿಲ್ಲೆ ಸುತ್ತುತ್ತಿದ್ದಾರೆ. ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನವನ್ನು ಬೇರೆ ಅರ್ಹರಿಗೆ ಬಿಟ್ಟುಕೊಡಲಿ’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT