ಕಳಚಿದ ಫ್ಲೆಕ್ಸ್‌; ಮರಳಿದ ಸೌಂದರ್ಯ

7
ಎರಡು ದಿನಗಳಲ್ಲಿ ಒಟ್ಟು 18,671 ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ

ಕಳಚಿದ ಫ್ಲೆಕ್ಸ್‌; ಮರಳಿದ ಸೌಂದರ್ಯ

Published:
Updated:

ಬೆಂಗಳೂರು: ಚುನಾವಣೆ ನೀತಿ ಸಂಹಿತೆಯ ಅವಧಿಯಲ್ಲಿ ಫ್ಲೆಕ್ಸ್‌ಗಳಿಲ್ಲದೆ ನಳನಳಿಸಿದ್ದ ಬೆಂಗಳೂರು, ಈಗ ಮತ್ತೊಮ್ಮೆ ಚೆಲುವಿನಿಂದ ಕಂಗೊಳಿಸುತ್ತಿದೆ.

ಹುಟ್ಟುಹಬ್ಬಕ್ಕೊಂದು, ತಿಥಿಗೊಂದು, ಗೆಲುವಿಗೊಂದು... ಹೀಗೆ ನಾನಾ ಕಾರಣಗಳಿಗಾಗಿ ಸಿದ್ಧವಾಗುತ್ತಿದ್ದ ಫ್ಲೆಕ್ಸ್‌ಗಳು ಸ್ಕೈವಾಕ್‌, ಮೇಲ್ಸೇತುವೆ, ಸಾರ್ವಜನಿಕ ಶೌಚಾಲಯ ಸೇರಿದಂತೆ ನಗರದ ಗಲ್ಲಿಗಲ್ಲಿಗಳಲ್ಲಿ ರಾರಾಜಿಸುತ್ತಿದ್ದವು. ಅವೆಲ್ಲವೂ ಈಗ ಕಸದ ಲಾರಿ ಏರುತ್ತಿರುವುದು ಪರಿಸರಪ್ರಿಯರ ಮೊಗದಲ್ಲಿ ಖುಷಿ ಮೂಡಿಸಿದೆ.

ಫ್ಲೆಕ್ಸ್‌ ತೆರವು ಕೆಲಸವನ್ನು ವ್ರತದಂತೆ ಮಾಡುತ್ತಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಿಬ್ಬಂದಿ ಎರಡು ದಿನಗಳಲ್ಲಿ ಒಟ್ಟು 18,671 ಫ್ಲೆಕ್ಸ್‌ಗಳನ್ನು ತೆರವು ಮಾಡಿದ್ದಾರೆ. 

ಹೈಕೋರ್ಟ್‌ ನಿರ್ದೇಶನ ನೀಡುತ್ತಿದ್ದಂತೆಯೇ ಕಾರ್ಯಪ್ರವೃತ್ತವಾದ ಬಿಬಿಎಂಪಿ, ಬುಧವಾರ ಒಂದೇ ದಿನದಲ್ಲಿ 10,115 ಫ್ಲೆಕ್ಸ್‌ಗಳನ್ನು ತೆರವು ಮಾಡಿತ್ತು. ಗುರುವಾರ ರಾತ್ರಿಯವರೆಗೆ ಒಟ್ಟು 8,556 ಫ್ಲೆಕ್ಸ್‌ಗಳನ್ನು ತೆರವು ಮಾಡಿದೆ.

ಪೀಣ್ಯದಾಸರಹಳ್ಳಿಯ ಎಂಟು ವಾರ್ಡ್‌ಗಳಲ್ಲಿ, ಕ್ಷೇತ್ರದ ಬೈಲಪ್ಪ ವೃತ್ತ, ಬಾಗಲಗುಂಟೆ, ದಾಸರಹಳ್ಳಿ ಬಸ್‌ ನಿಲ್ದಾಣಗಳಲ್ಲಿ, ಜಾಲಹಳ್ಳಿ ಕ್ರಾಸ್, ಪೀಣ್ಯ 2ನೇ ಹಂತ, ಲಗ್ಗೆರೆ, ಹೆಗ್ಗನಹಳ್ಳಿ ಬಸ್‌ ನಿಲ್ದಾಣದ ಬಳಿಯಿದ್ದ ಫ್ಲೆಕ್ಸ್‌ಗಳನ್ನು ಬಿಬಿಎಂಪಿ ತೆರವುಗೊಳಿಸಿದೆ.

ನಗರದ ಬಡಾವಣೆಗಳ ಬೀದಿ ಬೀದಿಗಳಲ್ಲಿ ಹಾಗೂ ಸರ್ಕಾರಿ ಜಾಗಗಳಲ್ಲಿ ರಾಜಕಾರಣಿಗಳಿಗೆ ಶುಭಾಶಯ ಹೇಳುವ ಕಟೌಟ್‌ಗಳು, ಫ್ಲೆಕ್ಸ್‌, ಬ್ಯಾನರ್‌ ಕಣ್ಣಿಗೆ ರಾಚುತ್ತಿದ್ದವು. ಅಲ್ಲದೆ ಪ್ಲಾಸ್ಟಿಕ್‌ನಿಂದ ತಯಾರಿಸಿದ್ದ ಕಟೌಟ್‌ಗಳು ಹರಿದು ರಸ್ತೆಯ ಮೇಲೆ ರಾಶಿ ಬಿದ್ದಿರುತ್ತಿದ್ದವು.

‘ನಗರದ ಸೊಬಗನ್ನು ಉಳಿಸಲು ನಮ್ಮಲ್ಲಿ ಸೂಕ್ತ ಕಾನೂನು ಇಲ್ಲ. ಬೇಕಾಬಿಟ್ಟಿಯಾಗಿ ಹರಡಿಕೊಂಡಿದ್ದ ಫ್ಲೆಕ್ಸ್‌ಗಳಿಗೆ ಕಡಿವಾಣ ಬಿದ್ದಿರುವುದು ಖುಷಿಯ ಸಂಗತಿ. ಇದರಿಂದ ನಗರದ ಸೌಂದರ್ಯ ಮರಳಿದೆ’ ಎಂದು ಬಸವನಗುಡಿ ನಿವಾಸಿ ಶೈಲಜಾ ತಿಳಿಸಿದರು.

‘ಈಗ ಹೈಕೋರ್ಟ್‌ ಸೂಚನೆ ನೀಡಿರುವುದಕ್ಕೆ ಬಿಬಿಎಂಪಿ ಎದ್ದೆನೋ ಬಿದ್ದೆನೋ ಎಂಬಂತೆ ಫ್ಲೆಕ್ಸ್‌ಗಳನ್ನು ತೆರವು ಮಾಡುತ್ತಿದೆ. ಇನ್ನೊಂದು ತಿಂಗಳಾದರೆ ಇದೇ ಸ್ಥಿತಿ ಇರುತ್ತದೆ ಎನ್ನಲು ಸಾಧ್ಯವಿಲ್ಲ. ಕರ್ನಾಟಕ ಸಾರ್ವಜನಿಕ ಪ್ರದೇಶ ವಿರೂಪ ತಡೆ ಕಾಯ್ದೆಯನ್ನು ಸರಿಯಾಗಿ ಅನುಷ್ಠಾನಗೊಳಿಸುತ್ತಿಲ್ಲ. ಬಿಬಿಎಂಪಿ ಇದಕ್ಕೆಲ್ಲ ಒಂದು ಸ್ಥಿರವಾದ ನಿಯಮ ತರಬೇಕು’ ಎಂದು ಕಾನೂನು ವಿದ್ಯಾರ್ಥಿ ಸಂದೇಶ್‌ ಅಭಿಪ್ರಾಯ ವ್ಯಕ್ತಪಡಿಸಿದರು.

‘2016ರಿಂದ ಬಿಬಿಎಂಪಿ ಯಾವುದೇ ಫಲಕಗಳನ್ನು ನವೀಕರಿಸಿಲ್ಲ. ನಗರದಲ್ಲಿರುವ ಎಲ್ಲಾ ಹೋರ್ಡಿಂಗ್‌ಗಳೂ ಅಕ್ರಮ’ ಎಂದು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗ ಹೇಳಿತ್ತು.

‘ನೋಡಲ್‌ ಅಧಿಕಾರಿ ನೇಮಕ’

‘ಫ್ಲೆಕ್ಸ್, ಕೇಬಲ್‌‌ಗಳ ತೆರವು ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಎಂಟು ವಲಯಗಳಿಗೆ ನೋಡಲ್ ಅಧಿಕಾರಿ‌ಗಳನ್ನು ನೇಮಕ ಮಾಡಲು ಚಿಂತನೆ ನಡೆಸಲಾಗಿದೆ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ತಿಳಿಸಿದ್ದಾರೆ.

‘ಪ್ರತಿಯೊಂದಕ್ಕೂ ಆಯುಕ್ತರ ಬಳಿಯೇ ಬರುವುದು ಕಷ್ಟವಾಗಬಹುದು. ಹೀಗಾಗಿ ಆಯಾ ವಲಯಗಳಲ್ಲಿ ನೋಡಲ್ ಅಧಿಕಾರಿ ನೇಮಿಸಿದರೆ, ಅನಧಿಕೃತ ಕೇಬಲ್ ತೆರವು, ಫ್ಲೆಕ್ಸ್ ತೆರವಿನ ನಿರ್ಧಾರ ಕೈಗೊಳ್ಳಬಹುದು’ ಎಂದಿದ್ದಾರೆ.

ಬಿಬಿಎಂಪಿ ಸಿಬ್ಬಂದಿ ಮೇಲೆ ಹಲ್ಲೆ

ಮಹದೇವಪುರ ವಲಯದ ಬಿಬಿಎಂಪಿ ಅಧಿಕಾರಿ ಹಾಗೂ ಸಿಬ್ಬಂದಿಯ ಮೇಲೆ ಎರಡು ಕಡೆಗಳಲ್ಲಿ ಹಲ್ಲೆ ನಡೆದಿದ್ದು, ಕೆಲ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಫ್ಲೆಕ್ಸ್ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಬೆದರಿಕೆ ಹಾಕಿ ಕಾರ್ಯಾಚರಣೆಗೆ ಅಡ್ಡಿಪಡಿಸಿದ್ದಾರೆ. ನಂತರ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಎಚ್‌ಎಎಲ್ ವಾರ್ಡ್ ಸಹಾಯಕ ಕಂದಾಯ ಅಧಿಕಾರಿ ಭಟ್ಟಾಚಾರ್ಯ ಹಾಗೂ ಕೆಲ ಸಿಬ್ಬಂದಿಗೆ ಗಾಯಗಳಾಗಿವೆ.

ಅದೇ ರೀತಿ ಕೆ.ಆರ್.ಪುರದ ಪೈ ಬಡಾವಣೆಯಲ್ಲಿ ಶಾಸಕ ಬೈರತಿ ಬಸವರಾಜು ಅವರಿಗೆ ಶುಭ ಕೋರುವ ಬ್ಯಾನರ್‌ಗಳನ್ನು ತೆರವುಗೊಳಿಸುವ ವೇಳೆಯೂ ಶಾಸಕರ ಬೆಂಬಲಿಗರು ಎಂದು ಹೇಳಿಕೊಂಡು ಬಂದಿದ್ದ ಕೆಲವರು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಪಾರ್ವತಿ ಶ್ರೀರಾಮ್, ಕೋರಮಂಗಲ ನಿವಾಸಿ

* ನಮ್ಮ ಪ್ರದೇಶದಲ್ಲಿನ ಫ್ಲೆಕ್ಸ್‌ಗಳು ತೆರವುಗೊಳ್ಳುತ್ತಿವೆ. ಮನೆಯ ಬಳಿಯೇ ಇದ್ದ ಜೆಡಿಎಸ್‌ ಕಚೇರಿ ಎದುರು ದೊಡ್ಡದಾಗಿ ನಿಂತಿದ್ದ ಫ್ಲೆಕ್ಸ್‌ಗಳು ಮಾಯವಾಗಿವೆ

-ಪಾರ್ವತಿ ಶ್ರೀರಾಮ್, ಕೋರಮಂಗಲ ನಿವಾಸಿ


ಪುಟ್ಟಸ್ವಾಮಿ, ವಿಜಯನಗರ ನಿವಾಸಿ

* ಫ್ಲೆಕ್ಸ್‌ಗಳ ಹಾವಳಿ ತುಂಬಾನೇ ಇತ್ತು. ಎಲ್ಲವೂ ಸ್ವಚ್ಛಗೊಳ್ಳುತ್ತಿರುವುದು ಸಂತೋಷವೇ. ಆದರೆ, ಅವು ಮತ್ತೆ ಮರುಕಳಿಸದಂತೆ ಬಿಬಿಎಂಪಿ ಕ್ರಮ ಕೈಗೊಳ್ಳಬೇಕು

-ಪುಟ್ಟಸ್ವಾಮಿ, ವಿಜಯನಗರ ನಿವಾಸಿ

Tags: 

ಬರಹ ಇಷ್ಟವಾಯಿತೆ?

 • 20

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !