ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ವಿಂಗಡಿಸದಿದ್ದರೆ ₹1,000 ದಂಡ

ಸೆಪ್ಟೆಂಬರ್ 1ರಿಂದ ನಿಯಮ ಕಟ್ಟುನಿಟ್ಟಿನ ಜಾರಿಗೆ ಸಜ್ಜಾದ ಬೆಂಗಳೂರು ಮಹಾನಗರ ಪಾಲಿಕೆ
Last Updated 4 ಜುಲೈ 2019, 20:35 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಎಲ್ಲೆಂದರಲ್ಲಿ ಕಸ ಎಸೆದರೆ,ಹಸಿ ಕಸವನ್ನು ಪ್ರತ್ಯೇಕಿಸಿ ನೀಡದಿದ್ದರೆ, ಸಾರ್ವಜನಿಕ ಸ್ಥಳದಲ್ಲಿ ಉಗುಳಿದರೆ, ಮೂತ್ರ ವಿಸರ್ಜನೆ ಮಾಡಿದರೆ ಭಾರಿ ದಂಡ ಕಟ್ಟಬೇಕಾಗುತ್ತದೆ!

ಹೌದು, ಈಗಿರುವ ದಂಡದ ಪ್ರಮಾಣವನ್ನು ಐದು ಪಟ್ಟು ಹೆಚ್ಚಳ ಮಾಡಿರುವ ಬಿಬಿಎಂಪಿ, ಅದನ್ನು ಸೆಪ್ಟೆಂಬರ್‌ 1ರಿಂದ ಕಟ್ಟುನಿಟ್ಟಾಗಿ ಜಾರಿಗೊಳಿಸಲು ತಯಾರಿ ನಡೆಸಿದೆ.

ಮನೆ ಮುಂದೆ ಬರುವ ಕಸ ಸಂಗ್ರಹಣೆಯ ಆಟೊ ಟಿಪ್ಪರ್‌ಗಳಿಗೆ ಒಣ ಮತ್ತು ಹಸಿ ಕಸವನ್ನು ಒಟ್ಟಿಗೆ ನೀಡಿದರೆ ಮೊದಲ ಬಾರಿಗೆ ₹200 ದಂಡ ವಿಧಿಸುವ ಬಿಬಿಎಂಪಿ ಸಿಬ್ಬಂದಿ, ಅದೇ ತಪ್ಪನ್ನು ಎರಡನೇ ಬಾರಿಗೆ ಮಾಡಿದರೆ ₹1,000 ದಂಡ ಹಾಕಲಿದ್ದಾರೆ.

ಕಸ ಸಂಗ್ರಹಿಸಲು ಟಿಪ್ಪರ್‌ಗಳಲ್ಲಿ ಬರುವ ಸಿಬ್ಬಂದಿ ಕೂಡ ವಿಂಗಡಿಸದ ಕಸವನ್ನು ಮನೆಗಳಿಂದ ಪಡೆಯುವುದೂ ಇಲ್ಲ. ಏಕೆಂದರೆ ಕಸ ನೀಡಿದವರಿಗೆ ಮಾತ್ರವಲ್ಲ, ಪಡೆದವರಿಗೂ ದಂಡ ಬೀಳಲಿದೆ.

‘ಟಿಪ್ಪರ್‌ಗಳಿಗೆ ಕಸ ನೀಡದೆ ರಸ್ತೆ ಬದಿಯಲ್ಲಿ ರಾತ್ರಿ ವೇಳೆ ಬಿಸಾಡಬಹುದು ಎಂದುಕೊಂಡರೆ ಅದಕ್ಕೂ ಅವಕಾಶ ಇಲ್ಲ. ಬಿಬಿಎಂಪಿ ಹೊಸದಾಗಿ 233 ಮಾರ್ಷಲ್‌ಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಅವರು ಇಡೀ ರಾತ್ರಿ ರಸ್ತೆ ಬದಿಗಳಲ್ಲಿ ಕಾದು ನಿಲ್ಲಲಿದ್ದಾರೆ. ಅಲ್ಲದೇ, ಅಲ್ಲಲ್ಲಿ ಸಿಸಿಟಿವಿ ಕ್ಯಾಮೆರಾಗಳು ಕಣ್ಗಾವಲು ವಹಿಸಲಿವೆ’ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ತಿಳಿಸಿದರು.

ಹಸಿ ಮತ್ತು ಒಣ ಕಸವನ್ನು ಈವರೆಗೆ ಸಂಗ್ರಹಿಸುತ್ತಿದ್ದ ಪಾಲಿಕೆ, ಇನ್ನು ಮುಂದೆ ಪ್ರತ್ಯೇಕವಾಗಿ ಸಂಗ್ರಹಿಸಲು ಗುತ್ತಿಗೆ ನೀಡಿದೆ. ವಾರದ ಏಳು ದಿನವೂ ಮನೆ ಮುಂದೆ ಬರುವ ಸಿಬ್ಬಂದಿ ಹಸಿ ಕಸವನ್ನು ಮಾತ್ರ ಸಂಗ್ರಹಿಸಲಿದ್ದಾರೆ. ಕಸ ಆಯುವವರು ವಾರಕ್ಕೆ ಎರಡು ದಿನ ಮನೆ ಮುಂದೆ ಬರಲಿದ್ದು, ಅವರು ಒಣ ಕಸವನ್ನು ಮಾತ್ರ ಸಂಗ್ರಹಿಸಲಿದ್ದಾರೆ ಎಂದು ಅವರು ಗುರುವಾರ ಮಾಧ್ಯಮಗೋಷ್ಠಿಯಲ್ಲಿ ವಿವರಿಸಿದರು.

ಸೆಪ್ಟೆಂಬರ್‌ನಲ್ಲಿ ಜಾರಿಗೆ ಬರಲಿರುವ ಈ ವ್ಯವಸ್ಥೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅದಕ್ಕೂ ಮುನ್ನ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಹಸಿ ಕಸವನ್ನು ಮನೆಯಲ್ಲೇ ಕಾಂಪೋಸ್ಟ್ ಮಾಡಿಕೊಳ್ಳುವ ಬಗ್ಗೆ ತಿಳಿವಳಿಕೆ ನೀಡಲಾಗುವುದು. ಎಲ್ಲ ವಾರ್ಡ್‌ಗಳಲ್ಲೂ ಒಣ ಕಸ ಸಂಸ್ಕರಣಾ ಘಟಕಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ವಾರ್ಡ್‌ನಲ್ಲಿಕನಿಷ್ಠ ಶೇ 90ರಷ್ಟು ಮನೆಗಳಲ್ಲಿ ಕಸ ವಿಂಗಡಣೆ ಮಾಡಿಸಿ ಶೇ 100ರಷ್ಟು ಮನೆಗಳಿಂದ ಕಸ ಸಂಗ್ರಹಿಸುವವರಿಗೆ ಶೇ 5ರಷ್ಟು ಪ್ರೋತ್ಸಾಹಧನ ನೀಡಲಾಗುವುದು ಎಂದರು.

ಖಾಲಿ ನಿವೇಶನಗಳಲ್ಲಿ ಕಸ ಸಂಗ್ರಹವಾದರೆ ಅದಕ್ಕೆ ನಿವೇಶನಗಳ ಮಾಲೀಕರೇ ಜವಾಬ್ದಾರರು. ಸುತ್ತಲೂ ಬೇಲಿ ನಿರ್ಮಿಸಿ ಕಸ ಸುರಿಯದಂತೆ ಫಲಕ ಹಾಕುವುದು ಕಡ್ಡಾಯ. ಇಲ್ಲದಿದ್ದರೆ ಮಾಲೀಕರು ದಂಡ ಪಾವತಿಸಬೇಕಾಗುತ್ತದೆ ಎಂದೂ ಎಚ್ಚರಿಸಿದರು.

*
2020ರ ವೇಳೆಗೆ ನಂಬರ್ 1 ಸ್ವಚ್ಛ ನಗರವನ್ನಾಗಿಸುವ ಗುರಿ ಇದೆ. ಸಾರ್ವಜನಿಕರು ಸಹಕಾರ ನೀಡಬೇಕು. ಪಾಲಿಕೆಯ ನಿಯಮಗಳನ್ನು ಪಾಲಿಸಬೇಕು.
-ಗಂಗಾಂಬಿಕೆ ಮಲ್ಲಿಕಾರ್ಜುನ, ಮೇಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT