ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲ್ಲಹಳ್ಳಿ ಕ್ವಾರಿ ಭರ್ತಿ: ಕಸ ವಿಲೇವಾರಿ ಸಮಸ್ಯೆ

ಪರ್ಯಾಯ ಜಾಗಕ್ಕೆ ಅನುಮೋದನೆ ಸಿಕ್ಕಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ: ಮೇಯರ್‌
Last Updated 29 ಜುಲೈ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ನಾಲ್ಕು ದಿನಗಳಿಂದ ಕಸದ ಸಮಸ್ಯೆ ಕಾಣಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ರಾಶಿ ಬಿದ್ದಿರುವ ಕಸದಿಂದಾಗಿ ಸಮಸ್ಯೆ ಉಂಟಾಗಿದೆ.

ಬೆಲ್ಲಹಳ್ಳಿ ಕ್ವಾರಿಯ ಭೂಭರ್ತಿ ಕೇಂದ್ರ ಭರ್ತಿಯಾಗುತ್ತಾ ಬಂದಿದ್ದು, ಅಲ್ಲಿ ಕಸ ವಿಲೇವಾರಿ ಸಾಧ್ಯವಾಗದ ಕಾರಣ ಕಸದ ಸಮಸ್ಯೆ ಉಲ್ಬಣಿಸಿತ್ತು.

‘ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಂಡಿದ್ದೇವೆ. ಮಿಟಗಾನಹಳ್ಳಿ ಪಕ್ಕ ಖಾಸಗಿ ಜಾಗದಲ್ಲಿ ಕಸ ಹಾಕಲು ಅವಕಾಶ ಸಿಕ್ಕಿದೆ. ಭಾನುವಾರ ರಾತ್ರಿಯಿಂದಲೇ ಕಸ ತೆಗೆಸುತ್ತಿದ್ದೇವೆ. ಒಂದೆರಡು ದಿನಗಳಲ್ಲಿ ನಗರ ಸ್ವಚ್ಛವಾಗಲಿದೆ’ ಎಂದು ಮೇಯರ್‌ ಗಂಗಾಂಬಿಕೆ ಭರವಸೆ ನೀಡಿದರು.

‘ಬೆಲ್ಲಹಳ್ಳಿ ಕ್ವಾರಿಯ ಭೂಭರ್ತಿ ಕೇಂದ್ರ ಎರಡು ತಿಂಗಳಲ್ಲಿ ಭರ್ತಿ ಆಗಲಿದೆ. ಬೇರೆ ಕ್ವಾರಿ ಬಳಸಲು ಅವಕಾಶ ಕೋರಿ ಹಿಂದಿನ ಉಪಮುಖ್ಯಮಂತ್ರಿಯವರಿಗೆ ಮೇ 29ರಂದೇ ಪತ್ರ ಬರೆದಿದ್ದೆ. ಅಂದೇ ಕ್ರಮ ಕೈಗೊಳ್ಳುತ್ತಿದ್ದರೆ, ಈಗ ಈ ಸ್ಥಿತಿ ಉಂಟಾಗುತ್ತಿರಲಿಲ್ಲ’ ಎಂದು ಮೇಯರ್ ಅಭಿಪ್ರಾಯಪಟ್ಟರು.

‘ನಗರದ ಬಹುತೇಕ ಕಸವನ್ನು ಬೆಲ್ಲಹಳ್ಳಿ ಭೂಭರ್ತಿ ಘಟಕದಲ್ಲಿ ವಿಲೇವಾರಿ ಮಾಡಲಾಗುತ್ತಿತ್ತು. ಅದೀಗ ಬಹುತೇಕ ತುಂಬಿದೆ. ಹೆಚ್ಚೆಂದರೆ 2 ತಿಂಗಳವರೆಗೆ ದಿನಕ್ಕೆ 200 ಟ್ರಕ್‌ಗಳಷ್ಟು ಕಸವನ್ನು ಅಲ್ಲಿಗೆ ಕಳುಹಿಸಬಹುದು’ ಎಂದು ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

‘ಇನ್ನು ಮುಂದೆ ಕಸ ಭರ್ತಿ ಮಾಡಲು ಮಿಟಗಾನಹಳ್ಳಿಯ ಕ್ವಾರಿ ಬಳಸಲಿ ದ್ದೇವೆ. ಈ ಬಗ್ಗೆ ಸಿ.ಎಂ ಜೊತೆ ಚರ್ಚಿಸಿದ್ದೇನೆ. ಸ್ಥಳೀಯರ ವಿರೋಧದಿಂದಾಗಿ ಇಲ್ಲಿ ಕಸ ವಿಲೇವಾರಿಯನ್ನು ಎರಡು ವರ್ಷಗಳ ಹಿಂದೆ ಸ್ಥಗಿತಗೊಳಿಸಲಾಗಿತ್ತು. ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ಜೊತೆಗೂ ಚರ್ಚಿಸಿದ್ದೇವೆ’ ಎಂದರು.

‘ಮನೆ ಮನೆಯಿಂದ ಕಸ ಸಂಗ್ರಹಿಸುವ ಹೊಸ ಟೆಂಡರ್‌ ಸೆ.1ರಿಂದ ಜಾರಿಗೆ ಬರಲಿದೆ’ ಎಂದರು.

‘ಹೊಸ ಟೆಂಡರ್‌ಗೆ 117 ವಾರ್ಡ್‌ ಸಿದ್ಧ’
‘ಮನೆ ಮನೆಯಿಂದ ಕಸ ಸಂಗ್ರಹಿಸುವ ಕುರಿತು 101 ವಾರ್ಡ್‌ಗಳ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. 25 ವಾರ್ಡ್‌ಗಳಲ್ಲಿ ಗುತ್ತಿಗೆದಾರರು ಹೆಚ್ಚು ಮೊತ್ತ ನಮೂದಿಸಿದ್ದರು. ಕಡಿಮೆ ಮಾಡುವಂತೆ ಮಾತುಕತೆ ನಡೆಸುತ್ತಿದ್ದೇವೆ. 16 ವಾರ್ಡ್‌ಗಳಲ್ಲಿ ಮಾತುಕತೆ ಫಲಪ್ರದವಾಗಿದೆ. ಹಾಗಾಗಿ 117 ವಾರ್ಡ್‌ಗಳು ಹೊಸ ಕಸ ಸಂಗ್ರಹ ವ್ಯವಸ್ಥೆಗೆ ಸಜ್ಜಾಗಿವೆ’ ಎಂದು ಆಯುಕ್ತರು ತಿಳಿಸಿದರು.

ಇಂದಿರಾ ಕ್ಯಾಂಟೀನ್‌ ಹೆಸರು ಬದಲು?
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದರಿಂದ ಇಂದಿರಾ ಕ್ಯಾಂಟೀನ್‌ ಹೆಸರು ಬದಲಾಗುತ್ತದೆಯೇ? ಇಂಥ ಮಾತು ಬಿಬಿಎಂಪಿಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ‘ಈ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದರು.

ಹೆಸರು ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಮೇಯರ್‌, ‘ಇಂತಹ ಯಾವುದೇ ಪ್ರಸ್ತಾವ ನನ್ನ ಮುಂದೆ ಬಂದಿಲ್ಲ. ಊಹಾಪೋಹಗಳಿಗೆ ಪ್ರತಿಕ್ರಿಯಿಸುವುದು ಸರಿಯಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT