ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕನಾಗಮಂಗಲ: ಶೀಘ್ರ ಲಿಚೆಟ್ ಘಟಕ ಕಾರ್ಯಾರಂಭ

ತ್ಯಾಜ್ಯ ಸಂಸ್ಕರಣ ಘಟಕ
Last Updated 3 ಸೆಪ್ಟೆಂಬರ್ 2022, 21:30 IST
ಅಕ್ಷರ ಗಾತ್ರ

ನವದೆಹಲಿ: ಆನೇಕಲ್ ತಾಲ್ಲೂಕಿನ ಚಿಕ್ಕನಾಗಮಂಗಲ ತ್ಯಾಜ್ಯ ನೀರು ಸಂಸ್ಕರಣ ಘಟಕದಲ್ಲಿ ಲಿಚೆಟ್‌ ಘಟಕ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದ್ದು, ಆರು ತಿಂಗಳಲ್ಲಿ ಘಟಕ ಕಾರ್ಯಾರಂಭ ಮಾಡಲಿದೆ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತಿಳಿಸಿದೆ.

ಘಟಕದಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಗ್ರಾಮಸ್ಥರು ಬಿಬಿಎಂಪಿಗೆ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಪ್ರಧಾನ ಪೀಠವು (ಎನ್‌ಜಿಟಿ) ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು. ನ್ಯಾಯಮಂಡಳಿಯು ಬಿಬಿಎಂಪಿಗೆ ನೋಟಿಸ್‌ ನೀಡಿತ್ತು. ಈ ಸಂಬಂಧ ಪಾಲಿಕೆಯು ಎನ್‌ಜಿಟಿಗೆ ಪ್ರಮಾಣಪತ್ರ ಸಲ್ಲಿಸಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಒಪ್ಪಿಗೆ ಪಡೆದು ಈ ಘಟಕವನ್ನು 2015ರಲ್ಲಿ ಸ್ಥಾಪಿಸಲಾಗಿದೆ. ಘಟಕದಲ್ಲಿ ಪ್ರತಿನಿತ್ಯ 300 ಟನ್‌ ಕಸ ಸಂಸ್ಕರಣೆ ಮಾಡಲಾಗುತ್ತಿದೆ. ಘನತ್ಯಾಜ್ಯ ನಿರ್ವಹಣೆ ನಿಯಮ 2016ರ ಪ್ರಕಾರ, ಈ ಘಟಕವನ್ನು 5 ಎಕರೆ ಘಟಕದಲ್ಲಿ ಸ್ಥಾಪಿಸಲಾಗಿದ್ದು, ಕಲುಷಿತ ನೀರು ಅಂತರ್ಜಲ ಸೇರದಂತೆ
ತಡೆಯಲಾಗಿದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.

ಗ್ರಾಮಸ್ಥರ ಬೇಡಿಕೆಗಳ ಬಗ್ಗೆ ಚರ್ಚಿಸಲು 2022ರ ಆಗಸ್ಟ್‌ 22ರಂದು ಸಭೆ ನಡೆಸಲಾಗಿದೆ. ಈ ಗ್ರಾಮವು ಬಿಬಿಎಂಪಿ ವ್ಯಾಪ್ತಿಯಿಂದ ಹೊರಗೆ ಇದೆ. ಆದರೂ, ಗ್ರಾಮದ ಅಭಿವೃದ್ಧಿ ಕಾಮಗಾರಿಗಳಿಗೆ ಈವರೆಗೆ ₹18.3 ಕೋಟಿ ಅನುದಾನ ನೀಡಲಾಗಿದೆ ಎಂದೂ ತಿಳಿಸಲಾಗಿದೆ.

ಗ್ರಾಮಸ್ಥರ ಅಳಲು: ಈ ಘಟಕದಿಂದ ಉತ್ಪತ್ತಿಯಾಗುವ ಕಲುಷಿತ ದ್ರವ ಹಾಗೂ ಹಸಿ ತ್ಯಾಜ್ಯದಿಂದ ದುರ್ವಾಸನೆ ಬರುತ್ತಿದೆ. ಇದರಿಂದಾಗಿ, ಸ್ಥಳೀಯ ನಾಗರಿಕರು ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಈ ಘಟಕದ ಕಲುಷಿತ ನೀರು ರಾಜಕಾಲುವೆ ಮೂಲಕ ಕೆರೆಗೆ ಸೇರುತ್ತಿದೆ. ಆದರೆ, ಸಮಸ್ಯೆ ಬಗೆಹರಿಸಲು ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಘಟಕ ಸ್ಥಾಪಿಸುವ ಸಂದರ್ಭದಲ್ಲಿ ಪಾಲಿಕೆ ಅಧಿಕಾರಿಗಳು ಹಲವು ಭರವಸೆ ನೀಡಿದ್ದರು. ಯಾವುದೇ ಭರವಸೆಯನ್ನು ಈಡೇರಿಸಿಲ್ಲ. ಗ್ರಾಮವನ್ನು ಈಗ ಕಸದ ತಾಣವನ್ನಾಗಿ ಪರಿವರ್ತಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮಸ್ಥರ ಬೇಡಿಕೆಗಳೇನು?

*ಗ್ರಾಮಕ್ಕೆ ಕಾವೇರಿ ನೀರಿನ ವ್ಯವಸ್ಥೆ ಕಲ್ಪಿಸಬೇಕು.

*ಗ್ರಾಮಗಳ ರಸ್ತೆ ದುರಸ್ತಿ ಮಾಡಬೇಕು ಹಾಗೂ ಹೊಸ ರಸ್ತೆಗಳ ನಿರ್ಮಾಣ ಮಾಡಬೇಕು.

*ಆರೋಗ್ಯ ಕೇಂದ್ರ ಆರಂಭಿಸಬೇಕು.

*ಅಂಬೇಡ್ಕರ್ ಭವನ, ಗ್ರಂಥಾಲಯ, ಉದ್ಯಾನ ನಿರ್ಮಿಸಬೇಕು.

*ಸ್ಮಶಾನ ಅಭಿವೃದ್ಧಿಪಡಿಸಬೇಕು.

*ತ್ಯಾಜ್ಯ ನೀರು ದುರ್ವಾಸನೆ ಬರದಂತೆ ತಡೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT