ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿಗೆ ತಪ್ಪು ಮಾಹಿತಿ ನೀಡಿದರೇ ಬಿಡಿಎ ಅಧಿಕಾರಿಗಳು?

ತಾಳೆಯಾಗುತ್ತಿಲ್ಲ ಜನವರಿ ತಿಂಗಳ ಹಾಗೂ ಜೂನ್‌ ತಿಂಗಳ ಸಭೆಯ ಮಾಹಿತಿ
Last Updated 28 ಜೂನ್ 2021, 21:58 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ನಡೆಸಿದ ಪ್ರಗತಿ ಪರಿಶೀಲನಾ ಸಭೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧಿಕಾರಿಗಳು ತಪ್ಪು ಮಾಹಿತಿ ನೀಡಿ ಪೇಚಿಗೆ ಸಿಲುಕಿದ್ದಾರೆ.

ಬಿ.ಎಸ್‌.ಯಡಿಯೂರಪ್ಪ ಅವರು 2021ರ ಜನವರಿ 18ರಂದು ನಡೆಸಿದ ಬಿಡಿಎ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಾಧಿಕಾರದ ಅಧಿಕಾರಿಗಳು ನೀಡಿದ ಮಾಹಿತಿ ಹಾಗೂ 2021ರ ಜೂನ್‌ 8ರಂದು ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನೀಡಿದ ಮಾಹಿತಿ ನಡುವೆ ಸಾಕಷ್ಟು ವ್ಯತ್ಯಾಸಗಳು ಮತ್ತು ತಪ್ಪುಗಳು ಇವೆ.

ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಬಿಡಿಎ 4500 ಮೂಲೆ ನಿವೇಶನಗಳ ಹರಾಜು ನಡೆಸಲು ಸಿದ್ಧತೆ ನಡೆಸಿದೆ. ಇದುವರೆಗೆ 1,827 ನಿವೇಶನಗಳನ್ನು ಹರಾಜಿನಲ್ಲಿ ಮಾರಾಟ ಮಾಡಿದೆ. ಜನವರಿಯ ಸಭೆಯಲ್ಲಿ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ 2020ರ ಜೂನ್‌ 17ರಂದು ಹರಾಜಿಗೆ ಅಧಿಸೂಚನೆ ಹೊರಡಿಸಿದ 162 ನಿವೇಶನಗಳ ವಿಕ್ರಯದಿಂದ ಬಿಡಿಎಗೆ ಸಂದಾಯವಾಗಬೇಕಾದ ಮೊತ್ತ ₹ 210.82 ಕೋಟಿ. ಜೂನ್‌ ತಿಂಗಳ ಸಭೆಯ ಮಾಹಿತಿ ಪ್ರಕಾರ ಈ 162 ನಿವೇಶನಗಳ ವಿಕ್ರಯದಿಂದ ಬಿಡಿಎಗೆ ಸಂದಾಯವಾಗಬೇಕಾದ ಮೊತ್ತ ₹ 199.31 ಕೋಟಿ. ಹಾಗಾದರೆ ₹ 11.51 ಕೋಟಿ ಎಲ್ಲಿಗೆ ಹೋಯಿತು ಎಂಬ ಪ್ರಶ್ನೆ ಮೂಡಿದೆ. ಸಂದಾಯವಾದ ಮೊತ್ತದ ವಿವರವನ್ನು ಅಧಿಕಾರಿಗಳು ಅಧಿಸೂಚನೆಯ ದಿನಾಂಕಕ್ಕೆ ಅನುಗುಣವಾಗಿ ಒದಗಿಸದೆಯೇ ಮೊತ್ತವನ್ನು ಮಾತ್ರ ಸಭೆಯಲ್ಲಿ ಪ್ರಸ್ತುತ ಪಡಿಸಿದ್ದಾರೆ.

ಮೂಲೆ ನಿವೇಶನಗಳ ಹರಾಜಿಗೆ 2020ರ ಆ. 14ರಂದು ಪ್ರಕಟಿಸಿದ ಅಧಿಸೂಚನೆ ಪ್ರಕಾರ ಪ್ರಾಧಿಕಾರ 228 ನಿವೇಶನಗಳನ್ನು ವಿಲೇವಾರಿ ಮಾಡಿದೆ. ಅದಕ್ಕೆ ₹ 103. 87 ಕೋಟಿ ಮೂಲದರವನ್ನು ಬಿಡಿಎ ನಿಗದಿಪಡಿಸಿತ್ತು ಎನ್ನುತ್ತದೆ ಜನವರಿ ತಿಂಗಳ ಸಭೆಯ ಮಾಹಿತಿ. ಆದರೆ, ಜೂನ್‌ ತಿಂಗಳ ಸಭೆಯ ಮಾಹಿತಿ ಪ್ರಕಾರ ಅದಕ್ಕೆ ಬಿಡಿಎ ನಿಗದಿಪಡಿಸಿದ್ದು ₹ 96.45 ಕೋಟಿ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ನಿವೇಶನಗಳ ಸಂಖ್ಯೆ ಅಷ್ಟೇ (228) ಇದೆ. ಇಷ್ಟು ನಿವೇಶನಗಳ ಹರಾಜಿನಿಂದ ಬಿಡಿಎಗೆ ₹ 171.99 ಕೋಟಿ ಸಂದಾಯವಾಗಬೇಕು ಎಂದು ಬಿಡಿಎ ಜನವರಿಯಲ್ಲಿ ತಿಳಿಸಿತ್ತು. ಆದರೆ, 228 ನಿವೇಶನಗಳ ಮಾರಾಟದಿಂದ ಸಂದಾಯವಾಗಬೇಕಿರುವುದು ₹ 159.54 ಕೋಟಿ ಎಂದು ಜೂನ್‌ ತಿಂಗಳ ಸಭೆಯಲ್ಲಿ ತಿಳಿಸಿದೆ. ಇಲ್ಲಿ ದಿಢೀರ್‌ ₹ 12.45 ಕೋಟಿ ವ್ಯತ್ಯಾಸವಾಗಿದ್ದು ಹೇಗೆ?

ಮೂಲೆ ನಿವೇಶನಗಳ ಮಾರಾಟದ ಕುರಿತ ಅಂಕಿ–ಅಂಶಗಳಲ್ಲೇ ಇಂತಹ ಹತ್ತಾರು ತಪ್ಪುಗಳು ಕಾಣಸಿಗುತ್ತವೆ.

930 ಫ್ಲ್ಯಾಟ್‌ಗಳಿಗೂ, 205 ಫ್ಲ್ಯಾಟ್‌ಗಳಿಗೂ ಒಂದೇ ದರ!
ಮೂರು ವರ್ಷಗಳಲ್ಲಿ ಮಾರಾಟ ಮಾಡಿರುವ ನಿವೇಶನಗಳು/ ಫ್ಲ್ಯಾಟ್‌ಗಳು/ ಮೂಲೆನಿವೇಶನಗಳ ಕುರಿತ ಕೋಷ್ಠಕವನ್ನು ಬಿಡಿಎ ಅಧಿಕಾರಿಗಳು ಮುಖ್ಯಮಂತ್ರಿ ಅವರು ನಡೆಸಿದ ಎರಡೂ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಒದಗಿಸಿದ್ದಾರೆ. ಜನವರಿ ತಿಂಗಳ ಸಭೆಯಲ್ಲಿ ನೀಡಿದ ಕೋಷ್ಠಕದ ಪ್ರಕಾರ 2019–20ನೇ ಸಾಲಿನಲ್ಲಿ 930 ಫ್ಲ್ಯಾಟ್‌ಗಳನ್ನು ಬಿಡಿಎ ಮಾರಾಟಮಾಡಿ ₹ 129 ಕೋಟಿ ವರಮಾನ ಗಳಿಸಿದೆ. ಆದರೆ, ಜೂನ್‌ ತಿಂಗಳ ಸಭೆಯಲ್ಲಿ ಪ್ರಸ್ತುತ ಪಡಿಸಿದ ಮಾಹಿತಿ ಪ್ರಕಾರ, ಬಿಡಿಎ 2019–20ನೇ ಸಾಲಿನಲ್ಲಿ ಕೇವಲ 205 ಫ್ಲ್ಯಾಟ್‌ಗಳನ್ನು ಮಾರಾಟ ಮಾಡಿ ₹ 129 ಕೋಟಿ ವರಮಾನ ಗಳಿಸಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT