ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 74ರಷ್ಟು ಅನುದಾನ ಬಿಜೆಪಿ ಶಾಸಕರ ಪಾಲು!

ಆಡಳಿತ ಪಕ್ಷದ ಶಾಸಕರಿಗೆ ದುಪ್ಪಟ್ಟು ಅನುದಾನ
Last Updated 31 ಆಗಸ್ಟ್ 2021, 23:23 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ವಿವಿಧ ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗಾಗಿ ಜಿಲ್ಲಾ ಉಸ್ತುವಾರಿ ಸಚಿವರ ವಿವೇಚನಾ ಕೋಟಾದಡಿ ಒದಗಿಸುವ 2021–22ನೇ ಸಾಲಿನ ಅನುದಾನದ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರು ಆಕ್ಷೇಪಿಸಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಹಾಗೂ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿದೆ ಎಂದು ಬಿಜೆಪಿ ಶಾಸಕರು ಆರೋಪಿಸಿದ್ದರು. ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುವ ಚಾಳಿಯನ್ನು ಈಗ ಬಿಜೆಪಿ ನೇತೃತ್ವದ ಸರ್ಕಾರವೂ ಮುಂದುವರಿಸಿದೆ.

ರಾಜ್ಯ ಸರ್ಕಾರವು 2021–22ನೇ ಸಾಲಿನ ಬಜೆಟ್‌ನಲ್ಲಿ ಬೆಂಗಳೂರು ನಗರ ಜಿಲ್ಲೆಗೆ ಒಟ್ಟು ₹ 250 ಕೋಟಿ ಅನುದಾನವನ್ನು ಹಂಚಿಕೆ ಮಾಡಿದೆ. ನಗರದ 27 ಶಾಸಕರಲ್ಲಿ 15 ಮಂದಿ ಬಿಜೆಪಿಯಿಂದ, 11 ಮಂದಿಕಾಂಗ್ರೆಸ್‌ನಿಂದ ಹಾಗೂ ಒಬ್ಬರು ಜೆಡಿಎಸ್‌ನಿಂದ ಆಯ್ಕೆಯಾದವರು. ಹಂಚಿಕೆಯಾದ ಒಟ್ಟು ಅನುದಾನದಲ್ಲಿ ಶೇ 74ರಷ್ಟನ್ನು (₹185 ಕೋಟಿ) ಆಡಳಿತ ಪಕ್ಷದ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಒದಗಿಸಲಾಗಿದೆ. ಕಾಂಗ್ರೆಸ್‌ ಪಕ್ಷದ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಶೇ 23.6ರಷ್ಟು (₹ 59 ಕೋಟಿ) ಹಾಗೂ ಜೆಡಿಎಸ್‌ ಶಾಸಕರು ಪ್ರತಿನಿಧಿಸುವ ಕ್ಷೇತ್ರಕ್ಕೆ ಶೇ 2.4 (₹ 6ಕೋಟಿ) ಅನುದಾನ ಹಂಚಿಕೆ ಮಾಡಲಾಗಿದೆ. ಬಿಜೆಪಿಯ ಕೆಲವು ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ₹ 15 ಕೋಟಿವರೆಗೂ ಅನುದಾನ ನೀಡಲಾಗಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರು ಪ್ರತಿನಿಧಿಸುವ ಯಾವುದೇ ಕ್ಷೇತ್ರಗಳಿಗೆ ₹ 6 ಕೋಟಿಗಿಂತ ಹೆಚ್ಚು ಅನುದಾನ ಸಿಕ್ಕಿಲ್ಲ.

‘ನಗರದ ಕೇಂದ್ರ ಪ್ರದೇಶಗಳಲ್ಲಿರುವ ಕ್ಷೇತ್ರಗಳು ಈಗಾಗಲೇ ಅಭಿವೃದ್ಧಿಯಾಗಿವೆ. ಅವುಗಳಿಗೆ ಕಡಿಮೆ ಅನುದಾನ ನೀಡಿ, ಹೊರವಲಯದ ಕ್ಷೇತ್ರಗಳಿಗೆ ಹೆಚ್ಚು ಅನುದಾನ ನೀಡುವುದನ್ನು ಸಮರ್ಥಿಸಬಹುದು. ಏಕೆಂದರೆ, ಹೊರ ವಲಯದ ಕ್ಷೇತ್ರಗಳಲ್ಲಿ ಈಗಲೂ ಮೂಲಸೌಕರ್ಯ ಕೊರತೆ ಇದೆ. ಈ ಮಾನದಂಡ ಅನುಸರಿಸದೇ ಆಡಳಿತ ಪಕ್ಷದ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಹೆಚ್ಚು ಅನುದಾನ ನೀಡುವುದನ್ನು ಒಪ್ಪಲಾಗದು’ ಎನ್ನುತ್ತಾರೆ ವಿರೋಧ ಪಕ್ಷಗಳ ಶಾಸಕರು.

ಬೆಂಗಳೂರು ನಗರದ ಉಸ್ತುವಾರಿ ಸಚಿವರೂ ಆಗಿದ್ದ ಬಿ.ಎಸ್.ಯಡಿಯೂರಪ್ಪ ಅವರುಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವುದಕ್ಕೆ ಒಂದು ವಾರ ಮುನ್ನ ವಿವಿಧ ಕ್ಷೇತ್ರಗಳಿಗೆ ಅನುದಾನ ಹಂಚಿಕೆ ಮಾಡಿದ್ದರು.

**
‘ಎಲ್ಲ ರೀತಿಯ ಅನುದಾನ ಹಂಚಿಕೆಯಲ್ಲೂ ತಾರತಮ್ಯ’
ದಾಸರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಎಲ್ಲ ವಿಧದ ಅನುದಾನಗಳ ಹಂಚಿಕೆಯಲ್ಲೂ ತಾರತಮ್ಯ ನಡೆಸಲಾಗಿದೆ. ಬಿಬಿಎಂಪಿಗೆ110 ಗ್ರಾಮಗಳು ಹೊಸತಾಗಿ ಸೇರ್ಪಡೆಯಾದ ಆರು ಕ್ಷೇತ್ರಗಳಲ್ಲಿ ಈ ಕ್ಷೇತ್ರವು ಸೇರಿದೆ. ಈ ಕ್ಷೇತ್ರಗಳಿಗೆ ಬಿಡುಗಡೆ ಮಾಡಿರುವ ವಿಶೇಷ ಅನುದಾನದಲ್ಲಿ ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ತಲಾ ₹ 210 ಕೋಟಿ ಹಂಚಿಕೆ ಮಾಡಿದ್ದರೆ, ದಾಸರಹಳ್ಳಿ ಕ್ಷೇತ್ರಕ್ಕೆ ಕೇವಲ ₹ 25 ಕೋಟಿ ನೀಡಲಾಗಿದೆ. ನನ್ನ ಕ್ಷೇತ್ರದಲ್ಲಿ ಅನೇಕ ಕಡೆ ಕುಡಿಯುವ ನೀರು ಹಾಗೂ ಒಳಚರಂಡಿ ಕೊಳವೆ ಅಳವಡಿಕೆಗೆ ರಸ್ತೆಗಳನ್ನು ಅಗೆಯಲಾಗಿದೆ. ಅವುಗಳ ದುರಸ್ತಿಗೆ ಕನಿಷ್ಠ ₹ 450 ಕೋಟಿ ಅನುದಾನ ಅಗತ್ಯ ಇದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರೇ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರು. ಆದರೂ ನನ್ನ ಕ್ಷೇತ್ರಕ್ಕೆ ತಾರತಮ್ಯ ಮಾಡಲಾಗಿದೆ.

ಬಿಬಿಎಂಪಿ ಅನುದಾನದಲ್ಲೂ ಕೆರೆ, ಉದ್ಯಾನ, ಮುಖ್ಯರಸ್ತೆಗಳ ಅಭಿವೃದ್ಧಿಗೆ ನಯಾಪೈಸೆ ಅನುದಾನವನ್ನೂ ನೀಡಿಲ್ಲ. ಮಳೆಗಾಲದಲ್ಲಿ ಪ್ರವಾಹ ಸೃಷ್ಟಿಯಾಗುವ ಅನೇಕ ಪ್ರದೇಶಗಳು ನಮ್ಮ ಕ್ಷೇತ್ರದಲ್ಲಿವೆ. ಆದರೂ, ಈ ಕ್ಷೇತ್ರದ ರಾಜಕಾಲುವೆಗಳ ಅಭಿವೃದ್ಧಿಗೆ ಅನುದಾನ ನೀಡಿಲ್ಲ. ಈ ಕ್ಷೇತ್ರದ ಚಿಕ್ಕಬಾಣಾವರ ಕೆರೆ, ಗಾಣಿಗರಹಳ್ಳಿ ಕೆರೆ, ಅಬ್ಬಿಗೆರೆ, ದಾಸರಹಳ್ಳಿ ಕೆರೆ ಹಾಗೂ ಶಿವಪುರ ಕೆರೆಗಳು ಹದಗೆಟ್ಟಿವೆ. ಬಿಬಿಎಂಪಿ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ ಸರ್ಕಾರ ₹ 340 ಕೋಟಿ ಅನುದಾನ ನೀಡಿದೆಯಾದರೂ ನಮ್ಮ ಕ್ಷೇತ್ರದ ಒಂದು ಕೆರೆಯನ್ನೂ ಈ ಯೋಜನೆಗೆ ಆಯ್ಕೆ ಮಾಡಿಲ್ಲ. ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹಂಚಿಕೆ ಮಾಡಲಾಗಿದ್ದ ₹ 650 ಕೋಟಿ ಅನುದಾನವನ್ನು ಈಗಿನ ಬಿಜೆಪಿ ನೇತೃತ್ವದ ಸರ್ಕಾರ ಕಿತ್ತುಕೊಂಡಿದೆ. ಈಗ ಉಸ್ತುವಾರಿ ಸಚಿವರ ವಿವೇಚನಾ ಕೊಟಾದ ಅನುದಾನದಲ್ಲೂ ಕ್ಷೇತ್ರಕ್ಕೆ ಅನ್ಯಾಯ ಮಾಡಲಾಗಿದೆ.

-ಆರ್‌.ಮಂಜುನಾಥ್‌, ದಾಸರಹಳ್ಳಿ ಕ್ಷೇತ್ರದ ಶಾಸಕ (ಜೆಡಿಎಸ್‌)

***

‘ಅನುದಾನದಲ್ಲಿ ತಾರತಮ್ಯ ಬೆಂಗಳೂರಿಗೆ ಮಾಡುವ ಅನ್ಯಾಯ’
ಬಿಜೆಪಿ ನೇತೃತ್ವದ ಸರ್ಕಾರ ಕ್ಷೇತ್ರವಾರು ಅನುದಾನ ಹಂಚಿಕೆಯಲ್ಲಿ ಮಾಡುತ್ತಿರುವ ತಾರತಮ್ಯ ಬೆಂಗಳೂರಿಗೆ ಮಾಡುವ ಅನ್ಯಾಯ. ಈ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಇಂತಹ ತಾರತಮ್ಯ ಮಾಮೂಲಿಯಂತಾಗಿದೆ. ಎಲ್ಲ ವಿಚಾರಗಳಲ್ಲೂ ಈಗಿನ ಸರ್ಕಾರ ರಾಜಕೀಯ ಮಾಡುತ್ತಿದೆ. ಇಂತಹ ರಾಜಕೀಯಗಳಿಂದ ಹಾನಿ ಆಗುವುದು ಬೆಂಗಳೂರು ನಗರಕ್ಕೆ. ನಗರದ ಸರ್ವತೋಮುಖ ಅಭಿವೃದ್ಧಿಗೆ ಇದು ತೊಡಕಾಗಿ ಪರಿಣಮಿಸಲಿದೆ. ಈ ರಾಜಕೀಯ ಭಂಡತನವನ್ನು ಖಂಡಿಸುತ್ತೇನೆ.

ನಗರದ ಹೊರವಲಯದಲ್ಲಿರುವ ಬ್ಯಾಟರಾಯನಪುರ ಕ್ಷೇತ್ರ ಈಗಷ್ಟೇ ಮೂಲಸೌಕರ್ಯಗಳನ್ನು ಕಾಣುತ್ತಿದೆ. ಕಾವೇರಿ ನೀರಿನ ಕೊಳವೆ, ಒಳಚರಂಡಿ ಕೊಳವೆ,ವಿದ್ಯುತ್‌ ಕೇಬಲ್‌ ಅಳವಡಿಕೆ ಕಾರ್ಯಗಳು ಈಗಷ್ಟೇ ನಡೆಯುತ್ತಿವೆ. ಇಂತಹ ಕ್ಷೇತ್ರಕ್ಕೆ ಸಹಜವಾಗಿಯೇ ಹೆಚ್ಚು ಅನುದಾನದ ಅಗತ್ಯ ಇರುತ್ತದೆ. ಅನುದಾನ ಹಂಚಿಕೆಯಲ್ಲಿ ತಾರತಮ್ಯದ ಕುರಿತು ಮುಖ್ಯಮಂತ್ರಿಯವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ನಾವು ಪ್ರತಿಭಟನೆ ನಡೆಸಿದರೂ ಸರ್ಕಾರ ಸ್ಪಂದಿಸಿಲ್ಲ. ದ್ವೇಷವನ್ನೇ ತುಂಬಿಕೊಂಡ ಸರ್ಕಾರದಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ?

-ಕೃಷ್ಣ ಬೈರೇಗೌಡ, ಬ್ಯಾಟರಾಯನಪುರ ಕ್ಷೇತ್ರದ ಶಾಸಕ (ಕಾಂಗ್ರೆಸ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT