ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮಗಿದು ಗೊತ್ತೇ... ಬೆಂಗಳೂರಿನಲ್ಲಿ ಅಪಾಯದಲ್ಲಿವೆ 404 ಕಟ್ಟಡಗಳು!

Last Updated 16 ಅಕ್ಟೋಬರ್ 2021, 3:06 IST
ಅಕ್ಷರ ಗಾತ್ರ

ಬೆಂಗಳೂರು: ಶಿಥಿಲಗೊಂಡ ಕಟ್ಟಡಗಳು ಒಂದರ ಹಿಂದೆ ಒಂದರಂತೆ ಕುಸಿದು ಬೀಳುತ್ತಿರುವ ನಡುವೆ, ಯಾವುದೇ ಕ್ಷಣದಲ್ಲಿ ಕುಸಿಯಬಹುದಾದ 404 ಕಟ್ಟಡಗಳನ್ನು ಬಿಬಿಎಂಪಿ ಗುರುತಿಸಿದೆ.

‘2019ರಲ್ಲಿ ನಡೆಸಿದ್ದ ಸರ್ವೆಯಲ್ಲಿ ಈ ರೀತಿಯ 185 ಕಟ್ಟಡಗಳನ್ನು ಪಾಲಿಕೆ ಗುರುತಿಸಿತ್ತು. ಹೊಸದಾಗಿ ಸರ್ವೆ ನಡೆಸಿ15 ದಿನಗಳಲ್ಲಿ ವರದಿ ನೀಡಲು ಆದೇಶಿಸಲಾಗಿತ್ತು. ಅದರಂತೆ ಸಲ್ಲಿಕೆಯಾಗಿರುವ ಪ್ರಾಥಮಿಕ ವರದಿ ಪ್ರಕಾರ 404 ಕಟ್ಟಡಗಳು ಅಪಾಯದಲ್ಲಿರುವುದು ಗೊತ್ತಾಗಿದೆ’ ಎಂದು ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.

‘ಪ್ರಾಥಮಿಕ ಸರ್ವೆಯಲ್ಲಿ ಇಷ್ಟು ಕಟ್ಟಡಗಳನ್ನು ಗುರುತಿಸಲಾಗಿದೆ. ಆ ಕಟ್ಟಡಗಳ ಸದೃಢತೆ ಬಗ್ಗೆ ಕೂಲಂಕಶ ಪರೀಕ್ಷೆ ನಡೆಸುವುದು ಇನ್ನೂ ಬಾಕಿ ಇದೆ’ ಎಂದು ಸರ್ವೆಯಲ್ಲಿ ಭಾಗಿಯಾಗಿದ್ದ ಪಾಲಿಕೆ ಎಂಜಿನಿಯರ್ ಒಬ್ಬರು ತಿಳಿಸಿದರು.

‘ಕಟ್ಟಡಗಳನ್ನು ಮೇಲ್ನೋಟಕ್ಕೆ ನೋಡಿ ಮತ್ತು ಅದು ನಿರ್ಮಾಣ ಆಗಿರುವ ವರ್ಷ ಆಧರಿಸಿ ಕುಸಿಯುವ ಹಂತದಲ್ಲಿರುವ ಕಟ್ಟಡ ಎಂದು ಗುರುತಿಸಲಾಗಿದೆ. ಈ ಎಲ್ಲ ಕಟ್ಟಡಗಳನ್ನು ತಜ್ಞ ಎಂಜಿನಿಯರ್‌ಗಳ ಮೂಲಕ ಅವುಗಳ ಸದೃಡತೆ ಬಗ್ಗೆ ಪರೀಕ್ಷೆ ನಡೆಸಲಾಗುವುದು. ಬಳಿಕವೇ ಅವುಗಳ ತೆರವಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ವಿವರಿಸಿದರು.

ಈ ಸರ್ವೆ ಪ್ರಕಾರ ದಕ್ಷಿಣ ವಲಯದಲ್ಲೇ ಅತೀ ಹೆಚ್ಚು 103 ಕಟ್ಟಡಗಳು, ಪಶ್ಚಿಮ ವಲಯದಲ್ಲಿ 95 ಕಟ್ಟಡಗಳಿವೆ. ವಿಶೇಷ ಎಂದರೆ 2019ರಲ್ಲಿ ನಡೆಸಿದ ಸರ್ವೆಯಲ್ಲಿ ಬೊಮ್ಮನಹಳ್ಳಿ ವಲಯದಲ್ಲಿ ಶಿಥಿಲಾವಸ್ಥೆಯಲ್ಲಿರುವ ಒಂದೇ ಒಂದು ಕಟ್ಟಡ ಇರಲಿಲ್ಲ. ಈಗ 9 ಕಟ್ಟಡಗಳನ್ನು ಬಿಬಿಎಂಪಿ ಗುರುತಿಸಿದೆ.

2019ರಲ್ಲಿ ರಾಜರಾಜೇಶ್ವರಿನಗರ ವಲಯದಲ್ಲಿ ಒಂದೇ ಒಂದು ಕಟ್ಟಡ ಇತ್ತು. ಈಗ 11 ಕಟ್ಟಡಗಳನ್ನು ಗುರುತಿಸಲಾಗಿದೆ. ಈ 11 ಕಟ್ಟಡಗಳಲ್ಲಿ ಕೆಂಗೇರಿ ಪೊಲೀಸ್ ವಸತಿ ಗೃಹದಲ್ಲಿರುವ 9 ಕಟ್ಟಡಗಳು ಸೇರಿವೆ. ಈ ಕುರಿತು ಪೊಲೀಸ್ ಇಲಾಖೆಗೂ ತಿಳಿಸಲಾಗಿದೆ ಎಂದು ರಾಜರಾಜೇಶ್ವರಿನಗರ ವಲಯದ ಅಧಿಕಾರಿಯೊಬ್ಬರು ತಿಳಿಸಿದರು.

‘ಕಟ್ಟಡದ ಸದೃಢತೆ ಕುರಿತ ವರದಿ ಬಂದ ಕೂಡಲೇ ಕುಸಿಯುವ ಹಂತದಲ್ಲಿರುವ ಕಟ್ಟಡಗಳನ್ನು ನೆಲಸಮ ಮಾಡಲಾಗುವುದು. ಅವುಗಳಲ್ಲಿ ಅಪಾಯದಲ್ಲಿರುವ ಕೆಲ ಕಟ್ಟಡಗಳನ್ನು ವರದಿ ಬಂದ 24 ಗಂಟೆಗಳಲ್ಲಿ ಅವುಗಳನ್ನು ನೆಲಸಮ ಮಾಡಲು ಯೋಜನೆ ರೂಪಿಸಿಕೊಳ್ಳಲಾಗಿದೆ’ ಎಂದು ದಕ್ಷಿಣ ವಲಯದ ಅಧಿಕಾರಿಗಳು ಹೇಳಿದರು.

ಅಧಿಕಾರಿಗಳ ವಿರುದ್ಧವೂ ಕ್ರಮ

2019ರಲ್ಲಿ ಸರ್ವೆ ನಡೆಸಿ 185 ಕಟ್ಟಡಗಳು ಅಪಾಯದಲ್ಲಿವೆ ಎಂದು ಪಟ್ಟಿ ಮಾಡಿದ್ದರೂ ಅವುಗಳನ್ನು 10 ಕಟ್ಟಡಗಳನ್ನಷ್ಟೇ ನೆಲಸಮ ಮಾಡಲಾಗಿದೆ. ಉಳಿದ ಕಟ್ಟಡಗಳನ್ನು ಹಾಗೇ ಉಳಿಸಿಕೊಂಡಿರುವ ಅಧಿಕಾರಿಗಳು ಕ್ರಮ ಎದುರಿಸಲಿದ್ದಾರೆ ಎಂದು ಗೌರವ್ ಗುಪ್ತ ಹೇಳಿದರು.

ಆ ಕಟ್ಟಡಗಳಲ್ಲಿ ವಾಸ ಇರುವ ಜನರ ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಂಡು ಅವುಗಳನ್ನು ಕೆಡವಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

‘ಕುಸಿಯುವ ಹಂತದಲ್ಲಿದ್ದ ಕಟ್ಟಡಗಳನ್ನು ಎಂಜಿನಿಯರ್‌ಗಳು ಖುದ್ದು ಪರಿಶೀಲನೆ ನಡೆಸಿದ್ದಾರೆ. ಕೆಲ ಮಾಲೀಕರು ಕಟ್ಟಡಗಳನ್ನು ಸದೃಢ ಮಾಡಿಕೊಂಡಿದ್ದಾರೆ. ಕೆಲವರು ಏನನ್ನೂ ಮಾಡಿಲ್ಲ. ಅಂತಹ ಕಟ್ಟಡಗಳ ನೆಲಸಮಕ್ಕೆ ಏಳು ದಿನಗಳ ಕಾಲಾವಕಾಶ ನೀಡಲಾಗುವುದು. ಅವರು ನೆಲಸಮ ಮಾಡದಿದ್ದರೆ ಬಿಬಿಎಂಪಿಯಿಂದಲೇ ತೆರವುಗೊಳಿಸಲಾಗುವುದು’ ಎಂದು ಪಶ್ಚಿಮ ವಲಯದ ಅಧಿಕಾರಿಯೊಬ್ಬರು ಹೇಳಿದರು.

ಕುಸಿಯುವ ಹಂತದಲ್ಲಿರುವ ಕಟ್ಟಡಗಳು

ವಲಯ; 2019ರಲ್ಲಿ ಗುರುತಿಸಿದ್ದ ಕಟ್ಟಡಗಳು; ಹೊಸ ಸರ್ವೆಯಲ್ಲಿ ಪತ್ತೆಯಾಗಿರುವ ಕಟ್ಟಡಗಳು

ದಕ್ಷಿಣ; 33; 103

ಪಶ್ಚಿಮ; 34; 95

ಪೂರ್ವ; 46; 67

ಮಹದೇವಪುರ; 3; 24

ರಾಜರಾಜೇಶ್ವರಿನಗರ; 1; 11

ಬೊಮ್ಮನಹಳ್ಳಿ; 0; 9

ಯಲಹಂಕ; 60; 84

ದಾಸರಹಳ್ಳಿ; 8; 44

ಒಟ್ಟು; 185; 404

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT