ಬಿಬಿಎಂಪಿಗೆ ಈ ಸಾಲಿನ ಆರ್ಥಿಕ ಹೊರೆ ₹ 22,657 ಕೋಟಿ !

ಬೆಂಗಳೂರು: ಬಿಬಿಎಂಪಿಯಲ್ಲಿ 2020–21ನೇ ಸಾಲಿನಲ್ಲಿ ಅನುಮೋದನೆಗೊಂಡ ಬಜೆಟ್ ಗಾತ್ರ ₹ 10,717 ಕೋಟಿ. ಆದರೆ, ಈ ಸಾಲಿನಲ್ಲಿ ಪಾಲಿಕೆ ಎದುರಿಸುತ್ತಿರುವ ಒಟ್ಟು ಆರ್ಥಿಕ ಹೊರೆ ₹ 22,657 ಕೋಟಿ!
ಈ ಸಾಲಿನ ಬಜೆಟ್ ಕಾಮಗಾರಿಗಳ ಜೊತೆಗೆ ಇದುವರೆಗೆ ಪೂರ್ಣಗೊಂಡ ಕಾಮಗಾರಿಗಳು, ಪ್ರಗತಿಯಲ್ಲಿರುವ ಕಾಮಗಾರಿಗಳು, ಮುಂದುವರಿದ ಕಾಮಗಾರಿಗಳು, ಕಾರ್ಯಾದೇಶವಾಗಿ ಪ್ರಾರಂಭವಾಗಬೇಕಾದ ಕಾಮಗಾರಿಗಳು, ಟೆಂಡರ್ ಹಂತದಲ್ಲಿರುವವು, ಇನ್ನಷ್ಟೇ ಟೆಂಡರ್ ಕರೆಯಬೇಕಾದವು, ಆಡಳಿತಾತ್ಮಕ ಅನುಮೋದನೆ ಪಡೆದು ಇನ್ನಷ್ಟೇ ಕಾಮಗಾರಿ ಸಂಖ್ಯೆ ನೀಡಬೇಕಾದ ಕಾಮಗಾರಿಗಳೆಲ್ಲವೂ ಇದರಲ್ಲಿ ಸೇರಿವೆ.
ಪಾಲಿಕೆ ಆರ್ಥಿಕ ಪರಿಸ್ಥಿತಿಯ ಬಗ್ಗೆ ಪಾಲಿಕೆ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಅವರು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರಿಗೆ ಶನಿವಾರ (ಸೆ.5ರಂದು) ಪತ್ರ ಬರೆದಿದ್ದಾರೆ. ಪಾಲಿಕೆಯ ಆರ್ಥಿಕ ಪರಿಸ್ಥಿತಿಯನ್ನು ಆಯುಕ್ತರು ಎಳೆ ಎಳೆಯಾಗಿ ಬಿಚ್ಚಿಡುವುದಕ್ಕೆ ಕಾರಣವಾಗಿರುವುದು ಅವರ ಸಲಹೆಯನ್ನು ಧಿಕ್ಕರಿಸಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹಾಗೂ ಪಾಲಿಕೆ ಕೌನ್ಸಿಲ್ ಕೈಗೊಂಡಿರುವ ನಿರ್ಣಯ.
ವಾರ್ಡ್‌ಗಳ ಮತ್ತು ವಿಧಾನಸಭಾ ಕ್ಷೇತ್ರಗಳ ವಿಶೇಷ ಅಭಿವೃದ್ಧಿ ಕಾಮಗಾರಿಗಳಿಗಾಗಿ ಮೀಸಲಿಟ್ಟ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸಲು ನಿಯಮಗಳಲ್ಲಿ ಅವಕಾಶ ಇಲ್ಲದೇ ಹೋದರೂ, ಅದನ್ನು ಕಂಪ್ಯೂಟರ್ ವಿತರಣೆಗೆ ಮರುಹಂಚಿಕೆ ಮಾಡುವ ಬಗ್ಗೆ ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಸ್ವಯಂ ನಿರ್ಣಯ ಕೈಗೊಂಡಿತ್ತು. ಅದನ್ನು ಜುಲೈ 28ರಂದು ನಡೆದ ಕೌನ್ಸಿಲ್ ಸಭೆ ಅನುಮೋದಿಸಿತ್ತು. ಬಜೆಟ್‌ನಲ್ಲಿ ಹಂಚಿಕೆ ಮಾಡಿದ್ದ ₹ 524 ಕೋಟಿ ಅನುದಾನದಲ್ಲಿ, ಲ್ಯಾಪ್‌ಟಾಪ್ ಹಂಚಿಕೆಗೆ ₹ 103 ಕೋಟಿಯನ್ನು ಹಾಗೂ ಟ್ಯಾಬ್ ಹಂಚಿಕೆಗೆ ₹ 9.50 ಕೋಟಿಯನ್ನು ಬಳಸಲು ಕಾಮಗಾರಿ ಸಂಖ್ಯೆ ನೀಡಲಾಗಿದೆ.
‘ವಿಶೇಷ ಅಭಿವೃದ್ಧಿ ಅನುದಾನವನ್ನು ರಸ್ತೆ ಮತ್ತು ಚರಂಡಿ ದುರಸ್ತಿ, ಉದ್ಯಾನ, ಕಟ್ಟಡ ನಿರ್ಮಾಣ, ನವೀಕರಣ, ದುರಸ್ತಿ ಮತ್ತಿತರ ಸಿವಿಲ್ ಕಾಮಗಾರಿಗಳಿಗೆ ಬಳಸದೇ ಲ್ಯಾಪ್‌ಟಾಪ್ ಮತ್ತು ಟ್ಯಾಬ್ ನೀಡುವುದಕ್ಕೆ ಕಾಮಗಾರಿ ಸಂಖ್ಯೆ ಪಡೆಯಲಾಗಿದೆ. ಇದು ಅನುದಾನದ ಉದ್ದೇಶದ ಉಲ್ಲಂಘನೆ. ಈ ಬಗ್ಗೆ ಮುಂದೆ ಏನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ನಿರ್ದೇಶನ ನೀಡಬೇಕು’ ಎಂದು ಪಾಲಿಕೆ ಆಯುಕ್ತರು ಇಲಾಖೆಯನ್ನು ಕೋರಿದ್ದಾರೆ.
ಆದಾಯ ಬರದಿದ್ದರೂ, ಕಡಿತಗೊಳ್ಳುತ್ತಿಲ್ಲ ವೆಚ್ಚ
’ಬಿಬಿಎಂಪಿ ಬಜೆಟ್‌ಗಳಲ್ಲಿ ನಿರೀಕ್ಷಿಸಿದಷ್ಟು ಆದಾಯ ಬರುತ್ತಿಲ್ಲ. ಆದರೆ, ಬಜೆಟ್‌ನಲ್ಲಿ ವೆಚ್ಚಕ್ಕೆ ನಿಗದಿಪಡಿಸಿದ ಅಷ್ಟೂ ಯೋಜನೆಗಳಿಗೆ ಕಾಮಗಾರಿ ಸಂಖ್ಯೆ ನೀಡಲಾಗುತ್ತಿದೆ. ಇದರಿಂದಾಗಿ ಪ್ರತಿವರ್ಷ ಗುತ್ತಿಗೆದಾರರಿಗೆ ಪಾವತಿಸಬೇಕಾದ ಬಾಕಿ ಬಿಲ್‌ಗಳ ಮೊತ್ತ ಹೆಚ್ಚುತ್ತಲೇ ಹೋಗುತ್ತಿದೆ. ಪೂರ್ಣಗೊಂಡ ಕಾಮಗಾರಿಗಳಿಗೆ ಒಟ್ಟು ₹3,944.18 ಕೋಟಿ ಬಿಲ್ ಪಾವತಿ ಬಾಕಿ ಇದೆ. ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ₹ 286 ಕೋಟಿ ಸಾಲವಿದೆ. ಪ್ರಸಕ್ತ ಸಾಲಿನಲ್ಲಿ ಪಾಲಿಕೆಯ ಆದಾಯ ಸಂಗ್ರಹ ಕುಸಿಯುತ್ತಿರುವುದರಿಂದ ಆರ್ಥಿಕ ಸ್ಥಿತಿ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ‘ ಎಂದು ಆಯುಕ್ತರು ಪತ್ರದಲ್ಲಿ ಎಚ್ಚರಿಸಿದ್ದಾರೆ.
ಪ್ರತಿ ವಾರ್ಡ್‌ಗೆ 15 ಲ್ಯಾಪ್‌ಟಾಪ್ ಸಾಲದೇ?
ಕಲ್ಯಾಣ ಕಾರ್ಯಕ್ರಮಗಳಡಿ ಅನಂತ ಕುಮಾರ್ ಅವರ ಹೆಸರಿನಲ್ಲಿ ಪ್ರತಿ ವಾರ್ಡ್‌ನಲ್ಲಿ 15 ಲ್ಯಾಪ್‌ಟಾಪ್ ವಿತರಿಸಲು 2020–21ನೇ ಸಾಲಿನ ಬಿಬಿಎಂಪಿ ಬಜೆಟ್‌ನಲ್ಲಿ ₹ 15 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ. ಇದಲ್ಲದೇ ವಿಶೇಷ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮೀಸಲಿಟ್ಟ ₹ 112.70 ಕೋಟಿಯನ್ನು ಇದೇ ಉದ್ದೇಶಕ್ಕೆ ಮರುಹಂಚಿಕೆ ಮಾಡಲಾಗಿದೆ ಎಂಬುದನ್ನೂ ಆಯುಕ್ತರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.