ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಆರೋಗ್ಯ ಸೇವೆಗೆ ಎರಡು ವಿಭಾಗ ರಚನೆ

ಆದೇಶ ಹೊರಡಿಸುವಂತೆ ಕೋರಿ ಪಾಲಿಕೆ ಆಯುಕ್ತರಿಂದ ನಗರಾಭಿವೃದ್ಧಿ ಇಲಾಖೆಗೆ ಪತ್ರ
Last Updated 12 ಅಕ್ಟೋಬರ್ 2020, 21:16 IST
ಅಕ್ಷರ ಗಾತ್ರ

ಬೆ೦ಗಳೂರು: ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳು ತನ್ನ ತೆಕ್ಕೆಗೆ ಸೇರ್ಪಡೆಯಾಗಿರುವುದರಿಂದ ಆರೋಗ್ಯ ಸೇವೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಎರಡು ವಿಭಾಗಗಳನ್ನು ರಚಿಸುವ ಪ್ರಸ್ತಾಪವನ್ನು ಬಿಬಿಎಂಪಿ ಮುಂದಿಟ್ಟಿದೆ.

ಈ ಕುರಿತು ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಜಾವೇದ್‌ ಅಖ್ತರ್‌ ಅವರಿಗೆ ಪತ್ರ ಬರೆದಿದ್ದಾರೆ. ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಪೂರ್ಣ ಪ್ರಮಾಣದಲ್ಲಿ ಬಿಬಿಎಂಪಿ ವ್ಯಾಪ್ತಿಗೆ ವರ್ಗಾಯಿಸಬೇಕು. ಬಿಬಿಎಂಪಿ ಆರೋಗ್ಯ ಸೇವೆಗಳನ್ನು ಎರಡು ವಿಭಾಗಗಳನ್ನಾಗಿ ವಿಂಗಡಿಸುವ ಕುರಿತು ಆದೇಶ ಹೊರಡಿಸಲು ಕ್ರಮ ಕೈಗೊಳ್ಳಬೇಕು ಎಂದು ಆಯುಕ್ತರು ಕೋರಿದ್ದಾರೆ.

ಹೊರವಲಯದ 110 ಗ್ರಾಮಗಳನ್ನು ಹಾಗೂ ಏಳು ನಗರಸಭೆಗಳನ್ನು ಸೇರಿಸಿ ಬಿಬಿಎಂಪಿ ರಚಿಸಿದ ಬಳಿಕವೂ 63 ವಾರ್ಡ್‌ಗಳ 48 ಪಿಎಚ್‌ಸಿಗಳು ನಗರ ಜಿಲ್ಲಾಡಳಿತದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದಲ್ಲೇ ಇದ್ದವು. ‌ಇವುಗಳಲ್ಲಿ 35 ನಗರ ಆರೋಗ್ಯ ಅಭಿಯಾನದಡಿ ಪಟ್ಟಿಯಾಗಿದ್ದವು. 14 ಪಿಎಚ್‌ಸಿಗಳು ಹಾಗೂ ಎರಡು ಸಮುದಾಯ ಆರೋಗ್ಯ ಕೇಂದ್ರಗಳು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲೇ ಮುಂದುವರಿದಿದ್ದವು. ನಗರ ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಅವುಗಳ ಮೇಲ್ವಿಚಾರಣೆ ಸಾಧ್ಯವಾಗುತ್ತಿರಲಿಲ್ಲ.ಇನ್ನೊಂದೆಡೆ ಬಿಬಿಎಂಪಿಗೂ ಈ ಪಿಎಚ್‌ಸಿಗಳ ಮೇಲೆ ನಿಯಂತ್ರಣ ಇರಲಿಲ್ಲ. ಕ್ಷಯ, ಮಲೇರಿಯಾ ನಿಯಂತ್ರಣ, ತಾಯಿ ಮತ್ತು ಮಗುವಿನ ಆರೋಗ್ಯ ಸೇವೆ, ವಿವಿಧ ಚುಚ್ಚುಮದ್ದು ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಮಸ್ಯೆ ಆಗುತ್ತಿತ್ತು. ಹಾಗಾಗಿ ಈ ಪಿಎಚ್‌ಸಿಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಇತ್ತೀಚೆಗೆ ಹಸ್ತಾಂತರಿಸಲಾಗಿತ್ತು. ಆದರೆ, ಅಧಿಕಾರ ಹಾಗೂ ಸಿಬ್ಬಂದಿ ಮರುಹಂಚಿಕೆ ಸಂಬಂಧ ಗೊಂದಲ ಮುಂದುವರಿದಿತ್ತು.

ಹೊಸ ಪಿಎಚ್‌ಸಿಗಳ ಸೇರ್ಪಡೆ ಬಳಿಕ ಆಡಳಿತ ಸುಗಮಗೊಳಿಸಲು ಎರಡು ವಿಭಾಗಗಳನ್ನು ರಚಿಸುವ ಪ್ರಸ್ತಾಪ ಮುಂದಿಡಲಾಗಿದೆ. ಅದರ ಪ್ರಕಾರ ವಿಭಾಗ–1ರಲ್ಲಿ ಆರ್‌.ಆರ್‌.ನಗರ, ದಾಸರಹಳ್ಳಿ, ದಕ್ಷಿಣ ಹಾಗೂ ಪಶ್ಚಿಮ ವಲಯಗಳ ವ್ಯಾಪ್ತಿಯ 110 ವಾರ್ಡ್‌ಗಳನ್ನು ಹಾಗೂ ವಿಭಾಗ–2ರಲ್ಲಿ ಪೂರ್ವ, ಯಲಹಂಕ, ಬೊಮ್ಮನಹಳ್ಳಿ ಹಾಗೂ ಮಹದೇವಪುರ ವಲಯಗಳ ವ್ಯಾಪ್ತಿಯ 88 ವಾರ್ಡ್‌ಗಳನ್ನು ಹಂಚಿಕೆ ಮಾಡಬಹುದು. ಈ ಎರಡೂ ವಿಭಾಗದ ಅಧಿಕಾರಿಗಳು ಬಿಬಿಎಂಪಿಯ ವಿಶೇಷ ಆಯುಕ್ತರು (ಆರೋಗ್ಯ) ಅವರಿಗೆ ವರದಿ ಮಾಡಿಕೊಳ್ಳಬಹುದು ಎಂದು ಆಯುಕ್ತರು ಶಿಫಾರಸು ಮಾಡಿದ್ದಾರೆ.

‘ಬೆಂಗಳೂರು ನಗರ ಜಿಲ್ಲೆಯಲ್ಲಿ ವಿವಿಧ ರಾಷ್ಟ್ರೀಯ ಕಾರ್ಯಕ್ರಮ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಯನ್ನೂ ಈ ವಾರ್ಡ್‌ಗಳಿಗೆ ನಿಯೋಜಿಸಬಹುದು ಹಾಗೂ ಅವರನ್ನು ಪೂರ್ಣ ಪ್ರಮಾಣದಲ್ಲಿ ಬಿಬಿಎಂಪಿ ವಾರ್ಡ್‌ಗಳಿಗೆ ಸಂಬಂಧಿಸಿದ ಕರ್ತವ್ಯಕ್ಕೆ ಮಾತ್ರ ಬಳಸಿಕೊಳ್ಳಬೇಕು. ಅವರು ಬಿಬಿಎಂಪಿ ವಿಶೇಷ ಆಯುಕ್ತರಿಗೆ (ಆರೋಗ್ಯ) ವರದಿ ಮಾಡಿಕೊಳ್ಳಬೇಕು‘ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT