ಶನಿವಾರ, ಜೂನ್ 12, 2021
23 °C
ಕೋವಿಡ್‌ ನಿಯಂತ್ರಣ ಕಾರ್ಯದ ಮೇಲೂ ಹೆಚ್ಚುತ್ತಿದೆ ಒತ್ತಡ

ಬಿಬಿಎಂಪಿ ಆರೋಗ್ಯ ಸಿಬ್ಬಂದಿಯಲ್ಲಿ ಸೋಂಕು ಹೆಚ್ಚಳ: ಕೊರೊನಾ ಯೋಧರಲ್ಲಿ ಕಳವಳ

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ ಈ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವಲ್ಲಿ ಮುಂಚೂಣಿ ಯೋಧರಾಗಿ ಕಾರ್ಯನಿರ್ವಹಿಸುತ್ತಿರುವ ಬಿಬಿಎಂಪಿ ಆರೋಗ್ಯ ವಿಭಾಗದ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ಒಳಗಾಗುತ್ತಿದ್ದಾರೆ. ಇದರಿಂದಾಗಿ ಕೋವಿಡ್‌ ಪರೀಕ್ಷೆ, ಲಸಿಕೆ ಅಭಿಯಾನ, ಸೋಂಕಿತರ ಜೊತೆ ಸಂಪರ್ಕ ಹೊಂದಿದವರ ಪತ್ತೆ ಕಾರ್ಯ ಮುಂತಾದ ಕೋವಿಡ್‌  ನಿಯಂತ್ರಣ ಚಟುವಟಿಕೆ ಸವಾಲಾಗಿ ಪರಿಣಮಿಸಿದೆ.

ಬಿಬಿಎಂಪಿ ವ್ಯಾಪ್ತಿಯ ವಿವಿಧ ವಲಯಗಳಲ್ಲಿ 25 ವೈದ್ಯರು ಸೇರಿದಂತೆ 150 ಅಧಿಕ ಆರೋಗ್ಯ ಸಿಬ್ಬಂದಿಗೆ ಕೋವಿಡ್‌ ಕಾಣಿಸಿಕೊಂಡಿದೆ. ಒಂದೇ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಾಲ್ಕೈದು ಮಂದಿಗೆ ಒಮ್ಮೆಲೇ ಸೋಂಕು ಕಾಣಿಸಿಕೊಂಡ ಉದಾಹರಣೆಗಳೂ ಇವೆ. ಆರೋಗ್ಯ ಸಿಬ್ಬಂದಿ ಸೋಂಕಿಗೆ ಒಳಗಾದಾಗ ಅಲ್ಲಿನ ಇತರ ಆರೋಗ್ಯ ಸಿಬ್ಬಂದಿ ಮೇಲೆ ವಿಪರೀತ ಕೆಲಸದೊತ್ತಡ ಸೃಷ್ಟಿಯಾಗುತ್ತಿದೆ.

‘ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸಂಪರ್ಕ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕಿಯರು ಸೇರಿ ಐದು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತು. ಆದರೆ, ನಿತ್ಯ ನಡೆಸಬೇಕಾದ ಕೊವಿಡ್‌ ಪರೀಕ್ಷೆಗಳ ಗುರಿಯನ್ನು ನಾವು ಸಾಧಿಸಲೇ ಬೇಕಿತ್ತು. ಜತೆಗೆ ಕೋವಿಡ್ ಲಸಿಕೆ ಅಭಿಯಾನವನ್ನೂ ನಡೆಸಬೇಕಿತ್ತು. ಇಂತಹ ಪರಿಸ್ಥಿತಿ ನಿಭಾಯಿಸುವುದು ನಿಜಕ್ಕೂ ಕಷ್ಟದ ಕೆಲಸ’ ಎಂದು ಪಶ್ಚಿಮ ವಲಯದ ಪ್ರಾಥಮಿಕ ಆರೋಗ್ಯ ಕೇಂದ್ರವೊಂದರ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ವಲಯದಲ್ಲಿ ಏನಿಲ್ಲವೆಂದರೂ 35ಕ್ಕೂ ಅಧಿಕ ಆರೋಗ್ಯ ಸಿಬ್ಬಂದಿ ಹಾಗೂ 12 ವೈದ್ಯರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಸೊಂಕು ತಗುಲಿದ್ದ ವೈದ್ಯರೊಬ್ಬರ ತಾಯಿಯು ಕೋವಿಡ್‌ನಿಂದ ಕೊನೆಯುಸಿರೆಳೆದರು. ಶ್ರೀರಾಂಪುರದ ಹೆರಿಗೆ ಆಸ್ಪತ್ರೆಯೊಂದರ ಮೇಲ್ವಿಚಾರಕ ವೈದ್ಯೆಯೊಬ್ಬರಿಗೆ ಕೊರೊನಾ ಸೋಂಕು ತಗುಲಿತ್ತು. ಅವರ ಪತಿ ಕೋವಿಡ್‌ನಿಂದ ಮೃತಪಟ್ಟರು’ ಎಂದು ಪಶ್ಚಿಮ ವಲಯದ ಆರೋಗ್ಯ ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.   

‘ನಮ್ಮ ವಲಯದಲ್ಲಿ ಆರೋಗ್ಯ ವಿಭಾಗದ ಶೇ 40ಕ್ಕೂ ಅಧಿಕ ಸಿಬ್ಬಂದಿಗೆ ಕೋವಿಡ್‌ ಕಾಣಿಸಿಕೊಂಡಿದೆ. ಒಬ್ಬರು ಸೋಂಕಿನಿಂದ ಗುಣಮುಖವಾಗಿ ಬರುತ್ತಿರುವಾಗ ಮತ್ತೊಬ್ಬರಿಗೆ ಸೋಂಕು ಕಾಣಿಸಿಕೊಳ್ಳುತ್ತಿದೆ. ಇರುವ ಸಿಬ್ಬಂದಿಯೇ ಕರ್ತವ್ಯದ ಹೊಣೆಯನ್ನು ಹಂಚಿಕೊಂಡು ಕೋವಿಡ್‌ ನಿಯಂತ್ರಣ ಕಾರ್ಯಕ್ಕೆ ಅಡ್ಡಿ ಆಗದಂತೆ ನೋಡಿಕೊಳ್ಳುತ್ತಿದ್ದೇವೆ’ ಎಂದು ಪೂರ್ವ ವಲಯದ ಆರೋಗ್ಯ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.

‘ಕೋವಿಡ್‌ ಪರೀಕ್ಷೆಗಾಗಿ ಗಂಟಲ ದ್ರವ ಸಂಗ್ರಹಿಸುವ ಸಂಪರ್ಕ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು, ದತ್ತಾಂಶ ನೋಂದಣಿ ಸಿಬ್ಬಂದಿ, ವೈದ್ಯರು ಸೋಂಕಿತರ ಜೊತೆ ನಿತ್ಯ ವ್ಯವಹರಿಸಬೇಕಾಗುತ್ತದೆ. ಹಾಗಾಗಿ ಆರೋಗ್ಯ ಸಿಬ್ಬಂದಿಗೆ ಸೋಂಕು ತಗಲುವ ಅಪಾಯ ಜಾಸ್ತಿ. ನಮ್ಮ ವಲಯದಲ್ಲೂ ಐವರು ವೈದ್ಯರು ಹಾಗೂ 20ಕ್ಕೂ ಅಧಿಕ ಆರೋಗ್ಯ ಸಿಬ್ಬಂದಿಯಲ್ಲಿ ಕೋವಿಡ್‌ ಕಾಣಿಸಿಕೊಂಡಿದೆ’ ಎಂದು ದಕ್ಷಿಣ ವಲಯದ ಆರೋಗ್ಯ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.

‘ನಮ್ಮ ವಲಯದಲ್ಲಿ ಸೋಂಕು ಕಾಣಿಸಿಕೊಂಡವರ ಸಂಖ್ಯೆ ಕಡಿಮೆ. ಎರಡನೇ ಅಲೆಯಲ್ಲಿ ಒಬ್ಬರು ಸಂಪರ್ಕ ಕಾರ್ಯಕರ್ತೆಯಲ್ಲಿ ಮಾತ್ರ ಕೊರೊನಾ ಸೋಂಕು ಕಾಣಿಸಿಕೊಂಡಿದೆ’ ಎಂದು ಯಲಹಂಕ ವಲಯದ ಆರೋಗ್ಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ನಮ್ಮ ವಲಯದಲ್ಲಿ ಬಾಗಲಗುಂಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಕೆಲ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು’ ಎಂದು ದಾಸರಹಳ್ಳಿ ವಲಯದ ಅಧಿಕಾರಿಯೊಬ್ಬರು ಹೇಳಿದರು.

‘ನಮ್ಮವರಿಗೂ ಹಾಸಿಗೆ ಸಿಗುವ ಖಾತರಿ ಇಲ್ಲ’
‘ಕೊರೊನಾ ನಿಯಂತ್ರಣಕ್ಕೆ ಬಿಬಿಎಂಪಿಯ ಆರೋಗ್ಯ ಸಿಬ್ಬಂದಿ ಜೀವ ಪಣಕ್ಕಿಟ್ಟು ಶ್ರಮಿಸುತ್ತಿದ್ದಾರೆ. ಬೇಸರದ ಸಂಗತಿ ಎಂದರೆ ಅವರಿಗೆ ಕೋವಿಡ್‌ ಬಂದು ಆರೋಗ್ಯ ಸ್ಥಿತಿ ಉಲ್ಬಣಗೊಂಡರೆ ಚಿಕಿತ್ಸೆಗೆ ಐಸಿಯು ಅಥವಾ ವೆಂಟಿಲೇಟರ್‌ ವ್ಯವಸ್ಥೆಯ ಹಾಸಿಗೆ ಸಿಗುತ್ತದೆ ಎಂಬ ಖಾತರಿ ಇಲ್ಲ. ಆರೋಗ್ಯ ಸಿಬ್ಬಂದಿಯಿಂದಾಗಿ ಅವರ ಮನೆಯವರಿಗೂ ಕೋವಿಡ್‌ ಸೋಂಕು ತಗಲುತ್ತಿದೆ. ಇಂತಹ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಹಾಸಿಗೆ ಪಡೆಯಲು ಸಾಧ್ಯವಾಗದ ಸ್ಥಿತಿ ಇದೆ. ಇದು ಆರೋಗ್ಯ ಸಿಬ್ಬಂದಿ ಧೃತಿಗೆಡುವಂತೆ ಮಾಡುತ್ತಿದೆ’ ಎಂದು ಕೋವಿಡ್‌ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ವೈದ್ಯರೊಬ್ಬರು ಕಳವಳ ವ್ಯಕ್ತಪಡಿಸಿದರು.

‘ವೈಯಕ್ತಿಕ ಸುರಕ್ಷತೆಗೆ ಆದ್ಯತೆ ನೀಡಬೇಕು’
‘ಕೋವಿಡ್‌ನಂತಹ ಸಾಂಕ್ರಾಮಿಕ ನಿಯಂತ್ರಣ ಮಾಡುವಾಗ ಆರೋಗ್ಯ ವಿಭಾಗದ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ಒಳಗಾಗುತ್ತಿರುವುದು ಕಳವಳಕಾರಿ ಸಂಗತಿ. ಈ ಬಿಕ್ಕಟ್ಟಿನ ನಡುವೆಯೂ ಧೃತಿಗೆಡದೇ ಕರ್ತವ್ಯ ನಿರ್ವಹಿಸುವುದು ಅನಿವಾರ್ಯ. ಆರೋಗ್ಯ ಸಿಬ್ಬಂದಿ ಮಾಸ್ಕ್‌ ಹಾಗೂ ಮುಖ ಕವಚಗಳನ್ನು ಧರಿಸುವ ಮೂಲಕ ವೈಯಕ್ತಿಕ ಸುರಕ್ಷತೆಗೆ ಹೆಚ್ಚಿನ ಆಸ್ಥೆ ವಹಿಸಬೇಕು. ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಬಿಬಿಎಂಪಿಯ ಮುಖ್ಯ ಆರೋಗ್ಯಾಧಿಕಾರಿ ಡಾ.ಬಿ.ಕೆ.ವಿಜಯೇಂದ್ರ ತಿಳಿಸಿದರು.

‘ಪ್ರತಿ 15 ದಿನಕ್ಕೊಮ್ಮೆ ಕೋವಿಡ್ ಪರೀಕ್ಷೆ’
‘ಕೊರೊನಾ ನಿಯಂತ್ರಣ ಕರ್ತವ್ಯ ನಿರ್ವಹಿಸುವ ಆರೋಗ್ಯ ಸಿಬ್ಬಂದಿಗೆ ಪ್ರತಿ 15 ದಿನಗಳಿಗೊಮ್ಮೆ ಆರ್‌ಟಿ–ಪಿಸಿಆರ್‌ ಪರೀಕ್ಷೆ ನಡೆಸುತ್ತೇವೆ. ಹಾಗಾಗಿ ಸೋಂಕಿನ ಲಕ್ಷಣ ಕಂಡುಬಂದರೆ ಅವರು ತಕ್ಷಣವೇ ಮತ್ತೆ ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ’ ಎಂದು ಆರೋಗ್ಯ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.

‘ಬಹುತೇಕ ಎಲ್ಲ ಆರೋಗ್ಯ ಸಿಬ್ಬಂದಿಗೂ ಕೋವಿಡ್‌ ಲಸಿಕೆ ಹಾಕಿಸಿದ್ದೇವೆ. ಹಾಗಾಗಿ ಎರಡನೇ ಅಲೆಯಲ್ಲಿ ಅನೇಕ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿದೆಯಾದರೂ ಅವರು ಗಂಭೀರ ಆರೋಗ್ಯ ಸಮಸ್ಯೆ ಎದುರಿಸಿಲ್ಲ. ಸೋಂಕು ದೃಢಪಟ್ಟ ಏಳು ದಿನಗಳ ಬಳಿಕ ಅವರನ್ನು ಮತ್ತೆ ಕೋವಿಡ್‌ ಪರೀಕ್ಷೆಗೆ ಒಳಡಪಡಿಸುತ್ತೇವೆ. ರೋಗ ವಾಸಿಯಾದ ಬಳಿಕ ಅವರು ಮತ್ತೆ ಕರ್ತವ್ಯಕ್ಕೆ ಹಾಜರಾಗುತ್ತಾರೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು