ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದೋರ್‌ ಮಾದರಿಯಲ್ಲಿ ಕಸ ವಿಲೇವಾರಿ: 2 ವಾರ್ಡ್‌ಗಳಲ್ಲಿ ಪ್ರಾಯೋಗಿಕ ಜಾರಿ

ರಾತ್ರಿಯೇ ಕಸ ಸಂಗ್ರಹ ಆರಂಭ
Last Updated 27 ಜನವರಿ 2020, 19:39 IST
ಅಕ್ಷರ ಗಾತ್ರ

ಬೆಂಗಳೂರು: ಇಂದೋರ್‌ ಮಾದರಿಯಲ್ಲಿ ಕಸ ವಿಲೇವಾರಿ ವ್ಯವಸ್ಥೆಯನ್ನು ಪಾಲಿಕೆ ಸೋಮವಾರದಿಂದ ಜಾರಿಗೆ ತಂದಿದೆ. ಎರಡು ವಾರ್ಡ್‌ಗಳಲ್ಲಿ ರಾತ್ರಿ ವೇಳೆಯೇ ಕಸ ಸಂಗ್ರಹ ಆರಂಭಿಸಿದೆ.

‘ಈ ವಿಧಾನವನ್ನು ನಾನು ಪ್ರತಿನಿಧಿಸುವ ಜಕ್ಕೂರು ವಾರ್ಡ್‌, ಮೇಯರ್‌ ಎಂ.ಗೌತಮ್‌ ಕುಮಾರ್‌ ಪ್ರತಿನಿಧಿಸುವ ಜೋಗುಪಾಳ್ಯ ವಾರ್ಡ್‌
ನಲ್ಲಿ ಸೋಮವಾರದಿಂದ ಪ್ರಾಯೋಗಿಕವಾಗಿ ಆರಂಭಿಸಿದ್ದೇವೆ. ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್‌ ಅವರ ಮನೋರಾಯನಪಾಳ್ಯ, ಜೆಡಿಎಸ್‌ ಪಕ್ಷದ ನಾಯಕಿ ನೇತ್ರಾ ನಾರಾಯಣ್‌ ಅವರ ಕಾವಲ್‌ಭೈರಸಂದ್ರ ಹಾಗೂ ಮತ್ತಿಕೆರೆ ವಾರ್ಡ್‌ಗಳಲ್ಲೂ ಇದರ ಜಾರಿಗೆ ಸಿದ್ಧತೆ ನಡೆದಿದ್ದು, ಶೀಘ್ರವೇ ಆರಂಭವಾಗಲಿದೆ’ ಎಂದು ಆಡಳಿತ ಪಕ್ಷದ ನಾಯಕ ಕೆ.ಎ.ಮುನೀಂದ್ರ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಂದೋರ್‌ನ ಐವರು ತಜ್ಞರ ತಂಡ ಈ ಐದು ವಾರ್ಡ್‌ಗಳಲ್ಲಿ ಅಧ್ಯಯನ ನಡೆಸಿದೆ. ವಾರ್ಡ್‌ನಲ್ಲಿ ಎಷ್ಟು ಕಸ ಉತ್ಪಾದನೆಯಾಗುತ್ತಿದೆ, ಎಷ್ಟು ಮನೆ ಗಳಿಂದ ಕಸ ಸಂಗ್ರಹಿಸಲಾಗುತ್ತಿದೆ, ಅದನ್ನು ಹೇಗೆ ವಿಲೇ ಮಾಡಲಾಗುತ್ತಿದೆ, ಸಾರ್ವಜನಿಕ ಪ್ರದೇಶಗಳಲ್ಲಿ ಕಸದ ರಾಶಿ ಕಂಡು ಬರುತ್ತಿದೆಯೇ, ಕಟ್ಟಡ ತ್ಯಾಜ್ಯ ಬೇಕಾಬಿಟ್ಟಿ ಬಿಸಾಡಲಾಗುತ್ತಿದೆಯೇ ಎಂಬ ಬಗ್ಗೆ ವಿವರ ಸಂಗ್ರಹಿಸಿದೆ. ಸಂಗ್ರಹವಾಗುತ್ತಿರುವ ಹಸಿ ಕಸದ ಪ್ರಮಾಣ ಎಷ್ಟು, ಒಣ ಕಸದ ಪ್ರಮಾಣ ಎಷ್ಟು ಎಂಬ ಮಾಹಿತಿ ಕಲೆಹಾಕಿದ್ದು, ಅದಕ್ಕನುಗುಣವಾಗಿ ಎಷ್ಟು ಪ್ರಮಾಣದ ಮೂಲಸೌಕರ್ಯ ಬೇಕು ಎಂದು ಬೇಡಿಕೆ ಸಲ್ಲಿಸಿದೆ’ ಎಂದರು.

‘ವಾರ್ಡ್‌ನಲ್ಲಿ ಜಾಸ್ತಿ ಕಸ ರಾಶಿ ಬೀಳುವ ಪ್ರದೇಶಗಳನ್ನು ಸ್ವಚ್ಛಗೊಳಿಸುವ ಮೂಲಕ ಎಲ್ಲೂ ಕಸ ಎದ್ದು ಕಾಣದಂತಹ ಸ್ಥಿತಿ ನಿರ್ಮಿಸಲು ಆದ್ಯತೆ ನೀಡಲಾಗುತ್ತದೆ. ಮನೆ ಮನೆಯಿಂದ ಕಸ ಸಂಗ್ರಹಿಸುವ ವ್ಯವಸ್ಥೆಯನ್ನು ಸುಧಾರಿಸಲಾಗುತ್ತದೆ. ಸ್ಥಳೀಯ ಸರ್ಕಾರೇತರ ಸಂಘಟನೆಗಳಿಗೆ (ಎನ್‌ಜಿಒ) ಕಸ ವಿಲೇವಾರಿಯ ಉಸ್ತುವಾರಿ ವಹಿಸಲಾಗುತ್ತದೆ’ ಎಂದರು.

‘ಎಷ್ಟು ಮನೆಯಿಂದ ಕಸ ಸಂಗ್ರಹಿಸಲಾಗಿದೆ ಎಂಬ ಮಾಹಿತಿಯನ್ನುಜಿಪಿಎಸ್‌ ಆಧಾರದಲ್ಲಿ ಪಡೆಯುವ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ. ಬೀದಿಗೊಬ್ಬ ಎನ್‌ಜಿಒ ಪ್ರತಿನಿಧಿಯನ್ನು ನೇಮಿಸಲಾಗುತ್ತದೆ. ಪ್ರಮುಖ ಕಸದ ರಾಶಿಗಳನ್ನು ರಾತ್ರಿ ವೇಳೆಯೇ ತೆರವುಗೊಳಿಸಲಾಗುತ್ತದೆ’ ಎಂದರು.

‘ಇಂದೋರ್‌ನ ತಜ್ಞರ ತಂಡವು ಕಸ ವಿಲೇವಾರಿಗೆ ಹೆಚ್ಚುವರಿ ವಾಹನಗಳಿಗೆ ಬೇಡಿಕೆ ಇಟ್ಟಿದೆ. ತಳಮಟ್ಟದ ಕಸ ಸಂಗ್ರಹ ವ್ಯವಸ್ಥೆಯಲ್ಲಿ ಕೆಲವು ಮಾರ್ಪಾಡು ಮಾಡುವಂತೆ ಹಾಗೂ ಎನ್‌ಜಿಒ ನೆರವು ಒದಗಿಸುವಂತೆ ಕೇಳಿದೆ. ಇದಕ್ಕೆಲ್ಲ ವ್ಯವಸ್ಥೆ ಮಾಡಿದ್ದೇವೆ. ಸದ್ಯಕ್ಕೆ ಒಂದು ಆಟೊ ಬದಲು ಎರಡು ಆಟೊ ಒದಗಿಸುತ್ತಿದ್ದೇವೆ. 45 ದಿನಗಳಲ್ಲಿ ಈ ವ್ಯವಸ್ಥೆ ಪ್ರಾಯೋಗಿಕವಾಗಿ ಜಾರಿ ಮಾಡಿ, ಅಗತ್ಯ ಬಿದ್ದರೆ ಕೆಲವೊಂದು ಮಾರ್ಪಾಡು ಮಾಡಲಾಗುತ್ತದೆ’ ಎಂದು ಜಂಟಿ ಆಯುಕ್ತ (ಕಸ ನಿರ್ವಹಣೆ) ಸರ್ಫರಾಜ್‌ ಖಾನ್‌ ತಿಳಿಸಿದರು.

ಪ್ರಾಯೋಗಿಕವಾಗಿ ಇಂದೋರ್‌ ಮಾದರಿಯ ಕಸ ವಿಲೇವಾರಿ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಕ್ರಮೇಣ ಎಲ್ಲ ವಾರ್ಡ್‌ಗಳಿಗೂ ಈ ವ್ಯವಸ್ಥೆಯನ್ನು ವಿಸ್ತರಿಸುತ್ತೇವೆ.

- ಎಂ.ಗೌತಮ್‌ ಕುಮಾರ್‌, ಮೇಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT