ಗುರುವಾರ , ಆಗಸ್ಟ್ 18, 2022
23 °C
ಹಾಸಿಗೆ ಬ್ಲಾಕ್ ದಂಧೆ: ಸಂಬಂಧವಿಲ್ಲದಿದ್ದರೂ ಅವಹೇಳನಕಾರಿ ಸಂದೇಶ ಪ್ರಚಾರ

ಬೇಸರ ತೋಡಿಕೊಂಡ ಜಂಟಿ ಆಯುಕ್ತ ಸರ್ಫರಾಜ್‌ ಖಾನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿಬಿಎಂಪಿಯ ದಕ್ಷಿಣ ವಲಯದ ಕೋವಿಡ್‌ ವಾರ್‌ ರೂಮಗೂ ತಮಗೂ ಸಂಬಂಧವೇ ಇಲ್ಲದಿದ್ದರೂ ಹಾಸಿಗೆ ಬ್ಲಾಕ್‌ ಮಾಡುವ ಪ್ರಕರಣದಲ್ಲಿ ತಮ್ಮ ಹೆಸರನ್ನು ಸೇರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ಬಗ್ಗೆ ಜಂಟಿ ಆಯುಕ್ತ (ಕಸ ನಿರ್ವಹಣೆ ) ಸರ್ಫರಾಜ್‌ ಖಾನ್‌ ಬೇಸರ ತೋಡಿಕೊಂಡಿದ್ದಾರೆ.

ಈ ಪ್ರಕರಣಕ್ಕೆ ಕೋಮು ಬಣ್ಣ ಹಚ್ಚಿರುವುದು ಮತ್ತು ಅದರಲ್ಲಿ ನನ್ನ ಹೆಸರು ಎಳೆದುತಂದಿರುವುದು ನೋವು ತಂದಿದೆ. ಕಷ್ಟದ ಸಮಯದಲ್ಲೂ ವಿಷವನ್ನು ಹರಡುತ್ತಿರುವ ಬಗ್ಗೆ ತನಿಖೆಯಾಗಬೇಕು. ಅಂತಹವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

‘ವಾರ್ ರೂಮ್‌ ನಿರ್ವಹಣೆಯಲ್ಲಿ ನನ್ನ ಯಾವುದೇ ಪಾತ್ರವಿಲ್ಲ. ಅಲ್ಲಿ ಕಾರ್ಯನಿರ್ವಹಿಸುವ ಯಾವ ವೈದ್ಯರೂ ನನಗೆ ಗೊತ್ತಿಲ್ಲ. ನನ್ನ ಕೆಲಸವೇನಿದ್ದರೂ ಕೋವಿಡ್‌ ಆರೈಕೆ ಕೆಂದ್ರಗಳ ನಿರ್ವಹಣೆ ಮತ್ತು ಕಸ ವಿಲೇವಾರಿ. ವಾರ್ ರೂಂಗಳ ವೈದ್ಯರನ್ನು ಹಾಗೂ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವುದು ಆರೋಗ್ಯ ವಿಭಾಗ ಮತ್ತು ಬಿಬಿಎಂಪಿಯ ಆಯಾ ವಲಯದ ಕೆಲಸ’ ಎಂದು ಸ್ಪಷ್ಟಪಡಿಸಿದ್ದಾರೆ.

'ಕೋವಿಡ್ ಕೇರ್ ಕೇಂದ್ರಗಳಿಗೆ ಆಮ್ಲಜನಕ, ಆಮ್ಲಜನಕ ಸಾಂದ್ರೀಕರಣ ಸಾಧನಗಳ (ಕಾಂನ್ಸಂಟೇಟರ್‌ಗಳನ್ನು) ವ್ಯವಸ್ಥೆ ಕಲ್ಪಿಸಿ ಅಮೂಲ್ಯ ಜೀವಗಳನ್ನು ಉಳಿಸಲು ಹಗಲು ರಾತ್ರಿ ದುಡಿಯುತ್ತಿದ್ದೇನೆ. ಹಜ್ ಭವನವನ್ನು ಆಮ್ಲಜನಕ ಪೂರೈಕೆ ಇರುವ 140 ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರವನ್ನಾಗಿ ಪರಿವರ್ತಿಸಿದ್ದೇನೆ.‌ ಹಜ್ ಸಮಿತಿ ನಿಧಿಯಿಂದಲೇ 50 ಐಸಿಯುಗಳನ್ನು ಅಲ್ಲಿ ಅಳವಡಿಸಿದ್ದೇನೆ. ಅಲ್ಲಿರು ರೋಗಿಗಳಲ್ಲಿ ಶೇ 10ರಷ್ಟು ಮಂದಿ ಮಾತ್ರ ಮುಸ್ಲಿಮರು. ಉಳಿದ ಶೇ 90ರಷ್ಟು ಮಂದಿ ಇತರೆ ಧರ್ಮದ ನನ್ನ ಸಹೋದರರು. ದೇವರು ಒಬ್ಬನೇ– ನಾಮ ಹಲವು. ನಾವೆಲ್ಲರೂ ಅವನ ಮಕ್ಕಳು ಎಂಬುದರಲ್ಲಿ ನಂಬಿಕೆ ಇಟ್ಟವನು ನಾನು’ ಎಂದು ಅವರು ಹೇಳಿಕೊಂಡಿದ್ದಾರೆ.

‘ಕಷ್ಟದಲ್ಲಿರುವವರೆಲ್ಲ ನನ್ನ ಸೋದರ– ಸೋದರಿಯರು ಎಂದೇ ಭಾವಿಸುತ್ತೇನೆ. ಕಳೆದ ವರ್ಷ ಲಾಕ್‌ಡೌನ್‌ ಸಂದರ್ಭದಲ್ಲಿ ಬಡವರಿಗೆ ಅವರ ಧರ್ಮ ಯಾವುದು, ಯಾವ ಪ್ರದೇಶದವರು ಎಂದು ನೋಡದೇ ಆಹಾರದ ಕಿಟ್ ಒದಗಿಸಲು ಶ್ರಮಿಸಿದ್ದೆ. ಅವರು ಊರುಗಳಿಗೆ ತಲುಪುವಂತೆ ರೈಲು ವ್ಯವಸ್ಥೆ ಮಾಡಲು ನೆರವಾಗಿದ್ದೆ. ಈ ವೇಳೆ ನನ್ನಿಂದಾಗಿ ನನ್ನ ಕುಟುಂಬದವರಿಗೆಲ್ಲ ಕೊವಿಡ್ ತಗುಲಿತ್ತು.  ನಾನೂ ನಿಮ್ಮಲ್ಲಿ ಒಬ್ಬನಾಗಿರುವುದಕ್ಕೆ ಇಷ್ಟು ಸಾಕ್ಷಿ ಸಾಲದೇ’ ಎಂದು ಅವರು ಪ್ರಶ್ನಿಸಿದ್ದಾರೆ.

ಸಾಂತ್ವನ ಹೇಳಿದ ತೇಜಸ್ವಿಸೂರ್ಯ

ಸರ್ಫರಾಜ್‌ ಖಾನ್‌ ಅವರಿಗೆ ಬುಧವಾರ ಕರೆ ಮಾಡಿರುವ ತೇಜಸ್ವಿ ಸೂರ್ಯ, ‘ನಾನು ಸುದ್ದಿಗೋಷ್ಠಿಯಲ್ಲಿ ಎಲ್ಲೂ ನಿಮ್ಮ ಹೆಸರನ್ನು ಉಲ್ಲೇಖಿಸಿಲ್ಲ. ನೀವೂ ಅದೇ (ಮುಸ್ಲಿಂ) ಸಮುದಾಯಕ್ಕೆ ಸೇರಿರುವುದರಿಂದ ಕೆಲವರು ನಿಮ್ಮನ್ನು ಗುರಿಯಾಗಿಸಿ ಸಂದೇಶ ಹರಡುತ್ತಿದ್ದಾರೆ. ನಿಮ್ಮ ಬಗ್ಗೆ ಬಹಳ ಗೌರವ ಇದೆ. ಉತ್ತಮ ಅಭಿಪ್ರಾಯವೂ ಇದೆ’ ಎಂದು ಸಾಂತ್ವನ ಹೇಳಿದ್ದಾರೆ.

ಈ ಕುರಿತು ‍‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸರ್ಫರಾಜ್‌ ಖಾನ್‌, ‘ಇಡೀ ಘಟನೆಯಿಂದ ನನಗೆ ಆಗಿರುವ ನೋವನ್ನು ಫೇಸ್‌ಬುಕ್‌ನಲ್ಲಿ ತೋಡಿಕೊಂಡಿದ್ದೆ. ಬಳಿಕ ಸಂಸದ ತೇಜಸ್ವಿ ಸೂರ್ಯ ಅವರು ಕರೆ ಮಾಡಿ ಸಾಂತ್ವನ ಹೇಳಿದ್ದು ನಿಜ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು