ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋರುತ್ತಿದೆ ವಲಯ ಆಯುಕ್ತರ ಕಚೇರಿ

Last Updated 31 ಆಗಸ್ಟ್ 2021, 22:53 IST
ಅಕ್ಷರ ಗಾತ್ರ

ರಾಜರಾಜೇಶ್ವರಿನಗರ: ಗಬ್ಬುವಾಸನೆ, ಗಾಳಿ ಬೀಸಿದಾಗ ವಾಕರಿಕೆ ಬರುವಂತಹ ದುರ್ವಾಸನೆ, ಮೂತ್ರವಿಸರ್ಜನೆ ನಂತರ ನೀರು ಬಿಟ್ಟರೆ ಮೈಮೇಲೆ ನೀರು ಹಾರುವಂತಹ ಶೋಚನೀಯ ಸ್ಥಿತಿ...

ರಾಜರಾಜೇಶ್ವರಿನಗರ ಬಿಬಿಎಂಪಿ ವಲಯದ ಜಂಟಿ ಅಯುಕ್ತರ ಕಚೇರಿಯಲ್ಲಿ ಕಂಡುಬರುವ ದೃಶ್ಯ ಇದು. ಜಂಟಿ ಆಯುಕ್ತರ ಕಚೇರಿ, ಆರೋಗ್ಯ ವೈದ್ಯಾಧಿಕಾರಿಗಳ ಕಚೇರಿ, ಮುಖ್ಯ ಎಂಜಿನಿಯರ್ ಕಚೇರಿ, ನಗರ ಯೋಜನೆ, ಉಪ ಆಯುಕ್ತರು, ಕಂದಾಯ ಅಧಿಕಾರಿ, ಸಹಾಯಕ ಹಣಕಾಸು ನಿಯಂತ್ರಕರ ಕಚೇರಿ... ಹೀಗೆ ಹಲವಾರು ಕಚೇರಿಗಳು ಒಂದೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ, ಸಾರ್ವಜನಿಕರ ಸೇವೆ ನಿರ್ವಹಿಸುವ ಕಚೇರಿಯಲ್ಲಿರಬೇಕಾದ ಕನಿಷ್ಠ ವ್ಯವಸ್ಥೆಯೂ ಇಲ್ಲಿ ಇಲ್ಲ.

ಜಂಟಿ ಆಯುಕ್ತರು, ಉಪ ಆಯುಕ್ತರು, ಮುಖ್ಯ ಎಂಜಿನಿಯರ್, ಸಹಾಯಕ ಹಣಕಾಸು ನಿಯಂತ್ರಕರ ಕಚೇರಿಗಳಿಗೆ ಮಾತ್ರ ಪ್ರತ್ಯೇಕವಾದ ಶೌಚಾಲಯದ ವ್ಯವಸ್ಥೆಯಿರುವುದರಿಂದ ಆಪ್ತ ಸಹಾಯಕರ, ಸಿಬ್ಬಂದಿ ಹಾಗೂ ಸಾರ್ವಜನಿಕರಿಗಾಗಿ ನಿರ್ಮಿಸಿರುವ ಶೌಚಾಲಯದ ಈ ದಾರುಣ ಸ್ಥಿತಿ ಅಧಿಕಾರಿಗಳ ಗಮನಕ್ಕೆ ಬಂದಂತಿಲ್ಲ.

ಕಚೇರಿಯಲ್ಲಿರುವ ಕೊಳವೆ ಬಾವಿ ಅಥವಾ ಪಂಪ್‍ಸೆಟ್ ಕೆಟ್ಟುಹೋದರೆ ವಾರ ಕಳೆದರೂ ದುರಸ್ತಿ ಮಾಡಿಸುವುದಿಲ್ಲ. ನಾಲ್ಕು ದಿನಕ್ಕೊಮ್ಮೆ ನೀರು ಸರಬರಾಜು ಮಾಡುವುದರಿಂದ ಇಷ್ಟು ದೊಡ್ಡದಾದ ವಲಯ ಕಚೇರಿಗೆ ನೀರು ಸಾಕಾಗುವುದಿಲ್ಲ ಎಂದು ಸಿಬ್ಬಂದಿ ದೂರುತ್ತಾರೆ.

ಮಳೆ ಬಂದಾಗ ಕಚೇರಿಯ ಚಾವಣಿಗಳು ಸೋರುತ್ತವೆ. ದಾಖಲೆಗಳನ್ನು ಇಟ್ಟರೆ ಅವೂ ಹಾಳಾಗುತ್ತವೆ ಎನ್ನುವ ಪರಿಜ್ಞಾನವಿದ್ದರೂ ಬಿಬಿಎಂಪಿ ನಗರ ಯೋಜನೆ ವಿಭಾಗದ ಎಲ್ಲ ಕಡತಗಳು ಇದೇ ಕೊಠಡಿಯಲ್ಲಿ ಶೇಖರಣೆಗೊಂಡಿವೆ ಎನ್ನುತ್ತಾರೆ ನಾಗರಿಕರು.

ವಲಯದ ಮುಖ್ಯ ಎಂಜಿನಿಯರ್ ವಿಜಯ್‍ಕುಮಾರ್ ಪ್ರತಿಕ್ರಿಯಿಸಿ, ‘ಕಟ್ಟಡ ದುರಸ್ತಿಗಾಗಿ ಹಾಗೂ ನಿರ್ವಹಣೆಗಾಗಿ ₹44 ಲಕ್ಷದ ಯೋಜನೆ ಸಿದ್ದಪಡಿಸಲಾಗಿದ್ದು ಅನುಮೋದನೆಗಾಗಿ ಮುಖ್ಯ ಆಯುಕ್ತರ ಕಚೇರಿಗೆ ಕಳುಹಿಸಿಕೊಡಲಾಗಿದೆ. ಅನುಮೋದನೆ ದೊರೆತ ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT