ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕನಿಗೆ ಶಾಲೆಯ ನಿವೇಶನ: ಬಿಜೆಪಿಯ ಚಂದ್ರಪ್ಪ ವಿರುದ್ಧ ದಾಖಲೆ ಬಿಡುಗಡೆ

Last Updated 15 ಸೆಪ್ಟೆಂಬರ್ 2022, 19:28 IST
ಅಕ್ಷರ ಗಾತ್ರ

ಬೆಂಗಳೂರು: ‘ಸರ್‌ ಎಂ. ವಿಶ್ವೇಶ್ವರಯ್ಯ ಬಡಾವಣೆಯಲ್ಲಿಬಿಬಿಎಂಪಿ ಕನ್ನಡ ಶಾಲೆಗೆ ಮಂಜೂರಾಗಿದ್ದ ₹ 20 ಕೋಟಿ ಮೌಲ್ಯದ ಸಿ.ಎ. (ನಾಗರಿಕ ಸೌಕರ್ಯಗಳ) ನಿವೇಶನವನ್ನು ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಕಬಳಿಸಲು ಯತ್ನಿಸುತ್ತಿದ್ದಾರೆ’ ಎಂದು ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕೆ ಆರೋಪಿಸಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿದಾಖಲೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ವೇದಿಕೆ ಅಧ್ಯಕ್ಷ ಬಿ.ಎಂ. ಶಿವಕುಮಾರ್, ‘ಕೆಂಗೇರಿ ಉಪನಗರದದಲ್ಲಿರುವ ಈ ಬಡಾವಣೆಯ 2ನೇ ಬ್ಲಾಕ್‌ನಲ್ಲಿರುವ ಬಿಡಿಎ 25,225 ಚದರ ಅಡಿ ವಿಸ್ತೀರ್ಣದ ಸಿ.ಎ ನಿವೇಶನವನ್ನು 2010ರಫೆಬ್ರುವರಿ 2ರಂದು ಬಿಬಿಎಂಪಿಯ ಕನ್ನಡ ಶಾಲೆಗೆ ಹಂಚಿಕೆ ಮಾಡಿತ್ತು. 2010ರಜುಲೈ 17ರಂದು ಹಂಚಿಕೆ ಪತ್ರವನ್ನು ನೀಡಲಾಗಿತ್ತು. ಆದರೆ ಶಾಲೆ ನಿರ್ಮಿಸುವುದಾಗಿ ಹೇಳಿಚಂದ್ರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಮೂಲಕ ಒತ್ತಡ ತಂದು ನಿವೇಶನವನ್ನು ಪಡೆದು, 11 ವರ್ಷಗಳಿಂದ ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದಾರೆ’ ಎಂದರು.

‘ಚಂದ್ರಪ್ಪನವರಿಗೆ ಕುಮಾರಸ್ವಾಮಿ ಲೇಔಟ್‌ನಲ್ಲಿ ನಿವೇಶನ ನೀಡುವಂತೆ ಬಿಡಿಎ ಅಧಿಕಾರಿಗಳಿಗೆ ಯಡಿಯೂರಪ್ಪ ಅವರು ಮೌಖಿಕ ಸೂಚನೆ ನೀಡಿದ್ದರು. ಆದರೆ ಅಧಿಕಾರಿಗಳು ನಿವೇಶನವನ್ನು ಬೇರೆಯವರಿಗೆ ಹಂಚಿಕೆ ಮಾಡಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಚಂದ್ರಪ್ಪ, ‘ಆರಂಭಿಕ ಠೇವಣಿ ಪಾವತಿಸಿದ್ದೇನೆ. ಬಿಬಿಎಂಪಿ ಕನ್ನಡ ಶಾಲೆಗೆ ಹಂಚಿಕೆಯಾಗಿರುವ ಈ ನಿವೇಶನವನ್ನು ಚಿತ್ರದುರ್ಗದ ದೇವರಾಜ ಅರಸು ಶಿಕ್ಷಣ ಸಂಸ್ಥೆಗೆ ನೀಡಬೇಕು. ಅಲ್ಲಿ ಶಾಲೆ ಮತ್ತು ಸಮುದಾಯ ಭವನ ನಿರ್ಮಿಸಲಾಗುವುದು’ ಎಂದು 2010ರ ಜೂನ್ 7ರಂದು ಪತ್ರ ಬರೆದಿದ್ದರು. ಇದಕ್ಕೆ ಒಪ್ಪಿದ್ದ ಯಡಿಯೂರಪ್ಪ, ಈ ಸಂಬಂಧ ಬಿಡಿಎ ಅಧಿಕಾರಿಗಳಿಗೆ ಮತ್ತೆ ಮೌಖಿಕ ಸೂಚನೆ ನೀಡಿದ್ದರು’ ಎಂದು ವಿವರಿಸಿದರು.

‘ಬಿಬಿಎಂಪಿ ಕನ್ನಡ ಶಾಲೆಗೆ ಮಂಜೂರಾಗಿರುವ ಸಿ.ಎ ನಿವೇಶನವನ್ನು ಚಂದ್ರಪ್ಪ ಅವರಿಗೆನೀಡಲು ಸಾಧ್ಯವಿಲ್ಲ’ ಎಂದು, 2010ರ ನವೆಂಬರ್ 20ರಂದು ನಡೆದ ಬಿಡಿಎ ಆಡಳಿತ ಮಂಡಳಿ ಸಭೆ ನಿರ್ಣಯ ಕೈಗೊಂಡಿತ್ತು. ಆದರೆ 2011ರಫೆಬ್ರುವರಿ 28 ರಂದು ಬಿಬಿಎಂಪಿ ಕನ್ನಡ ಶಾಲೆಗೆ ಮಂಜೂರಾಗಿದ್ದ ನಿವೇಶನವನ್ನು ಯಡಿಯೂರಪ್ಪ ಅವರ ಒತ್ತಡದ ಕಾರಣಕ್ಕೆ, ಎರಡು ವರ್ಷಗಳಲ್ಲಿ ಶಾಲೆಯನ್ನು ನಿರ್ಮಿಸಬೇಕು ಎಂಬ ಷರತ್ತಿನ ಮೇಲೆ ದೇವರಾಜ ಅರಸು ಶಿಕ್ಷಣ ಸಂಸ್ಥೆಗೆ ಮಂಜೂರು ಮಾಡಿತ್ತು’ ಎಂದು
ತಿಳಿಸಿದರು.

ಒಮ್ಮೆ ನಿವೇಶನ ಹಂಚಿಕೆ ಮಾಡಿ, ವಿವಿಧ ಕಾರಣಗಳಿಗಾಗಿ ನೀಡಲು ಸಾಧ್ಯವಾಗದೇ ಇದ್ದರೆ ಬದಲಿ ನಿವೇಶನ ಹಂಚಿಕೆ ಮಾಡಲು ಬಿಡಿಎ ನಿಯಮದಲ್ಲಿ ಅವಕಾಶ ಇದೆ. ಚಂದ್ರಪ್ಪ ಅವರಿಗೆ ನಿವೇಶನ ಹಂಚಿಕೆಯೇ ಆಗದಿರುವಾಗ, ಬದಲಿ ರೂಪದಲ್ಲಿ ನಾಗರಿಕ ಸೌಲಭ್ಯದ ಉದ್ದೇಶಕ್ಕಾಗಿ ಮೀಸಲಾದ ನಿವೇಶನ ನೀಡಿದೆ ಎಂದು ದೂರಿದರು.

ವಾಣಿಜ್ಯ ಬಳಕೆ ಮಾಡಿಕೊಂಡಿಲ್ಲ

ಶಿಕ್ಷಣ ಸಂಸ್ಥೆ ನಿರ್ಮಿಸುವ ಉದ್ದೇಶದಿಂದ ನಿವೇಶನವನ್ನು ಪಡೆದಿದ್ದು, ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುವುದಿಲ್ಲ ಎಂದು ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಹೇಳಿದರು.

‘ನಿವೇಶನ ಹಂಚಿಕೆಗೆ ಬಿಡಿಎ ಅನುಮೋದನೆ ನೀಡಿದ್ದು, ಮಾರುಕಟ್ಟೆ ದರದ ಶೇಕಡಾ 10ರಷ್ಟು ಪಾವತಿಸಲಾಗಿದೆ’ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

₹10 ಕೋಟಿಗೆ ಮಾರಾಟ, ₹1 ಕೋಟಿ ಪಾವತಿ

‘ಶಾಸಕ ಎಂ. ಚಂದ್ರಪ್ಪ ಅವರಿಗೆ ನಿವೇಶನ ಮಂಜೂರಾಗಿ 11 ವರ್ಷ ಕಳೆದರೂ ಶಾಲೆ ನಿರ್ಮಾಣವಾಗಿಲ್ಲ. ಸದ್ಯ ಮಾರುಕಟ್ಟೆಯಲ್ಲಿ ₹20 ಕೋಟಿ ಬೆಲೆ ಬಾಳುವ ಸಿಎ ನಿವೇಶನವನ್ನು 2021ರಡಿಸೆಂಬರ್ 27ರಂದು ಬಿಡಿಎ ಕೇವಲ ₹10 ಕೋಟಿಗೆ ಮಾರಾಟ ಮಾಡಿ, ಶುದ್ಧ ಕ್ರಯಪತ್ರ ನೀಡಲು ನಿರ್ಣಯ ಕೈಗೊಂಡಿದೆ. 2022ರಏಪ್ರಿಲ್ 5ರಂದು ಚಂದ್ರಪ್ಪನವರು ₹1 ಕೋಟಿ ಮೊತ್ತವನ್ನು ಬಿಡಿಎಗೆ ಪಾವತಿಸಿದ್ದಾರೆ’ ಎಂದು ಬಿ.ಎಂ. ಶಿವಕುಮಾರ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT