ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ನೀರು ಹರಿವಿಗಾಗಿಯೇ ಪ್ರತ್ಯೇಕ ಕಾಲುವೆ

ಕೋರಮಂಗಲ: 10 ಅಡಿ ಆಳದ ಗುಂಡಿ ತೆಗೆದು 1600 ಮಿ.ಮೀ ವ್ಯಾಸದ ಕಾಂಕ್ರೀಟ್‌ ಹ್ಯೂಮ್‌ ಕೊಳವೆ
Last Updated 30 ಆಗಸ್ಟ್ 2018, 19:55 IST
ಅಕ್ಷರ ಗಾತ್ರ

ಬೆಂಗಳೂರು: ಕೋರಮಂಗಲ ಪ್ರದೇಶದಲ್ಲಿ ಮಳೆಗಾಲದಲ್ಲಿ ಪದೇ ಪದೇ ಉಂಟಾಗುತ್ತಿದ್ದ ಪ್ರವಾಹ ಸಮಸ್ಯೆ ನಿವಾರಿಸಲು ಸೋನಿವರ್ಲ್ಡ್‌ ಜಂಕ್ಷನ್‌ನಿಂದ ಬೆಳ್ಳಂದೂರು ಕೆರೆವರೆಗೆ ಮಳೆ ನೀರು ಹರಿವಿಗಾಗಿಯೇ ಪ್ರತ್ಯೇಕ ಕಾಲುವೆ ನಿರ್ಮಿಸಲು ಪಾಲಿಕೆ ಮುಂದಾಗಿದೆ.

ಸೋನಿವರ್ಲ್ಡ್‌ ಜಂಕ್ಷನ್‌ನಿಂದ ವಿಪ್ರೊ ಪಾರ್ಕ್‌ ಸಮೀಪದವರೆಗೆ ರಸ್ತೆಯಲ್ಲಿ 10 ಅಡಿ ಆಳದ ಗುಂಡಿ ತೆಗೆದು 1600 ಮಿ.ಮೀ ವ್ಯಾಸದ ಕಾಂಕ್ರೀಟ್‌ ಹ್ಯೂಮ್‌ ಜೋಡಿ ಕೊಳವೆ ಅಳವಡಿಸಲಾಗುತ್ತದೆ. ವಿಪ್ರೊ ಪಾರ್ಕ್‌ನಿಂದ ಸಮೀಪದ ರಾಜಕಾಲುವೆಯ ಸೇತುವೆವರೆಗೆ ನೆಲದಲ್ಲಿ ರಂಧ್ರಕೊರೆದು ಜೋಡಿ ಕೊಳವೆ ಜೋಡಿಸಲಾಗುತ್ತದೆ. ಅಲ್ಲಿಂದ ಮುಂದಕ್ಕೆ ಸುಮಾರು 1.2 ಕಿ.ಮೀ ದೂರದವೆಗೆ U - ಆಕಾರದ ಕಾಲುವೆ ನಿರ್ಮಿಸಲಾಗುತ್ತದೆ. ಈ ಹೊಸ ಕಾಲುವೆಯು ಇಲ್ಲಿರುವ ರಾಜಕಾಲುವೆಗೆ ಸಮಾನಾಂತರವಾಗಿ ಹಾದು ಹೋಗಲಿದೆ. ಸುಮಾರು 630 ಮೀಟರ್‌ಗಳಷ್ಟು ಉದ್ದಕ್ಕೆ ಮುಚ್ಚಿದ ಕಾಲುವೆ ಹಾಗೂ ನಂತರ ಕೆರೆಯವರೆಗೆ (570 ಮೀ) ತೆರೆದ ಕಾಲುವೆ ನಿರ್ಮಾಣಗೊಳ್ಳಲಿದೆ.

‘ಈ ಕಾಮಗಾರಿಯ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಒಂದು ವಾರದೊಳಗೆ ಕೆಲಸ ಆರಂಭಗೊಳ್ಳಲಿದೆ’ ಎಂದು ಬಿಬಿಎಂಪಿ ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ ಎಚ್‌.ಟಿ.ಬೆಟ್ಟೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಸಂಚಾರ ವ್ಯತ್ಯಯ: ‘ರಸ್ತೆಯಲ್ಲಿ ಸುಮಾರು 20 ಅಡಿ ಅಗಲ ಹಾಗೂ 10 ಅಡಿ ಆಳದ ಗುಂಡಿ ನಿರ್ಮಿಸಿ ಜೋಡಿ ಕೊಳವೆ ಅಳವಡಿಸಬೇಕಾಗುತ್ತದೆ. ಹಾಗಾಗಿ ಕಾಮಗಾರಿ ಸಂದರ್ಭದಲ್ಲಿ ಇಲ್ಲಿನ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಬೇಕಾಗುತ್ತದೆ. ನಾವು ಹಂತ ಹಂತವಾಗಿ ಈ ಕಾಮಗಾರಿ ನಡೆಸುವ ಮೂಲಕ ಈ ಪ್ರದೇಶದಲ್ಲಿ ವಾಹನ ಸಂಚಾರ ದಟ್ಟಣೆ ಸಮಸ್ಯೆಯನ್ನು ಆದಷ್ಟು ಕಡಿಮೆ ಮಾಡಲು ಪ್ರಯತ್ನಿಸುತ್ತೇವೆ’ ಎಂದು ಅವರು ಮಾಹಿತಿ ನೀಡಿದರು.

‘ಜೋಡಿ ಕೊಳವೆಯಲ್ಲಿ ಹೂಳು ತುಂಬುವುದನ್ನು ತಡೆಯಲು ಪ್ರತಿ 50 ಮೀಟರ್‌ಗೆ ಒಂದು ನಿರ್ವಹಣಾ ಚೇಂಬರ್‌ಗಳನ್ನು ನಿರ್ಮಿಸಲಾಗುತ್ತದೆ. ಇದರಲ್ಲಿ ಸಂಗ್ರಹಗೊಳ್ಳುವ ಹೂಳು ತೆರವುಗೊಳಿಸುವ ಮೂಲಕ ಕಾಲುವೆ ಕಟ್ಟಿಕೊಳ್ಳದಂತೆ ತಡೆಯಬಹುದು’ ಎಂದರು.

2016ರಲ್ಲಿ ಹಾಗೂ 2017ರಲ್ಲಿ ಕೋರಮಂಗಲ ಪ್ರದೇಶದಲ್ಲಿ ಪ್ರವಾಹ ಉಂಟಾಗಿತ್ತು. ಕೋರಮಂಗಲ 6ನೇ ಬ್ಲಾಕ್‌ ಮತ್ತು 4ನೇ ಬ್ಲಾಕ್‌ಗಳಲ್ಲಿ, ಎಸ್.ಟಿ.ಬೆಡ್‌ ಪ್ರದೇಶಗಳಲ್ಲಿ 50ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದ್ದವು. ಇಲ್ಲಿನ ರಸ್ತೆಗಳ ಮೇಲೂ ನಾಲ್ಕೈದು ಅಡಿಗಳಷ್ಟು ನೀರು ನಿಂತಿತ್ತು.

‘ಇಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗುವುದಕ್ಕೆ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ನೆರೆ ಉಂಟಾಗುತ್ತಿದೆ. ನಾವು ಈಗಾಗಲೇ ಇಲ್ಲಿನ ರಾಜಕಾಲುವೆಗಳ ತಡೆಗೋಡೆಯ ಎತ್ತರವನ್ನು ಹೆಚ್ಚಿಸುವ ಹಾಗೂ ಹೋಳೆತ್ತುವ ಮೂಲಕ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಂಡಿದ್ದೇವೆ. ರಸ್ತೆಯಲ್ಲಿ ಸಂಗ್ರಹವಾಗುವ ಮಳೆ ನೀರು ಬೆಳ್ಳಂದೂರು ಕೆರೆಗೆ ಹರಿದು ಹೋಗಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವುದರಿಂದ ಇಲ್ಲಿ ಪ್ರವಾಹ ಉಂಟಾಗುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು’ ಎಂದು ಅವರು ವಿವರಿಸಿದರು.

ಸಿವಿಲ್‌ ಕ್ವಾಲಿಟಿ ಕನ್ಸಲ್ಟಂಟ್ಸ್‌ ಆ್ಯಂಡ್‌ ಎಂಜಿನಿಯರ್ಸ್‌ ಸಂಸ್ಥೆಯು ಈ ಯೋಜನೆಗೆ ರೂಪರೇಷೆ ತಯಾರಿಸಿದೆ.

ರಸ್ತೆ ಮೇಲ್ಮೈ

ಪಾದಚಾರಿ ಮಾರ್ಗ

ವಿಭಜಕ

ರಸ್ತೆ ಬದಿಯ ಚರಂಡಿ

ಗಲ್ಲಿ ಚೇಂಬರ್‌

6 ಮೀ

200 ಮಿ.ಮೀ ಪೈಪ್‌

300 ಮಿ.ಮೀ ಪೈಪ್‌

ಹೂಳು ಸಂಗ್ರಹಣೆ

ನಿರ್ವಹಣಾ ಚೇಂಬರ್‌

1600 ಮಿಲಿ ಮೀಟರ್‌ ಕಾಂಕ್ರೀಟ್‌ ಹ್ಯೂಮ್‌ ಪೈಪ್‌


ಪೈಪ್‌ಲೈನ್‌ ಹಾದುಹೋಗುವ ಮಾರ್ಗ

ಸೋನಿ ವರ್ಲ್ಡ್‌ ಜಂಕ್ಷನ್‌

ವಿಪ್ರೊ ಪಾರ್ಕ್‌

ಕೋರಮಂಗಲ 6ನೇ ಬ್ಲಾಕ್‌

ಈಜಿಪುರ

ಕೋರಮಂಗಲ 4ನೇ ಬ್ಲಾಕ್‌

ಎಸ್‌.ಟಿ.ಬೆಡ್‌

ಎಸ್‌.ಟಿ.ಬೆಡ್‌ ಎಕ್ಸ್‌ಟೆನ್ಷನ್‌

ಜಕ್ಕಸಂದ್ರ ಬ್ಲಾಕ್‌


ಅಂಕಿ ಅಂಶ

₹ 23 ಕೋಟಿ

ಯೋಜನಾ ವೆಚ್ಚ


1.68 ಚದರ ಕಿ.ಮೀ

ವ್ಯಾಪ್ತಿಯಲ್ಲಿ ಬೀಳುವ ಮಳೆ ನೀರು ಹಾದು ಹೋಗಲು ಈ ಕಾಲುವೆ ನೆರವಾಗಲಿದೆ


2.5 ಕಿ.ಮೀ

ಸೋನಿ ವರ್ಲ್ಡ್‌ ಜಂಕ್ಷನ್‌ನಿಂದ ಬೆಳ್ಳಂದೂರು ಕೆರೆವರೆಗೆ ನಿರ್ಮಿಸುವ ಹೊಸ ಕಾಲುವೆಯ ಒಟ್ಟು ಉದ್ದ

1,300 ಮೀ

ಉದ್ದಕ್ಕೆ ಜೋಡಿ ಕೊಳವೆಗಳನ್ನು ಅಳವಡಿಸಲಾಗುತ್ತದೆ

630 ಮೀ

U - ಆಕಾರದ ಕಾಂಕ್ರೀಟ್‌ ಬಾಕ್ಸ್‌ ರೂಪದ ಚರಂಡಿಯ ಉದ್ದ

570 ಮೀ

U- ಆಕಾರದ ತೆರೆದ ಕಾಲುವೆ ಉದ್ದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT