ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರ್ಚಿ ಕಾದಾಟಕ್ಕೆ ಬಡವಾದ ಗ್ರಂಥಾಲಯಗಳು!

ಗ್ರಂಥಾಲಯದ ಕೇಂದ್ರ ವಲಯಕ್ಕಿಲ್ಲ ಪೂರ್ಣಾವಧಿ ಉಪನಿರ್ದೇಶಕ
Last Updated 26 ಸೆಪ್ಟೆಂಬರ್ 2020, 22:07 IST
ಅಕ್ಷರ ಗಾತ್ರ

ಬೆಂಗಳೂರು: ನಗರ ಕೇಂದ್ರ ಗ್ರಂಥಾಲಯದ ಕೇಂದ್ರ ವಲಯದ ಅಧಿಕಾರಿಗಳು ಕುರ್ಚಿಗೋಸ್ಕರ ಕಾದಾಟ ನಡೆಸಿ, ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇದರಿಂದಾಗಿ ಅಲ್ಲಿ 10 ತಿಂಗಳುಗಳಿಂದ ಪುಸ್ತಕ ಖರೀದಿ ಸೇರಿದಂತೆ ವಿವಿಧ ಯೋಜನೆಗಳು ನನೆಗುದಿಗೆ ಬಿದ್ದಿವೆ.

ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಬಿಬಿಎಂಪಿಯು ನಿಯಮಿತವಾಗಿ ಗ್ರಂಥಾಲಯ ಕರವನ್ನು ಪಾವತಿಸದ ಪರಿಣಾಮ ಹಲವು ಗ್ರಂಥಾಲಯಗಳು ಮೂಲಸೌಕರ್ಯ ಇಲ್ಲದೆ ಸೊರಗುತ್ತಿವೆ. ಸುಮಾರು ₹ 350 ಕೋಟಿ ಗ್ರಂಥಾಲಯ ಕರವನ್ನು ಬಿಬಿಎಂಪಿ ಬಾಕಿ ಉಳಿಸಿಕೊಂಡಿದೆ. ಈ ನಡುವೆ ನಗರ ಕೇಂದ್ರ ಗ್ರಂಥಾಲಯದ ಕೇಂದ್ರ ವಲಯಕ್ಕೆ ಪೂರ್ಣಾವಧಿ ಉಪನಿರ್ದೇಶಕರು ಇಲ್ಲ. ಹಾಗಾಗಿ ಸಂಗ್ರಹವಾದ ಕರವನ್ನೂ ಕೂಡ ಪುಸ್ತಕ ಮತ್ತು ಪೀಠೋಪಕರಣಗಳ ಖರೀದಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೇಂದ್ರ ವಲಯದಡಿ 28 ಗ್ರಂಥಾಲಯಗಳು ಹಾಗೂ ಒಂದು ಸಂಚಾರ ಗ್ರಂಥಾಲಯ ಕಾರ್ಯನಿರ್ವಹಿಸುತ್ತಿದೆ.

ಕೇಂದ್ರ ವಲಯದ ಉಪನಿರ್ದೇಶಕ ಹುದ್ದೆಗೆ ಸಂಬಂಧಿಸಿದಂತೆ ಸಿ. ಪಾರ್ವತಮ್ಮ ಹಾಗೂ ದಿವಾಕರ್ ಎಂಬುವವರು ಕಳೆದ ವರ್ಷಾಂತ್ಯಕ್ಕೆ ಕೋರ್ಟ್‌ ಮೆಟ್ಟಿಲೇರಿದ್ದರು. ಪ್ರಕರಣ ಇತ್ಯರ್ಥವಾಗುವವರೆಗೂ ಕಡ್ಡಾಯ ರಜೆಯಲ್ಲಿ ಇರುವಂತೆ ಪಾರ್ವತಮ್ಮ ಅವರಿಗೆ ಕೋರ್ಟ್ ಸೂಚಿಸಿದೆ. ದಿವಾಕರ್ ಅವರನ್ನು ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ರಾಜಾಜಿನಗರದಲ್ಲಿರುವ ನಗರ ಜಿಲ್ಲಾ ಕೇಂದ್ರ ಗ್ರಂಥಾ
ಲಯದ ಉಪನಿರ್ದೇಶಕ ಸ್ಥಾನಕ್ಕೆ ವರ್ಗ ಮಾಡಲಾಗಿದೆ. ಸದ್ಯ ಹಾಸನ ಜಿಲ್ಲಾ ಕೇಂದ್ರ ಗ್ರಂಥಾಲಯ ಉಪ ನಿರ್ದೇಶಕ ಸಿ.ಜೆ. ವೆಂಕಟೇಶ್ ಅವರು ಕೇಂದ್ರ ವಲಯದ ಪ್ರಭಾರ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವೇತನ ಪಾವತಿಗೆ ಸೀಮಿತ: ಬಿಬಿಎಂಪಿ ಪಾವತಿಸುವ ಗ್ರಂಥಾಲಯ ಕರದ ಅನುಸಾರ ಗ್ರಂಥಾಲಯ ಇಲಾಖೆಯು ಬಜೆಟ್ ರೂಪಿಸಿ, ಐದು ವಲಯಗಳಿಗೆ ಸಮಾನವಾಗಿ ಹಣ ಹಂಚಿಕೆ ಮಾಡುತ್ತಿದೆ. ಪ್ರತಿ ವರ್ಷ ಪುಸ್ತಕ ಹಾಗೂ ಪೀಠೋಪಕರಣಗಳ ಖರೀದಿಗೆ ಸುಮಾರು ₹ 5 ಕೋಟಿ ವೆಚ್ಚವನ್ನು ಪ್ರತಿ ವಲಯ ಮಾಡಲಿದೆ. ಪ್ರಭಾರ ಉಪನಿರ್ದೇಶಕರಿಗೆ ಪೂರ್ಣ ಪ್ರಮಾಣದಲ್ಲಿ ಅಧಿಕಾರವಿಲ್ಲದ ಪರಿಣಾಮ ಕೇಂದ್ರ ವಲಯವು ಕೆಲ ತಿಂಗಳುಗಳಿಂದ ಸಿಬ್ಬಂದಿಗೆ ವೇತನ ನೀಡುವುದಕ್ಕಷ್ಟೇ ಸೀಮಿತವಾಗಿದೆ.

‘ಕೇಂದ್ರ ವಲಯಕ್ಕೆ ಪೂರ್ಣಾವಧಿ ಉಪನಿರ್ದೇಶಕರಿಲ್ಲದ ಪರಿಣಾಮಪುಸ್ತಕ ಮತ್ತು ಪೀಠೋಪಕರಣ ಖರೀದಿ, ಹೊಸ ಗ್ರಂಥಾಲಯಗಳ ಆರಂಭ, ಸಂಚಾರ ಗ್ರಂಥಾಲಯಕ್ಕಾಗಿ ವಾಹನ ಖರೀದಿಯೂ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. 2015ನೇ ಸಾಲಿನ ಪುಸ್ತಕ ಖರೀದಿಗೆ ಹಣ ಪಾವತಿ ಪ್ರಕ್ರಿಯೆ ಪ್ರಾರಂಭಿಸುವ ವೇಳೆ ಉಪನಿರ್ದೇಶಕರು ಕೋರ್ಟ್‌ ಮೆಟ್ಟಿಲೇರಿದ್ದರು. ಪ್ರಕರಣ ಇತ್ಯರ್ಥವಾದ ಬಳಿಕ ಕರದ ಹಣವನ್ನು ವಿವಿಧ ಯೋಜನೆಗಳಿಗೆ ಬಳಸಿಕೊಳ್ಳಲು ಅವಕಾಶ ಸಿಗಲಿದೆ’ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಪುಸ್ತಕ ಖರೀದಿ: ಹಣ ಪಾವತಿ ಬಾಕಿ
ನಗರ ಕೇಂದ್ರ ಗ್ರಂಥಾಲಯದ ಕೇಂದ್ರ ವಲಯವು 2013–14 ಹಾಗೂ 2014–15ನೇ ಸಾಲಿನ ಪುಸ್ತಕ ಖರೀದಿಗೆ ಸಂಬಂಧಿಸಿದಂತೆ ಪ್ರಕಾಶಕರಿಗೆ ಪಾವತಿಸಬೇಕಾದ ಹಣವನ್ನು ಬಾಕಿ ಉಳಿಸಿಕೊಂಡಿದೆ. ಇದು ಪ್ರಕಾಶಕರ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಯಾವಾಗ ಹಣ ಪಾವತಿಯಾಗುತ್ತದೆ ಎಂಬ ಖಚಿತತೆಯೂ ಇಲ್ಲ.

‌‘ಕೇಂದ್ರ ವಲಯ ಮಾತ್ರ ಎರಡು ವರ್ಷಗಳ ಹಣವನ್ನು ಬಾಕಿ ಉಳಿಸಿಕೊಂಡಿದೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರೆ ಪೂರ್ಣಾವಧಿ ನಿರ್ದೇಶಕರಿಲ್ಲ ಎಂದು ಉತ್ತರಿಸುತ್ತಾರೆ. ಇದರಿಂದ ಪ್ರಕಾಶಕರಿಗೆ ಸಮಸ್ಯೆಯಾಗುತ್ತಿದೆ. ಸರ್ಕಾರ ಈ ಬಿಕ್ಕಟ್ಟು ಬಗೆಹರಿಸಬೇಕು’ ಎಂದುಕರ್ನಾಟಕ ಪ್ರಕಾಶಕ ಸಂಘದ ಅಧ್ಯಕ್ಷಪ್ರಕಾಶ್ ಕಂಬತ್ತಳ್ಳಿ ಆಗ್ರಹಿಸಿದರು.

*
ಉಪನಿರ್ದೇಶಕ ಹುದ್ದೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಕೋರ್ಟ್ ಮೊರೆ ಹೋಗಿದ್ದಾರೆ. ಅಧಿಕಾರಿಯೊಬ್ಬರು ದೈನಂದಿನ ಚಟುವಟಿಕೆ ನೋಡಿಕೊಳ್ಳುತ್ತಿದ್ದಾರೆ.
–ಸತೀಶ ಕುಮಾರ್ ಎಸ್. ಹೊಸಮನಿ, ಗ್ರಂಥಾಲಯ ಇಲಾಖೆ ನಿರ್ದೇಶಕ

*
ವಿವಿಧ ಕಾರ್ಯಚಟುವಟಿಕೆಗೆ ಹಣವನ್ನು ಬಳಕೆ ಮಾಡುವ ಅಧಿಕಾರವಿಲ್ಲ. ಈ ಬಗ್ಗೆ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿದ್ದೇನೆ.
–ಸಿ.ಜೆ. ವೆಂಕಟೇಶ್, ಕೇಂದ್ರ ವಲಯದ ಪ್ರಭಾರ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT