ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಕಸದ ಲಾರಿ ಹರಿದು ‘ಡೆಲಿವರಿ ಬಾಯ್’ ಸಾವು

ಬಿಬಿಎಂಪಿ ಕಸದ ಲಾರಿ ಚಾಲಕನ ಬಂಧನ l ಎರಡು ತಿಂಗಳಲ್ಲಿ ನಾಲ್ಕನೇ ದುರ್ಘಟನೆ
Last Updated 14 ಮೇ 2022, 19:47 IST
ಅಕ್ಷರ ಗಾತ್ರ

ಬೆಂಗಳೂರು: ನಾಗವಾರ– ಥಣಿಸಂದ್ರ ಮುಖ್ಯರಸ್ತೆಯಲ್ಲಿ ಬಿಬಿಎಂಪಿ ಕಸ ಸಾಗಣೆ ಲಾರಿ ಹರಿದು ಡೆಲಿವರಿ ಬಾಯ್ ದೇವಣ್ಣ (25) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ವರ್ಷದ ಮಾರ್ಚ್‌ ತಿಂಗಳ ನಂತರ ಬಿಬಿಎಂಪಿ ಕಸದ ಲಾರಿಯಿಂದ ಸಂಭವಿಸಿದ ನಾಲ್ಕನೇ ದುರ್ಘಟನೆ ಇದು. ಈ ಅವಧಿಯಲ್ಲಿ ನಾಲ್ವರು ಬಿಬಿಎಂಪಿ ಕಸ ಸಾಗಣೆ ಲಾರಿಯಡಿ ಸಿಲುಕಿ ಜೀವ ಕಳೆದುಕೊಂಡಿದ್ದಾರೆ.

‘ಯಾದಗಿರಿ ಜಿಲ್ಲೆಯ ಸುರಪುರದ ದೇವಣ್ಣ, ಕೊತ್ತನೂರಿನಲ್ಲಿ ನೆಲೆಸಿದ್ದರು. ‘ಸ್ವಿಗ್ಗಿ’ ಆಹಾರ ಪೂರೈಕೆ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಗ್ರಾಹಕರೊಬ್ಬರಿಗೆ ಆಹಾರ ಪೂರೈಸಲು ಬೈಕ್‌ನಲ್ಲಿ ಹೊರಟಿದ್ದ ವೇಳೆಯಲ್ಲಿ ಈ ಅವಘಡ ಸಂಭವಿಸಿದೆ’ ಎಂದು ಚಿಕ್ಕಜಾಲ ಸಂಚಾರ ಠಾಣೆ ಪೊಲೀಸರು ತಿಳಿಸಿದರು.

‘ದೇವಣ್ಣ ಅವರು ಬೈಕ್ (ಕೆಎ 03 ಕೆಕೆ 5475) ಚಲಾಯಿಸಿಕೊಂಡು ನಾಗವಾರದಿಂದ ಥಣಿಸಂದ್ರ ಮುಖ್ಯರಸ್ತೆ ಮೂಲಕ ಹೆಗ್ಗಡೆನಗರಕ್ಕೆ ಹೊರಟಿದ್ದರು. ಅದೇ ಮಾರ್ಗದಲ್ಲಿ ಅತೀ ವೇಗವಾಗಿ ತೆರಳುತ್ತಿದ್ದ ಬಿಬಿಎಂಪಿ ಕಸ ಸಾಗಣೆ ಲಾರಿ, ಬೈಕ್‌ ಡಿಕ್ಕಿ ಹೊಡೆದಿತ್ತು. ಬೈಕ್‌ನಿಂದ ಬಿದ್ದ ದೇವಣ್ಣ ತಲೆ ಮೇಲೆಯೇ ಲಾರಿ ಚಕ್ರ ಹರಿದಿತ್ತು. ತೀವ್ರ ರಕ್ತಸ್ರಾವದಿಂದ ದೇವಣ್ಣ ಸ್ಥಳದಲ್ಲೇ ಮೃತಪಟ್ಟರು. ಈ ಬಗ್ಗೆ ಪ್ರತ್ಯಕ್ಷದರ್ಶಿಗಳಿಂದ ಹೇಳಿಕೆ ಪಡೆಯಲಾಗಿದೆ’ ಎಂದೂ ಪೊಲೀಸರು ಹೇಳಿದರು.

ಚಾಲಕ ಬಂಧನ: ‘ಲಾರಿ ಚಾಲಕ ದಿನೇಶ್ ನಾಯಕ್ ಅಜಾಗರೂಕತೆ ಚಾಲನೆ ಹಾಗೂ ನಿರ್ಲಕ್ಷ್ಯದಿಂದಲೇ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಲಾರಿಯನ್ನು ಜಪ್ತಿ ಮಾಡಿ, ಚಾಲಕ ದಿನೇಶ್‌ನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ದಂಡ ವಿಧಿಸಿದರೂ ತಪ್ಪದ ಅಪಘಾತ: ಬಿಬಿಎಂಪಿ ಕಸ ಸಾಗಣೆ ಲಾರಿಯಿಂದಾಗಿ ನಗರದಲ್ಲಿ ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿದ್ದು, ಇದನ್ನು ತಡೆಯಲು ಸಂಚಾರ ಪೊಲೀಸರು ಇತ್ತೀಚೆಗಷ್ಟೇ ವಿಶೇಷ ಕಾರ್ಯಾಚರಣೆ ನಡೆಸಿದ್ದರು.

ಅತೀ ವೇಗದ ಚಾಲನೆ, ಮೊಬೈಲ್‌ನಲ್ಲಿ ಮಾತನಾಡುತ್ತ ಚಾಲನೆ ಸೇರಿದಂತೆ ವಿವಿಧ ಸಂಚಾರ ನಿಯಮ ಉಲ್ಲಂಘಿಸಿದ ಕಸ ಸಾಗಣೆ ಲಾರಿಗಳ ಚಾಲಕರಿಗೆ ಪೊಲೀಸರು ದಂಡ ವಿಧಿಸಿದ್ದರು. ಕೆಲ, ಲಾರಿಗಳನ್ನು ಜಪ್ತಿ ಮಾಡಿದ್ದರು.

‘ಬಿಬಿಎಂಪಿ ಕಸ ಸಾಗಣೆ ಲಾರಿ ಚಾಲಕರಿಗೆ ಹಾಗೂ ಮಾಲೀಕರಿಗೆ ಪೊಲೀಸರು ಸಾಕಷ್ಟು ಎಚ್ಚರಿಕೆ ನೀಡುತ್ತಿದ್ದಾರೆ. ಅಷ್ಟಾದರೂ ಅವರು ಬುದ್ದಿ ಕಲಿಯುತ್ತಿಲ್ಲ. ಇಂಥ ಚಾಲಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕಸದ ಲಾರಿಯಿಂದ ಸಂಭವಿಸಿದ ಅಪಘಾತಗಳು

ಏಪ್ರಿಲ್ 4: ನಾಯಂಡಹಳ್ಳಿ ಬಳಿ ನಡೆದ ಅಪಘಾತದಲ್ಲಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಉದ್ಯೋಗಿ ಪದ್ಮಿನಿ (40) ಮೃತಪಟ್ಟಿದ್ದರು.

ಮಾರ್ಚ್ 31 : ಬಾಗಲೂರುನಡೆದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ರಾಮಯ್ಯ (76) ಮೃತಪಟ್ಟಿದ್ದರು. ಲಾರಿ ಚಾಲಕ ಆಂಜನಪ್ಪ ಅವರನ್ನು ಚಿಕ್ಕಜಾಲ ಸಂಚಾರ ಪೊಲೀಸರು ಬಂಧಿಸಿದ್ದರು.

ಮಾರ್ಚ್ 21: ಹೆಬ್ಬಾಳ ಬಸ್ ನಿಲ್ದಾಣ ಎದುರಿನ ಮುಖ್ಯರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಅಕ್ಷಯಾ (14) ಮೃತಪಟ್ಟಿದ್ದಳು. ಅಪಘಾತದಲ್ಲಿ ಸೌಮ್ಯಾ, ಸಂಧ್ಯಾ ಹಾಗೂ ವಿಕಾಸ್ ಎಂಬುವರು ಗಾಯಗೊಂಡಿದ್ದರು.

338 ಚಾಲಕರಿಗೆ ತರಬೇತಿ

ಬಿಬಿಎಂಪಿಯಲ್ಲಿ 588 ಕಸ ಸಾಗಿಸುವ ಲಾರಿಗಳಿದ್ದು, ಅವುಗಳಲ್ಲಿ 388 ಚಾಲಕರಿಗೆ ಜಾಗರೂಕತೆಯ ಚಾಲನೆ ಬಗ್ಗೆ ವಿಶೇಷ ತರಬೇತಿ ನೀಡಲಾಗಿದೆ ಎಂದು ಬಿಬಿಎಂಪಿ ಜಂಟಿ ಆಯುಕ್ತ (ಕಸ ನಿರ್ವಹಣೆ) ಪರಶುರಾಮ್ ಶಿನ್ನಾಳ್ಕರ್ ಹೇಳಿದರು.

‘ಅಪಘಾತಗಳನ್ನು ತಪ್ಪಿಸಲು ಈ ವಿಶೇಷ ತರಬೇತಿ ನೀಡಲಾಗುತ್ತಿದೆ. ಆದರೂ, ಪದೇ ಪದೇ ಅಪಘಾತಗಳು ಸಂಭವಿಸುತ್ತಿರುವುದು ದುರದೃಷ್ಟಕರ. ಇನ್ನೂ ಹೆಚ್ಚಿನ ತರಬೇತಿ ಸಾಧ್ಯವೇ ಎಂಬುದರ ಬಗ್ಗೆ ಪರಿಶೀಲಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT