ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬ್ಬಂದಿಗೆ ಕಡ್ಡಾಯವಾಗಿ ಲಸಿಕೆ ಕೊಡಿಸಿ– ದಾಖಲೆ ಹಾಜರು ಪಡಿಸಿ- ಬಿಬಿಎಂಪಿ ಸೂಚನೆ

ವಾಣಿಜ್ಯ ಸಂಸ್ಥೆ, ಕೈಗಾರಿಕೆ, ಹೋಟೆಲ್‌, ಕಚೇರಿಗಳ ಮಾಲೀಕರಿಗೆ ಬಿಬಿಎಂಪಿ ಸೂಚನೆ
Last Updated 26 ಆಗಸ್ಟ್ 2021, 17:02 IST
ಅಕ್ಷರ ಗಾತ್ರ

ಬೆಂಗಳೂರು: ವಾಣಿಜ್ಯ ಸಂಸ್ಥೆಗಳು, ಕೈಗಾರಿಕೆಗಳು, ಹೋಟೆಲ್‌ ಮತ್ತು ರೆಸ್ಟೋರಂಟ್‌ಗಳು ಹಾಗೂ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿಗೆ ಕೋವಿಡ್‌ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸುವಂತೆ ಬಿಬಿಎಂ‍ಪಿಯ ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರು ಬುಧವಾರ ಸುತ್ತೋಲೆ ಹೊರಡಿಸಿದ್ದಾರೆ. ಎಲ್ಲ ಸಿಬ್ಬಂದಿಯೂ ಇದೇ 31ರೊಳಗೆ ಕೋವಿಡ್‌ ಲಸಿಕೆಯ ಕನಿಷ್ಠ ಒಂದು ಡೋಸ್‌ ಆದರೂ ಪಡೆದಿರಬೇಕು ಎಂದು ಅವರು ಸೂಚಿಸಿದ್ದಾರೆ.

‘ನಗರದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಕ್ಷೀಣಿಸಿರುವುದರಿಂದ ವಾಣಿಜ್ಯ ಸಂಸ್ಥೆಗಳು ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ಕಾರ್ಯಾಚರಣೆ ನಡೆಸುವುದಕ್ಕೆ ರಾಜ್ಯ ಸರ್ಕಾರವು ಅನುವು ಮಾಡಿಕೊಟ್ಟಿದೆ. ಆದರೂ ಮುಚ್ಚಿದ ವಾತಾವರಣ ಇರುವ ಕಡೆ ಕೋವಿಡ್‌ ಹರಡುವಿಕೆ ಸಾಧ್ಯತೆ ಹೆಚ್ಚು. ಇಂತಹ ಕಡೆ ಕೊರೋನಾ ವೈರಾಣು ಹರಡುವುದನ್ನು ನಿಯಂತ್ರಿಸಲು ಮತ್ತು ನಗರದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಳವಾಗುವುದನ್ನು ತಪ್ಪಿಸಲುವಾಣಿಜ್ಯ ಸಂಸ್ಥೆಗಳು, ಕೈಗಾರಿಕೆಗಳು, ಹೋಟೆಲ್‌ ಮತ್ತು ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿಗೆ ಸೋಂಕು ತಗಲದಂತೆ ಖಾತರಿಪಡಿಸಿಕೊಳ್ಳುವ ಅಗತ್ಯ ಇದೆ. ಸಿಬ್ಬಂದಿ ಮೂಲಕ ಗ್ರಾಹಕರಿಗೆ ಅಥವಾ ಅಂತಹ ಸ್ಥಳಗಳಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಸೋಂಕು ಹರಡುವುದನ್ನು ತಪ್ಪಿಸಬೇಕಿದೆ’ ಎಂದು ಮುಖ್ಯ ಆಯುಕ್ತರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಸೋಂಕು ಹರಡುವುದನ್ನು ನಿಯಂತ್ರಿಸಲು ವಾಣಿಜ್ಯ ಸಂಸ್ಥೆಗಳು, ಕೈಗಾರಿಕೆಗಳು, ಹೋಟೆಲ್‌ ಮತ್ತು ಕಚೇರಿಗಳಲ್ಲಿ ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಇವುಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿಗಳು ಸರ್ಕಾರಿ ಅಥವಾ ಬಿಬಿಎಂಪಿ ಲಸಿಕಾ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ಹಾಕಿಸಿಕೊಳ್ಳಬಹುದು. ಅಥವಾ ಮಾಲೀಕರು ಸ್ವಂತ ವೆಚ್ಚದಲ್ಲಿ ಎಲ್ಲ ಸಿಬ್ಬಂದಿಗೂ ಲಸಿಕೆ ಕೊಡಿಸಬಹುದು’ ಎಂದು ಅವರು ಹೇಳಿದ್ದಾರೆ.

‘ಸಿಬ್ಬಂದಿ ಲಸಿಕೆ ಹಾಕಿಸಿಕೊಂಡಿರುವ ಬಗ್ಗೆ ಮಾಲೀಕರು ದಾಖಲೆಗಳನ್ನು ಹೊಂದಿರಬೇಕು. ವಾಣಿಜ್ಯ ಸಂಸ್ಥೆ ಕಚೇರಿಗಳಿಗೆ ಭೇಟಿ ನೀಡಿ ದಾಖಲೆ ಪರಿಶೀಲನೆ ನಡೆಸಲು ಬಿಬಿಎಂಪಿಯು ಮಾರ್ಷಲ್‌ಗಳಿಗೆ ಹಾಗೂ ಆರೋಗ್ಯ ಅಧಿಕಾರಿಗಳಿಗೆ ಅಧಿಕಾರ ನೀಡಿದೆ. ಅವರು ಮುಂಬರುವ ಸೆ. 1ರಿಂದ ಕೆಲಸದ ಅವಧಿಯಲ್ಲಿ ಕಚೇರಿಗೆ ಭೇಟಿ ನೀಡಿ ಸಿಬ್ಬಂದಿ ಲಸಿಕೆ ಹಾಕಿಸಿಕೊಂಡಿರುವ ಬಗ್ಗೆ ವಿಚಾರಿಸಲಿದ್ದಾರೆ. ಆಗ ಈ ಕುರಿತ ದಾಖಲೆಗಳನ್ನು ಹಾಜರಿಪಡಿಸಬೇಕು. ಈ ಕುರಿತು ಯಾವುದೇ ಉಲ್ಲಂಘನೆಗಳಿಗೆ 1897ರ ಸಾಂಕ್ರಾಮಿಕ ರೋಗ ಕಾಯ್ದೆಯಡಿ ವ್ಯಖ್ಯಾನಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 188 ಅಡಿ ಶಿಕ್ಷೆ ಅಥವಾ ದಂಡ ವಿಧಿಸಬಹುದು’ ಎಂದು ಮುಖ್ಯ ಆಯುಕ್ತರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT