ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೆಳೆಯಲು ಮಂಡ್ಯ ಜಿಲ್ಲೆ ಪ್ರಸಿದ್ಧ: ಡಿಕೆಶಿ

ಕಾಂಗ್ರೆಸ್‌ ಅಭ್ಯರ್ಥಿ ಪರ ಚಿತ್ರನಟಿ ಮಾಲಾಶ್ರೀ ರೋಡ್‌ ಷೊ, ದೇವಾಲಯದಲ್ಲಿ ಪೂಜೆ ಸಲ್ಲಿಕೆ
Last Updated 4 ಮೇ 2018, 10:50 IST
ಅಕ್ಷರ ಗಾತ್ರ

ಮಂಡ್ಯ: ‘ಕಬಡ್ಡಿ ಆಟದಲ್ಲಿ ಪ್ರಸಿದ್ಧಿ ಮಂಡ್ಯ ಜಿಲ್ಲೆ ಪಡೆದಿದೆ. ಅದರಂತೆ ಕಾಲೆಳೆಯುವಲ್ಲೂ ಪ್ರಖ್ಯಾತಿ ಪಡೆದಿದೆ. ಆದರೆ ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಮುಖಂಡರು ಬೇರೆ ಪಕ್ಷಗಳ ಮುಖಂಡರ ಕಾಲೆಳೆಯುತ್ತಾರೆ’ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.

ನಗರದ ಕಾಳಿಕಾಂಬ ದೇವಾಲಯದ ಬಳಿ ಕಾಂಗ್ರೆಸ್‌ ಅಭ್ಯರ್ಥಿ ಗಣಿಗ ಪಿ ರವಿಕುಮಾರ್‌ಗೌಡ ಅವರ ಪರ ರೋಡ್‌ಷೋ ನಡೆಸಿ ಅವರು ಮಾತನಾಡಿದರು.

‘ಜಿಲ್ಲೆ ರಾಜ್ಯ ರಾಜಕಾರಣದಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಇಲ್ಲಿ ನಡೆಯುವ ಚುನಾವಣೆಯನ್ನು ಇಡೀ ರಾಷ್ಟ್ರವೇ ತಿರುಗಿ ನೋಡುತ್ತದೆ. ಇಲ್ಲಿಯ ಜನರು ಕೊಡುವ ತೀರ್ಪು ಬಹಳ ಮುಖ್ಯವಾಗಿದೆ. ನಮ್ಮ ಪಕ್ಷದಿಂದ ಅಂಬರೀಷ್‌ ಕಣಕ್ಕೆ ಇಳಿಯಬೇಕಾಗಿತ್ತು. ಪಕ್ಷ ಅವರಿಗೆ ಟಿಕೆಟ್‌ ಘೋಷಣೆ ಮಾಡಿತ್ತು. ಆದರೆ ಅವರಿಗೆ ಆರೋಗ್ಯ ಸರಿಇಲ್ಲದ ಕಾರಣ ಅವರು ಸ್ಪರ್ಧೆಯಿಂದ ಹಿಂದೆ ಸರಿದರು' ಎಂದರು.

‘ಪಕ್ಷದ ಮುಖಂಡರು ಚರ್ಚೆ ನಡೆಸಿ ಯುವ ಮುಖಂಡನಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಪಕ್ಷಕ್ಕಾಗಿ ದುಡಿದ ಹಲವು ಹಿರಿಯ ಮುಖಂಡರು ಇದ್ದರೂ ಪಕ್ಷ ಯುವ ನಾಯಕನನ್ನು ಕಣಕ್ಕೆ ಇಳಿಸಿದೆ. ಅಸಮಾಧಾನಗಳನ್ನು ಬದಿಗೊತ್ತಿ ಪಕ್ಷದ ಎಲ್ಲಾ ಹಿರಿಯ ಮುಖಂಡರು ಸಂಭ್ರಮದಿಂದ ಪಕ್ಷದ ಪರ ಕೆಲಸ ಮಾಡುತ್ತಿರುವುದು ಸಂತಸ ತಂದಿದೆ’ ಎಂದು ಹೇಳಿದರು.

‘ಜೆಡಿಎಸ್‌ ಮುಖಂಡರು ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವ ಬಗ್ಗೆ ಮಾತ್ರ ಮಾತನಾಡುತ್ತಾರೆ. ರಾಜ್ಯದ ಜನರಿಗೆ, ರೈತರಿಗೆ, ದುಡಿಯುವ ವರ್ಗಕ್ಕೆ ಕೆಲಸ ಮಾಡುವ ಬಗ್ಗೆ ಅವರು ಮಾತನಾಡುವುದಿಲ್ಲ. ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವುದೇ ಅವರಿಗೆ ಮುಖ್ಯವಾಗಿದೆ. ಮಂಡ್ಯ ಕ್ಷೇತ್ರದ ಅಭ್ಯರ್ಥಿಯಾಗಿರುವ ಎಂ.ಶ್ರೀನಿವಾಸ್‌ ಅವರು ಎರಡು ಬಾರಿ ಶಾಸಕರಾಗಿ ಕೆಲಸ ಮಾಡಿದ್ದಾರೆ. ಇಲ್ಲಿಯ ಜನರು ಅವರ ಕಾರ್ಯವೈಖರಿಯನ್ನು ಕಂಡಿದ್ದಾರೆ. ಅವರು ಜಿಲ್ಲೆಗೆ ಯಾವುದೇ ಸೌಲಭ್ಯ ನೀಡಿಲ್ಲ. ಅವರ ಆಡಳಿತದ ಯಾವ ಕುರುಹೂ ಮಂಡ್ಯದಲ್ಲಿ ಇಲ್ಲ. ಇಂಥವರು ಮತ್ತೆ ಶಾಸಕರಾದರೆ ಕ್ಷೇತ್ರ ಹಿಂದುಳಿಯುತ್ತದೆ’ ಎಂದು ಹೇಳಿದರು.

‘ಕಾಂಗ್ರೆಸ್‌ ಸರ್ಕಾರ ಕಳೆದ ಐದು ವರ್ಷಗಳಿಂದ ಎಲ್ಲಾ ವರ್ಗದ ಜನರಿಗೆ ಯೋಜನೆ ರೂಪಿಸಿದೆ. ಪ್ರಣಾಳಿಕೆಯ ಎಲ್ಲಾ 169 ಭರವಸೆಗಳನ್ನು ಈಡೇರಿಸಿ ಪ್ರಣಾಳಿಕೆಯಲ್ಲಿ ಇಲ್ಲದ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಯಾವುದೇ ಹಗರಣ ಇಲ್ಲದೆ ಐದು ವರ್ಷ ಪೂರೈಸಿದೆ. ಮತ್ತೊಮ್ಮೆ ಕಾಂಗ್ರೆಸ್‌ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲಿದ್ದು ತನ್ನ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲಿದೆ. ರೈತರಿಗೆ ನ್ಯಾಯ ನೀಡುವ, ಅವರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡುವ, ಯುವಜನರಿಗೆ ಉದ್ಯೋಗ ನೀಡುವ ಹಲವು ಯೋಜನೆಗಳನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿದೆ’ ಎಂದು ಹೇಳಿದರು.

‘ಮಂಡ್ಯ ಜಿಲ್ಲೆಯ ರಾಜಕಾರಣಿಗಳು ರಾಜ್ಯಕ್ಕೆ ಹಲವು ಕೊಡುಗೆ ನೀಡಿದ್ದಾರೆ. ಕೆ.ವಿ.ಶಂಕರಗೌಡ, ಎಚ್‌.ಡಿ.ಚೌಡಯ್ಯ, ಜಿ.ಮಾದೇಗೌಡ ಮುಂತಾದವರು ಅಪಾರ ಸಮಾಜ ಸೇವೆ ಮಾಡಿದ್ದಾರೆ. ವೈಯಕ್ತಿಕವಾಗಿ ತ್ಯಾಗ ಮಾಡಿ ಹಲವು ಸಂಘ, ಸಂಸ್ಥೆ ಕಟ್ಟಿ ಬೆಳೆಸಿದ್ದಾರೆ. ಜೆಡಿಎಸ್‌ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಯಾವ ಕೆಲಸವನ್ನೂ ಮಾಡಲಿಲ್ಲ. ಈ ಅಧಿಕಾರ ಕೊಡಿ ಎಲ್ಲವನ್ನೂ ಮಾಡುತ್ತೇವೆ ಎಂದು ಹೇಳಿದರೆ ಜನರು ನಂಬುವುದಿಲ್ಲ. ಜೆಡಿಎಸ್‌ಗೆ ಮತ ಹಾಕಿದರೆ ಅದು ಬಿಜೆಪಿಗೆ ಮತ ಹಾಕಿದಂತಾಗುತ್ತದೆ. ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳನ್ನು ಅಧಿಕಾರದಿಂದ ಹೊರಗಿಡಬೇಕು’ ಎಂದು ಹೇಳಿದರು.

ಕಾಂಗ್ರೆಸ್‌ ಮುಖಂಡರಾದ ಎಂ.ಎಸ್‌.ಆತ್ಮಾನಂದ, ಸಿ.ಡಿ.ಗಂಗಾಧರ್‌, ರಾಮಲಿಂಗಯ್ಯ, ಸಿದ್ದರಾಮೇಗೌಡ, ಎಚ್‌.ಬಿ.ರಾಮು ಮುಂತಾದವರು ಹಾಜರಿದ್ದರು. ಚಲನಚಿತ್ರ ನಟಿ ರೋಡ್‌ ಷೋ ನಲ್ಲಿ ಪಾಲ್ಗೊಂಡು ಕಾಂಗ್ರೆಸ್‌ ಅಭ್ಯರ್ಥಿ ಪರ ಮತಯಾಚನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT